ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ರಗ್ಸ್‌ ಸಂಬಂಧ ಚಿತ್ರರಂಗದ ಮೇಲಷ್ಟೇ ದೂಷಣೆ ಏಕೆ? ನಟ ಯಶ್‌ ಪ್ರಶ್ನೆ

ದುಶ್ಚಟಗಳಿಗೆ ದಾಸರಾಗಬೇಡಿ: ಯುವಜನರಿಗೆ ‘ರಾಕಿಂಗ್ ಸ್ಟಾರ್‌’ ಸಲಹೆ
Last Updated 9 ಸೆಪ್ಟೆಂಬರ್ 2020, 10:13 IST
ಅಕ್ಷರ ಗಾತ್ರ

‘ಡ್ರಗ್ಸ್‌ ಇಡೀ ಜಗತ್ತಿಗೆ ಮಾರಕವಾದುದು. ಈ ಜಾಲದಲ್ಲಿ ಯಾರೆಲ್ಲಾ ಇದ್ದಾರೆ ಎಂದು ಹುಡುಕಿದರೆ ಹತ್ತು ವಿಭಾಗಕ್ಕೆ ಸೇರಿದವರು ಸಿಗುತ್ತಾರೆ. ಆದರೆ, ಹೈಲೇಟ್ಸ್‌ ಆಗುವುದು ಮಾತ್ರ ಕನ್ನಡ ಚಿತ್ರರಂಗ. ಚಿತ್ರರಂಗದ ಮೇಲಷ್ಟೇ ದೂಷಣೆ ಮಾಡಬೇಡಿ’ ಎಂದು ‘ರಾಕಿಂಗ್‌ ಸ್ಟಾರ್’ ಯಶ್‌ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರಿನಲ್ಲಿ ಬುಧವಾರ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರೊಟ್ಟಿಗೆ ಚಿತ್ರರಂಗದ ಸಮಸ್ಯೆಗಳ ಬಗ್ಗೆ ಚರ್ಚಿಸಿದ ಬಳಿಕ ಸುದ್ದಿಗಾರರೊಟ್ಟಿಗೆ ಮಾತನಾಡಿದ ಅವರು, ‘ಡ್ರಗ್ಸ್‌ನಿಂದ ಯುವಕರು, ಯುವತಿಯರು, ಜನರಿಗೆ ತೊಂದರೆಯಾಗುತ್ತಿದೆ ಎಂದು ಹೇಳುವುದು ಸೂಕ್ತ. ಈ ದಂಧೆ ವಿರುದ್ಧ ನಾವೆಲ್ಲರೂ ಒಟ್ಟಾಗಿ ಹೋರಾಟ ಮಾಡೋಣ’ ಎಂದರು.

‘ಡ್ರಗ್ಸ್‌ ದಂಧೆ ಸಂಬಂಧ ಚಿತ್ರರಂಗವನ್ನಷ್ಟೇ ಏಕೆ ದೂಷಣೆ ಮಾಡುತ್ತೀರಿ. ದಾರಿಯಲ್ಲಿ ಹೋಗುತ್ತಿರುವ ಸ್ಕೂಲ್‌ ಹುಡುಗ ಡ್ರಗ್ಸ್‌ ತೆಗೆದುಕೊಂಡರೂ ಅದು ಸಮಸ್ಯೆಯಲ್ಲವೇ? ಜೀವನದಲ್ಲಿ ಬುದ್ಧಿ ಇರುವವರು ಇಂತಹ ದುಷ್ಕೃತ್ಯಕ್ಕೆ ಇಳಿಯುವುದಿಲ್ಲ’ ಎಂದು ಹೇಳಿದರು.

‘ನಾನು ಸಮಾಜದ ಪ್ರಜೆ. ನಾವೆಲ್ಲರೂ ಇಂತಹ ದುಶ್ಚಟಗಳ ವಿರುದ್ಧ ಬಾಲ್ಯದಿಂದಲೇ ಮಕ್ಕಳಲ್ಲಿ ಅರಿವು ಮೂಡಿಸಬೇಕು. ಈ ದೇಹ ಮತ್ತು ಜೀವನ ನಮ್ಮದಲ್ಲ; ನಮ್ಮಪ್ಪ, ಅಮ್ಮ ಕೊಟ್ಟಿರುವ ಭಿಕ್ಷೆ. ನನಗೂ ಮಕ್ಕಳಿದ್ದಾರೆ. ಮಕ್ಕಳು ಕೆಳಗೆ ಬಿದ್ದರೆ ಏನಪ್ಪ ಎಂದು ಯೋಚಿಸಿ ತಂದೆ–ತಾಯಿ ಸಾಕಿರುತ್ತಾರೆ. ತಮಗೆ ಇಲ್ಲದಿದ್ದರೂ ಒಳ್ಳೆಯ ಊಟ ನೀಡಿರುತ್ತಾರೆ. ಮಕ್ಕಳ ಬಗ್ಗೆ ಕನಸುಗಳನ್ನು ಕಾಣುತ್ತಿರುತ್ತಾರೆ. ಯುವಕರು ಈ ದರಿದ್ರ ಡ್ರಗ್ಸ್‌ ತೆಗೆದುಕೊಂಡು ಹಾಳಾಗಬಾರದು. ಅಪ್ಪ, ಅಮ್ಮನಿಗೆ ಗೌರವ ತರುವ ಕೆಲಸ ಮಾಡಬೇಕು. ಯುವಜನರು ಇಂತಹ ದುಶ್ಚಟಗಳಿಗೆ ದಾಸರಾಗಬಾರದು’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT