ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣಿಕರ್ಣಿಕಾ ಸಿನಿಮಾ ವಿಮರ್ಶೆ: ಕಂಗನಾ ಪ್ರಭಾವಳಿಯಲ್ಲಿ ಉಳಿದವರೆಲ್ಲರೂ ಮಂಕು

Last Updated 25 ಜನವರಿ 2019, 13:32 IST
ಅಕ್ಷರ ಗಾತ್ರ

ಚಿತ್ರ: ಮಣಿಕರ್ಣಿಕಾ: ದಿ ಕ್ವೀನ್ ಆಫ್ ಝಾನ್ಸಿ (ಹಿಂದಿ)
ನಿರ್ಮಾಣ: ಝೀ ಸ್ಟುಡಿಯೋಸ್, ಕಮಲ್ ಜೈನ್, ನಿಶಾಂತ್ ಪಿಟ್ಟಿ
ನಿರ್ದೇಶನ: ರಾಧಾಕೃಷ್ಣ ಜಗರ್ಲಮುಂದಿ (ಕ್ರಿಷ್) ಹಾಗೂ ಕಂಗನಾ ರನೋಟ್
ತಾರಾಗಣ: ಕಂಗನಾ ರನೋಟ್, ಡ್ಯಾನಿ ಡೆನ್ಜೊಂಗ್‌ಪಾ, ಅತುಲ್ ಕುಲಕರ್ಣಿ, ಸುರೇಶ್ ಒಬೆರಾಯ್, ಜಿಶುಸೆನ್‌ ಗುಪ್ತಾ, ಅಂಕಿತಾ ಲೋಖಂಡೆ.

**

ಪೀರಿಯೆಡ್ ಸಿನಿಮಾಗಳ ನಿರ್ದೇಶನದಲ್ಲಿ ರಾಧಾಕೃಷ್ಣ ಜಗರ್ಲಮುಂದಿ ಪಳಗಿದವರು. ತೆಲುಗಿನಲ್ಲಿ ಅವರು ಕಡಿಮೆ ಅವಧಿಯಲ್ಲೇ ಸಮರ ದೃಶ್ಯಗಳಿರುವ ಸಿನಿಮಾಗಳಿಗೆ ಆ್ಯಕ್ಷನ್‌–ಕಟ್‌ ಹೇಳಿ ಸೈ ಎನಿಸಿಕೊಂಡಿದ್ದಾರೆ. ತೀರಾ ಇತ್ತೀಚೆಗೆ ‘ಎನ್‌ಟಿಆರ್‌–ಕಥಾನಾಯಕುಡು’ ಸಿನಿಮಾ ಮೂಲಕ ಸುದ್ದಿಯಾಗಿದ್ದವರು.

ಝಾನ್ಸಿ ರಾಣಿಯ ಹೋರಾಟದ ಕಥನ ಆಧರಿಸಿದ ‘ಮಣಿಕರ್ಣಿಕಾ’ ಸಿನಿಮಾ ಕೆಲಸವನ್ನು ಪೂರ್ಣಗೊಳಿಸದೇ ಅವರು ತವರಿನತ್ತ ಹೊರಟಿದ್ದು ಎನ್‌ಟಿಆರ್‌ ವಸ್ತುವಿಷಯದ ಬದ್ಧತೆಯಿಂದಲೇ. ಅವರ ಅನುಪಸ್ಥಿತಿಯಲ್ಲಿ ಬಾಕಿ ಇದ್ದ ದೃಶ್ಯಗಳನ್ನು ನಾಯಕಿ ಕಂಗನಾ ರನೋಟ್‌ ಅವರೇ ನಿರ್ದೇಶಿಸಿರುವುದು ಉಲ್ಲೇಖಕ್ಕೆ ಅರ್ಹ. ಬಹುಶಃ ಇಡೀ ಸಿನಿಮಾವನ್ನು ರಾಧಾಕೃಷ್ಣ ನಿರ್ದೇಶಿಸಿದ್ದರೆ ಚೆನ್ನಾಗಿತ್ತೇನೋ ಎಂಬ ಪ್ರಶ್ನೆ ಸಿನಿಮಾದ ಎರಡನೇ ಅರ್ಧದಲ್ಲಿ ಮೂಡುತ್ತದೆ.

ಅಮಿತಾಭ್ ಬಚ್ಚನ್ ಕಂಠದ ನಿರೂಪಣೆ, ಜ್ಞಾನಶೇಖರ್‌ ವಿ.ಎಸ್‌. ಸಿನಿಮಾಟೊಗ್ರಫಿ (ಒಂದಿಷ್ಟು ದೃಶ್ಯಗಳನ್ನು ಕಿರಣ್ ದೇವಹನ್ಸ್, ಸಚಿನ್ ಕೃಷ್ಣ್ ಚಿತ್ರೀಕರಿಸಿದ್ದಾರೆ), ಸಂಚಿತ್–ಅಂಕಿತ್ ಬಲ್ಹಾರಾ ಹಿನ್ನೆಲೆ ಸಂಗೀತ ಇವೆಲ್ಲವೂ ಸಿನಿಮಾವನ್ನು ಸಾಕಷ್ಟು ಮೇಲೆತ್ತುತ್ತವೆ. ರಾಜಮೌಳಿ ತಂದೆ ಕೆ.ವಿ. ವಿಜಯೇಂದ್ರ ಪ್ರಸಾದ್ ಕಥೆ–ಚಿತ್ರಕಥೆ ಒದಗಿಸಿದ್ದು, ಸಶಕ್ತವಾದ ಹೂರಣ ಸಿಕ್ಕಂತಾಗಿದೆ. ಸಂಭಾಷಣೆ ಮೊನಚಾಗಲು ಪ್ರಸೂನ್ ಜೋಷಿ ಮಾಗಿದ ಅನುಭವ. ಹಾಡುಗಳಲ್ಲಿನ ಗೇಯತೆ–ಲಯಕ್ಕೆ ಶಂಕರ್–ಎಹ್ಸಾನ್–ಲಾಯ್ ಕಾಣ್ಕೆ.

ಕಂಗನಾ ರನೋಟ್‌ ವೃತ್ತಿಬದುಕಿನ ಮಹತ್ವದ ಚಲನಚಿತ್ರಗಳ ಸಾಲಿಗೆ ಇದು ಸೇರುತ್ತದಾದರೂ, ಎರಡನೇ ಅರ್ಧದ ಸಡಿಲ ಬಂಧದಿಂದಾಗಿ ಹಿಂಜಿದಂತೆ ಭಾಸವಾಗುತ್ತದೆ.

ಹುಟ್ಟಾ ಸಾಹಸಿ ಸ್ವಭಾವದ ಮಣಿಕರ್ಣಿಕಾ ವಿವಾಹದಿಂದ ಶುರುವಾಗುವ ಸಿನಿಮಾ ಆ ನಂತರ ಬ್ರಿಟಿಷರನ್ನು ಎದುರು ಹಾಕಿಕೊಂಡು ಝಾನ್ಸಿಯನ್ನು ಉಳಿಸಿಕೊಳ್ಳಲು ಕೊನೆಯವರೆಗೂ ಹೋರಾಡುವ ಕಥನವನ್ನು ಹೊಂದಿದೆ. ಸಂಪ್ರದಾಯಸ್ಥ ಮನಸ್ಸುಗಳನ್ನು ಅರಮನೆಯೊಳಗೆ ಎದುರು ಹಾಕಿಕೊಳ್ಳುವ ಗಟ್ಟಿಗಿತ್ತಿ ಝಾನ್ಸಿ ರಾಣಿ. ಪುತ್ರ, ಪತಿಯನ್ನು ಕಳೆದುಕೊಂಡು ಕಲ್ಲವಿಲಗೊಂಡ ಸ್ಥಿತಿಯಲ್ಲೂ ಮಾತೃಭೂಮಿಗಾಗಿ ಬ್ರಿಟಿಷ್ ಅಧಿಕಾರಿಗಳ ಕಣ್ಣಲ್ಲಿ ಕಣ್ಣಿಟ್ಟು ಕೆಣಕಬಲ್ಲ ಧೈರ್ಯಸ್ಥೆ. ಸಾಮಾಜಿಕವಾಗಿ ರಾಣಿ ಜನಪ್ರಿಯತೆ ಪಡೆಯುವ ಪ್ರಕ್ರಿಯೆಯನ್ನೂ ಸಿನಿಮಾದಲ್ಲಿ ಹದವರಿತಂತೆ ಚಿತ್ರಿಸಲಾಗಿದೆ.

ಇಡೀ ಚಿತ್ರವನ್ನು ಕಂಗನಾ ಆವರಿಸಿಕೊಂಡಿದ್ದಾರೆ. ಸಾಹಸ, ಆಂಗಿಕ ಅಭಿನಯ, ಸೌಂದರ್ಯದ ವಿಷಯದಲ್ಲಿ ಅವರು ಗಮನಾರ್ಹ. ಆದರೆ, ಸಂಭಾಷಣೆ ಹೇಳುವ ಶೈಲಿಯಲ್ಲಿ ಹೆಚ್ಚು ಅಂಕಗಳನ್ನು ನೀಡಲಾಗದು. ತಾತ್ಯಾ ಟೋಪೆಯಾಗಿ ಅತುಲ್‌ ಕುಲಕರ್ಣಿ, ಗುಲಾಮ್ ಗೌಸ್‌ ಖಾನ್ ಪಾತ್ರದಲ್ಲಿ ಡ್ಯಾನಿ ಡೆನ್ಜೊಂಗ್‌ಪಾ ಚೆನ್ನಾಗಿ ಅಭಿನಯಿಸಿದ್ದಾರೆ. ಅವರ ಪಾತ್ರಗಳ ಭಿತ್ತಿ ಇನ್ನಷ್ಟು ಹಿಗ್ಗಬೇಕಿತ್ತು. ಗಂಗಾಧರ ರಾವ್ ಪಾತ್ರದಲ್ಲಿ ಬಂಗಾಲಿ ನಟ ಜಿಶುಸೆನ್‌ ಗುಪ್ತಾ ಕೂಡ ಕಣ್ಣು ಕೀಲಿಸಿಕೊಳ್ಳುವಂತೆ ನಟಿಸಿದ್ದಾರೆ. ಹೀಗಿದ್ದೂ ಕಂಗನಾ ಹೊರತಾಗಿ ಅಂಕಿತಾ ಲೋಖಂಡೆ ಅವರಿಗೆ ತುಸು ಅಭಿನಯಾವಕಾಶ ಲಭಿಸಿದೆ.

ಕಂಗನಾ ಪ್ರಭಾವಳಿಯಲ್ಲಿ ಉಳಿದೆಲ್ಲ ಪಾತ್ರಗಳೂ ಮಂಕಾದಂತೆ ಭಾಸವಾಗುವುದು ಸಿನಿಮಾದಲ್ಲಿ ಎದ್ದುಕಾಣುವ ಲೋಪ. ತಾಂತ್ರಿಕ ಕುಶಲತೆ ಹಾಗೂ ಚಿತ್ರಕಥಾ ಜಾಣ್ಮೆಯ ದೃಷ್ಟಿಯಿಂದ ಸಿನಿಮಾ ನೋಡಲರ್ಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT