ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾರು ವಿಜಯ ರತ್ನಾಕರ್‌ ಗುಟ್ಟೆ? ಈ ನಿರ್ದೇಶಕನ ಹಿನ್ನೆಲೆ ಏನು?

ಜಿಎಸ್‌ಟಿ ವಂಚನೆ ಆರೋಪ
Last Updated 29 ಡಿಸೆಂಬರ್ 2018, 18:32 IST
ಅಕ್ಷರ ಗಾತ್ರ

ಬೆಂಗಳೂರು: ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಜೀವನಾಧಾರಿತ ಸಿನಿಮಾ ದಿ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ಬಿಡುಗಡೆಗೆ ಸಿದ್ಧಗೊಂಡಿದ್ದು, ಅದಾಗಲೇ ಅನೇಕರಿಂದ ವಿರೋಧವನ್ನೂ ಎದುರಿಸುತ್ತಿದೆ. ಮನಮೋಹನ್ ಸಿಂಗ್‌ ರಾಜಕೀಯ ಜೀವನದ ಪ್ರಮುಖ ಘಟ್ಟಗಳನ್ನು ಒಳಗೊಂಡ ಇದೇ ಹೆಸರಿನ ಪುಸ್ತಕವನ್ನು ಆಧರಿಸಿ ವಿಜಯ ರತ್ನಾಕರ್‌ ಗುಟ್ಟೆ ಸಿನಿಮಾ ನಿರ್ಮಿಸಿದ್ದಾರೆ.

ಚಿತ್ರದ ಟ್ರೇಲರ್‌ ಟ್ವೀಟಿಸಿರುವ ಬಿಜೆಪಿ, ಹತ್ತು ವರ್ಷ ದೇಶವನ್ನು ಲೂಟಿ ಮಾಡಿದ ಕುಟುಂಬ ರಾಜಕಾರಣದ ಕಥೆಯನ್ನು ಒಳಗೊಂಡ ಟ್ರೇಲರ್‌ ಎಂದಿದೆ. ಕಾಂಗ್ರೆಸ್‌ ಪಕ್ಷ ಮತ್ತು ಪಕ್ಷದ ವರಿಷ್ಠರಿಗೆ ಧಕ್ಕೆ ಬರುವಂತೆ ಚಿತ್ರ ನಿರ್ಮಿಸಿರುವ ಆರೋಪ ಮಾಡಿರುವ ಮಹಾರಾಷ್ಟ್ರ ಯೂತ್‌ ಕಾಂಗ್ರೆಸ್‌, ಸಿನಿಮಾ ಬಿಡುಗಡೆಗೂ ಮುನ್ನ ವಿಶೇಷ ಪ್ರದರ್ಶನ ಆಯೋಜಿಸುವಂತೆ ತಾಕೀತು ಮಾಡಿದೆ. ರಾಷ್ಟ್ರೀಯ ಪಕ್ಷಗಳ ಪರ–ವಿರೋಧಗಳ ನಡುವೆ, ಸಿನಿಮಾ ನಿರ್ದೇಶಕ ವಿಜಯ ರತ್ನಾಕರ್‌ ಗುಟ್ಟೆ ಹಿನ್ನೆಲೆಚರ್ಚೆಗೆ ಗ್ರಾಸವಾಗಿದೆ.

₹34 ಕೋಟಿ ತೆರಿಗೆ ವಂಚನೆ ಆರೋಪ

ಸರಕು ಮತ್ತು ಸೇವಾ ತೆರಿಗೆಯ (ಜಿಎಸ್‌ಟಿ) ರೂಪದಲ್ಲಿ ₹34 ಕೋಟಿ ವಂಚಿಸಿದ ಆರೋಪದ ಮೇಲೆ ಚಿತ್ರ ನಿರ್ದೇಶಕ ವಿಜಯ ಆಗಸ್ಟ್‌ನಲ್ಲಿ ಬಂಧನಕ್ಕೆ ಒಳಗಾಗಿದ್ದರು. ಸರಕು ಮತ್ತು ಸೇವಾ ತೆರಿಗೆ ಗುಪ್ತಚರ ನಿರ್ದೇಶನಾಲಯವು (ಡಿಜಿಜಿಎಸ್‌ಟಿಐ) ಮುಂಬೈನಲ್ಲಿ ಬಂಧಿಸಿ ಕೋರ್ಟ್‌ಗೆ ಹಾಜರು ಪಡಿಸಿತ್ತು. ಮುಂಬೈ ಕೋರ್ಟ್‌ ಆಗಸ್ಟ್‌ 14ರವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿತ್ತು.

ಯಾವುದೇ ಸರಕು ಮತ್ತು ಸೇವೆಯನ್ನು ಪಡೆಯದೇ ಹಾರಿಜನ್‌ ಔಟ್‌ಸೋರ್ಸ್‌ ಸಲ್ಯೂಷನ್ಸ್‌ ಪ್ರೈವೇಟ್‌ ಲಿಮಿಟೆಡ್‌ನಿಂದ ವಿಜಯ ಗುಟ್ಟೆ ಅವರ ವಿಆರ್‌ಜಿ ಡಿಜಿಟಲ್‌ ಕಾರ್ಪೊರೇಷನ್‌ ಪ್ರೈ.ಲಿ., ಸಂಸ್ಥೆಯು ಬಿಲ್‌ಗಳನ್ನು ಪಡೆದಿದೆ. 149 ನಕಲಿ ಇನ್‌ವಾಯ್ಸ್‌ಗಳನ್ನು ಸೃಷ್ಟಿಸಿ, ₹34.37 ಕೋಟಿ ಜಿಎಸ್‌ಟಿ ಕಟ್ಟಲಾಗಿದೆ ಎಂದು ಸುಳ್ಳು ದಾಖಲೆ ತೋರಿಸಿ ವಂಚಿಸಿರುವ ಆರೋಪವಿದೆ. ಜಿಎಸ್‌ಟಿ ಸಂಬಂಧಿತ ₹170 ಕೋಟಿ ವಂಚನೆ ಪ್ರಕರಣಗಳಲ್ಲಿ ಕಳೆದ ಮೇನಲ್ಲಿ ಡಿಜಿಜಿಎಸ್‌ಟಿಐ, ಹಾರಿಜನ್‌ ಔಟ್‌ಸೋರ್ಸ್‌ ಸಲ್ಯೂಷನ್ಸ್‌ ಹಾಗೂ ಬೆಸ್ಟ್‌ ಕಂಪ್ಯೂಟರ್‌ ಸಲ್ಯೂಷನ್ಸ್‌ ಸಂಸ್ಥೆಗಳನಿರ್ದೇಶಕರನ್ನು ಬಂಧಿಸಿತ್ತು.

ಯಾವುದೇ ಸೇವೆ ಅಥವಾ ಸರಕು ಸಾಗಣೆ ನಡೆಯದೆ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ, ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌(ಐಟಿಸಿ) ಪಡೆಯುವುದರೊಂದಿಗೆ ಅದನ್ನೇ ಜಿಎಸ್‌ಟಿ ಇಲಾಖೆಗೆಮರುಪಾವತಿಗೂ ಸಲ್ಲಿಸಿದ್ದರು. ನಕಲಿ ದಾಖಲೆ ಸೃಷ್ಟಿಪತ್ತೆಯಾದ ನಂತರ ಸಿಜಿಎಸ್‌ಟಿ ಕಾಯ್ದೆ ಅಡಿಯಲ್ಲಿ ನಿರ್ದೇಶಕ ವಿಜಯ ಗುಟ್ಟ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಆರೋಪ ಸಾಬೀತಾದರೆಈ ಕಾಯ್ದೆಯ ಸೆಕ್ಷನ್‌ 132(1)(ಸಿ) ಅಡಿ ವಂಚಕನಿಗೆ 5 ವರ್ಷಗಳ ವರೆಗೂ ಜೈಲು ಶಿಕ್ಷೆ ಮತ್ತು ದಂಡ ವಿಧಿಸುವ ಅವಕಾಶವಿದೆ ಎಂದು ಇಂಟರ್‌ನ್ಯಾಷನಲ್‌ ಬ್ಯುಸಿನೆಸ್‌ ಟೈಮ್ಸ್‌ ವರದಿಯಲ್ಲಿ ಉಲ್ಲೇಖಿಸಿದೆ.

ಐದರಿಂದ ಆರು ತಿಂಗಳ ಒಳಗಾಗಿ ಸರ್ಕಾರಕ್ಕೆ ₹34 ಕೋಟಿ ಪಾವತಿಸುವ ಷರತ್ತಿನ ಮೇಲೆ ಕೋರ್ಟ್‌ ವಿಜಯ ಗುಟ್ಟೆಗೆ ಆಗಸ್ಟ್‌ 14ರಂದು ಜಾಮೀನು ನೀಡಿದೆ. ಬಂಧನಕ್ಕೆ ಒಳಗಾದ ದಿನದಿಂದ ಜಾಮೀನು ಪಡೆಯುವ ವರೆಗೂ ಗುಟ್ಟೆಸುಮಾರು ₹8 ಕೋಟಿಯಷ್ಟು ತೆರಿಗೆ ಮೊತ್ತ ಪಾವತಿಸಿ, ಮುಂದಿನ ಕೆಲವೇ ತಿಂಗಳಲ್ಲಿ ಉಳಿದ ಮೊತ್ತ ಪಾವತಿಸುವುದಾಗಿ ಕೋರ್ಟ್‌ಗೆ ಮನವಿ ಮಾಡಿದ್ದರು.

ವಿಜಯ ತಂದೆ ರತ್ನಾಕರ್‌ ಮೇಲೆ ₹5,500 ಕೋಟಿ ವಂಚನೆ ಆರೋಪ

ರತ್ನಾಕರ್ ಗುಟ್ಟೆ
ರತ್ನಾಕರ್ ಗುಟ್ಟೆ

ವಿಜಯ ರತ್ನಾಕರ್‌ ಗುಟ್ಟೆ ತಂದೆ, ಉದ್ಯಮಿ ರತ್ನಾಕರ್‌ ಗುಟ್ಟೆ ಬ್ಯಾಂಕ್‌ಗಳಿಗೆ ₹5,500 ಕೋಟಿ ವಂಚಿಸಿದ ಆರೋಪ ಹೊತ್ತಿದ್ದಾರೆ. ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಾರ್ಟಿ(ಎನ್‌ಸಿಪಿ) ಮುಖಂಡ ಮಹಾರಾಷ್ಟ್ರ ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಧನಂಜಯ್‌ ಮುಂಡೆ, ರತ್ನಾಕರ್‌ ವಿರುದ್ಧ ಜುಲೈನಲ್ಲಿ ಆರೋಪಿಸಿದ್ದರು. ರತ್ನಾಕರ್‌ ಅವರ ಎಂಟು ಕಂಪನಿಗಳು 26 ಸಾವಿರ ರೈತರನ್ನು ಹಾಗೂ ಹಲವು ಬ್ಯಾಂಕ್‌ಗಳಲ್ಲಿ ₹5,500 ಕೋಟಿಯಷ್ಟು ವಂಚನೆ ನಡೆಸಿದ್ದಾರೆ ಎಂಬ ಆರೋಪವಿದೆ.

ಅವರ ಸಕ್ಕರೆ ಘಟಕಗಳು ‘ಬೆಳೆ ಮತ್ತು ಸಾಗಣೆ’ ಯೋಜನೆ ಅಡಿಯಲ್ಲಿ 2015ರಲ್ಲಿ ಸುಮಾರು 600 ರೈತರ ಹೆಸರು ಬಳಸಿ ಸಾಲ ತೆಗೆದುಕೊಂಡಿದೆ. ರೈತರ ಹೆಸರಿನಲ್ಲಿ ಪಡೆದಿರುವ ವಾಹನಗಳನ್ನು ಸಕ್ಕರೆ ಕಾರ್ಖಾನೆಗಳಲ್ಲಿ ಬಳಸಲಾಗುತ್ತಿದೆ ಹಾಗೂ ಅವುಗಳ ಸಾಲದ ಮೊತ್ತ ಮರು ಪಾವತಿ ಮಾಡಿಲ್ಲ. ಸಾಲ ತೀರಿಸುವಂತೆ ಬ್ಯಾಂಕ್‌ಗಳು ರೈತರನ್ನು ಕಾಡುತ್ತಿವೆ ಎಂದು ಧನಂಜಯ್‌ ಪರಿಷತ್ತಿನಲ್ಲಿ ಆರೋಪಿಸಿದ್ದರು.ರತ್ನಾಕರ್‌ ಗುಟ್ಟೆ 2014ರ ವಿಧಾನಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದ ಗಂಗಾಖೇಡ್‌ ಕ್ಷೇತ್ರದಿಂದ ಬಿಜೆಪಿ ಮೈತ್ರಿ ಪಕ್ಷದಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಕಂಡಿದ್ದರು.

ವಿಜಯ ಗುಟ್ಟೆ ಮೊದಲ ನಿರ್ದೇಶನ

‘ದಿ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಮೂಲಕ ಮೊದಲ ಬಾರಿಗೆ ಚಿತ್ರ ನಿರ್ದೇಶನದ ಜವಾಬ್ದಾರಿ ನಿರ್ವಹಿಸಿರುವ ವಿಜಯ ಗುಟ್ಟೆ, ಈ ಹಿಂದೆ ಮೂರು ಸಿನಿಮಾಗಳಿಗೆ ಹಣ ಹೂಡಿದ್ದಾರೆ. ಎಮೋಷನಲ್‌ ಅತ್ಯಾಚಾರ್‌, ಟೈಮ್‌ ಬರಾ ವೇಯ್ಟ್ ಹಾಗೂ ಬದ್ಮಾಷಿಯಾನ್‌– ವಿಜಯ ನಿರ್ಮಿಸಿರುವ ಸಿನಿಮಾಗಳು.

ಅನುಪಮ್‌ ಖೇರ್‌ ಸಿಂಗ್‌ ಪಾತ್ರದಲ್ಲಿ ಅಭಿನಯಿಸಿರುವದಿ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ಜನವರಿ 11ಕ್ಕೆ ಬಿಡುಗಡೆ ನಿಗದಿಯಾಗಿದೆ. ಸಿನಿಮಾ ಬಗ್ಗೆ ಎದ್ದಿರುವ ಪರ–ವಿರೋಧಗಳಿಗೆ ವಿಜಯ ಪ್ರತಿಕ್ರಿಯಿಸಿದ್ದು, ’ಕಾಂಗ್ರೆಸ್‌ ಪಕ್ಷ ಸಿನಿಮಾಗೆ ವಿರೋಧ ವ್ಯಕ್ತಪಡಿಸುವುದಷ್ಟೇ ಅಲ್ಲದೆ, ಸಿನಿಮಾ ನೋಡದಂತೆ ದೇಶದ ಜನರಿಗೂ ಕರೆ ನೀಡುತ್ತಿದೆ. ಸಿನಿಮಾ ಪರ ಅಥವಾ ವಿರೋಧ ಇರುವ ಯಾರೂ ಸಹ ಸಿನಿಮಾ ನೋಡದೆಯೇ ಅದನ್ನು ವಿಶ್ಲೇಷಿಸಬೇಡಿ’ ಎಂದು ಮನವಿ ಮಾಡಿಟ್ವೀಟಿಸಿದ್ದಾರೆ.

ಯುಟ್ಯೂಬ್‌ನಲ್ಲಿ ಟ್ರೆಂಡ್‌ ಆಗಿರುವ ಚಿತ್ರದ ಟ್ರೇಲರ್‌ ಈಗಾಗಲೇ 2 ಕೋಟಿಗೂ ಅಧಿಕ ವೀಕ್ಷಣೆ ಕಂಡಿದೆ.ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದ ವೇಳೆ ಮಾಧ್ಯಮ ಸಲಹೆಗಾರರಾಗಿದ್ದ ಸಂಜಯ್ ಬಾರು 2014ರಲ್ಲಿ ರಚಿಸಿದ ‘ದಿ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಕೃತಿ ಆಧರಿಸಿ ಚಿತ್ರ ನಿರ್ಮಿಸಲಾಗಿದೆ. ಸಿಂಗ್ ಅವರ ಜೀವನದಲ್ಲಿನ ಮಹತ್ತರ ಘಟ್ಟಗಳು, ಯುಪಿಎ ಸರ್ಕಾರದ ಅವಧಿಯಲ್ಲಿನ ರಾಜಕೀಯ ಬೆಳವಣಿಗೆ, ಮಹತ್ತರ ತಿರುವುಗಳನ್ನು ಚಿತ್ರದ ಕಥೆಯು ಒಳಗೊಂಡಿದೆ. ಆರ್ಥಿಕ ತಜ್ಞ ಮನಮೋಹನ್‌ ಸಿಂಗ್‌ 2004–2014ರ ವರೆಗೂ ಹತ್ತು ವರ್ಷಗಳು ದೇಶದ ಪ್ರಧಾನಿಯಾಗಿದ್ದರು.

ಅನುಪಮ್‌ ಖೇರ್‌ ಜತೆಗೆ ಅಕ್ಷಯ್ ಖನ್ನಾ (ಸಂಜಯ್ ಬಾರು), ದಿವ್ಯಾ ಸೇಠ್ (ಮನಮೋಹನ್ ಸಿಂಗ್ ಪತ್ನಿ ಗುರುಶರಣಕೌರ್) ಮತ್ತು ಸುಜೇನ್ ಬರ್ನರ್ಟ್‌ (ಸೋನಿಯಾ ಗಾಂಧಿ), ಅರ್ಜುನ್‌ ಮಾಥುರ್‌(ರಾಹುಲ್‌ ಗಾಂಧಿ), ಆಹನಾ ಕುಮ್ರಾ(ಪ್ರಿಯಾಂಕಾ ಗಾಂಧಿ) ಸೇರಿ ಹಲವರ ಅಭಿನಯವಿದೆ.

ಕಾಂಗ್ರೆಸಿಗರ ವಿರೋಧ

ಕಾಂಗ್ರೆಸ್‌ ಪಕ್ಷದಲ್ಲಿ ಕುಟುಂಬ ರಾಜಕಾರಣ, ಪಕ್ಷದ ಕೈಗೊಂಬೆಯಾಗಿದ್ದ ಪ್ರಧಾನಿ,..ಎಂದೆಲ್ಲ ಆರೋಪಿಸಿ ಬಿಜೆಪಿ ಸಿನಿಮಾದ ಟ್ರೇಲರ್‌ ಹಂಚಿಕೊಂಡಿತ್ತು. ಅದಕ್ಕೆ ಕಾಂಗ್ರೆಸ್‌ಮುಖ್ಯ ವಕ್ತಾರ ರಣದೀಪ್‌ ಸುರ್ಜೆವಾಲಾ ಪ್ರತಿಕ್ರಿಯಿಸಿ, ’ಇಂಥ ಸುಳ್ಳು ಪ್ರಚಾರಗಳಿಂದ ಮೋದಿ ಸರ್ಕಾರವನ್ನು ಪ್ರಶ್ನಿಸುವುದರಿಂದ ಕಾಂಗ್ರೆಸ್‌ನ್ನು ಹಿಮ್ಮೆಟ್ಟಿಸಲು ಸಾಧ್ಯವಿಲ್ಲ’ ಎಂದಿದ್ದರು.

ನಟ ಅನುಪಮ್‌ ಖೇರ್‌ ತಾವು ನಿರ್ವಹಿಸಿರುವ ಪಾತ್ರದ ಬಗ್ಗೆ ಬಹುವಾಗಿ ಮೆಚ್ಚಿಕೊಂಡು ಟ್ವೀಟ್‌ಗಳನ್ನು ಮಾಡಿದ್ದಾರೆ. ವೃತ್ತಿ ಜೀವನದಲ್ಲಿಯೇ ಅತ್ಯುತ್ತಮವಾಗಿ ನಿರ್ವಹಿಸಿದ ಪಾತ್ರ,ಚಿತ್ರ ನೋಡಿದ ನಂತರ ಡಾ. ಮನಮೋಹನ್‌ ಸಿಂಗ್‌ ಸಹ ಪಾತ್ರ ನಿರ್ವಹಣೆಯನ್ನು ಒಪ್ಪಿಕೊಳ್ಳುತ್ತಾರೆ ಎಂದು ಪ್ರಕಟಿಸಿದ್ದಾರೆ. ಸಿನಿಮಾ ರಾಜಕೀಯ ವಲಯದಲ್ಲಿಯೂ ಚರ್ಚೆಗೆ ಗ್ರಾಸವಾಗುವ ಮೂಲಕ ಭರ್ಜರಿ ಪ್ರಚಾರ ಪಡೆದುಕೊಳ್ಳುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT