ಭಾನುವಾರ, ಜೂನ್ 13, 2021
25 °C

‘ದಿ ‍ಪೇಂಟರ್‘ ಸಿನಿಮಾ ವಿಮರ್ಶೆ: ಲಾಕ್‌ಡೌನ್‌ ಸ್ಥಿತಿಯ ಕಾಡದ ಕಥನ

ವಿಶಾಖ ಎನ್. Updated:

ಅಕ್ಷರ ಗಾತ್ರ : | |

Prajavani

ಲಾಕ್‌ಡೌನ್‌ ಆದಮೇಲೆ ಚಿತ್ರರಂಗದಲ್ಲೂ ಹಲವು ಪ್ರಯೋಗಗಳು ನಡೆಯುತ್ತಿವೆ. ಫೋನ್‌ ಮೂಲಕವೇ ಸಂದೇಶ– ಸೂಚನೆಗಳನ್ನು ನೀಡಿ ನಿರ್ದೇಶಕರು ಸಿನಿಮಾ ಮಾಡಿಸಿರುವ ಪ್ರಯೋಗದ ಕಾರಣಕ್ಕೆ ‘ದಿ ಪೇಂಟರ್’ ಸುದ್ದಿಯಾಗಿತ್ತು. ಚಿತ್ರದ ಕಥಾವಸ್ತು ಕೂಡ ಲಾಕ್‌ಡೌನ್‌ ಸಂದರ್ಭದ್ದೇ. ವ್ಯಾಕುಲ ಸ್ಥಿತಿಯಲ್ಲಿ ಹಟಕ್ಕೆ ಬಿದ್ದು ಉತ್ಸಾಹದಲ್ಲಿ, ಇರುವ ಇತಿಮಿತಿಯಲ್ಲೇ ಮೂರು ಮೊಳ ನೇಯ್ದಂತೆ ಈ ಚಿತ್ರ ಮೂಡಿಬಂದಿದೆ.

ಹಸಿವೆ ತಡೆಯಲಾಗದೆ ಪೇಂಟರ್ ಒಬ್ಬ ಮನೆಯೊಂದನ್ನು ಹೊಕ್ಕುತ್ತಾನೆ. ಅಲ್ಲಿ ಕೋಣೆಯಲ್ಲಿ ಬಂದಿಯಾಗುವ ಅವನು, ತಾಯಿ–ಮಗ–ಮಗಳಿರುವ ಮನೆಯಲ್ಲಿನ ವಿದ್ಯಮಾನಗಳಿಗೆ ಕಿವಿಯ ಮೂಲಕವೇ ಸಾಕ್ಷಿಯಾಗುತ್ತಾನೆ. ತಾಯಿ– ಮಗನಿಗೆ ಅವನ ಮೇಲೆ ಅನುಮಾನ. ಮಗಳಿಗೆ ಅವನು ಪಾಪದ ವ್ಯಕ್ತಿ ಎಂಬ ಭಾವನೆ. ಆತಂಕ ಹುಟ್ಟಿಸಿದ ಆ ಅಭ್ಯಾಗತನನ್ನು ಲಾಕ್‌ಡೌನ್‌ ಸಂದರ್ಭದಲ್ಲಿ ಎಲ್ಲರೂ ಹೇಗೆ ನೋಡುತ್ತಾರೆ, ಅವನಿಗೆ ಏನೆಲ್ಲ ಮಾಡುತ್ತಾರೆ ಎನ್ನುವುದು ಕಥಾಹಂದರ.

ಸಿನಿಮಾದಲ್ಲಿ ಪಾತ್ರಗಳು ಪುನವರ್ತನೆಯಾಗುವಷ್ಟು ಮಾತನಾಡುತ್ತವೆ. ಫೋನ್‌ನಲ್ಲಿ ಸಂವಹನ ಮಾಡುವ ಉಭಯ ಪಾತ್ರಗಳ ಸಂಭಾಷಣೆ ಜೋರಾಗಿಯೇ ಕೇಳುತ್ತದೆ. ಆತಂಕದ ಭಾವ ದಾಟಿಸುವುದಕ್ಕಿಂತ ಹೆಚ್ಚಾಗಿ ವಹಿಸಿದ ಕೆಲಸವನ್ನು ಚಕಚಕನೆ ಮುಗಿಸುವ ಧಾವಂತವೇ ಪಾತ್ರಗಳ ವರ್ತನೆಯಲ್ಲಿ ಎದ್ದುಕಂಡಿದೆ.

