ಹೊಸಪೇಟೆ (ವಿಜಯನಗರ): ‘ರೈತರ ಹೃದಯ ಶ್ರೀಮಂತಿಕೆ ಮೇಲೆ ಬೆಳಕು ಚೆಲ್ಲುವ ‘ಶ್ರೀಮಂತ’ ಕನ್ನಡ ಸಿನಿಮಾ ಏಪ್ರಿಲ್ 14ರಂದು ಡಾ.ಬಿ.ಆರ್. ಅಂಬೇಡ್ಕರ್ ಜಯಂತಿಯ ದಿನ ರಾಜ್ಯದ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ’ ಎಂದು ಚಿತ್ರದ ಸಹಾಯಕ ನಿರ್ದೇಶಕ ಶಿವರಾಜ್ ತಿಳಿಸಿದರು.
ಬಾಲಿವುಡ್ ಹಾಗೂ ಬಹುಭಾಷಾ ನಟ ಸೋನು ಸೂದ್ ಅವರು ಚಿತ್ರದ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ಕಲಬುರಗಿಯ ಕ್ರಾಂತಿ ಚಿತ್ರದ ಇನ್ನೊಬ್ಬ ನಟ. ಮುಂಬೈ ಬೆಡಗಿ ವೈಷ್ಣವಿ ಪಟವರ್ಧನ್, ವೈಷ್ಣವಿ ಚಂದ್ರನ್ ಮೆನನ್ ನಟಿಯರಾಗಿ ಬಣ್ಣ ಹಚ್ಚಿದ್ದಾರೆ. ಹಿರಿಯ ಕಲಾವಿದರಾದ ರಮೇಶ್ ಭಟ್, ರವಿಶಂಕರ್ ಗೌಡ, ಸಾಧು ಕೋಕಿಲ, ಚರಣ್ ರಾಜ್, ಕಲ್ಯಾಣಿ, ಗಿರಿ, ರಾಜು ತಾಳಿಕೋಟೆ, ಕುರಿಬಾಂಡ್ ರಂಗ, ಬ್ಯಾಂಕ್ ಮಂಜಣ್ಣ, ಬಸವರಾಜು ಹಾಸನ ಕೂಡ ಚಿತ್ರದಲ್ಲಿ ನಟಿಸಿದ್ದಾರೆ ಎಂದು ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು.
ನಾದಬ್ರಹ್ಮ ಖ್ಯಾತಿಯ ಹಂಸಲೇಖ ಅವರ ಸಾಹಿತ್ಯ–ಸಂಗೀತವಿದೆ. ಚಿತ್ರದ ಟೈಟಲ್ ಸಾಂಗ್ ದಿವಂಗತ ಎಸ್.ಪಿ. ಬಾಲಸುಬ್ರಮಣ್ಯಂ ಹಾಡಿದ್ದಾರೆ. ಇದು ಅವರು ಹಾಡಿದ ಕೊನೆಯ ಹಾಡು. ರವಿಕುಮಾರ್ ಅವರ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ, ಹಾಸನ್ ರಮೇಶ್ ಚಿತ್ರದ ನಿರ್ಮಾಪಕರು. ಕೋವಿಡ್ ಕಷ್ಟಕಾಲದಲ್ಲಿ ಸೋನು ಸೂದ್ ಅವರು ಸಾವಿರಾರು ಜನರಿಗೆ ನೆರವು ನೀಡಿದ್ದರು. ಸಿನಿಮಾ ರಂಗದಲ್ಲೂ ಉತ್ತಮ ಹೆಸರು ಮಾಡಿರುವುದರಿಂದ ನಾಯಕ ನಟನಾಗಿ ಅವರನ್ನು ಆಯ್ಕೆ ಮಾಡಲು ಮುಖ್ಯ ಕಾರಣ ಎಂದು ತಿಳಿಸಿದರು.
ರೈತರ ಬದುಕು ಬವಣೆ, ಹಳ್ಳಿಯ ಸುಗ್ಗಿ, ಜಾತ್ರೆ, ಹಬ್ಬ, ಗ್ರಾಮೀಣ ಕಲೆ, ಸಾಹಿತ್ಯ– ಸಂಸ್ಕೃತಿ ಮೇಲೆ ಬೆಳಕು ಚೆಲ್ಲುತ್ತದೆ. ಅನೇಕ ಸಮಸ್ಯೆಗಳಿದ್ದರೂ ರೈತರು ಕೊಡುಗೈದಾನಿಗಳು. ರೈತ ಎಂದೆಂದಿಗೂ ‘ಶ್ರೀಮಂತ’. ಹೀಗಾಗಿಯೇ ‘ಶ್ರೀಮಂತ’ ಎಂದು ಚಿತ್ರಕ್ಕೆ ಹೆಸರಿಡಲಾಗಿದೆ. ಚಿತ್ರದಲ್ಲಿ ಒಟ್ಟು ಎಂಟು ಹಾಡುಗಳಿವೆ. ಹಾಸನ, ಚಿಕ್ಕಮಗಳೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳಲ್ಲಿ ಚಿತ್ರೀಕರಣ ಮಾಡಲಾಗಿದೆ ಎಂದು ಹೇಳಿದರು.
ನಟ ಕ್ರಾಂತಿ ಮಾತನಾಡಿ, ನಾನು ಮೂಲತಃ ಕಲಬುರಗಿ ಜಿಲ್ಲೆಯವನು. ಇದು ನಾನು ನಟಿಸಿದ ಮೊದಲ ಸಿನಿಮಾ. ಯುವ ರೈತನ ಪಾತ್ರದಲ್ಲಿ ನಟಿಸಿರುವೆ. ಸ್ನೇಹ, ತಾಯಿ ಪ್ರೀತಿ, ಹಳ್ಳಿ ಜಗಳ, ಪ್ರಕೃತಿ, ರೈತರ ನೋವು–ನಲಿವು, ಸಂಭ್ರಮ, ಹಾಸ್ಯ ಹೀಗೆ ಎಲ್ಲವೂ ಸಿನಿಮಾದಲ್ಲಿದೆ. ಸಿನಿಮಾ ನೋಡಿದವರಿಗೆ ಖಂಡಿತವಾಗಿ ನಿರಾಸೆಯಾಗುವುದಿಲ್ಲ. ಜನ ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಿ ಯಶಸ್ವಿಗೊಳಿಸಬೇಕೆಂದು ಕೋರಿದರು.
ಚಿತ್ರತಂಡದ ಮಂಜುನಾಥ, ಮಹೇಶ್, ಸತೀಶ ಪಟೇಲ್, ಕವಯತ್ರಿ ಅಂಜಲಿ ಬೆಳಗಲ್, ರೈತ ಮುಖಂಡ ಜೆ. ಕಾರ್ತಿಕ್ ಹಾಜರಿದ್ದರು.