ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಡುರಾತ್ರಿ 10 ಬಾರಿ ಕರೆ ಮಾಡಿಕಿರುಕುಳ: ಸಂಜನಾ ಪ್ರತಿದೂರು

ವಂದನಾ ದೂರಿಗೆ ಸಂಜನಾ ಪ್ರತಿದೂರು
Last Updated 28 ಡಿಸೆಂಬರ್ 2019, 20:44 IST
ಅಕ್ಷರ ಗಾತ್ರ

ಬೆಂಗಳೂರು: ‘ನಟಿ ಸಂಜನಾ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ‘ ಎಂದು ನಿರ್ಮಾಪಕಿ ವಂದನಾ ಜೈನ್‌ ಅವರು ಕಬ್ಬನ್‌ ಪಾರ್ಕ್‌ ಠಾಣೆಯಲ್ಲಿ ದಾಖಲಿಸಿರುವ ದೂರಿಗೆ, ನಟಿ ಸಂಜನಾ ಗರ್ಲಾನಿ ಸಹ ಪ್ರತಿದೂರು ನೀಡಿದ್ದಾರೆ.

ಕೇಂದ್ರ ವಿಭಾಗದ ಡಿಸಿಪಿ ಚೇತನ್‌ಸಿಂಗ್ ರಾಥೋಡ್ ಅವರ ಕಚೇರಿಗೆ ಶನಿವಾರ ಬೆಳಿಗ್ಗೆ ಬಂದಿದ್ದ ಸಂಜನಾ, ‘ವಂದನಾ ಜೈನ್‌ ನನಗೆ
ಜೀವ ಬೆದರಿಕೆ ಹಾಕಿದ್ದಾಳೆ. ಆಕೆ ವಿರುದ್ಧ ಕ್ರಮ ಕೈಗೊಳ್ಳಿ’ ಎಂದು ಒತ್ತಾಯಿಸಿ ದೂರಿನ ಪ್ರತಿ ನೀಡಿದರು.

‘ಪ್ರಜಾವಾಣಿ’ ಜೊತೆ ಮಾತನಾಡಿದ ಡಿಸಿಪಿ ಚೇತನ್‌ಸಿಂಗ್‌, ‘ವಂದನಾ ನೀಡಿದ್ದ ದೂರಿನಡಿ ಈಗಾಗಲೇ ಎನ್‌ಸಿಆರ್ (ಗಂಭೀರವಲ್ಲದ
ಪ್ರಕರಣ) ದಾಖಲಿಸಿಕೊಳ್ಳಲಾಗಿದೆ. ಸಂಜನಾ ಸಹ ಪ್ರತಿದೂರು ನೀಡಿದ್ದು, ಅದನ್ನೂ ಎನ್‌ಸಿಆರ್ ಮಾಡಿಕೊಳ್ಳಲಾಗಿದೆ’ ಎಂದರು.

‘ಎರಡೂ ದೂರುಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ನ್ಯಾಯಾಲಯದ ನಿರ್ದೇಶನದಂತೆ ಮುಂದಿನ ಕ್ರಮ
ಕೈಗೊಳ್ಳಲಾಗುವುದು’ ಎಂದು ಹೇಳಿದರು.

ಕಿರುಕುಳ, ಜೀವ ಬೆದರಿಕೆ: ಸುದ್ದಿಗಾರರ ಜೊತೆ ಮಾತನಾಡಿದ ಸಂಜನಾ, ‘ಪೊಲೀಸರು ಎಂದು ಹೇಳಿಕೊಂಡು ಶುಕ್ರವಾರ ನಡುರಾತ್ರಿ 10 ಬಾರಿ ಕರೆ ಮಾಡಿದ್ದ ಕೆಲವರು, ಠಾಣೆಗೆ ಬರುವಂತೆ ಒತ್ತಾಯಿಸಿದರು. ಇಂಥ ವರ್ತನೆಯಿಂದ ನನಗೆ ಕಿರುಕುಳ ಆಯಿತು. ವಿಚಾರಣೆ ನೆಪದಲ್ಲಿ ಈ ರೀತಿಯೂ ಮಾಡಬಹುದಾ?. ಆ ಮೊಬೈಲ್ ಸಂಖ್ಯೆಯನ್ನು ಡಿಸಿಪಿಗೆ ನೀಡಿದ್ದೇನೆ’ ಎಂದು ತಿಳಿಸಿದರು.

‘ವಂದನಾ ಸಹ ನನ್ನನ್ನು ಹಾಗೂ ನನ್ನ ತಾಯಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಳೆ. ಸುಮ್ಮನೇ ಬಿಡುವುದಿಲ್ಲ. ಈಗಲೇ ಜೈಲಿಗೆ
ಹಾಕಿಸುತ್ತೇನೆಂದು ಜೀವ ಬೆದರಿಕೆ ಹಾಕಿದ್ದಾಳೆ. ತಾಯಿಯನ್ನು ನಿಂದನೆ ಮಾಡಿದಾಗ ನಾನು ಸುಮ್ಮನಿರಬೇಕಿತ್ತಾ’ ಎಂದು ಪ್ರಶ್ನಿಸಿದರು.

‘ನಾನು ವಿಸ್ಕಿ ಬಾಟಲ್‌ನಿಂದ ಹೊಡೆದಿಲ್ಲ. ಆ ಬಗ್ಗೆ ಸಾಕ್ಷಿ ಇದ್ದರೆ ತೋರಿಸಿ. ಪಂಚಭಾಷಾ ತಾರೆಯಾದ ನನ್ನ ಹೆಸರು ಹಾಳು ಮಾಡಲು ಆಕೆ ಈ ರೀತಿ ಮಾಡುತ್ತಿದ್ದಾಳೆ’ ಎಂದು ಸಂಜನಾ ದೂರಿದರು.

‘ವಂದನಾ ಈ ಹಿಂದೆ ಮಹಿಳಾ ಎಂಪವರ್‌ಮೆಂಟ್ ಪಕ್ಷದಲ್ಲಿ (ಎಂಇಪಿ) ಇದ್ದಳು. ನನಗೂ ಪಕ್ಷ ಸೇರುವಂತೆ ಒತ್ತಾಯಿಸಿದ್ದಳು. ಅದಕ್ಕೆ ನಾನು ಒಪ್ಪಿರಲಿಲ್ಲ. ಈಗ, ತಾನೇ ಗಲಾಟೆ ಮಾಡಿಕೊಂಡು ದೂರು ನೀಡಿದ್ದಾಳೆ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT