ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾರಾಪಟ್ಟ, ಪ್ರತಿಭೆ ಸಂಗಮಿಸಿದ ದೈತ್ಯ ನಟ

Last Updated 7 ಜುಲೈ 2021, 19:30 IST
ಅಕ್ಷರ ಗಾತ್ರ

1943ರ ಒಂದು ಮಧ್ಯಾಹ್ನ. ಪುಣೆಯಲ್ಲಿ ಓಡಾಡುತ್ತಿದ್ದ ‘ಬಾಂಬೆ ಟಾಕೀಸ್’ ಮಾಲೀಕರಾದ ಹಿಮಾಂಶು ರಾಯ್ ಮತ್ತು ದೇವಿಕಾ ರಾಣಿ, ಔಂಧ್ ಮಿಲಿಟರಿ ಕ್ಯಾಂಟೀನ್‌ನಲ್ಲಿ 21 ಹರೆಯದ ಸ್ಫುರದ್ರೂಪಿ ಹುಡುಗನೊಬ್ಬನನ್ನು ನೋಡಿದರು. ಪಠಾಣ್ ನಿಲುವಿನ ದೃಢಕಾಯದ ಆ ತರುಣನನ್ನು ‘ಯಾರು ನೀನು?’ ಎಂದು ವಿಚಾರಿಸಿದಾಗ, ‘ನಾನು ಮೊಹಮ್ಮದ್ ಯೂಸುಫ್ ಖಾನ್. ಇಲ್ಲೊಂದು ಕ್ಯಾಂಟೀನ್ ನಡೆಸುತ್ತಿದ್ದೇನೆ. ಜೊತೆಗೆ ಡ್ರೈಫ್ರುಟ್ಸ್ ವ್ಯಾಪಾರವನ್ನೂ ಮಾಡುತ್ತಿದ್ದೇನೆ’ ಎಂದನಾತ. ‘ಸಿನಿಮಾ ಹೀರೋ ತರಹ ಇದ್ದೀಯಲ್ಲಪ್ಪಾ.. ಮುಂಬೈಗೆ ಬರ್ತೀಯಾ?’ ಎಂದು ದೇವಿಕಾರಾಣಿ ಕೇಳಿದಾಗ, ‘ನಾನು ಮುಂಬೈಯಿಂದಲೇ ಇಲ್ಲಿಗೆ ಬಂದಿದ್ದೇನೆ. ನಮ್ಮಪ್ಪನಿಗೆ ಪೆಶಾವರದಲ್ಲಿ ಮತ್ತು ಮಹಾರಾಷ್ಟ್ರದ ದೇವಲಾಲಿ ಬಳಿ ಹಣ್ಣಿನ ತೋಟಗಳಿವೆ’ ಎಂದು ಆತ ಉತ್ತರಿಸಿದ.

ಅವತ್ತಿನದು ಒಂದು ಆಕಸ್ಮಿಕ ಭೇಟಿ. ಮುಂದೊಂದು ದಿನ ಈ ಭೇಟಿಯೇ ಮಹಾನಟನೊಬ್ಬನನ್ನು ಬಾಲಿವುಡ್‌ಗೆ ಕೊಡುಗೆಯಾಗಿಸಲಿದೆ ಎನ್ನುವುದು ಇಬ್ಬರಿಗೂ ಗೊತ್ತಿರಲಿಲ್ಲ. ತರುಣನಿಗೆ ಸಿನಿಮಾ ಬಯಕೆಯಿದೆ ಎನ್ನುವುದು ಮಾತ್ರ ಖಚಿತವಾಗಿತ್ತು. ಹಾಗೆ ಮುಂಬೈಗೆ ಮರಳಿದ ಯೂಸುಫ್ ಖಾನ್, 1944 ರಲ್ಲಿ ಬಾಂಬೆ ಟಾಕೀಸ್ ನಿರ್ಮಿಸಿದ ‘ಜ್ವಾರ್ ಭಾಟಾ’ ಎಂಬ ಸಿನಿಮಾದಲ್ಲಿ ಹೀರೋ ಆದ. ಬೆಳ್ಳಿತೆರೆಯ ಮೇಲೆ ಆಗ ಮೂಡಿಬಂದ ಆತನ ಹೆಸರು ದಿಲೀಪ್ ಕುಮಾರ್.

‘ಗುರು ಶಿಷ್ಯರು’ ಚಿತ್ರದ ಚಿತ್ರೀಕರಣದ ವೇಳೆ ಸೆಟ್‌ಗೆ ಭೇಟಿ ನೀಡಿದ್ದ ದಿಲೀಪ್‌ ಕುಮಾರ್‌. ಚಿತ್ರದ ನಿರ್ದೇಶಕ ಭಾರ್ಗವ, ನಿರ್ಮಾಪಕ ದ್ವಾರಕೀಶ್‌, ಛಾಯಾಗ್ರಾಹಕ ಡಿ.ವಿ.ರಾಜಾರಾಂ ಜೊತೆಗಿದ್ದರು. -ಚಿತ್ರ: ಪ್ರಗತಿ ಅಶ್ವತ್ಥನಾರಾಯಣ
‘ಗುರು ಶಿಷ್ಯರು’ ಚಿತ್ರದ ಚಿತ್ರೀಕರಣದ ವೇಳೆ ಸೆಟ್‌ಗೆ ಭೇಟಿ ನೀಡಿದ್ದ ದಿಲೀಪ್‌ ಕುಮಾರ್‌. ಚಿತ್ರದ ನಿರ್ದೇಶಕ ಭಾರ್ಗವ, ನಿರ್ಮಾಪಕ ದ್ವಾರಕೀಶ್‌, ಛಾಯಾಗ್ರಾಹಕ ಡಿ.ವಿ.ರಾಜಾರಾಂ ಜೊತೆಗಿದ್ದರು. -ಚಿತ್ರ: ಪ್ರಗತಿ ಅಶ್ವತ್ಥನಾರಾಯಣ

ಮೊದಲ ಸಿನಿಮಾ ಥಿಯೇಟರಿನಲ್ಲಿ ಹೆಚ್ಚು ಜನರ ಕಣ್ಣಿಗೆ ಬೀಳಲಿಲ್ಲ. ಆದರೆ ಇನ್ನೊಂದು ಸಿನಿಮಾದಲ್ಲಿ ಅವಕಾಶ ಸಿಕ್ಕಿತು. ‘ಪ್ರತಿಮಾ’ ಎನ್ನುವುದು ಆ ಸಿನಿಮಾದ ಹೆಸರು. ಮರುವರ್ಷ ಬಿಡುಗಡೆಯಾದ ಆ ಚಿತ್ರವೂ ಥಿಯೇಟರ್‌ನಲ್ಲಿ ಮಕಾಡೆ ಮಲಗಿತು. ಈ ಹುಡುಗನ ಚಿತ್ರಪಯಣದ ಆರಂಭವೇ ಸರಿಯಿಲ್ಲ ಎಂದು ಬಾಲಿವುಡ್ ಮಂದಿ ಆಡಿಕೊಂಡರು. ಅದಕ್ಕೆ ತಕ್ಕಂತೆ ಮುಂದಿನ ವರ್ಷ ಆತ ನಟಿಸಿದ ಯಾವ ಸಿನಿಮಾವೂ ಬರಲಿಲ್ಲ.

1947ರಲ್ಲಿ ತೆರೆಗೆ ಬಂದದ್ದು ‘ಜುಗ್ನು’. ಪ್ರೇಕ್ಷಕರು ಸಾಲುಗಟ್ಟಿ ಥಿಯೇಟರಿಗೆ ಬಂದರು. ದಿಲೀಪ್ ಕುಮಾರ್‌ಗೆ ನೂರ್‌ಜಹಾನ್ ಜೋಡಿ. ಪ್ರೇಕ್ಷಕರ ಮನಸೂರೆಗೊಂಡ ಚಿತ್ರ ಸೂಪರ್ ಹಿಟ್ ಆಯಿತು. ‘ಯಹಾಂ ಬದ್ಲಾ ವಫಾ ಕಾ ಬೇವಫಾಯಿ ಕೆ ಶಿವಾ ಔರ್ ಕ್ಯಾ ಹೈ...’ - ಮೊಹಮ್ಮದ್ ರಫಿ ಮತ್ತು ನೂರ್‌ಜಹಾನ್ ಕಂಠಸಿರಿ! ಅಲ್ಲಿಂದ ಶುರುವಾಯಿತು ಬಾಲಿವುಡ್‌ನಲ್ಲಿ ಯಶಸ್ಸಿನ ಪಯಣ. 48ರಲ್ಲಿ ‘ಶಹೀದ್’ ಬಂತು. 49ರಲ್ಲಿ ‘ಅಂದಾಜ್’. ಎರಡೂ ಪ್ರೇಕ್ಷಕರ ಮನ ಗೆದ್ದವು. ‘ಅಂದಾಜ್’ನಲ್ಲಿ ರಾಜ್ ಕಪೂರ್ ಮತ್ತು ನರ್ಗಿಸ್ ದತ್ ಜೊತೆಗೆ ತ್ರಿಕೋನ ಪ್ರೇಮಕಥೆ. ಮಹಾಪ್ರತಿಭೆಗಳ ಮುಖಾಮುಖಿ. ಆ ವರ್ಷ ಹಿಂದಿ ಚಿತ್ರರಂಗದಲ್ಲಿ ಅತ್ಯಧಿಕ ಹಣ ಬಾಚಿದ ಚಿತ್ರವದು. ಅಲ್ಲಿಂದಾಚೆಗೆ ಆನೆ ನಡೆದದ್ದೇ ದಾರಿ. 50ರ ದಶಕದಲ್ಲಿ ಬಂದ ಜೋಗನ್, ದೀದಾರ್, ದಾಗ್, ದೇವದಾಸ್, ಯೆಹೂದಿ- ಎಲ್ಲವೂ ಹಿಟ್ ಚಿತ್ರಗಳೇ. ನರ್ಗಿಸ್, ಕಾಮಿನಿ ಕೌಶಲ್, ಮೀನಾ ಕುಮಾರಿ, ಮಧುಬಾಲಾ, ವೈಜಯಂತಿಮಾಲಾ- ಹೀಗೆ ಬಾಲಿವುಡ್‌ನ ಸಾಲು ಸಾಲು ಸುಂದರಿಯರಿಗೆ ದಿಲೀಪ್ ಕುಮಾರ್ ನಾಯಕ. ಪ್ರೇಮ- ತ್ಯಾಗದ ಅಮರ ಕಥಾನಕಗಳಲ್ಲಿ ಲಕ್ಷಾಂತರ ಪ್ರೇಕ್ಷಕರ ಮನಸೂರೆಗೊಂಡ ದಿಲೀಪ್ ಕುಮಾರ್‌ಗೆ ಬಾಲಿವುಡ್‌ನ ‘ಟ್ರ್ಯಾಜಿಡಿ ಕಿಂಗ್’ ಎಂಬ ಬಿರುದೂ ಅಂಟಿಕೊಂಡಿತು.

ಪಾಕಿಸ್ತಾನದ ಪೆಶಾವರದಲ್ಲಿರುವ ದಿಲೀಪ್ ಕುಮಾರ್ ಅವರ ಪೂರ್ವಜರ ಮನೆ ಎದುರು ಬುಧವಾರ ಗೌರವ ಸಮರ್ಪಿಸಿದ ಸ್ಥಳೀಯರು–ಎಎಫ್‌ಪಿ ಚಿತ್ರ
ಪಾಕಿಸ್ತಾನದ ಪೆಶಾವರದಲ್ಲಿರುವ ದಿಲೀಪ್ ಕುಮಾರ್ ಅವರ ಪೂರ್ವಜರ ಮನೆ ಎದುರು ಬುಧವಾರ ಗೌರವ ಸಮರ್ಪಿಸಿದ ಸ್ಥಳೀಯರು–ಎಎಫ್‌ಪಿ ಚಿತ್ರ

‘ದಾಗ್’ ಚಿತ್ರದ ನಟನೆಗಾಗಿ ಮೊತ್ತಮೊದಲ ಫಿಲಂಫೇರ್ ಪ್ರಶಸ್ತಿ ಗೆದ್ದುಕೊಂಡ ದಿಲೀಪ್ ಕುಮಾರ್, ಬಳಿಕ ನಿರಂತರವಾಗಿ ಎಂಟು ವರ್ಷ ಅದೇ ಪ್ರಶಸ್ತಿಯನ್ನು ಗೆದ್ದುಕೊಂಡು ದಾಖಲೆ ನಿರ್ಮಿಸಿದರು. ಆನ್, ಆಜಾದ್, ನಯಾದೌರ್, ಕೊಹಿನೂರ್, ಮೊಘಲ್ ಎ ಆಜಮ್, ರಾಮ್ ಔರ್ ಶಾಮ್- ಹೀಗೆ ಸಾಲು ಸಾಲು ಸೂಪರ್‌ಹಿಟ್ ಚಿತ್ರಗಳು ದಿಲೀಪ್ ಸಾಹೇಬ್‌ರನ್ನು ಬಾಲಿವುಡ್‌ನ ‘ಅನಭಿಷಿಕ್ತ ದೊರೆ’ಯಾಗಿಸಿದವು.

‘ಮೊಘಲ್ ಎ ಆಜಮ್’ ಅಂತೂ ‘ಕಲ್ಟ್ ಸಿನಿಮಾ’ ಎಂದೇ ಚಿರಸ್ಥಾಯಿಯಾಯಿತು. 1960ರಲ್ಲಿ ತೆರೆಗೆ ಬಂದ ಕೆ.ಆಸಿಫ್ ಅವರ ಬಿಗ್‌ಬಜೆಟ್ ಚಿತ್ರವದು. ಅಪ್ಪ, ಚಕ್ರವರ್ತಿ ಅಕ್ಬರನ ಮಾತನ್ನು ಮೀರಿ ಆಸ್ಥಾನ ನರ್ತಕಿ ಅನಾರ್ಕಲಿಯ ಪ್ರೇಮಪಾಶದಲ್ಲಿ ಬಿದ್ದು ದಂಗೆಯೇಳುವ ರಾಜಕುವರ ಸಲೀಂನ ಪಾತ್ರ. ಪೃಥ್ವಿರಾಜ್ ಕಪೂರ್ ಮತ್ತು ಮಧುಬಾಲ ಎಂಬ ಆ ಕಾಲದ ಮಹಾನ್ ಪ್ರತಿಭಾವಂತರ ಮಧ್ಯೆ ದಿಲೀಪ್ ಕುಮಾರ್ ಪ್ರೇಕ್ಷಕರ ಹೃದಯ ಗೆಲ್ಲುವಲ್ಲಿ ಯಶಸ್ವಿಯಾದರು. ಅರ್ಧ ಕಪ್ಪು ಬಿಳುಪು ಮತ್ತು ಅರ್ಧ ಕಲರ್‌ನಲ್ಲಿ ತಯಾರಾದ ಆ ಚಿತ್ರ ಆ ವರ್ಷದ ಅತ್ಯಧಿಕ ಬಾಕ್ಸಾಫೀಸ್ ಕಲೆಕ್ಷನ್ ಕಂಡ ಎರಡನೇ ಚಿತ್ರ. ಈ ಸಿನಿಮಾ ಭಾರತೀಯ ಪ್ರೇಕ್ಷಕರಿಗೆ ಎಂತಹ ಹುಚ್ಚು ಹಿಡಿಸಿತೆಂದರೆ 2004ರಲ್ಲಿ ಮತ್ತೆ ಪೂರ್ಣ ವರ್ಣದಲ್ಲಿ ಚಿತ್ರ ತೆರೆ ಕಂಡು ಇತಿಹಾಸ ನಿರ್ಮಿಸಿತು.

ಮೇಣದ ಬತ್ತಿ ಹಚ್ಚಿ ಅಭಿಮಾನಿಗಳಿಂದ ಅಂತಿಮ ನಮನ
ಮೇಣದ ಬತ್ತಿ ಹಚ್ಚಿ ಅಭಿಮಾನಿಗಳಿಂದ ಅಂತಿಮ ನಮನ

ಎರಡು ದಶಕಗಳ ಕಾಲ ಹೀಗೆ ಚಕ್ರವರ್ತಿಯಂತೆ ಬಾಲಿವುಡ್‌ ಅನ್ನು ಆಳಿದ ದಿಲೀಪ್, 1970ರ ದಶಕದಲ್ಲಿ ನಟಿಸಿದ ಮುಖ್ಯ ಚಿತ್ರಗಳೆಲ್ಲ ಗೋತಾ ಹೊಡೆದದ್ದೂ ನಡೆಯಿತು! ದಾಸ್ತಾನ್, ಬೈರಾಗ್, ಗೋಪಿ ಮತ್ತಿತರ ಚಿತ್ರಗಳು ಸಾಲಾಗಿ ಸೋಲುಂಡವು. 1976ರಿಂದ 1981ರವರೆಗೆ ಐದು ವರ್ಷಗಳ ಕಾಲ ದಿಲೀಪ್ ಕುಮಾರ್ ಬೆಳ್ಳಿತೆರೆಯಿಂದ ದೂರವೇ ಉಳಿದರು.

ಒಂದೆಡೆ ರಾಜ್ ಕಪೂರ್ ಮತ್ತು ದೇವಾನಂದ್ ಅವರ ವಿಭಿನ್ನ ಶೈಲಿ; ಇನ್ನೊಂದೆಡೆ ಸ್ವಲ್ಪ ಜೂನಿಯರ್ ಎನ್ನಬಹುದಾದ ರಾಜೇಂದ್ರ ಕುಮಾರ್, ಮನೋಜ್ ಕುಮಾರ್ ಮತ್ತು ಧರ್ಮೇಂದ್ರ ಅವರ ಚಿತ್ರಗಳ ದಾಳಿ. ಎರಡರ ಮಧ್ಯೆಯೂ ದಿಲೀಪ್ ಕುಮಾರ್ ತಮ್ಮದೇ ಆದ ನೈಸರ್ಗಿಕ ನಟನೆಯ ಅವಿಚ್ಛಿನ್ನ ಛಾಪೊಂದನ್ನು ಮೂಡಿಸಿದ್ದರು. 1982ರಲ್ಲಿ ತೆರೆಗೆ ಬಂದ ‘ಕ್ರಾಂತಿ’ ಈ ಛಾಪು ಮರೆಯಾಗಿಲ್ಲ ಎಂದು ಸಾಬೀತು ಪಡಿಸಿತು. ಮನೋಜ್ ಕುಮಾರ್, ಶಶಿಕಪೂರ್, ಹೇಮಮಾಲಿನಿ, ಶತ್ರುಘ್ನ ಸಿನ್ಹಾ ಅವರಿದ್ದ ಈ ಮಲ್ಟಿಸ್ಟಾರ್ ಚಿತ್ರದಲ್ಲಿ ದಿಲೀಪ್ ಕುಮಾರ್ ಅವರ ಎರಡನೇ ಇನಿಂಗ್ಸ್ ಭರ್ಜರಿಯಾಗಿ ಆರಂಭಗೊಂಡಿತು. ಆ ಬಳಿಕ ಸುಭಾಷ್ ಘಾಯ್ ನಿರ್ದೇಶಿಸಿದ ವಿಧಾತಾ, ಸೌದಾಗರ್ ಮತ್ತು ರಮೇಶ್ ಸಿಪ್ಪಿಯವರ ಶಕ್ತಿ ಚಿತ್ರಗಳಲ್ಲಿ ಮಿಂಚಿದರು ದಿಲೀಪ್ ಕುಮಾರ್. ಶಕ್ತಿ ಚಿತ್ರದಲ್ಲಿ ದಿಲೀಪ್ ಕುಮಾರ್ ಅವರ ಮಗನ ಪಾತ್ರದಲ್ಲಿ ನಟಿಸಿದವರು ಅಮಿತಾಭ್ ಬಚ್ಚನ್. ‘ಸೌದಾಗರ್’ನಲ್ಲಿ ಎಷ್ಟೋ ದಶಕಗಳ ಬಳಿಕ ಚರಿತ್ರನಟ ರಾಜ್‌ಕುಮಾರ್ ಜೊತೆಗೆ ದಿಲೀಪ್ ಕುಮಾರ್ ನಟಿಸಿದ್ದು ಚಿತ್ರದ ಡೈಲಾಗ್‌ಗಳು ಸಿನಿಪ್ರೇಕ್ಷಕರನ್ನು ಹುಚ್ಚೆಬ್ಬಿಸಿದ್ದು ಸುಳ್ಳಲ್ಲ.

ಸಾಯಿರಾ ಬಾನು ಅವರನ್ನು ಸಂತೈಸುತ್ತಿರುವ ಶಾರುಖ್ ಖಾನ್
ಸಾಯಿರಾ ಬಾನು ಅವರನ್ನು ಸಂತೈಸುತ್ತಿರುವ ಶಾರುಖ್ ಖಾನ್

ದಿಲೀಪ್ ಕುಮಾರ್ ಅವರ ಅಭಿನಯದ ಕುರಿತು ಭಾರತೀಯ ಚಿತ್ರರಂಗದ ಶ್ರೇಷ್ಠ ನಿರ್ದೇಶಕ ಸತ್ಯಜಿತ್ ರೇ ಹೇಳಿದ ಮಾತೊಂದು ಇಲ್ಲಿ ಸ್ಮರಣಾರ್ಹ. ‘ವೈಧಾನಿಕ ನಟನೆಯಲ್ಲಿ ಮೇರುಶಿಖರ ತಲುಪಿದ ಏಕೈಕ ವ್ಯಕ್ತಿ ದಿಲೀಪ್ ಕುಮಾರ್’ ಎಂದಿದ್ದರು ಅವರು. ದಿಲೀಪ್ ಕುಮಾರ್‌ರಂತೆಯೇ ಎಂಟು ಸಲ ಫಿಲಂಫೇರ್ ಪ್ರಶಸ್ತಿ ಗೆದ್ದ ಶಾರೂಕ್ ಖಾನ್ ಸಂದರ್ಶನವೊಂದರಲ್ಲಿ ‘ದಿಲೀಪ್ ಸಾಹೇಬರ ನಟನೆಯನ್ನು ಅನುಕರಿಸಲು ಯಾರಿಂದಲೂ ಸಾಧ್ಯವಿಲ್ಲ. ಆದರೂ ನನ್ನಂತಹ ಮೂರ್ಖರು ಪದೇ ಪದೇ ಆ ಪ್ರಯತ್ನವನ್ನು ಮಾಡುತ್ತಾರೆ’ ಎಂದದ್ದುಂಟು.

ಸ್ಫುರದ್ರೂಪಿ ದಿಲೀಪ್‌ ಸುತ್ತ ಹಬ್ಬಿದ ಪ್ರೇಮಕಥೆಗಳಿಗೂ ಲೆಕ್ಕವಿಲ್ಲ. ಆ ಕಾಲದ ಹಿಂದಿ ಚಿತ್ರರಂಗದ ಜನಪ್ರಿಯ ಜೋಡಿ ದಿಲೀಪ್ ಮತ್ತು ಮಧುಬಾಲಾ. ಇಬ್ಬರ ಪ್ರೇಮ ಗುಟ್ಟಾಗಿ ಉಳಿಯಲಿಲ್ಲ. ಆದರೆ ಮದುವೆಯಲ್ಲಿ ಪರ್ಯವಸಾನಗೊಳ್ಳಲು ಮಧುಬಾಲಾ ಅವರ ಮನೆಯವರು ಒಪ್ಪಲಿಲ್ಲವಂತೆ. ಏಳು ಚಿತ್ರಗಳಲ್ಲಿ ಜೊತೆಗೆ ನಟಿಸಿದ್ದ ವೈಜಯಂತಿ ಮಾಲಾ ಜೊತೆಗೂ ಪ್ರೇಮ ಕುದುರಿದ್ದ ಕಥೆಗಳಿವೆ. ಕೊನೆಗೆ 1966ರಲ್ಲಿ ದಿಲೀಪ್ ಕುಮಾರ್ ಅವರು ಮದುವೆಯಾದದ್ದು ತನಗಿಂತ 22 ವರ್ಷ ಚಿಕ್ಕವರಾಗಿದ್ದ ಸಾಯಿರಾ ಬಾನು ಅವರನ್ನು. ಇದೊಂದು ಯಶಸ್ವಿ ದಾಂಪತ್ಯ. ಹಾಗಿದ್ದೂ 1980ರಲ್ಲಿ ದಿಲೀಪ್ ಕುಮಾರ್ ಅವರು ಆಸ್ಮಾ ಎಂಬ ಇನ್ನೊಬ್ಬ ಯುವತಿಯನ್ನು ಮದುವೆಯಾಗಿ ತ್ಯಜಿಸಿದ್ದೂ ನಡೆಯಿತು.

ಲತಾ ಮಂಗೇಶ್ಕರ್, ಅಮಿತಾಭ್ ಬಚ್ಚನ್ ಜೊತೆ...
ಲತಾ ಮಂಗೇಶ್ಕರ್, ಅಮಿತಾಭ್ ಬಚ್ಚನ್ ಜೊತೆ...

98ರ ಇಳಿವಯಸ್ಸಿನಲ್ಲಿ ಈಗ ಕಣ್ಮರೆಯಾಗಿರುವ ದಿಲೀಪ್ ಕುಮಾರ್ ಅವರ ಹೆಚ್ಚುಗಾರಿಕೆಯೇನು ಎನ್ನುವುದನ್ನು ಕುರಿತು ಆಲೋಚಿಸಿದಾಗ ಹೊಳೆಯುವುದು ಒಂದೇ ಅಂಶ. ಬಾಲಿವುಡ್‌ನ ಮಹಾಗೋಡೆಯ ಮೇಲೆ ಹತ್ತಾರು ಸೂಪರ್‌ಸ್ಟಾರ್‌ಗಳು ಬಂದು ಹೋಗಿದ್ದಾರೆ. ಆದರೆ ಸೂಪರ್‌ಸ್ಟಾರ್ಮತ್ತು ಅಭಿಜಾತ ನಟನೆಂಬ ಎರಡೂ ಪಟ್ಟಗಳನ್ನು ಏಕಕಾಲಕ್ಕೆ ಯಶಸ್ವಿಯಾಗಿ ನಿಭಾಯಿಸಿದಮಹಾಪ್ರತಿಭೆ ದಿಲೀಪ್ ಕುಮಾರ್.

ಬಾಲಿವುಡ್ ಮುನ್ನಡೆಸಿದ್ದ ತ್ರಿಮೂರ್ತಿಗಳು
ಮುಂಬೈ:
ಹಿರಿಯ ನಟ ದಿಲೀಪ್ ಕುಮಾರ್ ಅವರ ನಿಧನದೊಂದಿಗೆ ಬಾಲಿವುಡ್‌ ಸುವರ್ಣ ತ್ರಿಮೂರ್ತಿಗಳ ಕೊನೆಯ ಕೊಂಡಿಯೂ ಕಳಚಿಹೋಗಿದೆ. ದಿಲೀಪ್ ಕುಮಾರ್, ದೇವಾನಂದ್ ಮತ್ತು ರಾಜ್‌ ಕಪೂರ್ ಅವರು ಒಂದೇ ವಯಸ್ಸಿನವರು 1950 ಮತ್ತು 60ರ ದಶಕದಲ್ಲಿ ಹಿಂದಿ ಚಿತ್ರೋದ್ಯಮವನ್ನು ಜತೆಯಾಗಿ ಮುನ್ನಡೆಸಿದವರು.

ಈ ಮೂವರೂ ವೃತ್ತಿಯಲ್ಲಿ ಪ್ರತಿಸ್ಪರ್ಧಿಗಳಾಗಿದ್ದರು. ಆದರೆ ತೆರೆಯ ಆಚೆಗೆ ಮೂವರೂ ಉತ್ತಮ ಸ್ನೇಹಿತರು. ಮೂವರ ಚಿತ್ರಗಳೂ ಜನಸಾಮಾನ್ಯರ ಸಮಸ್ಯೆಗಳನ್ನು ಮುನ್ನೆಲೆಗೆ ತಂದವು. ತಲೆಮಾರುಗಳವರೆಗೆ ಜನಮಾನಸದಲ್ಲಿದ್ದವು.

ದಿಲೀಪ್ ಕುಮಾರ್ ಅವರ ‘ಮುಘಲ್ ಎ ಅಜಮ್’, ರಾಜ್ ಕಪೂರ್ ಅವರ ‘ಆವಾರ’ ಮತ್ತು ದೇವಾನಂದ್ ಅವರ ‘ಗೈಡ್’ ಸಿನಿಮಾಗಳು ಕಥೆ, ಪರಿಕಲ್ಪನೆ ಮತ್ತು ನಿರ್ಮಾಣದ ವಿಚಾರದಲ್ಲಿ ತಮ್ಮ ಕಾಲದ ಇತರ ಚಿತ್ರಗಳಿಗಿಂತ ಬಹಳ ಮುಂದಿದ್ದವು.

ಸ್ವಾತಂತ್ರ್ಯಪೂರ್ವದಲ್ಲಿ ಅವಿಭಜಿತ ಪಂಜಾಬ್‌ನಲ್ಲಿಯೇ ಈ ಮೂವರೂ ಜನಿಸಿದ್ದು ವಿಶೇಷ. ಈಗಿನ ಪಾಕಿಸ್ತಾನದಲ್ಲಿರುವ ಪೆಶಾವರದಲ್ಲಿ ದಿಲೀಪ್ ಕುಮಾರ್ (1922ರ ಜುಲೈ 6) ಮತ್ತು ರಾಜ್ ಕಪೂರ್ (1924ರ ಜೂನ್ 2) ಅವರು ಜನಿಸಿದ್ದರು.
ದೇವಾನಂದ್ ಅವರು ಗುರುದಾಸ್‌ಪುರದಲ್ಲಿ (1923ರ ಸೆಪ್ಟೆಂಬರ್ 26) ಜನಿಸಿದ್ದರು.

ಕುಂದನ್ ಲಾಲ್ ಸೈಗಲ್ ಅವರನ್ನು ಭಾರತದ ಮೊದಲ ಸೂಪರ್‌ಸ್ಟಾರ್ ಎಂದು ಗುರುತಿಸಲಾಗಿತ್ತು. ಅವರ ನಂತರ ಆ ಸ್ಥಾನವನ್ನು ಅಶೋಕ್ ಕುಮಾರ್ ಗಳಿಸಿಕೊಂಡಿದ್ದರು. ಇವರಿಬ್ಬರ ನಂತರ ಈ ತ್ರಿಮೂರ್ತಿಗಳು ಎರಡು ದಶಕಗಳಿಗೂ ಹೆಚ್ಚು ಕಾಲ ಭಾರತದ ಸೂಪರ್‌ ಸ್ಟಾರ್‌ಗಳಾಗಿ ಮೆರೆದಿದ್ದರು. ಆನಂತರವೇ ರಾಜೇಶ್ ಖನ್ನಾ ಸೂಪರ್‌ಸ್ಟಾರ್‌ ಎನಿಸಿಕೊಂಡಿದ್ದು. ಅಮಿತಾಬ್ ಬಚ್ಚನ್, ಧರ್ಮೇಂದ್ರ, ಜಿತೇಂದ್ರ, ವಿನೋದ್ ಖನ್ನಾ, ಶತ್ರುಘ್ನ ಸಿನ್ಹಾ ಅವರು ಬಾಲಿವುಡ್ ತಾರೆಗಳಾಗಿದ್ದು ದಶಕಗಳ ನಂತರ.

ರಾಜ್ ಕಪೂರ್ ಮತ್ತು ದೇವಾನಂದ್ ಅವರು ಎಂದಿಗೂ ಯಾವ ಚಿತ್ರದಲ್ಲೂ ಒಟ್ಟಿಗೆ ಕೆಲಸ ಮಾಡಿಲ್ಲ. ಆದರೆ ದಿಲೀಪ್ ಕುಮಾರ್ ಅವರು ರಾಜ್ ಕಪೂರ್ ಅವರ ಜತೆ ಅಂದಾಜ್ ಮತ್ತು ದೇವಾನಂದ್ ಅವರ ಜತೆ ಇನ್ಸಾನಿಯತ್ ಚಿತ್ರಗಳಲ್ಲಿ ತೆರೆಯನ್ನು ಹಂಚಿಕೊಂಡಿದ್ದರು.

ಒಂದು ಕಾಲದಲ್ಲಿ ಹಿಂದಿ ಚಿತ್ರೋದ್ಯಮವನ್ನು ಮುನ್ನಡೆಸಿದ್ದ ಈ ಮೂವರ ಜೋಡಿ ಈಗ ಸಂಪೂರ್ಣವಾಗಿ ಮರೆಯಾಗಿದೆ. ಆದರೆ ಅವರ ಹಲವು ಚಲನಚಿತ್ರಗಳು ಇನ್ನೂ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿವೆ.

ದಿಲೀಪ್ ಕುಮಾರ್
ದಿಲೀಪ್ ಕುಮಾರ್

ವರ್ಣರಂಜಿತ ಬದುಕಿನ ಹಿನ್ನೋಟ
1922: ಡಿಸೆಂಬರ್ 11ರಂದು ಪಾಕಿಸ್ತಾನದ ಪೆಶಾವರದಲ್ಲಿ ಜನನ. 12 ಮಕ್ಕಳಲ್ಲಿ ಇವರೂ ಒಬ್ಬರು. ತಂದೆ ಹಣ್ಣು ವ್ಯಾಪಾರಿ ಲಾಲ್ ಗುಲಾಮ್ ಸರ್ವಾರ್, ತಾಯಿ ಆಯಿಷಾ ಬೇಗಂ. ಮೊದಲ ಹೆಸರು ಮೊಹಮ್ಮದ್ ಯೂಸುಫ್ ಖಾನ್. ಮುಂಬೈಗೆ ವಲಸೆ, ಬ್ರಿಟಿಷ್ ಸೇನಾ ಕ್ಯಾಂಟೀನ್‌ನಲ್ಲಿ ಕೆಲಸ

1943: ನಟಿ ದೇವಿಕಾ ರಾಣಿ ಹಾಗೂ ಅವರ ಪತಿ ಹಿಮಾಂಶು ರಾಯ್ ಭೇಟಿ. ಇವರ ಒಡೆತನದ ಬಾಂಬೆ ಟಾಕೀಸ್‌ನಲ್ಲಿ ಅಭಿನಯ ಮಾಡಲು ಅವಕಾಶ. ‘ದಿಲೀಪ್ ಕುಮಾರ್’ ಎಂದು ಹೆಸರು ಬದಲಿಸಿಕೊಳ್ಳಲು ದೇವಿಕಾರಾಣಿ ಸಲಹೆ. ಮೊದಲ ಚಿತ್ರ ‘ಜ್ವರ್ ಭಾಟಾ’ದಲ್ಲಿ ಅಭಿನಯ

1947: ಅಪಾರ ಜನಮನ್ನಣೆ ಗಳಿಸಿದ ‘ಜುಗ್ನು’ ಚಿತ್ರದಲ್ಲಿ ಅಭಿನಯ

1949: ತಾರಾಪಟ್ಟ ತಂದುಕೊಟ್ಟ ಮೆಹಬೂಬ್‌ ಖಾನ್ ಅವರ ‘ಅಂದಾಜ್‌’ ಚಿತ್ರ. ರಾಜ್‌ ಕಪೂರ್ ಜೊತೆ ನಟನೆ

1952: ಅತ್ಯುತ್ತಮ ನಟನೆಗೆ ಮೊದಲ ಫಿಲ್ಮ್‌ಫೇರ್ ಪ್ರಶಸ್ತಿ ತಂದುಕೊಟ್ಟ ‘ದಾಗ್’ ಚಿತ್ರ. ಒಟ್ಟು 8 ಫಿಲ್ಮ್‌ಫೇರ್ ಪ್ರಶಸ್ತಿ ಪಡೆದು ಗಿನ್ನಿಸ್ ದಾಖಲೆಗೆ ಸೇರ್ಪಡೆ

1955–1960: ಆಜಾದ್, ಇನ್ಸಾನಿಯತ್, ಕೊಹಿನೂರ್, ಮೊಘಲ್–ಎ ಆಜಮ್‌ನಂತ ಹಿಟ್ ಚಿತ್ರಗಳಲ್ಲಿ ಅಭಿನಯ

1966: ತಮಗಿಂತ 20 ವರ್ಷ ಚಿಕ್ಕವರಾದ ನಟಿ ಸಾಯಿರಾ ಬಾನು ಜೊತೆ ಅಕ್ಟೋಬರ್ 11ರಂದು ವಿವಾಹ

1980: ಅಸ್ಮಾ ರೆಹಮಾನ್ ಎಂಬುವರ ಜೊತೆ ಎರಡನೇ ಮದುವೆ

1981: ಕೆಲಕಾಲದ ವಿರಾಮದ ಬಳಿಕ ‘ಕ್ರಾಂತಿ’ ಸಿನಿಮಾದ ಮೂಲಕ ಮತ್ತೆ ತೆರೆಗೆ. 1982ರಲ್ಲಿ ವಿಧಾತಾ, ಶಕ್ತಿ, 1986ರಲ್ಲಿ ಕರ್ಮ, 1991ರಲ್ಲಿ ಸೌದಾಗರ್ ಸಿನಿಮಾಗಳಲ್ಲಿ ಅಭಿನಯ

1991: ಪದ್ಮಭೂಷಣ ಪ್ರಶಸ್ತಿ

1994: ಜೀವಮಾನದ ಸಾಧನೆಗಾಗಿ ‘ಫಿಲ್ಮ್‌ಫೇರ್ ಪ್ರಶಸ್ತಿ’

1995: ಚಿತ್ರರಂಗದ ಅತ್ಯುನ್ನತ ‘ದಾದಾಸಾಹೇಬ್‌ ಫಾಲ್ಕೆ’ ಪ್ರಶಸ್ತಿ

1998: ಕೊನೆಯ ಚಿತ್ರ ‘ಖಿಲಾ’

1998: ಪಾಕಿಸ್ತಾನದ ಅತ್ಯುನ್ನತ ಪ್ರಶಸ್ತಿ ‘ನಿಶಾನ್–ಎ–ಇಮ್ತಿಯಾಜ್’ ಗೌರವ. ಈ ಗೌರವ ಪಡೆದ ಎರಡನೇ ಭಾರತೀಯ

2000–2006: ರಾಜ್ಯಸಭೆ ಸದಸ್ಯತ್ವ

2021: ಜುಲೈ 7ರಂದು ಮುಂಬೈನ ಹಿಂದುಜಾ ಆಸ್ಪತ್ರೆಯಲ್ಲಿ ತಮ್ಮ 98ನೇ ವಯಸ್ಸಿನಲ್ಲಿ ನಿಧನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT