ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಸಾಯಿ ಸೂತ್ರ ಸಾಕಾರ

Last Updated 22 ಮಾರ್ಚ್ 2019, 10:55 IST
ಅಕ್ಷರ ಗಾತ್ರ

ಚಿತ್ರ: ಉದ್ಘರ್ಷ
ನಿರ್ಮಾಪಕರು: ದೇವರಾಜ್‌ ಆರ್.
ನಿರ್ದೇಶನ: ಸುನೀಲ್‌ಕುಮಾರ್‌ ದೇಸಾಯಿ
ತಾರಾಗಣ: ಠಾಕೂರ್‌ ಅನೂಪ್‌ ಸಿಂಗ್‌, ಸಾಯಿ ಧನ್ಸಿಕಾ, ಕಬೀರ್‌ ದುಹಾನ್‌ ಸಿಂಗ್, ಕಿಶೋರ್, ತಾನ್ಯಾ ಹೋಪ್, ಶ್ರದ್ಧಾ ದಾಸ್‌

**

ಎರಡೂವರೆ ದಶಕದ ಹಿಂದೆ ಸುನೀಲ್‌ಕುಮಾರ್‌ ದೇಸಾಯಿ ‘ಬೆಳದಿಂಗಳ ಬಾಲೆ’ಯ ಸಸ್ಪೆನ್ಸ್‌ ಕಥೆ ತೆರೆದಿಟ್ಟಾಗ ಕನ್ನಡ ಚಿತ್ರರಂಗ ನಿಬ್ಬೆರಗಾಗಿ ನೋಡಿತ್ತು. ಆಗ ಲ್ಯಾಂಡ್‌ಲೈನ್‌ ಮಾತ್ರವೇ ಇತ್ತು. ಈಗ ಎಲ್ಲರ ಕೈಯಲ್ಲೂ ಮೊಬೈಲ್‌ ರಿಂಗಣಿಸುತ್ತಿದೆ. ಈಗಲೂ ಹಾಗೆಯೇ ಇರುವ ‘ಬೆಳದಿಂಗಳ ಬಾಲೆ’ಯ ನಾಯಕ, ನಾಯಕಿಯ ಭಾವನೆಗಳ ಅಭಿವ್ಯಕ್ತಿಯನ್ನು ಹೆಚ್ಚು ಕುತೂಹಲಕಾರಿ ಮತ್ತು ಥ್ರಿಲ್ಲಿಂಗ್‌ ಆಗಿ ‘ಉದ್ಘರ್ಷ’ದಲ್ಲಿ ಹಿಡಿದಿಟ್ಟಿದ್ದಾರೆ ದೇಸಾಯಿ.

ಸಿನಿಮಾ ತಂತ್ರಗಾರಿಕೆಯ ಮಾಧ್ಯಮ ಎನ್ನುವ ಸತ್ಯ ದೇಸಾಯಿಗೆ ಗೊತ್ತಿದೆ. ನಾಯಕ, ನಾಯಕಿಯ ರೆಗ್ಯುಲರ್‌ ಸಬ್ಜೆಕ್ಟ್‌ ಸೃಷ್ಟಿಸದೆ‍ಪಾತ್ರಗಳ ಮೂಲಕ ಒಳಿತು– ಕೆಡುಕಿನ ಆಟವಾಡಿಸುವ ಜಾಯಮಾನ ಅವರದು. ಅವರ ಆತ್ಮವಿಶ್ವಾಸಕ್ಕೆ ಬಹುಭಾಷಾ ತಾರಾಗಣವೇ ದೊಡ್ಡ ಇಂಧನ. ಕೊಲೆಯೊಂದರ ರಹಸ್ಯ ಹುಡುಕಾಟದ ಕಥೆ ತಾಂತ್ರಿಕ ಕುಶಲತೆಯಿಂದ ರಂಜನೀಯವಾಗಿದೆ. ಇಲ್ಲಿ ಯಾವುದೇ ಪಾತ್ರಗಳ ಪ್ರಭಾವಳಿ ಇಲ್ಲ. ಇದೇ ಚಿತ್ರದ ಧನಾತ್ಮಕ ಅಂಶ. ಎಲ್ಲಾ ಪಾತ್ರಗಳ ಪೋಷಣೆಯಲ್ಲೂ ನಿರ್ದೇಶಕರು ಜಾಣ್ಮೆ ಮರೆದಿದ್ದಾರೆ. ಹಾಗಾಗಿಯೇ, ಚಿತ್ರಕಥೆ ಕೊನೆಯವರೆಗೂ ಪ್ರೇಕ್ಷಕರನ್ನು ಕುರ್ಚಿಯ ತುದಿಯಲ್ಲಿ ಕೂರಿಸುತ್ತದೆ. ಕೆಲವೆಡೆ ಸಾಹಸ ದೃಶ್ಯಗಳು ಅತಿಯಾಯಿತು ಎನಿಸುತ್ತವೆ. ಎಲ್ಲವನ್ನೂ ಸಸ್ಪೆನ್ಸ್‌ ಮಾಡುತ್ತಾ ಪ್ರೇಕ್ಷಕರು ಅಂದಾಜಿಸಲು ಸಾಧ್ಯವಾಗದಂತಹ ಮತ್ತೆ ಏನನ್ನೋ ಕೊಡುತ್ತೇನೆ ಎನ್ನುವ ನಿರ್ದೇಶಕರ ಚಾಕಚಕ್ಯತೆಯು ಇದನ್ನು ಮರೆಸುತ್ತದೆ.

ಸಿನಿಮಾ ಶುರುವಾಗುವುದು ರೆಸಾರ್ಟ್‌ವೊಂದರಲ್ಲಿ. ಅಲ್ಲಿ ಹೊಸವರ್ಷದ ಸಂಭ್ರಮ ಮೇಳೈಸಿರುತ್ತದೆ. ಅಲ್ಲಿಗೆ ಬರುವಂತೆ ನಾಯಕ ಆದಿತ್ಯ ತನ್ನ ಪ್ರಿಯತಮೆ ರಶ್ಮಿಗೆ ಹೇಳುತ್ತಾನೆ. ತನ್ನ ಪ್ರೀತಿಯ ನೆನಪಿಗಾಗಿ ಅವಳ ಬೆರಳಿಗೆ ಉಂಗುರ ತೊಡಿಸುತ್ತಾನೆ. ಬಳಿಕ ಕಾರಿನಲ್ಲಿರುವ ಮೊಬೈಲ್‌ ತರಲು ಹೊರಾಂಗಣಕ್ಕೆ ಬರುತ್ತಾನೆ. ಅದೇ ವೇಳೆಗೆ ಕೃತ್ತಿಕಾ ತನ್ನ ಉದ್ಯಮಿ ವಿಜಯ್‌ ಮೆನನ್‌ ಕೊಲೆಯಾಗಿರುವುದಾಗಿ ಕಿರುಚುತ್ತಾಳೆ. ಇನ್ನೊಂದೆಡೆ ರಶ್ಮಿಯೂ ನಾಪತ್ತೆ. ಅವಳಿಗಾಗಿ ಮತ್ತೆ ಕೊಠಡಿಗೆ ಹೋದ ಆದಿತ್ಯನ ಮೇಲೆ ಹಲ್ಲೆಯಾಗುತ್ತದೆ.

ಮೊಬೈಲ್‌ನಲ್ಲಿ ಕೊಲೆಯ ದೃಶ್ಯ ಚಿತ್ರೀಕರಿಸಿಕೊಂಡ ರಶ್ಮಿಗೆ ಜೀವ ಉಳಿಸಿಕೊಳ್ಳಲು ನೆರವಾಗುವುದು ಕಾರಿನ ಡಿಕ್ಕಿ. ಆ ಡಿಕ್ಕಿಯಲ್ಲಿಯೇ ಶವ ಇರುತ್ತದೆ. ಕಾರು ಕತ್ತಲು ಸೀಳಿಕೊಂಡು ಮುನ್ನುಗ್ಗಿದಾಗ ಕಥೆ ಕೊಡಗಿನ ಹಾದಿಗೆ ಹೊರಳುತ್ತದೆ. ನಾಯಕ ಕೊಲೆಯ ರಹಸ್ಯದ ಅನ್ವೇಷಣೆಗೆ ಇಳಿದಾಗ ಚಿತ್ರ ಗಾಂಭೀರ್ಯ ಪಡೆದುಕೊಳ್ಳುತ್ತದೆ. ಸಸ್ಪೆನ್ಸ್‌, ಥ್ರಿಲ್ಲರ್, ಹೊಡೆದಾಟ ಎಲ್ಲವನ್ನೂ ನಿರ್ದೇಶಕರು ಬೆಸೆದಿರುವ ಕ್ರಮದಲ್ಲಿ ಕಸರತ್ತಿದೆ.

ಚಿತ್ರದ ಮೊದಲಾರ್ಧದಲ್ಲಿ ಕೊಲೆ ಮತ್ತು ಪ್ರೇಮಿಗಳ ಬೇರ್ಪಡುವಿಕೆಯೊಂದಿಗೆ ಭಾವುಕ ತಿರುವಿಗೆ ಚಿತ್ರ ಹೊರಳುತ್ತದೆ. ಉದ್ಯಮಿಯ ಕೊಲೆಯ ನಿಗೂಢತೆಯನ್ನೇ ಮೆಟ್ಟಿಲುಗಳಾಗಿ ಬಳಸಿಕೊಂಡು ಕಥೆ ಬೆಳೆಸಿರಬಹುದೇ ಎನ್ನುವ ಪ್ರೇಕ್ಷಕರ ಲೆಕ್ಕಾಚಾರ ದ್ವಿತೀಯಾರ್ಧದಲ್ಲಿ ಸುಳ್ಳಾಗುತ್ತದೆ. ಕೊಲೆಯಾದವರು ಯಾರು ಎನ್ನುವುದೇ ಕೌತುಕ. ಇದಕ್ಕೆ ಉತ್ತರ ಸಿಗುವುದು ಚಿತ್ರಮಂದಿರದಲ್ಲಿಯೇ.

ನಿರ್ದೇಶಕರ ಪರಿಶ್ರಮಕ್ಕೆ ಸಂಜೋಯ್‌ ಚೌಧರಿ ಸಂಗೀತ, ಪಿ. ರಾಜನ್ ಮತ್ತು ವಿಷ್ಣುವರ್ಧನ್‌ ಅವರ ಕ್ಯಾಮೆರಾ ಕೈಚಳಕ ಸಮರ್ಥವಾಗಿ ಸ್ಪಂದಿಸಿದೆ. ಠಾಕೂರ್‌ ಅನೂಪ್‌ ಸಿಂಗ್‌, ಸಾಯಿ ಧನ್ಸಿಕಾ, ಕಬೀರ್‌ ದುಹಾನ್‌ ಸಿಂಗ್, ಕಿಶೋರ್, ತಾನ್ಯಾಹೋಪ್, ಶ್ರದ್ಧಾದಾಸ್‌ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT