ಬುಧವಾರ, ಸೆಪ್ಟೆಂಬರ್ 29, 2021
20 °C

‘ಬಾ ಬಾರೋ ರಸಿಕ’ ಎಂದ ರಮ್ಯ ಕೃಷ್ಣನ್‌ಗೆ 51ರ ಹುಟ್ಟುಹಬ್ಬದ ಸಂಭ್ರಮ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿ ರಮ್ಯ ಕೃಷ್ಣನ್ ಅವರು ಇಂದು 51ನೇ ವಸಂತಕ್ಕೆ ಕಾಲಿಟ್ಟರು. ಸಾಮಾಜಿಕ ಜಾಲತಾಣದಲ್ಲಿರುವ ಸಾವಿರಾರು ಅಭಿಮಾನಿಗಳು ಅವರಿಗೆ ಶುಭಾಶಯ ಕೋರಿದ್ದಾರೆ.

ತಮಿಳು, ತೆಲುಗು, ಕನ್ನಡ, ಮಲಯಾಳಿ ಹಾಗೂ ಹಿಂದಿಯಲ್ಲಿ 260 ಸಿನಿಮಾಗಳಲ್ಲಿ ನಟಿಸಿರುವ ರಮ್ಯ ಕೃಷ್ಣನ್ ವಯಸ್ಸು 51 ಆದರೂ ತಮ್ಮ ಮಾಸದ ಸೌಂದರ್ಯ ಮತ್ತು ಅಭಿನಯ ಚಾತುರ್ಯದ ಮೂಲಕ ನವತರುಣಿಯಂತೆ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದಾರೆ.

ಸೆ 15, 1970 ರಲ್ಲಿ ಮದ್ರಾಸ್‌ನಲ್ಲಿ ಜನಿಸಿರುವ ರಮ್ಯ ಕೃಷ್ಣನ್ ಖ್ಯಾತ ಪತ್ರಕರ್ತರಾಗಿದ್ದ ತಮಿಳಿನ ಚೋ ರಾಮಸ್ವಾಮಿ ಅವರ ಸೊಸೆ. ಆರಂಭದಲ್ಲಿ ಭರತನಾಟ್ಯ ನೃತ್ಯಪಟುವಾಗಿದ್ದ ರಮ್ಯ ಅವರು, ಮೊದಲ ಬಾರಿಗೆ ತಮಿಳಿನಲ್ಲಿ ಪದಿಕ್ಕವದನ್ ಸಿನಿಮಾದಲ್ಲಿ ರಜನಿಕಾಂತ್ ಅವರ ಜೊತೆ ನಟಿಸುವ ಮೂಲಕ ಚಿತ್ರರಂಗ ಪಾದಾರ್ಪಣೆ ಮಾಡಿದ್ದರು. ಅವರು ಅದಕ್ಕೂ ಮೊದಲು ತಮಿಳು ಹಾಗೂ ತೆಲುಗಿನ ತಲಾ ಒಂದು ಚಿತ್ರದಲ್ಲಿ ಅಭಿನಯಿಸಿದ್ದರೂ ಅವು ಬಿಡುಗಡೆಯಾಗಿರಲಿಲ್ಲ.

ದಕ್ಷಿಣ ಭಾರತದ ಬಹುತೇಕ ಎಲ್ಲ ಖ್ಯಾತ ನಟರ ಜೊತೆ ಅಭಿನಯಿಸಿರುವ ರಮ್ಯ ಕೃಷ್ಣನ್ ಅವರು ಮಧ್ಯದಲ್ಲಿ ಚಿತ್ರರಂಗದಿಂದ ಸ್ವಲ್ಪದಿನ ದೂರವಿದ್ದರು. ನಂತರ ತೆಲುಗಿನ ಎಸ್‌ಎಸ್‌ ರಾಜಮೌಳಿ ನಿರ್ದೇಶನದ ಬಾಹುಬಲಿ ಸಿನಿಮಾ ಮೂಲಕ ಮತ್ತೆ ಸದ್ದು ಮಾಡಿದರು. ಬಾಹುಬಲಿಯಲ್ಲಿ ಅವರ ಶಿವಗಾಮಿನಿ ಪಾತ್ರ ಅವರಿಗೆ ಸಾಕಷ್ಟು ಹೆಸರು ತಂದು ಕೊಟ್ಟಿತು.

ಕನ್ನಡದಲ್ಲಿ ಕೂಡ ಅನೇಕ ಚಿತ್ರಗಳಲ್ಲಿ ರಮ್ಯ ಕೃಷ್ಣನ್ ನಟಿಸಿ, ಮನೆ ಮಾತಾಗಿದ್ದಾರೆ. ‘ಕೃಷ್ಣ ರುಕ್ಮಿಣಿ‘, ‘ಗಡಿಬಿಡಿ ಗಂಡ‘, ‘ಮಾಂಗಲ್ಯಂತಂತು ನಾನೇನಾ‘, ‘ನೀಲಾಂಬರಿ‘, ‘ರಕ್ತ ಕಣ್ಣೀರು‘ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಸದ್ಯ ರಮ್ಯ ಅವರು ವಿಜಯ್ ದೇವರಕೊಂಡ ಅಭಿನಯದ ‘ಲೈಗರ್‘ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

ಇದನ್ನೂ ಓದಿ: ನಟ ಸೋನು ಸೂದ್ ಮನೆ ಹಾಗೂ ಕಂಪನಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಂದ ದಾಳಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು