ಸೋಮವಾರ, ಜನವರಿ 27, 2020
28 °C

ಮೂಕಾಂಬಿಕೆ ಸನ್ನಿಧಾನದಲ್ಲಿ 80ನೇ ಜನ್ಮದಿನ ಆಚರಿಸಿಕೊಂಡ ಯೇಸುದಾಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ರಸಿದ್ಧ ಗಾಯಕ ಕೆ.ಜೆ.ಯೇಸುದಾಸ್‌ ಅವರು ಇಂದು (ಜ.10) ಕೊಲ್ಲೂರು ಮೂಕಾಂಬಿಕೆ ಸನ್ನಿಧಾನದಲ್ಲಿ ತಮ್ಮ 80ನೇ ಜನ್ಮದಿನವನ್ನುಅತ್ಯಂತ ಸರಳವಾಗಿ ಆಚರಿಸಿಕೊಂಡರು.

ಕಳೆದ ವರ್ಷವೂ ಅವರು ಮೂಕಾಂಬಿಕೆ ಸನ್ನಿಧಾನದಲ್ಲಿ ಹುಟ್ಟಹಬ್ಬ ಆಚರಿಸಿಕೊಂಡಿದ್ದರು. ವಿಶಿಷ್ಠ ಕಂಠಸಿರಿ ಮೂಲಕ ಜನಪ್ರಿಯತೆ ಪಡೆದಿರುವ ಯೇಸುದಾಸ್ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಪರಿಣಿತಿ ಪಡೆದಿದ್ದಾರೆ. ಅವರು ಭಕ್ತಿಗೀತೆಗಳನ್ನು ಭಾವಪೂರ್ಣವಾಗಿ ಹಾಡುವ ಬಗೆ ಕೇಳುಗರನ್ನು ನಾದಲೋಕಕ್ಕೆ ಕರೆದೊಯ್ಯುತ್ತದೆ.

ಕನ್ನಡದಲ್ಲಿ ಸಿನಿಮಾ ಹಾಡುಗಳು ಮಾತ್ರವಲ್ಲದೆ ಭಕ್ತಿ ಗೀತೆಗಳನ್ನು ಹಾಡಿದ್ದಾರೆ. ಕೃಷ್ಣ, ಮೂಕಾಂಬಿಕೆ ಹಾಗೂ ಅಯ್ಯಪ್ಪ ಸ್ವಾಮಿಯ ಹಾಡುಗಳನ್ನು ಭಾವಪರವಶರಾಗಿ ಹಾಡಿದ್ದಾರೆ. ದೇಶದೆಲ್ಲಡೆ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಯೇಸುದಾಸ್‌ ಅವರಿಗೆ ಗಣ್ಯರು ಮತ್ತು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್‌ ಮಾಡಿ ಯೇಸುದಾಸ್‌ ಅವರಿಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ. 

ಯೇಸುದಾಸ್ 1961ರ ನವೆಂಬರ್ 14ರಂದು ಮಲಯಾಳಂ ಸಿನಿಮಾ`ಕಲಪ್ಪಡುಕಲ್‘ ಎಂಬ ಚಿತ್ರದಲ್ಲಿ ಮೊದಲ ಬಾರಿಗೆ ಹಿನ್ನೆಲೆ ಗಾಯಕರಾಗಿ ಹಾಡುವ ಮೂಲಕ ಮುಖ್ಯವಾಹಿನಿಗೆ ಬಂದರು. ಸಮಾಜ ಸುಧಾರಕ ನಾರಾಯಣ ಗುರು ಅವರನ್ನು ಭಜಿಸುವ ನಾಲ್ಕು ಸಾಲುಗಳ ಗೀತೆಯಿಂದ ಆರಂಭಗೊಂಡ ಅಂದಿನ ಅವರ ಈ ಗಾನಸುಧೆ ಮಾಗಿದ ಮಾಧುರ್ಯದಲ್ಲಿ ಇಂದಿಗೂ ಮುಂದುವರಿದಿದೆ.

80 ವರ್ಷದ ಯೇಸುದಾಸ್ ಕನ್ನಡ, ತೆಲುಗು ,ತಮಿಳು, ಮಲಯಾಳ, ಹಿಂದಿ, ಬೆಂಗಾಲಿ, ಗುಜರಾತಿ, ಒಡಿಶಾ, ಮರಾಠಿ, ಪಂಜಾಬಿ, ಸಂಸ್ಕೃತ, ತುಳು ಮತ್ತು ವಿದೇಶಿ ಭಾಷೆಗಳಾದ ರಷ್ಯನ್, ಅರೇಬಿಕ್, ಲ್ಯಾಟಿನ್ ಹಾಗೂ ಇಂಗ್ಲಿಷ್ ಭಾಷೆಗಳಲ್ಲೂ ಹಾಡಿದ್ದಾರೆ.

ಮಲಯ ಮಾರುತ, ಮಲ್ಲಿಗೆ ಹೂವೇ, ಹೊಸ ಜೀವನ, ರಾಮಾಚಾರಿ, ಸಿಪಾಯಿ, ಪ್ರೀತ್ಸೋದ್‌ ತಪ್ಪಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ಯೇಸುದಾಸ್‌ ಹಾಡಿದ್ದಾರೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು