ಮಂಗಳವಾರ, ಡಿಸೆಂಬರ್ 7, 2021
23 °C

‘ಚಿತ್ರೋದ್ಯಮಕ್ಕೆ ಸರಳೀಕೃತ ವ್ಯವಸ್ಥೆ ಜಾರಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಚಿತ್ರೋದ್ಯಮದ ಅಭಿವೃದ್ಧಿಗೆ ಕೇಂದ್ರ ಸರ್ಕಾರವು ಏಕಗವಾಕ್ಷಿಯ ಸರಳೀಕೃತ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು, ಉದ್ಯಮಸ್ನೇಹಿಯಾಗಿ ಕಾರ್ಯನಿರ್ವಹಿಸಲಿದೆ ಎಂದು ಕೇಂದ್ರದ ಮೀನುಗಾರಿಕೆ, ಪಶುಸಂಗೋಪನೆ, ಮಾಹಿತಿ ಮತ್ತು ಪ್ರಸಾರ ಇಲಾಖೆಯ ರಾಜ್ಯ ಸಚಿವ ಡಾ.ಎಲ್‌.ಮುರುಗನ್‌ ಹೇಳಿದರು. 

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಚಿತ್ರೋದ್ಯಮದ ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿದ ಅವರು, ‘ಚಿತ್ರೋದ್ಯಮಕ್ಕೆ ಸಂಬಂಧಿಸಿ ಯಾವುದೇ ಪರವಾನಗಿ ಪ್ರಕ್ರಿಯೆಗಳಿಗೆ ಒಂದೇ ಪೋರ್ಟಲ್‌ ಇದ್ದು, ಅದರಲ್ಲಿ ಅರ್ಜಿ ಸಲ್ಲಿಸಿದರೆ ವಿಳಂಬವಿಲ್ಲದೇ ಪರವಾನಗಿ ಲಭಿಸುತ್ತವೆ’ ಎಂದರು. 

ಕನ್ನಡ ಚಿತ್ರರಂಗದಿಂದ ಪ್ರಸಕ್ತ ಸಾಲಿನಲ್ಲಿ 234 ಚಿತ್ರಗಳು ಪ್ರಮಾಣೀಕರಣಕ್ಕಾಗಿ ಬಂದಿವೆ. 226ಕ್ಕೆ ಪ್ರಮಾಣೀಕರಣ ನೀಡಲಾಗಿದೆ. 8 ಚಿತ್ರಗಳು ದಾಖಲೆಗಳ ಕಾರಣಕ್ಕೆ ಬಾಕಿ ಉಳಿದಿವೆ. ಇಲ್ಲಿನ ಚಿತ್ರೋದ್ಯಮದ ಎಲ್ಲ ಬೇಡಿಕೆಗಳನ್ನು ಪರಿಶೀಲಿಸಿ ಸ್ಪಂದಿಸುವುದಾಗಿ ಹೇಳಿದರು. 

ಚಿತ್ರೋದ್ಯಮದ ಬೇಡಿಕೆಗಳೇನು?:

lಚಲನಚಿತ್ರ ಪ್ರಮಾಣೀಕರಣ ಸಂಬಂಧಿಸಿ ಇಲ್ಲಿನ ಸೆನ್ಸಾರ್‌ ಮಂಡಳಿಯಲ್ಲಿ ಹಿಂದಿ ಚಿತ್ರಗಳ ಪ್ರಮಾಣೀಕರಣ ವ್ಯವಸ್ಥೆಯನ್ನೂ ತರಬೇಕು. 

lಸೆನ್ಸಾರ್‌ ಮಂಡಳಿಯ ಹೆಚ್ಚುವರಿ ಪ್ರಾದೇಶಿಕ ಕಚೇರಿಯನ್ನು ಬೆಂಗಳೂರಿನಲ್ಲಿ ಸ್ಥಾಪಿಸಬೇಕು.

lಚಿತ್ರಗಳಲ್ಲಿ ಪ್ರಾಣಿಗಳ ಬಳಕೆಗೆ ಸಂಬಂಧಿಸಿ ಪ್ರಮಾಣೀಕರಿಸಲು ಸ್ಥಳೀಯ ಪಶುವೈದ್ಯರ ನೇಮಕಾತಿಗೆ ಅವಕಾಶ ಕೊಡಬೇಕು. ಇಲ್ಲಿ ಸಚಿವಾಲಯದ ಕಚೇರಿ ತೆರೆಯಬೇಕು. (ಈಗ ಪ್ರಾಣಿಗಳ ಬಳಕೆ ಸಂಬಂಧಿಸಿ ಪರಿಶೀಲನೆಗೆ) ಸೆನ್ಸಾರ್‌ ಸಂಬಂಧಿಸಿದ ಕಚೇರಿ ಹರಿಯಾಣದಲ್ಲಿದೆ. 

lಅರ್ಹತೆ ಇಲ್ಲದವರು, ಸಿನಿಮಾ ಬಗ್ಗೆ ಜ್ಞಾನ ಇಲ್ಲದವರು ಸೆನ್ಸಾರ್ ಮಂಡಳಿ ಸದಸ್ಯರಾಗುವುದು ನಿಲ್ಲಬೇಕು. 

lಚಿತ್ರೀಕರಣ ಪರವಾನಗಿ ಶುಲ್ಕವನ್ನು ಇಳಿಸಬೇಕು.

lದೂರದರ್ಶನದಲ್ಲಿ ಇತರ ವಾಣಿಜ್ಯ ಚಿತ್ರಗಳನ್ನೂ ಪ್ರಸಾರ ಮಾಡಬೇಕು. ಇದರಿಂದ ಟಿವಿ ಹಕ್ಕುಗಳ ಮಾರಾಟದಿಂದ ನಿರ್ಮಾಪಕರಿಗೆ ಆರ್ಥಿಕ ಲಾಭ ಸಿಗಲಿದೆ. 

lಜಿಎಸ್‌ಟಿ ಪಾವತಿ ಸಂಬಂಧಿಸಿ ಸಾಕಷ್ಟು ಸಮಸ್ಯೆಗಳಾಗುತ್ತಿವೆ. ಅದನ್ನು ನಿವಾರಿಸಲು ಸಮಿತಿ ರಚಿಸುವುದಾಗಿ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಭರವಸೆ ನೀಡಿದ್ದಾರೆ. ಶೀಘ್ರ ಸಮಿತಿ ರಚಿಸಿ ಸಮಸ್ಯೆ ಬಗೆಹರಿಸಬೇಕು.

ನಟ ಶಿವರಾಜ್‌ಕುಮಾರ್‌, ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ.ಆರ್‌.ಜೈರಾಜ್‌, ಕಾರ್ಯದರ್ಶಿ ಎನ್‌.ಎಂ. ಸುರೇಶ್‌, ಮಂಡಳಿಯ ಮಾಜಿ ಅಧ್ಯಕ್ಷರಾದ ಕೆ.ವಿ.ಗುಪ್ತಾ, ಚಿನ್ನೇಗೌಡ ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು