ಗುರುವಾರ , ಜುಲೈ 16, 2020
23 °C

ರೊಮ್ಯಾನ್ಸ್‌ ಮಾಡಲು ಈ ನಟರಿಗೆ ಹೀರೊಯಿನ್‌ ಸಿಗುತ್ತಿಲ್ಲ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಯಸ್ಸು ಅರವತ್ತು ದಾಟಿದರೂ ಮೂವತ್ತು ವರ್ಷದೊಳಗಿರುವ ತರುಣಿಯರೊಟ್ಟಿಗೆಯೇ ರೊಮ್ಯಾನ್ಸ್‌ ಮಾಡಬೇಕೆಂಬುದು ಬಹುತೇಕ ಹೀರೊಗಳ ಚಡಪಡಿಕೆ. ಕಡಿಮೆ ವಯಸ್ಸಿನ ಹೀರೊಯಿನ್‌ಗಳು ಸೊಂಟ ಬಳುಕಿಸಿದಷ್ಟು ಗಲ್ಲಾಪೆಟ್ಟಿಗೆಯಲ್ಲಿ ಸಿನಿಮಾ ಗೆಲ್ಲುತ್ತದೆ ಎಂಬುದು ಚಿತ್ರರಂಗದ ಅಲಿಖಿತ ನಿಯಮ.

ಆದರೆ, ಈಗ ಕಾಲ ಬದಲಾಗಿದೆ. ಅರವತ್ತು ವರ್ಷ ದಾಟಿದ ನಟರೊಟ್ಟಿಗೆ ಹೆಜ್ಜೆ ಹಾಕಲು ಖ್ಯಾತ ನಟಿಯರು ಸುಲಭವಾಗಿ ಒಪ್ಪುತ್ತಿಲ್ಲ. ಹಾಗೆಂದು ಆ ನಟನ ಮೇಲೆ ಬಂಡವಾಳ ಹೂಡುವ ನಿರ್ಮಾಪಕರು ಮತ್ತು ನಿರ್ದೇಶಕರು ಕೂಡ ಸುಮ್ಮನೆ ಕೂರುತ್ತಿಲ್ಲ. ನಟೀಮಣಿಯರು ಪಡೆಯುವ ಸಂಭಾವನೆಗಿಂತ ತುಸು ಹೆಚ್ಚಿಗೆ ಸಂಭಾವನೆ ನೀಡುವುದಕ್ಕೂ ಅವರು ಹಿಂದೇಟು ಹಾಕುವುದಿಲ್ಲ. ಆದರೆ, ಹೀರೊಯಿನ್‌ಗಳು ಇಂತಹ ಆಪರ್‌ಗೆ ಸುಲಭಕ್ಕೆ ಮರುಳಾಗುತ್ತಿಲ್ಲ. ದುಬಾರಿ ಸಂಭಾವನೆ ಕೇಳಿ ನಿರ್ಮಾಪಕರನ್ನೇ ತಬ್ಬಿಬ್ಬುಗೊಳಿಸುತ್ತಿದ್ದಾರೆ.

ಟಾಲಿವುಡ್‌ನಲ್ಲಿ ಅರವತ್ತು ವರ್ಷ ದಾಟಿದ ನಟರಾದ ನಂದಮೂರಿ ಬಾಲಕೃಷ್ಣ, ವೆಂಕಟೇಶ್‌ ಮತ್ತು ಚಿರಂಜೀವಿ ಅವರದ್ದು ಅಕ್ಷರಶಃ ಸಂಕ್ರಮಣ ಸ್ಥಿತಿ. ಅವರೊಟ್ಟಿಗೆ ನಡು ಬಳುಕಿಸಲು ಬಹುತೇಕ ಹೀರೊಯಿನ್‌ಗಳು ಸಿದ್ಧರಿಲ್ಲವಂತೆ. ಒಂದೊಮ್ಮೆ ಅವರೊಟ್ಟಿಗೆ ನಟಿಸಬೇಕೆಂದು ಅಪೇಕ್ಷಿಸಿದರೆ ದೊಡ್ಡ ಮೊತ್ತ ನೀಡಬೇಕೆಂಬುದು ಕಾಜಲ್‌ ಅಗರ್‌ವಾಲ್‌, ತಮನ್ನಾ ಭಾಟಿಯಾ ಸೇರಿದಂತೆ ಹಲವು ನಟಿಯರ ಬೇಡಿಕೆ.  

ನಿರ್ದೇಶಕ ಬೊಯಪತಿ ಶ್ರೀನು ಮತ್ತು ಬಾಲಕೃಷ್ಣ ಕಾಂಬಿನೇಷನ್‌ನಡಿ ಹೊಸ ಸಿನಿಮಾ ನಿರ್ಮಾಣವಾಗುತ್ತಿದೆ. ಇದರಲ್ಲಿ ಬಾಲಯ್ಯನ ಜೊತೆಗೆ ಮುಖ್ಯಪಾತ್ರದಲ್ಲಿ ನಟಿಸಲು ‘ಮಿಲ್ಕಿ ಬ್ಯೂಟಿ’ ತಮನ್ನಾಗೆ ನಿರ್ದೇಶಕ ಶ್ರೀನು ಕೋರಿದರಂತೆ. ಇದರಲ್ಲಿ ಗ್ಲಾಮರ್‌ ಎಲಿಮೆಂಟ್‌ಗಳೂ ಹೆಚ್ಚಿವೆಯಂತೆ. ಪಕ್ಕಾ ಮಸಾಲ ಸ್ಪರ್ಶವಿರುವ ಈ ಸಿನಿಮಾದಲ್ಲಿ ನಟಿಸುವಂತೆ ಆಕೆಯನ್ನು ಮನವೊಲಿಸಲು ಚಿತ್ರತಂಡ ಹರಸಾಹಸಪಟ್ಟಿದೆ. ಕೊನೆಗೆ, ಆಕೆಯ ಅಪ್ಪನ ಮೂಲಕವೂ ಕೋರಿಕೆ ಮುಂದಿಟ್ಟಿದ್ದ ನಿರ್ಮಾಪಕರಿಗೆ ಶಾಕ್‌ ಆಗಿದೆ.

ಸಾಮಾನ್ಯವಾಗಿ ತಮನ್ನಾ ಸಿನಿಮಾವೊಂದಕ್ಕೆ ₹ 1.5 ಕೋಟಿಯಿಂದ ₹ 1.75 ಕೋಟಿ ಸಂಭಾವನೆ ಪಡೆಯುತ್ತಾರೆ. ಆದರೆ, ಬಾಲಯ್ಯನ ಜೊತೆಗೆ ನಟಿಸಲು ಆಕೆಯ ತಂದೆ ₹ 3 ಕೋಟಿ ಸಂಭಾವನೆ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಈ ಮೊತ್ತದ ಜೊತೆಗೆ  ಜಿಎಸ್‌ಟಿ ಸೇರಿಸಬಾರದು ಎಂಬುದು ಅವರ ಷರತ್ತು.

ಬಾಲಯ್ಯನೊಟ್ಟಿಗೆ ನಟಿಸಲು ಇಚ್ಛೆ ಇಲ್ಲದಿರುವ ಹಿನ್ನೆಲೆಯಲ್ಲಿ ತಮನ್ನಾ ದುಬಾರಿ ಸಂಭಾವನೆ ಕೇಳಿದರೇ ಅಥವಾ ನಿಜವಾಗಿಯೂ ಆಕೆ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆಯೇ ಎಂಬುದು ಈಗ ಟಾಲಿವುಡ್‌ ಅಂಗಳದಲ್ಲಿ ಚರ್ಚೆಯಾಗುತ್ತಿದೆ. ಕೊನೆಗೆ, ಆಕೆ ಕೇಳಿದಷ್ಟು ಸಂಭಾವನೆ ಭರಿಸಲಾಗದೆ ನಿರ್ದೇಶಕರು ಮತ್ತು ನಿರ್ಮಾಪಕರು ಹೊಸ ನಾಯಕಿಯ ಹುಡುಕಾಟಕ್ಕೆ ಮುಂದಾಗಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು