ಶನಿವಾರ, ಆಗಸ್ಟ್ 20, 2022
22 °C

PV Web Exclusive: ಥಿಯೇಟರ್‌ ವರ್ಸಸ್ ಒಟಿಟಿ; ಜಯಾಪಜಯ ಯಾರಿಗೆ?‌

ಕೆ.ಎಚ್. ಓಬಳೇಶ್‌ Updated:

ಅಕ್ಷರ ಗಾತ್ರ : | |

‘ಗುಲಾಬೊ ಸಿತಾಬೊ’ ಚಿತ್ರದ ದೃಶ್ಯ

ಅದು ಜೂನ್ 12ರ ಮಧ್ಯರಾತ್ರಿ. ಅಮಿತಾಭ್‌ ಬಚ್ಚನ್‌, ಆಯುಷ್ಮಾನ್‌ ಖುರಾನ ನಟಿಸಿದ್ದ ಹಿಂದಿಯ ‘ಗುಲಾಬೊ ಸಿತಾಬೊ’ ಸಿನಿಮಾ ಅಮೆಜಾನ್‌ ಪ್ರೈಮ್‌ ವಿಡಿಯೊದಲ್ಲಿ ಬಿಡುಗಡೆಯಾಯಿತು. 213 ದೇಶಗಳಲ್ಲಿ ಏಕಕಾಲಕ್ಕೆ ಸಬ್‌ಟೈಟಲ್‌ ಮೂಲಕ ಹಲವು ಭಾಷೆಗಳಲ್ಲಿ ತೆರೆಕಂಡಿದ್ದು ಇದರ ಹೆಗ್ಗಳಿಕೆ. ಇದಕ್ಕೆ ಸಂಪರ್ಕ ಸೇತುವೆಯಾಗಿದ್ದು ಒಟಿಟಿ ವೇದಿಕೆ.

ಲಾಕ್‌ಡೌನ್‌ ಅವಧಿಯಲ್ಲಿ ಭಾರತೀಯ ವೀಕ್ಷಕರಿಗೆ ಸ್ಪ್ಯಾನಿಷ್‌ ಕ್ರೈಮ್‌ ಸೀರಿಯಲ್ ‘ಮನಿ ಹೀಸ್ಟ್‌’ ಸೇರಿದಂತೆ ಹಲವು ವಿದೇಶಿ ಸಿನಿಮಾಗಳು ಮೋಡಿ ಮಾಡಿವೆ. ಒಟಿಟಿಯು ಭಾಷೆಗಳ ನಡುವಿನ ಗೋಡೆ ಕೆಡವಿರುವುದಂತೂ ದಿಟ.

ಕೊರೊನಾ ಪರಿಣಾಮ ಚಿತ್ರೋದ್ಯಮದ ಚಟುವಟಿಕೆ ಸರಿಸುಮಾರು ಐದು ತಿಂಗಳು ಸ್ಥಗಿತಗೊಂಡಿತ್ತು. ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಈಗ ಸಿನಿಮಾ ಶೂಟಿಂಗ್‌ ಶುರುವಾಗಿದೆ. ಆದರೆ, ಚಿತ್ರಮಂದಿರಗಳ ಪುನರಾರಂಭದ ಅನಿಶ್ಚಿತತೆಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಹಾಗಾಗಿಯೇ, ಬಿಡುಗಡೆಗೆ ಸಿದ್ಧವಾಗಿರುವ ಸಿನಿಮಾಗಳ ನಿರ್ಮಾಪಕರು ಪ್ರತಿದಿನ ಒಟಿಟಿಯ ಕದ ಬಡಿಯುತ್ತಿದ್ದಾರೆ. ನಿರ್ಮಾಣದ ನಷ್ಟ ತುಂಬಿಸಿಕೊಳ್ಳುವುದು ಅವರ ಲೆಕ್ಕಾಚಾರ. ಹಾಗಿದ್ದರೆ ಭವಿಷ್ಯದಲ್ಲಿ ಚಿತ್ರಮಂದಿರಗಳಿಗೆ ಉಳಿಗಾಲ ಇದೆಯೇ? ಎನ್ನುವ ಪ್ರಶ್ನೆ ಧುತ್ತನೆ ಎದುರಾದರೆ ಅಚ್ಚರಿಪಡಬೇಕಿಲ್ಲ. 

ಭಾರತೀಯ ಚಿತ್ರರಂಗದ ನೂರು ವರ್ಷಗಳ ಸಾಧನೆಯ ಹಾದಿಯಲ್ಲಿ ಸಿನಿಮಾ ರಂಗದ ಮಾರುಕಟ್ಟೆ ಎನಿಸಿರುವ ಥಿಯೇಟರ್‌ಗಳದ್ದು ಮಹತ್ವದ ಪಾತ್ರ. ಜನರು ಸಿನಿಮಾ ನೋಡಲು ಚಿತ್ರಮಂದಿರಗಳತ್ತ ದಾಂಗುಡಿ ಇಡುತ್ತಿದ್ದ ಫಲವೇ 1,000ರಿಂದ 1,500 ಪ್ರೇಕ್ಷಕರು ಕೂತು ಸಿನಿಮಾ ವೀಕ್ಷಿಸುವ ಚಿತ್ರಮಂದಿರಗಳ ಕಲ್ಪನೆ ಮೈದಾಳಿತು. ದಶಕಗಳ ಹಿಂದೆ ಚಿತ್ರಮಂದಿರದಲ್ಲಿಯೇ ಸಿನಿಮಾ ನೋಡಬೇಕು ಎಂದು ಪ್ರೇಕ್ಷಕರು ಹಟ ಹಿಡಿಯುತ್ತಿದ್ದರು. ಹಾಗಾಗಿಯೇ, ಚಿತ್ರ ಬಿಡುಗಡೆಯ ಆರಂಭದ ವಾರಗಳಲ್ಲಿಯೇ ಅವು ಹೌಸ್‌ಫುಲ್‌ ಆಗುತ್ತಿದ್ದವು. ನಿರ್ಮಾಪಕರ ಜೇಬು ಕೂಡ ಭರ್ತಿಯಾಗುತ್ತಿತ್ತು. ಅಂತಹ ಸುವರ್ಣಯುಗ ಈಗ ಎಲ್ಲಿದೆ?

ಸ್ಟಾರ್ ‌ನಟರ ಸಿನಿಮಾ ಹೊರತುಪಡಿಸಿದರೆ ಹೊಸಬರ ಸಿನಿಮಾಗಳ ವೀಕ್ಷಣೆಗೆ ಚಿತ್ರಮಂದಿರಗಳಿಗೆ ಬರುವ ಪ್ರೇಕ್ಷಕರ ಸಂಖ್ಯೆ ತೀರಾ ಕಡಿಮೆ. ಹಾಗಾಗಿ ಸಣ್ಣ ಬಜೆಟ್‌, ಒಳ್ಳೆಯ ಕಂಟೆಂಟ್‌ ಇರುವ ಚಿತ್ರಗಳ ಪಾಲಿಗೆ ಒಟಿಟಿ ವರದಾನ.

ಒಟಿಟಿಯಿಂದ ಪ್ರಯೋಜನವಾದರೂ ಏನು?

ದೈನಂದಿನ ಜಂಜಡದ ಬದುಕಿನಲ್ಲಿ ಜನರು ಒತ್ತಡಕ್ಕೆ ಸಿಲುಕುತ್ತಾರೆ. ಕೆಲವೊಮ್ಮೆ ಮನರಂಜನೆ ಪಡೆಯಲು ಹರಸಾಹಸ ಪಡಬೇಕಿದೆ. ಕೆಲವರು ವೈಯಕ್ತಿಕ ಕಾರಣಗಳಿಂದಾಗಿ ಚಿತ್ರಮಂದಿರಗಳಿಗೆ ಹೋಗಲು ಆಗುವುದಿಲ್ಲ. ಈಗ ಎಲ್ಲರ ಕೈಯಲ್ಲೂ ಸ್ಮಾರ್ಟ್‌ಫೋನ್‌ ಇದೆ. ಇದರ ಮೂಲಕ ಒಟಿಟಿಯಲ್ಲಿ ಸಿನಿಮಾ ವೀಕ್ಷಣೆ ಸುಲಭ. ತಮಗೆ ಸಮಯ ಸಿಕ್ಕಿದಾಗ ಎಷ್ಟು ಬೇಕೊ ಅಷ್ಟು ಸಿನಿಮಾ ವೀಕ್ಷಿಸಬಹುದು. ಥಿಯೇಟರ್‌ನಂತೆ ಇಲ್ಲಿ ಸಮಯದ ನಿರ್ಬಂಧವಿಲ್ಲ. ತನಗೆ ಬೇಕಾದ ಜಾನರ್‌, ಭಾಷೆಯ ಆಯ್ಕೆಯ ಸೌಲಭ್ಯವೂ ಉಂಟು. ಇದು ಪ್ರೇಕ್ಷಕ ವರ್ಗದ ಮಾತಾಯಿತು.

ಸಿನಿಮಾಕ್ಕೆ ಕೋಟ್ಯಂತರ ರೂಪಾಯಿ ಬಂಡವಾಳ ಹೂಡಿ ನಷ್ಟ ಅನುಭವಿಸಲು ಯಾವೊಬ್ಬ ನಿರ್ಮಾಪಕ ಸಿದ್ಧನಿರುವುದಿಲ್ಲ. ಸಿನಿಮಾ ಬಿಡುಗಡೆಯಾದರೆ ಚಿತ್ರಮಂದಿರಗಳಿಗೆ ಪ್ರೇಕ್ಷಕರು ದಾಂಗುಡಿ ಇಡುತ್ತಾರೆ ಎಂಬ ನಂಬಿಕೆಯೂ ಅವರಲ್ಲಿ ಈಗ ಉಳಿದಿಲ್ಲ. ನಿರ್ಮಾಣದ ವೆಚ್ಚವೂ ಕೈಸೇರದೆ ಬೀದಿಪಾಲಾಗಿರುವ ನಿರ್ಮಾಪಕರ ಪಟ್ಟಿಯೇ ದೊಡ್ಡದಿದೆ.

ಹಾಗಾಗಿ, ಒಟಿಟಿಯಲ್ಲಿ ಔಟ್‌ರೇಟ್‌ ವಿಧಾನದಡಿ ಸಿನಿಮಾ ಖರೀದಿಯಾದರೆ ನಿರ್ಮಾಪಕರಿಗೆ ಶೇಕಡ 60ರಿಂದ 70ರಷ್ಟು ನಿರ್ಮಾಣದ ವೆಚ್ಚ ಕೈಸೇರುತ್ತದೆ ಎಂಬ ಅಂದಾಜಿದೆ. ಸ್ಯಾಟಲೈಟ್ಸ್‌ ಹಕ್ಕುಗಳ ಮಾರಾಟದ ಮೂಲಕ ಉಳಿದ ವೆಚ್ಚವನ್ನು ಹಿಂದಿರುಗಿಸಿಕೊಳ್ಳುವುದು ಅವರ ಲೆಕ್ಕಾಚಾರ. ಇದಕ್ಕೆ ತಾಜಾ ನಿದರ್ಶನವೆಂದರೆ ಜ್ಯೋತಿಕಾ ನಟನೆಯ ತಮಿಳಿನ ‘ಪೊನ್ಮಗಲ್‌ ವಂದಲ್‌’ ಚಿತ್ರ. ಸಿನಿ ವಿಶ್ಲೇಷಕರ ಪ್ರಕಾರ ಇದರ ನಿರ್ಮಾಣ ವೆಚ್ಚ ₹ 8 ಕೋಟಿಯಂತೆ. ಒಟಿಟಿಯಲ್ಲಿ ಇದು ಖರೀದಿಯಾಗಿದ್ದು ₹ 5 ಕೋಟಿಗೆ. ನಿರ್ಮಾಣದ ಮುಕ್ಕಾಲು ಭಾಗದಷ್ಟು ಹಣ ಹಿಂದಿರುಗಿದೆಯಂತೆ. ಇಂತಹ ಅವಕಾಶ ಸಿಗುವುದು ಸ್ಟಾರ್‌ ನಟ, ನಟಿಯರ ಸಿನಿಮಾಗಳಿಗೆ ಎಂಬುದು ಬೇರೆ ಮಾತು.

ಚಿತ್ರಮಂದಿರಗಳು ಪುನರಾಂಭಗೊಂಡರೆ ಸ್ಟಾರ್‌ ನಟರ ಸಿನಿಮಾಗಳಿಗೆ ಮೊದಲ ಪ್ರಾಶಸ್ತ್ಯ ಸಿಗುತ್ತದೆ. ಸಣ್ಣ ಬಜೆಟ್‌ ಸಿನಿಮಾಗಳು ಸರದಿ ಸಾಲಿನಲ್ಲಿ ನಿಂತು ಎಂದಿನಂತೆ ಉಸಿರುಗಟ್ಟಬೇಕಾಗುತ್ತದೆ. ಬಿಡುಗಡೆಗೆ ಸಿದ್ಧವಾಗಿರುವ ಸಿನಿಮಾಗಳನ್ನು ಮತ್ತಷ್ಟು ವಿಳಂಬ ಮಾಡುವುದು ಏಕೆ ಎಂಬುದು ಒಟಿಟಿ ಬಗ್ಗೆ ಒಲವಿರುವ ನಿರ್ಮಾಪಕರ ವಾದ.

ಬಿಗ್‌ ಬ್ಯಾನರ್‌ನಡಿ ನಿರ್ಮಾಣವಾಗುವ ಸಿನಿಮಾಗಳ ಬಜೆಟ್‌ ₹ 50 ಕೋಟಿಯಿಂದ ₹ 500 ಕೋಟಿ ದಾಟುತ್ತದೆ. ಬಜೆಟ್‌ ಘೋಷಿಸುವುದು ಈಗೀಗ ಫ್ಯಾಷನ್‌ ಕೂಡ ಆಗಿದೆ. ಈ ಪೈಕಿ ಚಿತ್ರ ನಿರ್ಮಾಣಕ್ಕೆ ಶೇಕಡ 25ರಷ್ಟು ಹಣ ಮಾತ್ರ ವೆಚ್ಚವಾಗುತ್ತದೆ. ಉಳಿದದ್ದು ಸ್ಟಾರ್‌ ನಟ, ನಟಿಯರು ಮತ್ತು ತಂತ್ರಜ್ಞರ ಜೇಬು ಸೇರುತ್ತದೆ. ಬಿಗ್‌ ಬಜೆಟ್‌ ಹೆಸರಿನಡಿ ನಿರ್ಮಾಣವಾಗುವ ಬಹುತೇಕ ಸಿನಿಮಾಗಳು ₹ 100 ಕೋಟಿಯ ಕ್ಲಬ್‌ ಸೇರಲು ಹರಸಾಹಸಪಡುವುದು ಗುಟ್ಟೇನಲ್ಲ.

ಚಿತ್ರಮಂದಿರಗಳ ಪಾಡೇನು?

ಕಾಲ ಬದಲಾದಂತೆ ತಂತ್ರಜ್ಞಾನವೂ ಬದಲಾಗಿದೆ. ಹೊಸ ತಂತ್ರಜ್ಞಾನದ ಮೂಲಕ ಪ್ರೇಕ್ಷಕರಿಗೆ ಸಿನಿಮಾ ತೋರಿಸಲು ನಿರ್ಮಾಪಕರು ಮುಂದಾಗಿರುವುದು ಸಹಜ ಬೆಳವಣಿಗೆ. 

ನಿರ್ಮಾಪಕರ ಜೊತೆಗೆ ವಿತರಕರು, ಪ್ರದರ್ಶಕರು ಕೈಜೋಡಿಸುತ್ತಿದ್ದ ಕಾಲವೊಂದಿತ್ತು. ಈಗ ಅಂತಹ ಪರಿಸ್ಥಿತಿ ಇಲ್ಲ. ಈ ಮೂರು ವರ್ಗದ ನಡುವೆ ಸಂಬಂಧವೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನಿರ್ಮಾಪಕರ ಜೊತೆಗೆ ಚಿತ್ರ ಪ್ರದರ್ಶಕರ ಒಳಗೊಳ್ಳುವಿಕೆ ತೀರಾ ಕಡಿಮೆ. ಬಾಡಿಗೆ ಮೇಲಷ್ಟೇ ಅವರು ದೃಷ್ಟಿ ನೆಟ್ಟಿರುತ್ತಾರೆ ಎಂಬುದು ಸಾಮಾನ್ಯ ಆರೋಪ. ಮತ್ತೊಂದೆಡೆ ಒಂದು ಸಾವಿರ ಆಸನ ಹೊಂದಿರುವ ಥಿಯೇಟರ್ ಹೌಸ್‌ಫುಲ್‌ ಆಗುವುದು ಕಡಿಮೆ. ಇಂತಹ ಚಿತ್ರಮಂದಿರಗಳನ್ನು ಹೌಸ್‌ಫುಲ್‌ ಮಾಡುವ ನಟರ ಸಂಖ್ಯೆಯಾದರೂ ಎಷ್ಟಿದೆ? ಮೊದಲ ವಾರ ಕಳೆದರೆ ಚಿತ್ರಮಂದಿರಗಳು ಬಿಕೋ ಎನ್ನುತ್ತವೆ.

ಅಲ್ಲದೇ ಜನಪ್ರಿಯ ನಟರ ಸಿನಿಮಾಗಳು ಬಿಡುಗಡೆಯಾದ ಮೊದಲ ವಾರ ಟಿಕೆಟ್‌ ದರ ಕೂಡ ಹೆಚ್ಚಿರುವ ಪರಿಪಾಟ ಬೇರೂರಿದೆ. ಇದೊಂದು ಹೊಸ ರೀತಿಯ ಸುಲಿಗೆ. ಪ್ರೇಕ್ಷಕರ ಜೇಬಿಗೆ ಕತ್ತರಿ ಹಾಕುವ ಇದರ ಬಗ್ಗೆ ಯಾರೊಬ್ಬರೂ ತುಟಿ ಬಿಚ್ಚುವುದಿಲ್ಲ. ಹೆಚ್ಚಿನ ಹಣ ಖರ್ಚು ಮಾಡಿದ್ದೇವೆ ಎಂದು ನಿರ್ಮಾಪಕರು ಸಬೂಬು ನೀಡುತ್ತಾರಷ್ಟೇ.

ಶೇಕಡವಾರು ಪದ್ಧತಿ ಜಾರಿಗೊಂಡಿಲ್ಲ

ಚಿತ್ರಮಂದಿರಗಳ ದುಬಾರಿ ಬಾಡಿಗೆ ದರಕ್ಕೆ ನಿರ್ಮಾಪಕರು ತತ್ತರಿಸಿ ಹೋಗಿದ್ದಾರೆ. ಹೊಸಬರು ಕೂಡ ಸಂಕಷ್ಟದ ಸುಳಿಗೆ ಸಿಲುಕಿದ್ದಾರೆ. ಈಗಾಗಲೇ, ಮಲ್ಟಿಫ್ಲೆಕ್ಸ್‌ಗಳಲ್ಲಿ ಶೇಕಡವಾರು ಪದ್ಧತಿ ಜಾರಿಯಲ್ಲಿದೆ. ಚಿತ್ರಮಂದಿರಗಳಲ್ಲಿ ಇದು ಜಾರಿಗೆ ಬಂದಿಲ್ಲ.

ಬೆಂಗಳೂರಿನಲ್ಲಿಯೇ ಕೆಲವು ಚಿತ್ರಮಂದಿರಗಳ ಬಾಡಿಗೆ ದರ ವಾರಕ್ಕೆ ₹4ರಿಂದ 5 ಲಕ್ಷಕ್ಕೂ ಹೆಚ್ಚಿದೆ. ಸ್ಟಾರ್‌ ನಟ, ನಟಿಯರ ಸಿನಿಮಾಗಳು ಮೊದಲ ವಾರದಲ್ಲಿ ಹೆಚ್ಚಿನ ಗಳಿಕೆ ಮಾಡುವುದು ಸಹಜ. ಎರಡು ಮತ್ತು ಮೂರನೇ ವಾರದಲ್ಲಿ ಗಳಿಕೆ ಸಹಜವಾಗಿ ಕಡಿಮೆಯಾಗುತ್ತದೆ. ಬಾಡಿಗೆ ಪದ್ಧತಿಗೆ ತಿಲಾಂಜಲಿ ನೀಡಿ 60:40ರ ಅನುಪಾತದಡಿ ಲಾಭ ಹಂಚಿಕೆ ಪದ್ಧತಿ ಜಾರಿಯಾದರೆ ನಿರ್ಮಾಪಕರು ನಷ್ಟದ ಸುಳಿಗೆ ಸಿಲುಕುವುದು ತಪ್ಪುತ್ತದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲೂ ಹೊಸ ನೀತಿ ಜಾರಿಗೊಂಡಿಲ್ಲ. 

ಬಿಗ್‌ ಬಜೆಟ್‌ ಸಿನಿಮಾಗಳಿಗೆ ಲಾಭವೇ?

ಬಿಗ್‌ ಬಜೆಟ್‌ ಸಿನಿಮಾಗಳಿಗೆ ಒಟಿಟಿಯಿಂದ ಲಾಭ ಕಡಿಮೆ ಎನ್ನುವ ವಾದವಿದೆ. ₹ 200 ಕೋಟಿ ಅಥವಾ ₹ 300 ಕೋಟಿ ನೀಡಿ ಸಿನಿಮಾ ಖರೀದಿಗೆ ಈ ವೇದಿಕೆಗಳು ಮುಂದಾಗುವುದಿಲ್ಲ. ಜೊತೆಗೆ, ಸಿನಿಮಾ ನಿರ್ಮಾಣ ಸಂಸ್ಥೆಗಳು ಕೂಡ ಒಟಿಟಿಯಲ್ಲಿ ಚಿತ್ರ ಬಿಡುಗಡೆಗೆ ಸಿದ್ಧವಿರುವುದಿಲ್ಲ. ಇಂತಹ ಸಿನಿಮಾಗಳ ಸೌಂಡ್‌ಗಾಗಿಯೇ ಲಕ್ಷಾಂತರ ರೂಪಾಯಿ ವ್ಯಯಿಸಲಾಗಿರುತ್ತದೆ. ಮೊಬೈಲ್‌ನಲ್ಲಿ ಆ ಸೌಂಡ್‌ ಎಫೆಕ್ಟ್ ಸಿಗುವುದಿಲ್ಲ ಎನ್ನುವುದು ಬಿಗ್‌ ಬಜೆಟ್‌ ಸಿನಿಮಾಗಳ ನಿರ್ಮಾಪಕರ ವಾದ.

ಬಿಗ್‌ ಬಜೆಟ್‌ ಸಿನಿಮಾಗಳು ಚಿತ್ರಮಂದಿರದಲ್ಲಿ ಬಿಡುಗಡೆಯಾದರಷ್ಟೇ ಲಾಭ ಗಳಿಸಬಹುದು. ಗಲ್ಲಾಪೆಟ್ಟಿಗೆಯಲ್ಲಿ ಸೂಪರ್‌ ಹಿಟ್‌ ಆದರೆ ಒಟಿಟಿ ಮತ್ತು ಸ್ಯಾಟಲೈಟ್ಸ್‌ ಹಕ್ಕುಗಳ ಮಾರಾಟ, ಆಡಿಯೊ ರೂಪದಲ್ಲಿಯೂ ಹಣ ಹರಿದು ಬರಲಿದೆ ಎಂಬ ಸಿದ್ಧ ಸೂತ್ರಕ್ಕೆ ಅವರು ಜೋತುಬಿದ್ದಿರುವುದು ಉಂಟು.

ಟಿ.ವಿ ಬಂದ ಆರಂಭದಲ್ಲಿ ಅದನ್ನು ನಿಷೇಧಿಸುವಂತೆ ಚಿತ್ರಮಂದಿರಗಳ ಮಾಲೀಕರ ಕೂಗು ಕೇಳಿಬಂದಿತ್ತು. ಈಗ ದಿನಪೂರ್ತಿ ಸಿನಿಮಾಗಳನ್ನು ಪ್ರಸಾರ ಮಾಡುವ ಚಾನೆಲ್‌ಗಳೇ ಹುಟ್ಟಿಕೊಂಡಿವೆ. ಜನರು ಮೊಬೈಲ್‌ ಮೂಲಕ ಸಿನಿಮಾ ನೋಡುವ ಸಂಸ್ಕೃತಿಗೆ ಒಗ್ಗಿಕೊಳ್ಳುತ್ತಿದ್ದಾರೆ. ಒಟ್ಟಾರೆ ತಂತ್ರಜ್ಞಾನ ಬದಲಾದಂತೆ ಜನರ ಮನಸ್ಥಿತಿಯೂ ಬದಲಾಗುತ್ತಿರುವುದು ಸತ್ಯ. ಕೋವಿಡ್‌ ಕಾಲದಲ್ಲಿ ಒಟಿಟಿ ವೇದಿಕೆಗಳು ಹೆಚ್ಚು ಸಕ್ರಿಯವಾಗಿವೆ. ಹಾಗಾಗಿಯೇ, ಚಿತ್ರೋದ್ಯಮಕ್ಕೆ ಮಾರುಕಟ್ಟೆ ತಂತ್ರಗಾರಿಕೆಯನ್ನು ಬದಲಾಯಿಸಿಕೊಳ್ಳುವುದಷ್ಟೇ ಈಗ ಉಳಿದಿರುವ ಏಕೈಕ ದಾರಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು