ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಥಿಯೇಟರ್‌ ಪುನರಾರಂಭಕ್ಕೆ ಆಗ್ರಹಿಸಿ ಪಶ್ಚಿಮ ಬಂಗಾಳದ ನಟ, ನಟಿಯರು, ಸಂಸದರ ಅಭಿಯಾನ

Last Updated 1 ಸೆಪ್ಟೆಂಬರ್ 2020, 9:47 IST
ಅಕ್ಷರ ಗಾತ್ರ

ಕೋವಿಡ್‌–19 ಪರಿಣಾಮ ಕಳೆದ ಮಾರ್ಚ್‌ ಅಂತ್ಯದಿಂದಲೇ ಚಿತ್ರಮಂದಿರಗಳ ಪ್ರದರ್ಶನ ಸ್ಥಗಿತಗೊಂಡಿರುವುದು ಹಳೆಯ ಸುದ್ದಿ. ಈಗ ಶೂಟಿಂಗ್‌ ಮತ್ತು ಪೋಸ್ಟ್‌ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿ ಚಿತ್ರಮಂದಿರಗಳ ಪುನರಾರಂಭದತ್ತ ಹಲವು ನಿರ್ದೇಶಕರು ಮತ್ತು ನಿರ್ಮಾಪಕರು ಚಿತ್ತ ಹರಿಸಿದ್ದಾರೆ. ಆದರೆ, ಕೇಂದ್ರ ಸರ್ಕಾರ ಇನ್ನೂ ಥಿಯೇಟರ್‌ಗಳ ಪ್ರದರ್ಶನಕ್ಕೆ ಅನುಮತಿ ನೀಡಿಲ್ಲ.

ಈ ನಡುವೆಯೇ ಪಶ್ಚಿಮ ಬಂಗಾಳದಲ್ಲಿ ಚಿತ್ರಮಂದಿರಗಳ ಪ್ರದರ್ಶನಕ್ಕೆ ಅನುಮತಿ ನೀಡುವಂತೆ ಕೋರಿ ಅಲ್ಲಿನ ನಟ, ನಟಿಯರು ಮತ್ತು ಸಂಸದರು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದ್ದಾರೆ. #SupportMovieTheaters #SaveCinemas ಹ್ಯಾಷ್‌ಟ್ಯಾಗ್‌ ಮೂಲಕ ಆರಂಭಗೊಂಡಿರುವ ಈ ಅಭಿಯಾನಕ್ಕೆ ನೆಟ್ಟಿಗರಿಂದಲೂ ಬೆಂಬಲ ವ್ಯಕ್ತವಾಗಿದೆ.

ಟಿಎಂಸಿಯ ಮೂವರು ಸಂಸದರು ಮತ್ತು ನಾಲ್ವರು ಬೆಂಗಾಲಿ ನಟರು ಕೋವಿಡ್‌ ಮಾರ್ಗಸೂಚಿ ಅನ್ವಯವೇ ಥಿಯೇಟರ್‌ಗಳನ್ನು ಮತ್ತೆ ಆರಂಭಿಸಬೇಕು. ಆ ಮೂಲಕ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಚಿತ್ರಮಂದಿರದ ಮಾಲೀಕರು ಮತ್ತು ಕಾರ್ಮಿಕರಿಗೆ ನೆರವಾಗಲು ತ್ವರಿತವಾಗಿ ಕ್ರಮಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

‘ಸಿನಿಮಾ ನಂಬಿಕೊಂಡು ಸಾವಿರಾರು ಕುಟುಂಬಗಳು ಬದುಕುತ್ತಿವೆ. ಚಿತ್ರಮಂದಿರಗಳು ಮತ್ತೆ ಶುರುವಾದರಷ್ಟೇ ಅವರ ಬದುಕು ಸರಿದಾರಿಗೆ ಬರಲಿದೆ. ಕೂಡಲೇ, ಥಿಯೇಟರ್‌ಗಳ ಪುನರಾರಂಭಕ್ಕೆ ಕೇಂದ್ರ ಸರ್ಕಾರ ಕ್ರಮವಹಿಸಬೇಕು’ ಎಂದು ಬೆಂಗಾಲಿ ನಟ ದೇವ್‌ ಟ್ವೀಟ್‌ ಮೂಲಕ ಮನವಿ ಮಾಡಿದ್ದಾರೆ.

ಬಸಿರ್ಹತ್ ಕ್ಷೇತ್ರದ ಸಂಸದೆ ಹಾಗೂ ನಟಿ ನುಸ್ರತ್ ಜಹಾನ್, ‘ಮನರಂಜನಾ ತೆರಿಗೆ ರೂಪದಲ್ಲಿ ಸಿನಿಮೋದ್ಯಮದಿಂದ ಕೇಂದ್ರಕ್ಕೆ ಹೆಚ್ಚಿನ ತೆರಿಗೆ ಸಂದಾಯವಾಗುತ್ತಿದೆ. ಈಗ ಆ ಉದ್ಯಮವೇ ನೆಲಕಚ್ಚಿದೆ. ಹಾಗಾಗಿ, ಕೇಂದ್ರ ಸಚಿವ ಪ್ರಕಾಶ್‌ ಜಾವೇಡ್ಕರ್‌ ಅವರು ಕೂಡಲೇ ಮಧ್ಯಪ್ರವೇಶಿಸಬೇಕು’ ಎಂದು ಟ್ವೀಟ್‌ ಮೂಲಕ ಆಗ್ರಹಿಸಿದ್ದಾರೆ.

ದಿ ಈಸ್ಟರ್ನ್‌ ಇಂಡಿಯಾ ಮೋಷನ್‌ ಪಿಕ್ಚರ್ಸ್‌ ಅಸೋಸಿಯೇಷನ್‌(ಇಐಎಂಪಿಎ) ಮತ್ತು ಮಲ್ಟಿಫ್ಲೆಕ್ಸ್‌ ಅಸೋಸಿಯೇಷನ್‌ ಆಫ್‌ ಇಂಡಿಯಾ ಕಳೆದ ಜೂನ್‌ನಲ್ಲಿಯೇ ಚಿತ್ರಮಂದಿರಗಳ ಪುನರಾರಂಭಕ್ಕೆ ಅನುಮತಿ ನೀಡುವಂತೆ ಪ್ರತ್ಯೇಕವಾಗಿ ಆಗ್ರಹಿಸಿದ್ದು ಉಂಟು.

‘ಸೆಪ್ಟೆಂಬರ್‌ನಿಂದಲೇ ಚಿತ್ರಮಂದಿರಗಳು ಮತ್ತೆ ಕಾರ್ಯಾರಂಭ ಮಾಡುತ್ತವೆ ಎಂಬ ಭರವಸೆ ಇತ್ತು. ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿಯಲ್ಲಿ ಇದರ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಪಶ್ಚಿಮ ಬಂಗಾಳದಲ್ಲಿರುವ 250ಕ್ಕೂ ಹೆಚ್ಚು ಏಕಪರದೆಯ ಸಿನಿಮಾ ಮಂದಿರಗಳ ಕಾರ್ಮಿಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಥಿಯೇಟರ್‌ಗಳ ಮಾಲೀಕರ ಬದುಕು ಇದರಿಂದ ಹೊರತಾಗಿಲ್ಲ’ ಎನ್ನುತ್ತಾರೆ ಇಐಎಂಪಿಎ ವಕ್ತಾರರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT