ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರವೀಂದ್ರ ಕಲಾಕ್ಷೇತ್ರದಲ್ಲಿ ಶಿವರಾಂ ಅಂತಿಮ ದರ್ಶನ, ನಾಳೆ ಅಂತ್ಯಕ್ರಿಯೆ

Last Updated 4 ಡಿಸೆಂಬರ್ 2021, 10:58 IST
ಅಕ್ಷರ ಗಾತ್ರ

ಬೆಂಗಳೂರು: ಚಂದನವನದ ಹಿರಿಯ ನಟರಾಗಿದ್ದ ಎಸ್. ಶಿವರಾಂ (83) ಶನಿವಾರ ಮಧ್ಯಾಹ್ನ ಬೆಂಗಳೂರಿನಲ್ಲಿ ನಿಧನರಾದರು.

'ಭಾನುವಾರ ಬೆಳಗ್ಗೆ (ಡಿ. 5) ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕ ಅಂತಿಮ ದರ್ಶನಕ್ಕೆ ಶಿವರಾಂ ಅವರ ಪಾರ್ಥಿವ ಶರೀರವನ್ನು ಎರಡು ತಾಸು ಇಡಲಾಗುವುದು. ನಂತರ ಬನಶಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ'ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಮಾಹಿತಿ ನೀಡಿದ್ದಾರೆ.

ಕಳೆದ ನಾಲ್ಕು ದಿನಗಳ ಹಿಂದೆ ಮನೆಯಲ್ಲಿ ಅಯ್ಯಪ್ಪ ಸ್ವಾಮಿ ಪೂಜೆ ಮಾಡುತ್ತಿದ್ದಾಗ ಶಿವರಾಂಕುಸಿದುಬಿದ್ದಿದ್ದರು. ಮಿದುಳು ಸಂಕುಚಿತಗೊಂಡಿರುವುದರಿಂದ ಮತ್ತು ವಯಸ್ಸಿನ ಕಾರಣದಿಂದ ಶಸ್ತ್ರಚಿಕಿತ್ಸೆ ಅಸಾಧ್ಯ ಎಂದು ವೈದ್ಯರು ಹೇಳಿದ್ದರು.

1938 ಜನವರಿ 28 ರಂದು ಬೆಂಗಳೂರಿನ ಚೂಡಸಂದ್ರದಲ್ಲಿ ಜನಿಸಿದ್ದ ಶಿವರಾಂ, ಕನ್ನಡ ಚಿತ್ರರಂಗದಲ್ಲಿ ಪೋಷಕ, ಹಾಸ್ಯ ಪಾತ್ರದಲ್ಲಿ ಸುಮಾರು 6 ದಶಕಗಳ ಕಾಲ ಜನಮನ ರಂಜಿಸಿದ್ದರು. ಅವರು ಕಿರುತೆರೆಯ ಕಾರ್ಯಕ್ರಮಗಳಲ್ಲೂ ನಟಿಸಿದ್ದರು.

1965 ರಲ್ಲಿ ಬೆರೆತ ಜೀವ ಸಿನಿಮಾ ಮೂಲಕ ಶಿವರಾಂ ಚಿತ್ರರಂಗ ಪ್ರವೇಶಿಸಿದ್ದರು. ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಷ್ಸೇರಿದಂತೆ ಕನ್ನಡ ಚಿತ್ರರಂಗದ ಅನೇಕ ಸ್ಟಾರ್ ನಟರ ಜೊತೆ ಶಿವರಾಂ ಬಣ್ಣ ಹಚ್ಚಿದ್ದರು.

ಅಣ್ಣ ರಾಮನಾಥನ್‌ ಅವರ ಮೂಲಕ ಚಿತ್ರರಂಗದ ಪರಿಚಯ ಮಾಡಿಕೊಂಡ ಶಿವರಾಮ್‌, ನಿರ್ದೇಶಕನಾಗಿ ಅಭಿನಯಕ್ಕೆ ಇಳಿದವರು. ಸಹಾಯಕ ನಿರ್ದೇಶಕನಾಗಿದ್ದ ವೇಳೆ ಆಕಾಶವಾಣಿಯಲ್ಲೂ ಶಿವರಾಮ್‌ ಕಾರ್ಯನಿರ್ವಹಿಸಿದ್ದರು.

‘ತಂದೆಯವರು ಒಬ್ಬ ಸ್ವಯಂ ನಿರ್ಮಿತ ವ್ಯಕ್ತಿ. ನನ್ನ ಏಳಿಗೆಗೆ ನಾನೇ ಶಿಲ್ಪಿ ಎಂಬಂತೆ ಬಾಳಿದವರು. ಪರೋಪಕಾರಕ್ಕೇ ನಾವು ಜೀವ ತಾಳಿ ಬಂದಿದ್ದೇವೆ. ಹಾಗಾಗಿ ಒಂದು ಕ್ಷಣವನ್ನೂ ವ್ಯರ್ಥ ಮಾಡಬಾರದು ಎಂದು ಹೇಳುತ್ತಾ ಅದರಂತೆ ಬಾಳಿದವರು’ ಎಂದು ಲಕ್ಷ್ಮೀಶ ಹೇಳಿದರು.

ಇತ್ತೀಚೆಗೆ ಕೆ.ಆರ್. ರಸ್ತೆಯ ಬಳಿ ಕಾರು ಅಪಘಾತ ಸಂಭವಿಸಿತ್ತು. ಅದಾದ ನಂತರ ಆಘಾತಕ್ಕೊಳಗಾಗಿದ್ದ ಶಿವರಾಂ, ಬನಶಂಕರಿಯ ತಮ್ಮ ನಿವಾಸದ ಕೊಠಡಿ ಸೇರಿ ಏಕಾಂತದಲ್ಲಿದ್ದ ಅವರು, ಬಹಳ ಹೊತ್ತಾದರೂ ಹೊರಬಂದಿರಲಿಲ್ಲ. ಜತೆಗೆ ಕೊಠಡಿಯ ಒಳ ಭಾಗದಲ್ಲಿ ಬೀಗ ಹಾಕಿಕೊಂಡಿದ್ದರು.ಅವರು ಬೀಗ ತೆಗೆಯದೇ ಇದ್ದಾಗ, ನಕಲಿ ಕೀಲಿ ಬಳಸಿ ಕುಟುಂಬದ ಸದಸ್ಯರು ಬೀಗ ತೆರೆದು ನೋಡಿದಾಗ, ಶಿವರಾಂ ಕುಸಿದು ಬಿದ್ದ ಸ್ಥಿತಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT