ಸೋಮವಾರ, ಏಪ್ರಿಲ್ 19, 2021
24 °C

ಗ್ಲಾಮರಸ್‌ ಕಾರ್ಪೊರೇಟ್‌ ಹುಡ್ಗಿಯಾಗಿ ಪೂಜಾಗಾಂಧಿ

ಅಭಿಲಾಷ್‌ ಪಿ.ಎಸ್‌. Updated:

ಅಕ್ಷರ ಗಾತ್ರ : | |

ದಂಡುಪಾಳ್ಯ ಚಿತ್ರದ ಬಳಿಕ ಚಂದನವನದಿಂದ ತಾತ್ಕಾಲಿಕ ಬ್ರೇಕ್‌ ತೆಗೆದುಕೊಂಡಿದ್ದ ನಟಿ ಪೂಜಾ ಗಾಂಧಿ ಇದೀಗ ‘ಸಂಹಾರಿಣಿ’ ಚಿತ್ರದ ಮೂಲಕ ಮತ್ತೆ ತೆರೆ ಮೇಲೆ ಬರುತ್ತಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಹೆಚ್ಚಾಗಿದ್ದ ತೂಕ ಇಳಿಸಿಕೊಂಡು ಮತ್ತೆ ‘ಮುಂಗಾರು ಮಳೆ’ ಹುಡುಗಿಯಂತೆ ಗ್ಲ್ಯಾಮರಸ್‌ ಪಾತ್ರ ಮಾಡುತ್ತೇನೆ ಎನ್ನುವ ಅವರು ‘ಸಿನಿಮಾ ಪುರವಣಿ’ ಜೊತೆ ಮಾತನಾಡಿದರು

***

*ಕೆಲ ವರ್ಷದಿಂದ ಪೂಜಾ ಗಾಂಧಿ ಕಾಣಿಸಲೇ ಇಲ್ಲ. ಏನು ಮಾಡುತ್ತಿದ್ರಿ?

(ನಗುತ್ತಾ) ನಾನು ಇಲ್ಲೇ ಇದ್ದೆ. ದಂಡುಪಾಳ್ಯದ ಬಳಿಕ ಸಣ್ಣ ಬ್ರೇಕ್‌ ತೆಗೆದುಕೊಳ್ಳೋಣ ಎಂದು ನಾನೇ ನಿರ್ಧರಿಸಿದೆ. ಪ್ರೊಡಕ್ಷನ್‌ ಆರಂಭಕ್ಕೆ ನಾನು ಯೋಚಿಸಿದ್ದೆ. ಆದರೆ, ಅದು ಕೈಗೂಡಲಿಲ್ಲ. ಅದು ನನಗೆ ಸೂಕ್ತವಾಗಿರುವುದಲ್ಲ, ತಪ್ಪು ಮಾಡಿಬಿಟ್ಟೆ ಎಂದನಿಸಿತು. ಹಣ ಮತ್ತು ಸಮಯ ವ್ಯರ್ಥ ಮಾಡುವುದಕ್ಕಿಂತ ಸದ್ಯಕ್ಕೆ ಈ ಯೋಚನೆ ಬಿಟ್ಟಿದ್ದೇನೆ. ‘ಅಭಿನೇತ್ರಿ’ ಸಿನಿಮಾ ಮಾಡಿದಾಗಲೂ ಅದು ಫಲನೀಡಲಿಲ್ಲ. ಹೀಗಾಗಿ ಮುಂದೆ ನೋಡೋಣ ಎಂದು ಅಂದುಕೊಂಡಿದ್ದೇನೆ. ಜೊತೆಗೆ 2020ರ ಆರಂಭದಲ್ಲಿ ನನಗೆ ಪಿತ್ತಕೋಶದ ಶಸ್ತ್ರಚಿಕಿತ್ಸೆ ಆಯಿತು. ಇದರಿಂದ ಇನ್ನಷ್ಟೇ ನಾನು ಚೇತರಿಸಿಕೊಳ್ಳಬೇಕಾಗಿದೆ. ಈ ಅವಧಿಯಲ್ಲಿ ಸುಮಾರು ಕಥೆ ಕೇಳಿದೆ. ಆದರೆ ಮುಂದೆ ಹೆಜ್ಜೆ ಇಡುವ ಮೊದಲು ಸಣ್ಣ ಬ್ರೇಕ್‌ ಬೇಕೆನಿಸಿತು.

*ಸಂಹಾರಿಣಿಯಲ್ಲಿ ರಗಡ್‌ಲುಕ್‌ನಲ್ಲಿ ಕಾಣಿಸಿಕೊಂಡಿದ್ದೀರಿ?

2019ನಲ್ಲಿ ಸಂಹಾರಿಣಿ ಚಿತ್ರದ ಚಿತ್ರೀಕರಣ ಆಯಿತು. ಕಥೆ ಇಷ್ಟವಾಗಿತ್ತು. ಒಂದೇ ರೀತಿ ಪಾತ್ರ ಮಾಡಿಲ್ಲ, ವಿಫಲವಾದರೂ ತೊಂದರೆ ಇಲ್ಲ. ದಂಡುಪಾಳ್ಯದ ಬಳಿಕ ವಿಭಿನ್ನವಾದ ಪಾತ್ರಗಳನ್ನು ನಾನು ಮಾಡಲು ಪ್ರಯತ್ನಿಸುತ್ತಿದ್ದೇನೆ. ಒಂದು ಘಟನೆ  ಹೇಗೆ ಮುಗ್ಧ ಹುಡುಗಿಯ ಜೀವನವನ್ನು ಬದಲಾಯಿಸುತ್ತದೆ, ಆಕೆ ಹೇಗೆ ಪ್ರತೀಕಾರ ತೆಗೆದುಕೊಳ್ಳುತ್ತಾಳೆ ಎನ್ನುವುದು ಚಿತ್ರದ ಸಾರಾಂಶ.

*ಪಾತ್ರಕ್ಕೆ ಹೊಂದಿಕೊಳ್ಳಲು ಸಿದ್ಧತೆ ಹೇಗಿತ್ತು?

ಈ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ನಾನು ಆರೋಗ್ಯವಾಗಿದ್ದೆ. ಚಿತ್ರೀಕರಣ ಬಳಿಕ ನನಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು. ಇದರಲ್ಲಿ ನಾಲ್ಕೈದು ಫೈಟ್‌ಗಳಿದ್ದು, ಇದು ಸವಾಲಾಗಿತ್ತು. ಇದಕ್ಕೆ ಫೈಟ್‌ ಮಾಸ್ಟರ್‌ ಮಾಸ್‌ ಮಾದಾ ಅವರು ತರಬೇತಿ ನೀಡಿದ್ದರು. ದಿನಕ್ಕೆ 30–40 ಡಿಪ್ಸ್‌ ಹೊಡೆಯುತ್ತಿದ್ದೆ. ಸಾಹಸ ದೃಶ್ಯದ ಚಿತ್ರೀಕರಣ ಸಂದರ್ಭದಲ್ಲಿ ಒಂದು ಆ್ಯಕ್ಷನ್‌ ಸರಿಯಾಗಿ ಬಂದಿಲ್ಲ ಎಂದರೆ ಮತ್ತೆ ತರಬೇತಿ ನೀಡುತ್ತಿದ್ದರು. ಮಾನಸಿಕವಾಗಿ ಸದೃಢವಾಗಿದ್ದರೆ ಏನೂ ಸಾಧಿಸಬಹುದು ಎಂದು ನಾನು ಈ ಪಾತ್ರದ ಮೂಲಕ ತಿಳಿದುಕೊಂಡೆ. 

*ಮುಂಗಾರು ಮಳೆ ಗ್ಲ್ಯಾಮರಸ್‌ ಪೂಜಾ ಗಾಂಧಿ ಮತ್ತೆ ಕಾಣಿಸಿಕೊಳ್ಳುತ್ತಾರೆಯೇ?

ಶಸ್ತ್ರ ಚಿಕಿತ್ಸೆ ಬಳಿಕ ನನ್ನ ದೇಹದ ತೂಕ ಹೆಚ್ಚಾಯಿತು. ಸ್ವಲ್ಪ ದಿನದ ಬಳಿಕ ದೇಹದ ತೂಕ ಇಳಿಸಿಕೊಳ್ಳಲು ವರ್ಕ್‌ಔಟ್‌ ಮಾಡಲಿದ್ದೇನೆ. ಏಪ್ರಿಲ್‌ ಅಂತ್ಯದಿಂದ ಮತ್ತೆ ಚಿತ್ರೀಕರಣಕ್ಕೆ ಇಳಿಯಲಿದ್ದೇನೆ. ಸದ್ಯಕ್ಕೆ ಎರಡು ಚಿತ್ರ ಒಪ್ಪಿಕೊಂಡಿದ್ದೇನೆ. ಅದರ ಮಾಹಿತಿ ಮುಂದೆ ನೀಡುತ್ತೇನೆ. ಇದರಲ್ಲಿ ಒಂದು ಪಾತ್ರ ಕಾರ್ಪೊರೇಟ್ ಹುಡುಗಿ ಪಾತ್ರ. ಇದು ಗ್ಲ್ಯಾಮರಸ್‌ ಆಗಿಯೇ ಇರುತ್ತದೆ. ಇದು ನನ್ನ ಹೊಸ ಲುಕ್‌ ಆಗಿರಲಿದೆ. ಖಂಡಿತವಾಗಿಯೂ, ಮುಂಗಾರು ಮಳೆಯ ಹಳೇ ಪೂಜಾ ಗಾಂಧಿಯನ್ನು ಮತ್ತೆ ನೋಡುತ್ತೀರಿ. ಇದು ಖಚಿತ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು