ಭಾನುವಾರ, ಆಗಸ್ಟ್ 25, 2019
20 °C

ಕತಾರ್‌ನಲ್ಲಿ ’ಸೈಮಾ’ ಸಿನಿಮಾ ಪ್ರಶಸ್ತಿಗೆ ಕ್ಷಣಗಣನೆ

Published:
Updated:

ಬೆಂಗಳೂರು: ಎಂಟನೇ ದಕ್ಷಿಣ ಭಾರತ ಅಂತರರಾಷ್ಟ್ರೀಯ ಸಿನಿಮಾ ಪ್ರಶಸ್ತಿ (ಎಸ್‌ಐಐಎಂಎ) ಪ್ರದಾನ ಸಮಾರಂಭಕ್ಕೆ ಕತಾರ್‌ನ ರಾಜಧಾನಿ ದೋಹಾ ಸಿದ್ಧವಾಗಿದ್ದು, ಆಗಸ್ಟ್‌ 15 ಮತ್ತು 16ರಂದು ವರ್ಣರಂಜಿತ ಸಮಾರಂಭದಲ್ಲಿ ಪ್ರಶಸ್ತಿ ಘೋಷಣೆಯಾಗಲಿದೆ. ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳ ಹಲವು ಚಿತ್ರಗಳು ಪ್ರಶಸ್ತಿಯ ಅಂತಿಮ ಕಣದಲ್ಲಿ ಸ್ಪರ್ಧಿಸುತ್ತಿವೆ.

ಕನ್ನಡ ವಿಭಾಗದಲ್ಲಿ ಅತ್ಯುತ್ತಮ ಸಿನಿಮಾ ಪ್ರಶಸ್ತಿಗೆ ಟಗರು, ಕೆಜಿಎಫ್ ಚಾಪ್ಟರ್‌ 1, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು, ರಾಂಬೊ 2 ಮತ್ತು ಅಯೋಗ್ಯ ಚಿತ್ರಗಳನ್ನು ನಾಮಕರಣ ಮಾಡಲಾಗಿದೆ. ಅತ್ಯುತ್ತಮ ನಟ ಪ್ರಶಸ್ತಿಗೆ ಶಿವರಾಜ್‌ಕುಮಾರ್‌, ಯಶ್, ಅನಂತನಾಗ್‌, ಸತೀಶ್‌ ನೀನಾಸಂ ಮತ್ತು ಶರಣ್‌ ನಡುವೆ ಸ್ಪರ್ಧೆ ಏರ್ಪಟ್ಟಿದೆ.

ಸಮಾರಂಭದಲ್ಲಿ ನಾಲ್ಕೂ ಭಾಷೆಗಳ ಚಿತ್ರರಂಗದಲ್ಲಿ ಜೀವಮಾನದ ಸಾಧನೆ ಮಾಡಿರುವ ವ್ಯಕ್ತಿಯೊಬ್ಬರಿಗೆ ಪ್ರಶಸ್ತಿ ನೀಡಲಾಗುವುದು. ಜೊತೆಗೆ ಈ ಸಲ ದಕ್ಷಿಣ ಭಾರತದ ಚಿತ್ರರಂಗದ ‘ಪ್ಯಾಂಟಲೂನ್ಸ್‌ ಸೈಮಾ ಸ್ಟೈಲ್‌ ಐಕಾನ್‌’ ವಿಶೇಷ ಪ್ರಶಸ್ತಿ ಎಲ್ಲರ ಗಮನ ಸೆಳೆದಿದೆ. ಈ ಪ್ರಶಸ್ತಿಗೆ ಕನ್ನಡದ ಯಶ್‌, ತಮಿಳಿನ ವಿಜಯ್‌, ಧನುಷ್‌ ಮತ್ತು ಮಲಯಾಳಂನ ಟೊವಿನೊ ಥಾಮಸ್‌ ನಡುವೆ ಸ್ಪರ್ಧೆ ಏರ್ಪಟ್ಟಿದೆ. ನಟಿಯರಲ್ಲಿ ‘ಪ್ಯಾಂಟಲೂನ್‌ ಸೈಮಾ ಸ್ಟೈಲ್‌ ಐಕಾನ್‌’ ಪ್ರಶಸ್ತಿಗೆ ಕಾಜೊಲ್‌ ಅಗರವಾಲ್‌, ಸಮಂತಾ ಪ್ರಭು, ಶ್ರುತಿಹಾಸನ್‌ ಮತ್ತು ತಮನ್ನಾ ಭಾಟಿಯಾ ಕಣದಲ್ಲಿದ್ದಾರೆ. ದಕ್ಷಿಣ ಭಾರತದ ಖ್ಯಾತನಾಮ ನಟ,ನಟಿ ಮತ್ತು ತಂತ್ರಜ್ಞರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಕನ್ನಡ ಸಿನಿಮಾ ವಿಭಾಗದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಗೆ ರಚಿತಾ ರಾಮ್‌, ಶ್ರುತಿಹರಿಹರನ್‌, ಮಾನ್ವಿತಾ ಹರೀಶ್‌, ಅಶಿಕಾ ರಂಗನಾಥ್‌ ಮತ್ತು ಸೋನು ಗೌಡ ಮಧ್ಯೆ ಸ್ಪರ್ಧೆ ಏರ್ಪಟ್ಟಿದೆ.

Post Comments (+)