ಐದು ಲೊಕೇಷನ್‌ಗಳಲ್ಲಿ ಲಭ್ಯ ಕ್ಯಾಮೆರಾಗಳನ್ನೇ ಬಳಸಿಕೊಂಡು, ಸಹಜ ಧ್ವನಿಯನ್ನೇ ಉಳಿಸಿಕೊಂಡು ಚಿತ್ರೀಕರಣ ಮಾಡಿರುವುದು ಗುರುತಿಸಬೇಕಾದ ಅಂಶ. ಆದರೆ, ಸಿನಿಮಾ ಗಟ್ಟಿಗೊಳ್ಳಲು ಇಂಥ ಸಣ್ಣ ಪ್ರಯೋಗವಷ್ಟೇ ಸಾಕಾಗುವುದಿಲ್ಲ. ತಾಂತ್ರಿಕವಾಗಿ ಚಿತ್ರದ ಬಡತನವನ್ನು ಸಹಿಸಿಕೊಂಡು ನೋಡಿದರೂ, ಪಾತ್ರಗಳ ರೂಹಿನ ಸೃಷ್ಟಿಕ್ರಿಯೆ ಇಷ್ಟು ಸೊರಗಬೇಕಾಗಿರಲಿಲ್ಲ.

ಕಥೆಯ ಎಳೆಯನ್ನು ಹಿಂಜುವಾಗ ಥ್ರಿಲ್ಲರ್‌ ಆಗಿಸಲು ಬೇಕಾದ ಪೂರಕ ಅಂಶಗಳ ಬರವಣಿಗೆ ದುರ್ಬಲವಾಗಿದೆ. ಹಣ ವಸೂಲಿ ಮಾಡಲೆಂದು ಕೃತಕವಾಗಿ ಸಂತ್ರಸ್ತನನ್ನು ಸೃಷ್ಟಿಸುವ ಆಸಕ್ತಿಕರ ಪ್ರಹಸನವೊಂದು ಸಿನಿಮಾದಲ್ಲಿದೆ. ಇದನ್ನು ಕೊನೆಯಲ್ಲಿ ವ್ಯಂಗ್ಯದ ಅಂತ್ಯವನ್ನಾಗಿ ಅಷ್ಟೇ ನಿರ್ದೇಶಕರು ಬಳಸಿಕೊಂಡಿದ್ದಾರೆಯೇ ವಿನಾ ಅದನ್ನು ಕಥಾಭಿತ್ತಿಗೆ ಹದವರಿತಂತೆ ಬೆರೆಸಲು ಸಾಧ್ಯವಾಗಿಲ್ಲ.

ಮುಖ್ಯಪಾತ್ರದಲ್ಲಿ ತಾವೇ ಅಭಿನಯಿಸಿರುವ ನಿರ್ದೇಶಕರು ಚಿತ್ರಪಟ ರಚನೆಯ ಸಾಕಷ್ಟು ವಿಭಾಗಗಳಲ್ಲಿ ತೊಡಗಿಕೊಂಡಿರುವ ಉತ್ಸಾಹಕ್ಕೆ ಒಂದಿಷ್ಟು ಅಂಕ ನೀಡಬಹುದಷ್ಟೆ.

ಚಿತ್ರ: ದಿ ‍ಪೇಂಟರ್

ನಿರ್ಮಾಣ: ಕೆಕೆ ಕಂಬೈನ್ಸ್ ಹಾಗೂ ಅಮೃತಾ ಫಿಲ್ಮ್ ಸೆಂಟರ್ ಪ್ರೊಡಕ್ಷನ್

ನಿರ್ದೇಶನ: ವೆಂಕಟ್ ಭಾರದ್ವಾಜ್

ತಾರಾಗಣ: ವೆಂಕಟ್ ಭಾರದ್ವಾಜ್, ರಾಜ್ ಕಮಲ್, ಉಮಾ, ಮೊಹಮ್ಮದ್ ಬಾಷಾ, ಕಬೀರ್ ಸೋಮಿಯಾಜಿ, ಶಮೀಕ್, ಮಧುರಾ, ಅಜಯ್, ಲಾರೆನ್ಸ್

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು