ಸಂಕ್ರಾಂತಿಗೆ ತಲಾ ವರ್ಸಸ್‌ ತಲೈವಾ

7
ಪೊಂಗಲ್‌ ದಿನ ತೆರೆಗೆ ಬರಲಿವೆ ಪೆಟ್ಟಾ, ವಿಶ್ವಾಸಂ

ಸಂಕ್ರಾಂತಿಗೆ ತಲಾ ವರ್ಸಸ್‌ ತಲೈವಾ

Published:
Updated:

ತೆರೆಯ ಮೇಲೆ ತಮ್ಮದೇ ಆದ ಸ್ಟೈಲ್‌, ಮ್ಯಾನರಿಸಂ ಹಾಗೂ ಅಚ್ಚುಕಟ್ಟು ಅಭಿನಯದ ಮೂಲಕ ಕಮಾಲ್‌ ಮಾಡುವ ಈ ನಟರ ಚಿತ್ರಗಳ ಬಗ್ಗೆ ಸಿನಿಪ್ರಿಯರ ನಿರೀಕ್ಷೆ ತುಸು ಹೆಚ್ಚಾಗಿಯೇ ಇರುತ್ತದೆ. ಹೀಗಾಗಿ ಹಬ್ಬದ ದಿನಗಳಲ್ಲಿ ಸಿನಿಮಾ ಬಿಡುಗಡೆಯಾಗುವುದು ಸಾಮಾನ್ಯ ಸಂಗತಿಯಾದರೂ, ಈ ಬಾರಿಯ ಪೊಂಗಲ್‌ ತಮಿಳುನಾಡಿಗೆ ವಿಶೇಷ. ಅಜಿತ್ ಅಭಿನಯದ ವಿಶ್ವಾಸಂ ಮತ್ತು ರಜನಿಕಾಂತ್ ಅಭಿನಯದ ಪೆಟ್ಟಾ ಸಂಕ್ರಾಂತಿಯ ಸಂಭ್ರಮದೊಂದಿಗೆ ತೆರೆಗೆ ಬರಲಿದೆ.

ನಿರ್ದೇಶಕ ಶಿವಾ– ನಾಯಕ ನಟ ಅಜಿತ್‌ ಜೋಡಿಯ ನಾಲ್ಕನೇ ಸಿನಿಮಾ ವಿಶ್ವಾಸಂ. ಅಜಿತ್‌ಗೆ ನಾಯಕಿಯಾಗಿ ನಯನತಾರಾ ಕಾಣಿಸಿಕೊಂಡಿದ್ದಾರೆ. ಗ್ರಾಮೀಣ ಸೊಗಡಿನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ರಿಯಲ್‌ಎಸ್ಟೇಟ್‌ ಮಸಾಲೆ ಬೆರಸಿರುವುದು ಟ್ರೇಲರ್‌ನಲ್ಲಿ ಎದ್ದು ಕಾಣುತ್ತದೆ. ಪೆಟ್ಟಾ ಸಿನಿಮಾದಲ್ಲಿ ರಜನಿ ವಯಸ್ಸಿಗೆ ಮೀರಿದ ಪಾತ್ರ ಪೋಷಣೆ ಮಾಡಿದ್ದಾರೆ. ಮಧ್ಯವಯಸ್ಕನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸೂಪರ್‌ಸ್ಟಾರ್‌, ತಮ್ಮ ಹಿಂದಿನ ಚಿತ್ರಗಳ ಹೊಡಿಬಡಿ ಆಟವನ್ನು ಇಲ್ಲೂ ಮುಂದುವರಿಸಿದ್ದಾರೆ.

ಪೆಟ್ಟಾ ಟ್ರೇಲರ್ ಗಮನಿಸಿದರೆ, ಈ ಚಿತ್ರವೂ ತುಪಾಕಿಗಳ ನಡುವೆ ಸುತ್ತುವ ಗ್ಯಾಂಗ್‌ಸ್ಟರ್ ಕಥೆಯಂತೆ ಭಾಸವಾಗುತ್ತದೆ. ಕಾರ್ತಿಕ್‌ ಸುಬ್ಬರಾವ್‌ ನಿರ್ದೇಶನವಿರುವ ಈ ಸಿನಿಮಾದಲ್ಲಿ ರಜನಿಗೆ ನಾಯಕಿಯಾಗಿ ಸಿಮ್ರಾನ್‌ ಕಾಣಿಸಿಕೊಂಡಿದ್ದು, ಬಾಲಿವುಡ್‌ನ ಖ್ಯಾತ ನಟ ನವಾಜುದ್ದೀನ್‌ ಸಿದ್ದಿಕಿ ಹಾಗೂ ಪ್ರತಿಭಾವಂತ ನಟ ವಿಜಯ್ ಸೇತುಪತಿ ಕಾಣಿಸಿಕೊಂಡಿದ್ದಾರೆ.

ಈ ಎರಡೂ ಚಿತ್ರಗಳಲ್ಲಿ ಮಾಸ್‌ ಅಭಿಮಾನಿಗಳನ್ನು ರಂಜಿಸುವ ಸಂಭಾಷಣೆಗಳಿದ್ದು, ಪೈಸಾ ವಸೂಲಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಅಂದಹಾಗೆ ವಿಶ್ವಾಸಂ ಸಿನಿಮಾವನ್ನು ಜನವರಿ ಎರಡನೇ ವಾರ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿತ್ತು. ಆದರೆ ಪೆಟ್ಟಾ ಚಿತ್ರವೂ ಅದೇ ವಾರ ರಿಲೀಸ್‌ ಆಗಲಿರುವುದರಿಂದ ಕಾಲಿವುಡ್‌ನಲ್ಲಿ ಸ್ಟಾರ್‌ವಾರ್‌ ಶುರುವಾಗಿದೆ.

ತಮ್ಮ ನೆಚ್ಚಿನ ನಟರ ಸಿನಿಮಾ ಪೋಸ್ಟರ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಸಂಭ್ರಮ ಆಚರಿಸಿರುವ ಅಭಿಮಾನಿಗಳು, ಪರಸ್ಪರ ಕಾಲೆಳೆದುಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 1

  Frustrated
 • 2

  Angry

Comments:

0 comments

Write the first review for this !