ಭಾನುವಾರ, ಫೆಬ್ರವರಿ 28, 2021
30 °C

ಚಿಣ್ಣರ ಉಸಿರಲಿ ವಿಷ್ಣು ಹೆಸರು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಅಭಿಮಾನಿಗಳ ಮನಸಲ್ಲಿ ‘ದಾದಾ’ ಆಗಿ ಸ್ಥಾನಪಡೆದಿರುವ ವಿಷ್ಣುವರ್ಧನ್ ಹುಟ್ಟಿದ ದಿನ ಸೆ. 18. ವಿಷ್ಣು ಹುಟ್ಟಿದ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ಅವರ ಕುಟುಂಬ ನಿರ್ಧರಿಸಿದೆ. ಇದರ ಭಾಗವಾಗಿ ಹಲವು ಸಂಘ– ಸಂಸ್ಥೆಗಳ ಸಹಯೋಗದೊಂದಿಗೆ ಎರಡು ದಿನಗಳ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ವಿಷ್ಣು ಜನ್ಮದಿನದಂದು ನಗರದ ಸುಚಿತ್ರ ಫಿಲಂ ಸೊಸೈಟಿಯಲ್ಲಿ ನಟ ಅನಿರುದ್ಧ್ ನಿರ್ದೇಶನದ ಕಿರುಚಿತ್ರಗಳ ಪ್ರದರ್ಶನವನ್ನು ಆಯೋಜಿಸಲಾಗಿದೆ. ಹಾಗೆಯೇ ಸೆ. 14ರಂದು ಚೌಡಯ್ಯ ಸ್ಮಾರಕ ಭವನದಲ್ಲಿ ‘ಸಂಗೀತ ಸುಧೆ– ಹೃದಯಗೀತೆ’ ಎಂಬ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ನಾಯಕ ನಟ/ನಟಿ, ಹಿನ್ನೆಲೆ ಗಾಯಕ/ ಗಾಯಕಿಯರೂ ಸೇರಿದಂತೆ ಚಿತ್ರರಂಗದ ಮೂವತ್ತು ಗಣ್ಯರು ವೇದಿಕೆಯ ಮೇಲಿದ್ದು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಸಂಗೀತ ಕಾರ್ಯಕ್ರಮಕ್ಕೆ ಗೋಲ್ಡ್‌ ಪಾಸ್‌ ₹ 750, ಪ್ಲಾಟಿನಮ್ ಪಾಸ್‌ ₹ 1500 ಮತ್ತು ವಿಐಪಿ ಪಾಸ್‌ ₹ 2250 ಶುಲ್ಕ ನಿಗದಿಪಡಿಸಲಾಗಿದೆ. ಸಂಗ್ರಹವಾದ ಹಣವನ್ನು ಬಡ ಮಕ್ಕಳ ಹೃದಯಚಿಕಿತ್ಸೆಗೆ ವಿನಿಯೋಗಿಸುವ ಯೋಜನೆಯನ್ನೂ ಹಾಕಿಕೊಳ್ಳಲಾಗಿದೆ. ಈ ಯೋಜನೆ ಈ ಕುರಿತು ಮಾಹಿತಿ ನೀಡಲೆಂದೇ ಪತ್ರಿಕಾಗೋಷ್ಠಿ ಕರೆಯಲಾಗಿತ್ತು. 

‘ನಾನು ಆರು ಕಿರುಚಿತ್ರಗಳನ್ನು ಬರೆದು ನಿರ್ದೇಶಿಸಿದ್ದೇನೆ. ಅವು ವಸ್ತು, ನಿರ್ವಹಣೆ, ಜಾನರ್ ಎಲ್ಲದರಲ್ಲಿಯೂ ಒಂದಕ್ಕಿಂತ ಇನ್ನೊಂದು ಭಿನ್ನವಾಗಿದೆ. ಆದರೆ ಎಲ್ಲವೂ ಸಾಮಾಜಿಕ ಕಳಕಳಿಯನ್ನು ವ್ಯಕ್ತಪಡಿಸುವ ಕಿರುಚಿತ್ರಗಳಾಗಿವೆ’ ಎಂದರು ಅನಿರುದ್ಧ್‌.

‘ವಿಭಾ ಚಾರಿಟೆಬಲ್ ಟ್ರಸ್ಟ್‌, ವಿಷ್ಣುವರ್ಧನ್ ಜನ್ಮದಿನವನ್ನು ಬಡ ಮಕ್ಕಳಿಗೆ ಸಹಾಯ ಮಾಡುವ ಮೂಲಕ ಆಚರಿಸಲು ನಿರ್ಧರಿಸಿದೆ. ಈ ಪ್ರಯತ್ನಕ್ಕೆ ರೋಟರಿ ಕ್ಲಬ್, ‘ನೀಡಿ ಹಾರ್ಟ್‌ ಫೌಂಡೇಷನ್‌’ ಕೂಡ ಸಹಯೋಗ ಒದಗಿಸಿದೆ. 

‘ನಮ್ಮ ಈ ಕಾರ್ಯಕ್ರಮಕ್ಕೆ ಇಡೀ ಚಿತ್ರರಂಗವೇ ಕೈಜೋಡಿಸುತ್ತಿದೆ. ಅದು ತುಂಬ ಖುಷಿಯ ವಿಷಯ. ಎಲ್ಲರೂ ಸಂತೋಷವಾಗಿರಬೇಕು. ಬಡ ಮಕ್ಕಳ ಮುಖದಲ್ಲಿ ನಗು ಅರಳಬೇಕು ಎನ್ನುವುದೇ ನಮ್ಮ ಮುಖ್ಯ ಆಶಯ’ ಎಂದರು ಭಾರತಿ ವಿಷ್ಣುವರ್ಧನ್.

ಇದೇ ಸಮಯದಲ್ಲಿ ಅವರು ವಿಷ್ಣುವರ್ಧನ್‌ ಸ್ಮಾರಕ ನಿರ್ಮಾಣ ವಿಳಂಬದ ಕುರಿತೂ ಬೇಸರ ವ್ಯಕ್ತಪಡಿಸಿದರು. ‘ಇನ್ನೊಂದು ವರ್ಷ ಕಾಯುತ್ತೇನೆ. ಈ ಸಮಸ್ಯೆ ಬಗೆಹರಿದರೆ ಒಳ್ಳೆಯದು. ಬಗೆಹರಿದಿಲ್ಲ ಎಂದರೆ ನನ್ನ ಮನಸಲ್ಲೊಂದು ಯೋಜನೆ ಇದೆ. ಅದನ್ನು ಅಭಿಮಾನಿಗಳ ಮುಂದಿಟ್ಟು ಕಾರ್ಯರೂಪಕ್ಕೆ ತರುತ್ತೇವೆ’ ಎಂದೂ ಅವರು ಹೇಳಿದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು