ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಾಲಿವುಡ್ ಕೋಟಿವೀರರ ನೆರವು

Last Updated 27 ಮಾರ್ಚ್ 2020, 20:30 IST
ಅಕ್ಷರ ಗಾತ್ರ

ಜನರಿಗೆ ಕಷ್ಟ ಎದುರಾದಾಗ ಸಹಾಯಕ್ಕೆ ಧಾವಿಸಿದ ಇತಿಹಾಸ ಸಿನಿಮಾ ಲೋಕಕ್ಕೆ ಹಿಂದಿನಿಂದಲೂ ಇದೆ. ಈಗ ಕೊರೊನಾ ಮಾರಿ ಎದುರಾಗಿರುವ ಹೊತ್ತಿನಲ್ಲೂ ತಾರೆಯರು ನೆರವಿನ ಹಸ್ತ ಚಾಚಿದ್ದಾರೆ...

ಕೊರೊನಾ ಸೋಂಕಿನಿಂದ ಇಡೀ ವಿಶ್ವ ತಲ್ಲಣಿಸುತ್ತಿದೆ. ಈ ಸೋಂಕು ನಿಯಂತ್ರಿಸಲು ಇಡೀ ಮನುಕುಲ ಈಗ ಒಗ್ಗಟ್ಟಾಗಿ ನಿಲ್ಲುವ ಸನ್ನಿವೇಶ ಬಂದೊದಗಿದೆ. ಎಲ್ಲೆಡೆ ಮರಣ ಮೃದಂಗ ಬಾರಿಸುತ್ತಿರುವ ಕೋವಿಡ್‌ 19ಗೆಕಡಿವಾಣ ಹಾಕಲು ದಾನಿಗಳು ಸರ್ಕಾರಗಳ ಜತೆಗೆ ಕೈಜೋಡಿಸಲು ಆರಂಭಿಸಿದ್ದಾರೆ. ಅದರಲ್ಲೂ ತೆಲುಗು ನಟರು ಕೋಟಿ ಕೋಟಿ ಹಣವನ್ನು ದೇಣಿಗೆ ಘೋಷಿಸಿ, ಜನರ ನೈತಿಕ ಸ್ಥೈರ್ಯ ಹೆಚ್ಚಿಸುವ ಕೆಲಸ ಮಾಡಿರುವುದು ಈಗ ಇತರರಿಗೂ ಅನುಕರಣೀಯವಾಗಿ ಕಾಣಿಸಲಾರಂಭಿಸಿದೆ.

ತೆಲುಗು ಖ್ಯಾತ ನಟ ಮತ್ತು ರಾಜಕಾರಣಿ ಪವನ್‌ ಕಲ್ಯಾಣ್‌ ಪ್ರಧಾನಿ ನರೇಂದ್ರ ಮೋದಿಯವರು ಕೊರೊನಾ ಮಹಾಮಾರಿ ಹಿಮ್ಮೆಟ್ಟಿಸಲು ತೆಗೆದುಕೊಂಡಿರುವ ದೃಢ ನಿರ್ಧಾರ ಶ್ಲಾಘಿಸಿ, ಪ್ರಧಾನಮಂತ್ರಿ ಪರಿಹಾರ ನಿಧಿಗೆ ₹ 1 ಕೋಟಿ ದೇಣಿಗೆ ನೀಡಿದ್ದಾರೆ. ಜತೆಗೆ ಆಂಧ್ರಪ್ರದೇಶ ಮತ್ತು ತೆಲಂಗಾಣ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ತಲಾ ₹ 50 ಲಕ್ಷದಂತೆ ₹ 1 ಕೋಟಿ ದೇಣಿಗೆ ಕೊಟ್ಟಿದ್ದಾರೆ. ಜತೆಗೆ ಉಳಿದ ನಟರೂ ತಮ್ಮ ಕೈಲಾದ ದೇಣಿಗೆ ನೀಡುವಂತೆ ಪವನ್‌ ಮನವಿ ಮಾಡಿಕೊಂಡಿದ್ದರು. ಪವನ್‌ ನಿರ್ಧಾರದಿಂದ ಸ್ಫೂರ್ತಿಗೊಂಡಿರುವ ತೆಲುಗು ಚಿತ್ರರಂಗ ಉಳಿದವರಿಗೆಲ್ಲ ಮೇಲ್ಪಂಕ್ತಿ ಹಾಕಿಕೊಡುವಂತೆ ದೇಣಿಗೆ ಕೊಡುತ್ತಿದೆ.

ಪ್ರಭಾಸ್ ಅವರು ಒಟ್ಟು ₹ 4 ಕೋಟಿ ನೀಡುವುದಾಗಿ ಹೇಳಿದ್ದಾರೆ. ಮೆಗಾಸ್ಟಾರ್‌ಚಿರಂಜೀವಿ, ಮಹೇಶ್‌ ಬಾಬು ಅವರು ಸಹ ತಲಾ ಒಂದು ಕೋಟಿ ಹಣವನ್ನು ಆಂಧ್ರಪ್ರದೇಶ ಮತ್ತು ತೆಲಂಗಾಣ ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ. ಚಿರಂಜೀವಿ ಪುತ್ರ ರಾಮ್ ಚರಣ್‌ ಕೂಡ ₹ 70 ಲಕ್ಷ ದೇಣಿಗೆ ಘೋಷಿಸಿದ್ದಾರೆ. ಇವರನ್ನು ಅನುಸರಿಸಿ ನಿರ್ದೇಶಕ ಕೊರಟಾಲ ಶಿವ ಅವರು ₹ 5 ಲಕ್ಷವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಿದ್ದಾರೆ.

ಇನ್ನು ಬಹುಭಾಷಾ ನಟ, ಕನ್ನಡಿಗ ಪ್ರಕಾಶ್‌ ರೈ ಮಾ.26ರಂದು ತಮ್ಮ ಹುಟ್ಟು ಹಬ್ಬದ ನಿಮಿತ್ತ ಸಂಕಷ್ಟದಲ್ಲಿರುವವರಿಗೆ ಬೇರೆಯದೇ ರೀತಿಯಲ್ಲಿ ನೆರವು ನೀಡುತ್ತಿದ್ದಾರೆ. ‘ಪುದುಚೆರಿ, ಚೆನ್ನೈ ಹಾಗೂ ಖಮ್ಮಾಮ್‌ನ ಒಟ್ಟುಹನ್ನೊಂದು ದಿನಗೂಲಿ ಕಾರ್ಮಿಕರಿಗೆ ನನ್ನ ಫಾರ್ಮ್‌ನಲ್ಲಿ ಜಾಗ ಮಾಡಿಕೊಟ್ಟಿದ್ದೇನೆ. ಅವರ ಕುಟುಂಬದ ಜತೆಗೆ ಮಾತನಾಡಿ ಹನ್ನೊಂದು ಮಂದಿಯ ಕುಟುಂಬಕ್ಕೂಸ್ವಲ್ಪಮಟ್ಟಿನ ಹಣ ಸಂದಾಯ ಮಾಡಿದ್ದೇನೆ. ಅವರ ಸುರಕ್ಷತೆ ಕಾಪಾಡುವ ಬಗ್ಗೆಯೂ ಖಾತ್ರಿ ನೀಡಿದ್ದೇನೆ. ಇದು ಬರೀ ಸರ್ಕಾರದ ಜವಾಬ್ದಾರಿಯಲ್ಲ, ಕನಿಷ್ಠ ಒಬ್ಬ ವ್ಯಕ್ತಿ ಅಥವಾ ಕುಟುಂಬದ ಕಾಳಜಿಯನ್ನು ನಾವೆಲ್ಲರೂ ವಹಿಸಿಕೊಳ್ಳಬೇಕೆಂದು ಅವರು ಉಳಿದವರಿಗೂ ಮನವಿ ಮಾಡಿಕೊಂಡಿದ್ದಾರೆ.

ಚಿತ್ರನಟಿ ಮತ್ತು ಮಂಡ್ಯ ಸಂಸದೆ ಸುಮಲತಾ ಅಂಬರೀಷ್‌ ತಮ್ಮ ಎರಡು ತಿಂಗಳ ವೇತನ ₹2 ಲಕ್ಷವನ್ನು ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ಮತ್ತು ಇನ್ನೆರಡು ತಿಂಗಳು ವೇತನ ₹2 ಲಕ್ಷವನ್ನುಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಿದ್ದಾರೆ. ಅಲ್ಲದೆ, ಸಂಸದರ ನಿಧಿಯಿಂದ ₹50 ಲಕ್ಷ ಹಣವನ್ನು ಮಂಡ್ಯದ ಎಂಐಎಂಎಸ್‌ ಆಸ್ಪತ್ರೆಗೆವೆಂಟಿಲೇಟರ್‌ ಮತ್ತು ಇನ್ನಿತರ ವೈದ್ಯಕೀಯ ಸಾಮಗ್ರಿಗಳನ್ನು ಖರೀದಿಸಲು ನೀಡುವುದಾಗಿ ಘೋಷಿಸಿದ್ದಾರೆ.

‘ಕೋವಿಡ್ -19 ಮಹಾಮಾರಿ ದೇಶದಲ್ಲಿ ಹರಡುತ್ತಿದ್ದು, ಅದರ ವಿರುದ್ಧದ ಹೋರಾಟಕ್ಕೆ ನನ್ನ ಕಳಕಳಿಯ ಕೊಡುಗೆಯಾಗಿ ಮೊದಲಿಗೆ ಮಂಡ್ಯದ ಮಿಮ್ಸ್‌ಗೆ ಕೊರೊನ ವಿರುದ್ಧ ಹೊರಾಡಲು ವೆಂಟಿಲೇಟರ್ ಮತ್ತು ಅಗತ್ಯ ಸಲಕರಣೆಗಳನ್ನು ಖರೀದಿಸಲು ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ ₹50 ಲಕ್ಷ ನೀಡಿದ್ದೇನೆ’ ಎಂದು ಸುಮಲತಾ ಟ್ವೀಟ್‌ ಮಾಡಿದ್ದಾರೆ.

ನಟ ಶಿವರಾಜ್‌ಕುಮಾರ್‌ ಕೂಡ ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡುವುದಾಗಿ ಹೇಳಿದ್ದು, ದೇಣಿಗೆ ಮೊತ್ತವನ್ನು ಸದ್ಯದಲ್ಲೇ ಬಹಿರಂಗಪಡಿಸುವುದಾಗಿ ಹೇಳಿದ್ದಾರೆ.

ಜನರಿಂದ ಹಣ, ಕೀರ್ತಿ ಸಂಪಾದಿಸಿದವರು ಇಂತಹ ದುರಿತ ಕಾಲದಲ್ಲಿ ಜನರ ಋಣ ತೀರಿಸಲು ತಮ್ಮ ಕೈಲಾದ ದೇಣಿಗೆ,ಸಹಾಯ ಮಾಡಲು ಮುಂದಾಗುವ ಮೂಲಕ ಮಾದರಿಯಾಗುತ್ತಿದ್ದಾರೆ.ನಮ್ಮ ರಾಜ್ಯದಲ್ಲೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೊರೊನಾ ಪಿಡುಗಿನ ವಿರುದ್ಧ ಹೋರಾಡಲು ದಾನಿಗಳು ಉದಾರ ದೇಣಿಗೆ ನೀಡುವ ಮೂಲಕ ಕೈಜೋಡಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಕನ್ನಡ ಚಿತ್ರರಂಗದ ಸ್ಟಾರ್‌ಗಳು ಮುಖ್ಯಮಂತ್ರಿಗಳಮನವಿಗೆ ಸ್ಪಂದಿಸುವ ನಿರೀಕ್ಷೆಗಳು ನಟಿ ಸುಮಲತಾ ದೇಣಿಗೆ ಪ್ರಕಟಿಸುವ ಮೂಲಕ ಗರಿಗೆದರಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT