ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ರಿವೇಣಿ ಕಹಾನಿ

Last Updated 5 ಜೂನ್ 2020, 4:17 IST
ಅಕ್ಷರ ಗಾತ್ರ

‘ಕಿರಾತಕ’ ಚಿತ್ರದ ಮೂಲಕ ಬಣ್ಣದಲೋಕ ಪ್ರವೇಶಿಸಿದ ನಟಿ ತ್ರಿವೇಣಿ ಕೃಷ್ಣ ಅವರ ವೃತ್ತಿಬದುಕೀಗ ಹತ್ತು ವರ್ಷ. ಪೋಷಕ ಪಾತ್ರಗಳಿಗೆ ಸೀಮಿತರಾಗಿದ್ದ ಅವರು ಈಗ ಪೂರ್ಣ ಪ್ರಮಾಣದ ನಾಯಕಿಯಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ‘ಅಲ್ಲೇ ಡ್ರಾ ಅಲ್ಲೇ ಬಹುಮಾನ’ ಗಿಟ್ಟಿಸುವ ಹಂಬಲ ಅವರದು.

‘ಚಿತ್ರರಂಗದಲ್ಲಿ ಬದುಕು ಸವೆಸುವುದು ಸುಲಭವಲ್ಲ. ಎಲ್ಲರೂ ಒಂದು ಸಮಯ ಬರುವವರೆಗೂ ಕಾಯಬೇಕು. ಅದಕ್ಕಾಗಿ ಸಾಕಷ್ಟು ತಾಳ್ಮೆ ಇರಬೇಕು. ನಾನು ಹಲವು ವರ್ಷಗಳ ಕಾಲ ಕಾದಿದ್ದಕ್ಕೆ ‘ಟಗರು’ ಚಿತ್ರದಲ್ಲಿ ಒಳ್ಳೆಯ ಪಾತ್ರ ಸಿಕ್ಕಿತು. ಆ ಪಾತ್ರ ಕನ್ನಡಿಗರಿಗೂ ಇಷ್ಟವಾಯಿತು’ ಎಂದು ನೆನಪಿಸಿಕೊಳ್ಳುತ್ತಾರೆ.

ತ್ರಿವೇಣಿ ಕೃಷ್ಣ ಹುಟ್ಟಿ, ಬೆಳೆದಿದ್ದು ಬೆಂಗಳೂರಿನಲ್ಲಿಯೇ. ಬಿ.ಕಾಂ. ಪದವಿ ಶಿಕ್ಷಣ ಪೂರೈಸಿದ ಬಳಿಕ ಮಾಡೆಲಿಂಗ್‌ ಕ್ಷೇತ್ರದ ಸೆಳೆತಕ್ಕೆ ಸಿಲುಕಿದರು. ಅವರು ಬೆಳ್ಳಿತೆರೆ ಪ್ರವೇಶಿಸಿದ್ದು ಆಕಸ್ಮಿಕ.

‘ಕಿರಾತಕ ಚಿತ್ರದ ಮೂಲಕ ನಟನೆಯತ್ತ ಗಮನಹರಿಸಿದೆ. ಆದರೆ, ಆ ಚಿತ್ರದ ಬಳಿಕ ಏಳು ವರ್ಷಗಳ ಕಾಲ ಯಾವುದೇ ಸಿನಿಮಾದಲ್ಲಿ ನಟಿಸಲಿಲ್ಲ. ಇಂಡಸ್ಟ್ರಿಯಲ್ಲಿ ಹೇಗೆ ಮುಂದುವರಿಯಬೇಕು ಎಂಬ ಗೊಂದಲದಲ್ಲಿಯೇ ಕಾಲದೂಡಿದೆ. ಬಳಿಕ ‘ಚಕ್ರವರ್ತಿ’ ಚಿತ್ರದಲ್ಲಿ ನಟಿಸಿದೆ. ಪೂರ್ಣ ಪ್ರಮಾಣದ ನಟನೆಗೆ ನಾನೆಂದಿಗೂ ಪ್ರಯತ್ನ ಮಾಡಲು ಹೋಗಿರಲಿಲ್ಲ. ಸಿಕ್ಕಿದ ಪಾತ್ರಗಳಲ್ಲಷ್ಟೇ ನಟಿಸುತ್ತಿದ್ದೆ. ಒಳ್ಳೆಯ ಪಾತ್ರಕ್ಕಾಗಿ ಹುಡುಕಾಟ ನಡೆಸುತ್ತಿದ್ದೆ. ದುನಿಯಾ ಸೂರಿ ನಿರ್ದೇಶನದ ‘ಟಗರು’ ಚಿತ್ರದಲ್ಲಿನ ಕಾನ್‌ಸ್ಟೆಬಲ್‌ ಸರೋಜಾ ಪಾತ್ರ ನನ್ನ ವೃತ್ತಿಬದುಕಿಗೆ ಹೊಸ ತಿರುವು ನೀಡಿತು’ ಎಂದು ವಿವರಿಸುತ್ತಾರೆ.

ಪ್ರಸ್ತುತ ರತ್ನ ತೀರ್ಥ ಆ್ಯಕ್ಷನ್‌ ಕಟ್‌ ಹೇಳಿರುವ‘ಅಲ್ಲೇ ಡ್ರಾ ಅಲ್ಲೇ ಬಹುಮಾನ’ ಚಿತ್ರಕ್ಕೆ ತ್ರಿವೇಣಿ ಕೃಷ್ಣ ಅವರೇ ನಾಯಕಿ. ಇದರ ಶೂಟಿಂಗ್ ಪೂರ್ಣಗೊಂಡಿದ್ದು, ಪೋಸ್ಟ್‌ ಪ್ರೊಡಕ್ಷನ್‌ ಕೆಲಸ ನಡೆಯುತ್ತಿದೆ. ಥ್ರಿಲ್ಲರ್ ಸಿನಿಮಾ ಇದು. ‘ಪ್ರೀತಿ ಮಾಡುವಾಗ ಹೆಣ್ಣೊಬ್ಬಳು ಯಾವ ತರಹ ಮೋಸ ಹೋಗುತ್ತಾಳೆ ಎನ್ನುವುದೇ ಇದರ ತಿರುಳು. ನಾನು ಐದು ಗೆಟಪ್‌ನಲ್ಲಿ ಕಾಣಿಸಿಕೊಂಡಿರುವೆ. ಅದನ್ನು ಸಿನಿಮಾದಲ್ಲಿಯೇ ನೋಡಬೇಕು’ ಎಂದು ಕಥೆಯ ಬಗ್ಗೆ ಕುತೂಹಲ ಹೆಚ್ಚಿಸುತ್ತಾರೆ.

ಸರೋಜಾಳಂತಹ ಚಿಕ್ಕ ಪಾತ್ರ ಪ‍್ರೇಕ್ಷಕರ ಮೇಲೆ ಬೀರಿದ ಪರಿಣಾಮದ ಬಗ್ಗೆ ಅವರಿಗೆ ಖುಷಿಯಾಗಿದೆಯಂತೆ. ‘ಪೋಷಕ ನಟಿಯಾಗಿ ನಟಿಸುವಾಗ ಸಿಗುವ ಅನುಭವವೇ ಬೇರೆ ಇರುತ್ತದೆ. ನಾಯಕಿಯಾಗಿ ನಟಿಸುವಾಗ ಜವಾಬ್ದಾರಿ ಹೆಚ್ಚಿರುತ್ತದೆ. ಇಡೀ ಸಿನಿಮಾವೇ ನನ್ನ ಮೇಲೆ ನಿಂತಿರುತ್ತದೆ. ಜೊತೆಗೆ ಕಲಿಕೆಗೂ ಹೆಚ್ಚಿನ ಅವಕಾಶ ಸಿಗುತ್ತದೆ’ ಎನ್ನುವ ಅವರು, ‘ನಟನೆಯಲ್ಲೂ ನಾನು ಸಾಕಷ್ಟು ಬದಲಾವಣೆ ಮಾಡಿಕೊಂಡಿರುವೆ’ ಎನ್ನುತ್ತಾರೆ.

ಚಿರಂಜೀವಿ ಸರ್ಜಾ ನಟನೆಯ ‘ರಾಜಾ ಮಾರ್ತಾಂಡ’ ಸಿನಿಮಾದ ಇಬ್ಬರು ನಾಯಕಿಯರಲ್ಲಿ ತ್ರಿವೇಣಿ ಕೃಷ್ಣ ಕೂಡ ಒಬ್ಬರು. ಜೊತೆಗೆ, ಅವರು ಸಾಯಿಕುಮಾರ್‌ ಜೊತೆಗೆ ನಟಿಸಿರುವ ‘ರಾಕ್ಷಸರು’ ಸಿನಿಮಾವೂ ಬಿಡುಗಡೆಗೆ ಸಿದ್ಧವಾಗಿದೆ. ಪುನೀತ್ ರಾಜ್‌ಕುಮಾರ್‌ ನಟನೆಯ ‘ಯುವರತ್ನ’ ಚಿತ್ರದಲ್ಲೂ ಮುಖ್ಯಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ‘ಇದರಲ್ಲಿ ಸಸ್ಪೆನ್ಸ್‌ ಪಾತ್ರ. ತೆರೆಯ ಮೇಲೆ ಪ್ರೇಕ್ಷಕರಿಗೆ ಆ ಪಾತ್ರ ನೋಡಿದ ತಕ್ಷಣ ಆಶ್ಚರ್ಯವಾಗುವುದು ನಿಶ್ಚಿತ’ ಎನ್ನುತ್ತಾರೆ.

ಯಾವುದೇ ಸಿನಿಮಾ ಒಪ್ಪಿಕೊಳ್ಳುವಾಗ ಅವರು ಹೀರೊಯಿನ್ ಅಥವಾ ಪೋಷಕ ಪಾತ್ರವೆಂದು ವಿಂಗಡಿಸುವುದಿಲ್ಲವಂತೆ. ‘ನಾನು ನಟಿಸುವ ಕ್ಯಾರೆಕ್ಟರ್‌ನಲ್ಲಿ ತೂಕ ಇರಬೇಕು. ಸಮಾಜಕ್ಕೆ ಸಂದೇಶ ಕೊಡಬೇಕು. ಸವಾಲಿನ ಪಾತ್ರಗಳಲ್ಲಿ ನಟಿಸಲು ನನಗಿಷ್ಟ’ ಎಂದು ಹೇಳುತ್ತಾರೆ.

ತೆಲುಗಿನಲ್ಲಿ ಹೊಸಬರ ತಂಡ ನಿರ್ಮಿಸಿರುವ ‘ತಮಿಳ್‌ ತಂಬಿ ತೆಲುಗು ಲವ್‌ಸ್ಟೋರಿ’ ಚಿತ್ರದಲ್ಲಿ ಪೊಲೀಸ್‌ ಅಧಿಕಾರಿಯಾಗಿ ನಟಿಸಿದ್ದಾರೆ. ಲವ್‌ ಮತ್ತು ಸಸ್ಪೆನ್ಸ್‌, ಥ್ರಿಲ್ಲರ್‌ ಚಿತ್ರ ಇದು. ಟಾಲಿವುಡ್‌ನ ಮತ್ತೊಂದು ಸಿನಿಮಾದಲ್ಲಿ ನಟಿಸಲು ಮಾತುಕತೆಯೂ ನಡೆಯುತ್ತಿದೆಯಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT