ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬರಲಿದೆ 'ದಿ ದೆಹಲಿ ಫೈಲ್ಸ್‌': ಹೊಸ ಸಿನಿಮಾ ಘೋಷಿಸಿದ ವಿವೇಕ್‌ ಅಗ್ನಿಹೋತ್ರಿ

ಕಾಶ್ಮೀರದಿಂದ ದೆಹಲಿ ಕಡೆಗೆ ಮುಖ ಮಾಡಿದ ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ
Last Updated 15 ಏಪ್ರಿಲ್ 2022, 11:12 IST
ಅಕ್ಷರ ಗಾತ್ರ

ಮುಂಬೈ: 'ದಿ ಕಾಶ್ಮೀರ್‌ ಫೈಲ್ಸ್‌' ಸಿನಿಮಾ ಮೂಲಕ ಹಲವು ಬಾರಿ ಚರ್ಚೆಗೆ ಗ್ರಾಸವಾಗಿರುವ ನಿರ್ದೇಶಕ ವಿವೇಕ್‌ ರಂಜನ್‌ ಅಗ್ನಿಹೋತ್ರಿ ಅವರು ತಮ್ಮ ಮುಂದಿನ ಸಿನಿಮಾದ ಶೀರ್ಷಿಕೆ ಬಹಿರಂಗ ಪಡಿಸಿದ್ದಾರೆ. ಈಗ ದೆಹಲಿ ಕಡೆಗೆ ಮುಖ ಮಾಡಿರುವುದನ್ನು ಶೀರ್ಷಿಕೆ ಸೂಚಿಸುತ್ತಿದೆ.

ವಿವಾದಗಳು, ಚರ್ಚೆಗಳು, ರಾಜಕಾರಣಿಗಳ ಕೆಸರೆರಚಾಟಗಳ ನಡುವೆ ಉತ್ತಮ ಗಳಿಕೆ ಕಂಡ ಚಿತ್ರ 'ದಿ ಕಾಶ್ಮೀರ್‌ ಫೈಲ್ಸ್‌'. ಈಗ ಅಗ್ನಿಹೋತ್ರಿ ಅವರು ಹೊಸ ಸಿನಿಮಾ 'ದಿ ದೆಹಲಿ ಫೈಲ್ಸ್‌' ತಯಾರಿ ಶುರು ಮಾಡಿರುವುದಾಗಿ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ದಿ ಕಾಶ್ಮೀರ್‌ ಫೈಲ್ಸ್‌ ಸಿನಿಮಾಗಾಗಿ ಕಳೆದ ನಾಲ್ಕು ವರ್ಷಗಳಿಂದ ಪ್ರಾಮಾಣಿಕವಾಗಿ ನಡೆಸಿರುವ ಕೆಲಸ ಹಾಗೂ ಅವುಗಳಲ್ಲಿ ತೊಡಗಿಸಿಕೊಂಡವರಿಗೆ ಅಗ್ನಿಹೋತ್ರಿ ಧನ್ಯವಾದ ತಿಳಿಸಿದ್ದಾರೆ.

ಕಾಶ್ಮೀರಿ ಹಿಂದೂಗಳಿಗೆ ಆಗಿರುವ ಅನ್ಯಾಯ ಮತ್ತು ಅವರ ಹತ್ಯಾಕಾಂಡದ ಕುರಿತು ಜನರಿಗೆ ತಿಳಿವಳಿಕೆ ಮೂಡಿಸುವುದು ಪ್ರಮುಖವಾದುದು ಎಂದಿರುವ ಅವರು, ಈಗ ಮುಂದಿನ ಸಿನಿಮಾ ಕೆಲಸಗಳಲ್ಲಿ ನಿರತನಾಗುವ ಸಮಯ ಎಂದು ಪ್ರಕಟಿಸಿದ್ದಾರೆ.

ಮುಂದಿನ ಚಿತ್ರದ ಬಗ್ಗೆ 'ದಿ ದೆಹಲಿ ಫೈಲ್ಸ್‌' (#TheDelhiFiles) ಎಂದಷ್ಟೇ ತಿಳಿಸಿದ್ದು, ಯಾವ ಘಟನೆ ಅಥವಾ ಕಥೆಯನ್ನು ಆಧರಿಸಿದ ಸಿನಿಮಾ ಎಂಬುದನ್ನು ಬಹಿರಂಗ ಪಡಿಸಿಲ್ಲ.

ದಿ ಕಾಶ್ಮೀರ್‌ ಫೈಲ್ಸ್‌ ಸಿನಿಮಾ ಮಾರ್ಚ್‌ 11ರಂದು ದೇಶದಾದ್ಯಂತ ಬಿಡುಗಡೆಯಾಯಿತು. 1990ರ ದಶಕದಲ್ಲಿ ಕಾಶ್ಮೀರದಿಂದ ಕಾಶ್ಮೀರಿ ಪಂಡಿತರನ್ನು ಸಾಮೂಹಿಕವಾಗಿ ಗುಳೆ ಹೋಗುವಂತೆ ಮಾಡಿದ ಘಟನೆಗಳನ್ನು ಈ ಸಿನಿಮಾ ಒಳಗೊಂಡಿದೆ.

ಅನುಪಮ್‌ ಖೇರ್‌, ಪಲ್ಲವಿ ಜೋಶಿ, ಮಿಥುನ್‌ ಚಕ್ರವರ್ತಿ ಹಾಗೂ ದರ್ಶನ್ ಕುಮಾರ್‌ ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಸಿನಿಮಾ ಕುರಿತು ಹಲವು ಲೇಖಕರು ಹಾಗೂ ವಿಮರ್ಶಕರಿಂದ ಟೀಕೆಗಳು ವ್ಯಕ್ತವಾದರೂ ಚಿತ್ರ ಮಂದಿರಗಳಲ್ಲಿ ಒಟ್ಟು ಸುಮಾರು ₹330 ಕೋಟಿ ಸಂಗ್ರಹ ಕಂಡಿದೆ.

ಮಧ್ಯ ಪ್ರದೇಶ, ಉತ್ತರ ಪ್ರದೇಶ ಹಾಗೂ ಗುಜರಾತ್‌ ಸೇರಿದಂತೆ ಬಿಜೆಪಿ ಆಡಳಿತವಿರುವ ರಾಜ್ಯಗಳು ದಿ ಕಾಶ್ಮೀರ್‌ ಫೈಲ್ಸ್‌ ಸಿನಿಮಾಗೆ ಮನರಂಜನಾ ತೆರಿಗೆಯಿಂದ ವಿನಾಯಿತಿ ಘೋಷಿಸಿದವು. ಆ ಕ್ರಮವು ರಾಜಕೀಯ ಪಕ್ಷಗಳ ನಡುವೆ ಸಂಘರ್ಷಕ್ಕೆ ಕಾರಣವಾಯಿತು.

ದಿ ಕಾಶ್ಮೀರ್‌ ಫೈಲ್ಸ್‌ಗೂ ಮುನ್ನ ಅಗ್ನಿಹೋತ್ರಿ, 1966ರಲ್ಲಿ ಪ್ರಧಾನಿ ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರ ನಿಗೂಢ ಸಾವಿನ ಕುರಿತ ಘಟನೆಗಳನ್ನು ಆಧರಿಸಿ 'ದಿ ತಾಷ್ಕೆಂಟ್‌ ಫೈಲ್ಸ್‌' ಸಿನಿಮಾ ನಿರ್ದೇಶಿಸಿದ್ದರು. ಅದರೊಂದಿಗೆ ಚಾಕೊಲೆಟ್‌ ಹಾಗೂ ಎರೋಟಿಕ್‌ ಥ್ರಿಲ್ಲರ್‌ಗಳಾದ 'ಹೇಟ್‌ ಸ್ಟೋರಿ' ಹಾಗೂ 'ಜಿದ್‌' ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT