ಭಾನುವಾರ, ನವೆಂಬರ್ 1, 2020
20 °C

ಕೊನೆಗೂ ಈಡೇರದ ಗಾಯಕ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಆಸೆ ಯಾವುದು ಗೊತ್ತೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗಾಯನ ಲೋಕದಲ್ಲಿ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಅವರಷ್ಟು ಎತ್ತರಕ್ಕೆ ಏರಿದವರು ಭಾರತದಲ್ಲಿ ವಿರಳ. ಅವರು ಜೀವ ತುಂಬಿರುವ ಸಾವಿರಾರು ಹಾಡುಗಳು ಜನರ ಮನದಲ್ಲಿ ಈಗಲೂ ಗುನುಗುತ್ತಿವೆ. ಆದರೆ, ಸಾಯುವ ಮುನ್ನಾ ಅವರ ಕೊನೆಯ ಆಸೆ ಇರಲಿಲ್ಲ ಎಂಬ ಸಂಗತಿಯೊಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚಿತವಾಗುತ್ತಿದೆ.

ಎಸ್‌ಪಿಬಿ ಅವರ ಹುಟ್ಟೂರು ನಲ್ಲೂರು. ತಂದೆ ಸಾಂಬಮೂರ್ತಿ ಮತ್ತು ತಾಯಿ ಶಕುಂತಲಮ್ಮ. ಆಂಧ್ರಪ್ರದೇಶದ ಪಶ್ಚಿಮ ಗೋದಾವರಿಯ ಕೊತ್ತಪೇಟದ ಶಿಲ್ಪಿ ರಾಜ್‌ಕುಮಾರ್‌ ಅವರಿಗೆ ತನ್ನ ತಂದೆ–ತಾಯಿಯ ಪ್ರತಿಮೆಗಳನ್ನು ಕೆತ್ತನೆ ಮಾಡಿಕೊಡುವಂತೆ ಬಾಲು ಸೂಚಿಸಿದ್ದರು. ಪೋಷಕರ ಪ್ರತಿಮೆಗಳನ್ನು ನಲ್ಲೂರಿನ ತನ್ನ ಪೂರ್ವಿಕರ ಮನೆ ಇರುವ ತಿಪ್ಪರಾಜು ವಾರಿ ರಸ್ತೆಯಲ್ಲಿ ಪ್ರತಿಷ್ಠಾ‍ಪಿಸಲು ಅವರು ನಿರ್ಧರಿಸಿದ್ದರು. ಆದರೆ, ಆಸೆ ಮಾತ್ರ ಕೈಗೂಡಿಲ್ಲ.

ಎಸ್‌ಪಿಬಿಗೆ ಆಗಸ್ಟ್‌ 5ರಂದು ಕೋವಿಡ್‌–19 ಇರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್‌ ನೆಗೆಟಿವ್‌ ವರದಿ ಬಂದಿದ್ದರೂ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಈ ನಡುವೆಯೆ ತನ್ನದೊಂದು ಪ್ರತಿಮೆ ಕೆತ್ತಿಸಿ ಮನೆಯಲ್ಲಿ ಇಟ್ಟುಕೊಳ್ಳುವ ಆಸೆ ಅವರಿಗೆ ಇತ್ತಂತೆ. ರಾಜ್‌ಕುಮಾರ್‌ ಅವರಿಗೆಯೇ ಈ ಕೆತ್ತನೆಯ ಜವಾಬ್ದಾರಿ ವಹಿಸಿದ್ದರು. ಆದರೆ, ಸೆಪ್ಟೆಂಬರ್‌ 25ರಂದು ಅವರು ನಿಧನರಾಗಿದ್ದರಿಂದ ಎಸ್‌ಪಿಬಿಯ ಈ ಎರಡು ಆಸೆಗಳು ಕೊನೆಗೂ ಈಡೇರದಿರುವುದು ಅವರ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.

ಬಾಲು ಅವರ ತಾಯಿ 2019ರ ಫೆಬ್ರುವರಿ ತಿಂಗಳಿನಲ್ಲಿ ನಿಧನರಾಗಿದ್ದರು. ಆ ವೇಳೆಯೇ ಅವರು ಪೋಷಕರ ಪ್ರತಿಮೆಗಳ ಪ್ರತಿಷ್ಠಾಪನೆಗೆ ನಿರ್ಧರಿಸಿದ್ದರು. ಎಸ್‌ಪಿಬಿ ಅವರು ಆಸ್ಪತ್ರೆಗೆ ದಾಖಲಾಗದಿದ್ದರೆ ಕಳೆದ ಆಗಸ್ಟ್‌ನಲ್ಲಿಯೇ ಪ್ರತಿಮೆಗಳ ಪ್ರತಿಷ್ಠಾಪನಾ ಕಾರ್ಯವೂ ನೆರವೇರುತ್ತಿತ್ತು. ಆದರೆ, ವಿಧಿಯಾಟವೇ ಬೇರೆಯಾಗಿತ್ತು. ಮನೆಯಲ್ಲಿಯೇ ತನ್ನ ಪ್ರತಿಮೆ ನೋಡುವ ಅವರ ಆಸೆಯೂ ಕೈಗೂಡಲಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು