ಶುಕ್ರವಾರ, ಮಾರ್ಚ್ 31, 2023
23 °C

ನುಡಿ ನಮನ: ಭಾರತೀಯ ಕಲಾಸೂತ್ರ ಭಾಷ್ಯಕಾರ ‘ಕೆ. ವಿಶ್ವನಾಥ್‌’

ಎಸ್‌. ಸೂರ್ಯಪ್ರಕಾಶ ಪಂಡಿತ್‌ Updated:

ಅಕ್ಷರ ಗಾತ್ರ : | |

ಕೆ. ವಿಶ್ವನಾಥ್‌ ಎಂದಕೂಡಲೇ ನೆನಪಾಗುತ್ತದೆ, ’ಶಂಕರಾಭರಣಂ.’

ಭಾರತೀಯ ಚಲನಚಿತ್ರರಂಗಕ್ಕೇ ಅಪೂರ್ವ ಆಭರಣದಂತೆ ಕಂಗೊಳಿಸಿದ ಚಿತ್ರ ಶಂಕರಾಭರಣಂ; ಈ ತೆಲುಗು ಚಲನಚಿತ್ರದ ನಿರ್ದೇಶಕರೇ ಕೆ. ವಿಶ್ವನಾಥ್‌. ಈ ಚಿತ್ರದಿಂದ ಆರಂಭಗೊಂಡ ಅವರ ಭಾರತೀಯ ಕಲಾಪ್ರಧಾನ ಚಿತ್ರಗಳು ಅವರನ್ನು ಮುಂದೆ ’ಕಲಾತಪಸ್ವಿ‘ಯ ಸ್ಥಾನದಲ್ಲಿ ಅಲಂಕರಿಸಿದವು.

ಕಲೆಯನ್ನು ವಸ್ತುವನ್ನಾಗಿಸಿಕೊಂಡ ಚಿತ್ರಗಳು ಎಂದ ಕೂಡಲೇ ಸಾಮಾನ್ಯವಾಗಿ ಅವು ‘ಆರ್ಟ್‌ ಸಿನಿಮಾ‘ಗಳ ಗುಂಪಿಗೆ ಸೇರಿರರಲೇಬೇಕು ಎಂದು ಎಣಿಸುತ್ತೇವೆ. ಆದರೆ ವಿಶ್ವನಾಥ್‌ ಅವರು ‘ಕಮರ್ಷಿಯಲ್‌ ಸಿನಿಮಾ‘ಗಳ ‘ವ್ಯಾಕರಣ’ದಲ್ಲಿಯೇ ಸಿನಿಮಾಗಳನ್ನು ನಿರ್ದೇಶಿಸಿ, ಯಶಸ್ಸು ಗಳಿಸಿದ್ದು ವಿಶೇಷ. ಹೀಗೆಂದು ಇವೇನೂ ‘ಮಸಾಲೆ ಚಿತ್ರ‘ಗಳಲ್ಲ; ಭಾರತೀಯ ಕಲೆಯ ನೆಲೆ–ಬೆಲೆಗಳನ್ನೂ, ಕಲೆಗೂ ನಮ್ಮ ಜೀವನಕ್ಕೂ ಇರುವ ಸಂಬಂಧಗಳನ್ನೂ ತಿಳಿದುಕೊಳ್ಳಲು ಆಸಕ್ತಿಯಿರುವವರಿಗೆ ರಸವತ್ತಾದ ಪಠ್ಯಗಳು ವಿಶ್ವನಾಥ್‌ ಅವರ ಸಿನಿಮಾಗಳು. ಅವರ ಚಿತ್ರಗಳು ವಸ್ತುಮಾತ್ರದಿಂದಷ್ಟೆ ಕಲಾಪ್ರಧಾನ ಚಿತ್ರಗಳಲ್ಲ, ಅಭಿವ್ಯಕ್ತಿಯಲ್ಲೂ ಅವು ಕಲೆಯಾಗಿ ಸಾರ್ಥಕತೆಯನ್ನು ಪಡೆದಿವೆ; ಅವರ ದಾರ್ಶನಿಕತೆಯ ಕಾಣ್ಕೆಗೆ ದಕ್ಕಿದ ದೃಶ್ಯಕಾವ್ಯಗಳಾಗಿ ಅರಳಿವೆ.

ಹಿಂದಿನ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೇಪಲ್ಲಿಯಲ್ಲಿ 1930ರ ಫೆಬ್ರುವರಿ 19ರಂದು ಜನಿಸಿದ ಕೆ. ವಿಶ್ವನಾಥ್‌ ಅವರು ಚಿತ್ರಂಗವನ್ನು ಸಹಾಯಕ ನಿರ್ದೇಶಕರಾಗಿ ಪ್ರವೇಶಿಸಿದರು (1951). 1965ರಲ್ಲಿ ತೆರೆಕಂಡ ‘ಆತ್ಮಗೌರವಂ‘ ಅವರ ನಿರ್ದೇಶನದ ಮೊದಲ ಚಿತ್ರ. ಮೊದಲ ಚಿತ್ರವೇ ಅವರಿಗೆ ಪ್ರಶಸ್ತಿಯನ್ನು ತಂದುಕೊಟ್ಟಿತು. ಅನಂತರ ‘ಚೆಲ್ಲಿಲಿ ಕಾಪುರಂ’, ‘ಶಾರದಾ‘ ಮುಂತಾದ ಚಿತ್ರಗಳನ್ನು ನಿರ್ದೇಶಿಸಿದರು. ಈ ಚಿತ್ರಗಳೆಲ್ಲವೂ ಸ್ತ್ರೀಪಾತ್ರ ಪ್ರಧಾನವಾದವು ಎಂಬುದೂ ಗಮನಾರ್ಹ. ಅವರಿಗೆ ಕೀರ್ತಿಯನ್ನು ತಂದುಕೊಟ್ಟ ಚಿತ್ರಗಳಲ್ಲೂ ಸ್ತ್ರೀಶಕ್ತಿಯ ಪ್ರಾಧಾನ್ಯವನ್ನು ಗುರುತಿಸಬಹುದು. ಹೆಣ್ಣನ್ನು ಅಬಲೆಯೆಂದು ಚಿತ್ರಿಸಿದವರಲ್ಲ ಅವರು; ಗಂಡಿಗೆ ಹೆಣ್ಣಿನ ಆಶ್ರಯ ಇಲ್ಲದಿದ್ದರೆ ಅವನ ಜೀವನಕ್ಕೆ ಅರ್ಥವೇ ದಕ್ಕದು ಎಂಬುದನ್ನು ಅವರು ಧ್ವನಿಪೂರ್ಣವಾಗಿ ಕಾಣಿಸಿದವರು. ಹೆಣ್ಣಿನ ಧೀರತೆಯನ್ನೂ ಕೋಮಲತೆಯನ್ನೂ ದೈವಿಕತೆಯನ್ನೂ ಪೂರ್ಣತೆಯನ್ನೂ ಅವರ ಚಿತ್ರಗಳು ತುಂಬ ಸಮರ್ಥವಾಗಿ ಪ್ರತಿನಿಧಿಸುತ್ತವೆ. 1981ರಲ್ಲಿ ಬಿಡುಗಡೆಯಾದ ‘ಸಪ್ತಪದಿ’ ಚಿತ್ರವನ್ನು ಇಲ್ಲಿ ಪ್ರತ್ಯೇಕವಾಗಿಯೇ ಉಲ್ಲೇಖಿಸಬಹುದು. ಹೆಣ್ಣಿನ ಬಯಕೆ, ಸ್ವಾತಂತ್ರ್ಯ; ದಾಂಪತ್ಯದ ದಿಟವಾದ ನೆಲೆ; ಸಂಪ್ರದಾಯದ ವ್ಯಾಪ್ತಿ; ಪ್ರೀತಿಯ ಶಕ್ತಿ – ಹೀಗೆ ಹಲವು ವಿವರಗಳನ್ನು ಭಾರತೀಯತೆಯ ಹಿನ್ನೆಲೆಯಲ್ಲಿಯೇ ಅವರು ಕಲಾತ್ಮಕ ಭಿತ್ತಿಯಲ್ಲಿ ಅನಾವರಣ ಮಾಡಿದ್ದಾರೆ. ಈ ಚಿತ್ರ ಇಂದಿನ ಪ್ರೇಕ್ಷಕನಿಗೂ ಕ್ರಾಂತಿಕಾರಕವಾಗಿಯೂ ಕಾಣುತ್ತದೆ ಎಂಬುದರಲ್ಲಿ ಅನುಮಾನವಿಲ್ಲ.

ಓದಿ... ಶಂಕರಾಭರಣಂ, ಸ್ವಾತಿಮುತ್ಯಂ ಖ್ಯಾತಿಯ ನಿರ್ದೇಶಕ ಕಲಾತಪಸ್ವಿ ಕೆ. ವಿಶ್ವನಾಥ್‌ ನಿಧನ

‘ಶಂಕರಾಭರಣಂ‘ 1980ರಲ್ಲಿ ತೆರೆ ಕಂಡ ಚಿತ್ರ. ಇದರಿಂದ ಮೊದಲಾದ ವಿಶ್ವನಾಥ್‌ ಅವರ ಕಲಾಯಾತ್ರೆಯು ಭಾರತೀಯ ಚಲನಚಿತ್ರ ಇತಿಹಾಸದಲ್ಲಿಯೇ ಒಂದು ಮೈಲುಗಲ್ಲಾಗಿದೆ. ಈ ಸಂಗೀತಪ್ರಧಾನ ಚಿತ್ರ ವಿಶ್ವನಾಥ್‌ ಅವರ ವೃತ್ತಿಜೀವನಕ್ಕೆ ಮಾತ್ರವಲ್ಲದೆ, ಹಿನ್ನೆಲೆ ಗಾಯಕ ಎಸ್‌. ಪಿ. ಬಾಲಸುಬ್ರಹ್ಮಣ್ಯಂ ಅವರ ವೃತ್ತಿಜೀವನಕ್ಕೂ ಮಹತ್ತರವಾದ ಕೊಡುಗೆಯನ್ನು ನೀಡಿತು; ಸೋಮಯಾಜುಲು ಅವರಂಥ ನಟನನ್ನೂ ಚಿತ್ರಲೋಕಕ್ಕೆ ಪರಿಚಯಿಸಿತು. ಹೀಗೆಯೇ ಮುಂದೆ ಅವರ ‘ಸಿರಿವೆನ್ನೆಲ’ ಚಿತ್ರಕ್ಕೆ ಹಾಡುಗಳನ್ನು ಒದಗಿಸಿದ ಸೀತಾರಾಮ ಶಾಸ್ತ್ರಿ, ಚಲನಚಿತ್ರರಂಗದಲ್ಲಿ ‘ಸಿರಿವೆನ್ನಲ‘ ಸೀತಾರಾಮ ಶಾಸ್ತ್ರಿ ಎಂಬುದಾಗಿಯೇ ಸ್ಥಿರವಾದರು. ‘ಸ್ವಾತಿಕಿರಣಂ‘ ಚಿತ್ರದಲ್ಲಿ ‘ಮಾಸ್ಟರ್‌’ ಮಂಜುನಾಥ್ ಅವರನ್ನು ಕಾಣಿಸಿದ ರೀತಿಯೂ ಅನನ್ಯವಾಗಿದೆ.

ದಿಟ, ವಿಶ್ವನಾಥ್‌ ಅವರು ಶಂಕರಾಭರಣದ ಬಳಿಕ ಹೆಚ್ಚು ಕಡಿಮೆ ಎಲ್ಲ ಚಿತ್ರಗಳಿಗೂ ಭಾರತೀಯ ಕಲೆಯನ್ನೇ ವಸ್ತುವಾಗಿ ಆಯ್ದುಕೊಂಡರು. ಆದರೆ ಅವರು ಕಲೆಯನ್ನು ಕೇವಲ ಭಾವುಕತೆಯಿಂದಲೋ ರಂಜಕತೆಯಿಂದಲೂ ಆರಾಧಕತೆಯಿಂದಲೋ ನಿರೂಪಿಸಲು ಹೊರಡಲಿಲ್ಲ; ಭಾರತೀಯ ಕಲೆಗೂ ಇಲ್ಲಿಯ ಜೀವನಕ್ಕೂ ನೇರ ನಂಟಿದೆ ಎಂಬುದನ್ನು ಅವರ ಒಂದೊಂದು ಚಿತ್ರಗಳೂ ಸ್ಥಾಪಿಸಿವೆ. ’ಕಲೆಯಿರುವುದು ಕಲೆಗಾಗಿ ಅಲ್ಲ; ಕಲೆ ಇರುವುದು ಜೀವನದ ಸೌಂದರ್ಯವನ್ನು ಕಾಣುವುದಕ್ಕಾಗಿ‘ ಎಂಬ ಭಾರತೀಯ ಕಲಾಸೂತ್ರದ ಮಹಾಭಾಷ್ಯಕಾರ ಕೆ. ವಿಶ್ವನಾಥ್‌. ನೈಜವಾದ ಕಲೆಗೂ ಕಲಾನುಭವಕ್ಕೂ ಜಾತಿ, ಮತ, ಭಾಷೆ, ಅಂತಸ್ತು, ದೇಶ – ಮುಂತಾದ ಸಂಕುಚಿತ ವಿವರಗಳ ಗೊಡವೆಯಿಲ್ಲ ಎಂಬುದನ್ನು ಅವರಷ್ಟು ಸಮರ್ಥವಾಗಿಯೂ ಸುಂದರವಾಗಿಯೂ ಕಾಣಿಸಿದ ಮತ್ತೊಬ್ಬ ಕಲಾಯೋಗಿ ಇಲ್ಲ. ‘ಸೂತ್ರಧಾರುಲು’, ‘ಸ್ವಯಂಕೃಷಿ’, ‘ಶುಭಸಂಕಲ್ಪಂ’ ಚಿತ್ರಗಳನ್ನು ಇಲ್ಲಿ ಮೆಲುಕು ಹಾಕಬಹುದು. ಯಾವ ವೃತ್ತಿಯೂ ತನ್ನಷ್ಟಕ್ಕೆ ತಾನೇ ಜ್ಯೇಷ್ಠವೂ ಅಲ್ಲ, ಕನಿಷ್ಠವೂ ಅಲ್ಲ; ನಾವು ಅದನ್ನು ಎಷ್ಟು ಗೌರವಿಸುತ್ತೇವೆ ಎಂಬುದರಿಂದ ಅದಕ್ಕೆ ತಕ್ಕಂತೆ ಗೌರವಸ್ಥಾನ ದಕ್ಕುತ್ತದೆ ಎಂಬ ಕಾಯಕ ಸಿದ್ಧಾಂತವನ್ನು ಈ ಚಿತ್ರಗಳು ಎತ್ತಿಹಿಡಿಯುತ್ತವೆ; ಮಾತ್ರವಲ್ಲ, ಕಲೆ ಎಂದರೆ ಕೇವಲ ಸಂಗೀತವೋ ನೃತ್ಯವೋ ಚಿತ್ರವೋ ಅಷ್ಟೇ ಅಲ್ಲ; ಜೀವನದಲ್ಲಿ ನಾವು ದಕ್ಕಿಸಿಕೊಳ್ಳುವ ಆತ್ಮಗುಣಗಳೇ ಜೀವನಸೌಂದರ್ಯವನ್ನು ಕಾಣಿಸುವ ರಾಗ ತಾಳ ವರ್ಣಗಳು ಎಂಬುದನ್ನೂ ಇವು ಸಾರುತ್ತವೆ. ಕಲಾಸಾಧನೆಯೇ ಜೀವನದ ಗುರಿಯಲ್ಲ; ಅಂತರಂಗದ ಪಾಕವೇ ಜೀವನ ಆನಂದರಾಗದ ನಿಜವಾದ ಶ್ರುತಿ ಎಂಬುದರ ಸಂದೇಶವನ್ನು ‘ಸ್ವಾತಿಕಿರಣಂ’ನಲ್ಲಿ ಕಾಣಬಹುದು.  

ಓದಿ... ಖ್ಯಾತ ನಿರ್ದೇಶಕ ಕೆ. ವಿಶ್ವನಾಥ್‌ ನಿಧನ: ಪ್ರಧಾನಿ ಮೋದಿ ಸೇರಿ ಗಣ್ಯರಿಂದ ಸಂತಾಪ

ವಿಶ್ವನಾಥ್‌ ಅವರ ಸಾಮಾನ್ಯ ಪಾತ್ರಗಳೇ ತಮ್ಮ ಅಂತರಂಗದ ಬಲದಿಂದ ಅಸಮಾನ್ಯಪಾತ್ರಗಳಾಗಿಬಿಡುತ್ತವೆ; ಮಾತ್ರವಲ್ಲ, ಸಮಾಜವು ಅಬಲರೆಂದು ಗುರುತಿಸುವವರೂ ವಾಸ್ತವದಲ್ಲಿ ಎಷ್ಟು ಸಬಲರಾಗಿರುತ್ತಾರೆ ಎಂದೂ ಅವರು ಕಾಣಿಸಿದ್ದಾರೆ. ಜೀವನದಲ್ಲಿ ಸಹಜವಾಗಿ ಹುಟ್ಟುವ ಹಾಸ್ಯಪ್ರಸಂಗಗಳನ್ನು ವಿಶ್ವನಾಥ್‌ ಬಳಸಿಕೊಳ್ಳುವ ವಿಧಾನವೂ ಅನನ್ಯ. 

ವಿಶ್ವನಾಥ್‌ ಅವರಿಗೆ ಹಲವು ಪ್ರಶಸ್ತಿಗಳು ಬಂದಿವೆ. ಆದರೆ ಜನಮಾಸದಲ್ಲಿ ಅವರು ಎಂದಿಗೂ ಕಲಾತಪಸ್ವಿಯಾಗಿಯೇ ನೆಲೆಯಾಗಿರುತ್ತಾರೆ. ‘ಸ್ವರ್ಣಕಮಲಂ‘, ‘ಆಪದ್ಭಾಂದವುಡು’, ‘ಶ್ರುತಿಲಯಲು‘, ‘ಸಿರಿಸಿರಿ ಮುವ್ವ’, ‘ಸ್ವರಾಭಿಷೇಕಂ’ – ಇಂಥ ಹತ್ತಾರು ಚಿತ್ರಗಳಿಂದ ಅವರು ಅಮರರಾಗಿದ್ದಾರೆ. ವಿಶ್ವನಾಥ್‌ ಅವರ ’ಸಾಗರಸಂಗಮಂ‘ ಚಿತ್ರದ ಭರತವಾಕ್ಯದ ಸಾರಾಂಶ ಹೀಗಿದೆ: ‘ಕಲಾವಿದನ ಭೌತಿಕ ಕಾಯಕ್ಕೆ ಮುಪ್ಪು–ಸಾವುಗಳಿವೆಯೇ ಹೊರತು ಅವನ ಯಶಸ್ಸಿನ ಶರೀರಕ್ಕೆ ಅವು ಇರದು.’ ಈ ಮಾತು ಕೆ. ವಿಶ್ವನಾಥ್‌ ಅವರಿಗೂ ಸಲ್ಲುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು