ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಖಲೆಗಳೊಂದಿಗೆ ರವಿಚಂದ್ರನ್‌ ಭೇಟಿಯಾಗುತ್ತೇನೆ: ನಿರ್ಮಾಪಕ ಎಂ.ಎನ್‌.ಕುಮಾರ್‌

ನಿರ್ಮಾಪಕ ಎಂ.ಎನ್‌.ಕುಮಾರ್‌ ಹೇಳಿಕೆ
Published 18 ಜುಲೈ 2023, 21:10 IST
Last Updated 18 ಜುಲೈ 2023, 21:10 IST
ಅಕ್ಷರ ಗಾತ್ರ

ಬೆಂಗಳೂರು: ನಿರ್ಮಾಪಕ ಎಂ.ಎನ್‌.ಕುಮಾರ್‌ ಹಾಗೂ ನಟ ಸುದೀಪ್‌ ನಡುವಣ ಘರ್ಷಣೆ ಇದೀಗ ನಟ ರವಿಚಂದ್ರನ್‌ ಅವರ ಅಂಗಳ ತಲುಪಿದೆ. ‘ಧರಣಿ ಕೈಬಿಟ್ಟು ಕುಮಾರ್‌ ದಾಖಲೆಗಳೊಂದಿಗೆ ನನ್ನ ಬಳಿ ಬರಲಿ’ ಎಂದು ರವಿಚಂದ್ರನ್‌ ಅವರು ಸಲಹೆ ನೀಡಿದ ಕಾರಣ ಕುಮಾರ್‌ ಬುಧವಾರ (ಜುಲೈ 19) ರವಿಚಂದ್ರನ್‌ ಅವರನ್ನು ಭೇಟಿಯಾಗಲು ನಿರ್ಧರಿಸಿದ್ದಾರೆ. 

ಈ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ ಕುಮಾರ್‌, ‘ಬುಧವಾರ ಬೆಳಿಗ್ಗೆ ನಾನು ದಾಖಲೆಗಳ ಸಹಿತ ರವಿಚಂದ್ರನ್‌ ಅವರನ್ನು ಭೇಟಿಯಾಗಲಿದ್ದೇನೆ. ಶಿವರಾಜ್‌ಕುಮಾರ್‌ ಅವರ ಭೇಟಿಗೂ ಪ್ರಯತ್ನಿಸುತ್ತಿದ್ದೇನೆ. ಅವರು ಚಿತ್ರೀಕರಣದಲ್ಲಿ ತಲ್ಲೀನರಾಗಿದ್ದಾರೆ. ಅವರು ನೀಡುವ ಮಾರ್ಗದರ್ಶನದಂತೆ ನಾನು ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ’ ಎಂದರು. 

ಸಹನೆ ಮೀರಿದೆ: ಎಂ.ಎನ್‌.ಕುಮಾರ್‌ ಪರ ನಿರ್ಮಾಪಕರ ತಂಡ ಮಂಗಳವಾರ ಮಧ್ಯಾಹ್ನ ರವಿಚಂದ್ರನ್‌ ಅವರನ್ನು ಭೇಟಿಯಾಗಿ ಘಟನೆಗಳ ಕುರಿತು ಚರ್ಚೆ ನಡೆಸಿತ್ತು. ಈ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ರವಿಚಂದ್ರನ್‌ ಅವರು, ‘ಎರಡೂ ಕಡೆ ಸಹನೆ ಮೀರಿದೆ. ಧರಣಿ ಮುಂದುವರಿಸಿದರೆ ನಾನು ಯಾವ ಮಧ್ಯಸ್ಥಿಕೆಗೂ ಬರುವುದಿಲ್ಲ. ನಾನು ಸುದೀಪ್‌ನನ್ನು ಮಗ ಎಂದು ಕರೆದರೂ, ಈ ವಿಚಾರದಲ್ಲಿ ನಾನು ಅವನನ್ನು ಕರೆಯುವುದಿಲ್ಲ. ಕುಮಾರ್‌ ಅವರ ಮಾತು ಸತ್ಯ ಎಂದು ಅನಿಸಿದರೆ ಸುದೀಪ್‌ ಬಳಿಗೆ ನಾನೇ ಹೋಗುತ್ತೇನೆ’ ಎಂದಿದ್ದರು. 

‘ಸದ್ಯ ಎಲ್ಲ ವಿಷಯವೂ ತಣ್ಣಗಾಗಬೇಕು. ನಮಗೆ ಇಡೀ ವಿಷಯ ಕೂಲಂಕಷವಾಗಿ ತಿಳಿದಿಲ್ಲ. ಒಟ್ಟಿನಲ್ಲಿ ಸುದೀಪ್‌ ಅವರಿಗೆ ನೋವಾಗಿರುವುದು ನಿಜ. ಕುಮಾರ್‌ಗೆ ಏನು ನೋವಾಗಿದೆ ಎಂದು ಗೊತ್ತಿಲ್ಲ. ಇವರ ಮಾತುಗಳನ್ನು ಕೇಳಿಕೊಂಡು ತೀರ್ಮಾನ ತೆಗೆದುಕೊಳ್ಳಲು ಆಗುವುದಿಲ್ಲ. ಎಲ್ಲರೂ ಮನೆಯವರೇ. ನಾನು ಯಾರನ್ನೂ ಕೇವಲ ಮಾತಲ್ಲಿ ನಂಬುವುದಿಲ್ಲ. ನನಗೆ ದಾಖಲೆ ಬೇಕು. ದಾಖಲೆ ಮೇಲೆ ನಡೆದ ಮಾತುಕತೆ ತಿಳಿದುಕೊಂಡು, ಅದರಲ್ಲಿ ಎಷ್ಟು ಸತ್ಯ ಎನ್ನುವುದನ್ನು ನನ್ನ ತಿಳಿವಳಿಕೆಗೆ ಬಿಡಬೇಕು. ನಾನು ಸುದೀಪ್‌ ಅವರ ಬಳಿ ಮಾತನಾಡಬೇಕೇ ಎನ್ನುವುದನ್ನು ದಾಖಲೆ ನೀಡಿದ ಮೇಲೆ ನಿರ್ಧರಿಸುತ್ತೇನೆ. ಯಾರು ಸರಿ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ನನ್ನ ಮಗನ ಮೇಲೆ ಆರೋಪ ಬಂದಿದೆ. ಅಷ್ಟು ಸುಲಭವಾಗಿ ಕುಮಾರ್‌ ಅವರನ್ನು ಬಿಡುವುದಿಲ್ಲ’ ಎಂದು ನಗುತ್ತಾ ಹೇಳಿದರು. 

‘ಕರ್ನಾಟಕಕ್ಕೆ ರಾಜ್‌ಕುಮಾರ್‌ ಕುಟುಂಬವೇ ಮೊದಲು. ಶಿವರಾಜ್‌ಕುಮಾರ್‌ ಅವರ ಬಳಿಯೇ ಮೊದಲು ಹೋಗಬೇಕು. ಮೊದಲು ನಿಮ್ಮ ಮನವಿ ಪತ್ರವನ್ನು ಶಿವರಾಜ್‌ಕುಮಾರ್‌ ಅವರಿಗೆ ನೀಡಿ ಎಂದು ನಿರ್ಮಾಪಕರಿಗೆ ತಿಳಿಸಿದ್ದೇನೆ. ಅದೇ ನಮಗೆ ಪ್ರಧಾನ ಕಚೇರಿ’ ಎಂದು ರವಿಚಂದ್ರನ್‌ ಹೇಳಿದರು.    

ಲೀಡರ್‌ ಆಗಲ್ಲ: ‘ಚಿತ್ರರಂಗದ ವಾತಾವರಣ ಸರಿ ಮಾಡುವ ಸಮಯ ಬಂದಿದೆ. ಸಂಘಟನೆಗಳು ಸರಿ ಮಾಡಿಕೊಳ್ಳದೇ ಹೋದರೆ ದಿನಾ ಬೆಳಿಗ್ಗೆ ಇಂತಹ ಘಟನೆಗಳು ನಡೆಯುತ್ತವೆ. ಕನ್ನಡ ಚಿತ್ರರಂಗಕ್ಕೆ ನಾನಂತೂ ನಾಯಕ ಆಗುವುದಿಲ್ಲ. ನನಗೆ ನನ್ನದೇ ಕೆಲಸಗಳಿವೆ. ಲೀಡರ್‌ ಆಗಬೇಕೆಂದರೆ ನನ್ನದೇ ದಾರಿಗಳಿವೆ. ನಾನು ಲೀಡರ್‌ ಆದರೆ ಮೊದಲು ಎಲ್ಲರಿಗೂ ವಿಲನ್‌ ಆಗುತ್ತೇನೆ. ನಾನು ಮೂವತ್ತು ವರ್ಷಗಳ ಹಿಂದೆಯೇ ಕಲಾವಿದರ ಸಂಘಟನೆ ಹೇಗೆ ನಡೆಯಬೇಕು ಎಂದು ಪುಸ್ತಕ ಮಾಡಿಕೊಟ್ಟಿದ್ದೆ. ಅದನ್ನು ಯಾರೂ ಓದಲೂ ಇಲ್ಲ. ಹೀಗಾಗಿ ಇದು ಯಾವುದೂ ಬೇಡ ಎಂದು ನಿರ್ಧರಿಸಿದ್ದೇನೆ’ ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT