ಬುಧವಾರ, 17 ಡಿಸೆಂಬರ್ 2025
×
ADVERTISEMENT
ADVERTISEMENT

ಸಂದರ್ಶನ | 2025 - ತಾಯ್ತನದ ಆನಂದ ನೀಡಿದ ವರ್ಷ: ನಟಿ ಹರ್ಷಿಕಾ ಪೂಣಚ್ಚ

Published : 17 ಡಿಸೆಂಬರ್ 2025, 10:46 IST
Last Updated : 17 ಡಿಸೆಂಬರ್ 2025, 10:46 IST
ಫಾಲೋ ಮಾಡಿ
Comments
ಪ್ರ

2025 ನಿಮ್ಮ ಪಾಲಿಗೆ ಹೇಗಿತ್ತು?

ಈ ವರ್ಷ ನನ್ನ ಪಾಲಿಗೆ ಬಹಳ ಮುಖ್ಯವಾಗಿತ್ತು. ತಾಯ್ತನದ ಅನುಭವವನ್ನು ಈ ವರ್ಷದುದ್ದಕ್ಕೂ ಕಳೆದೆ. 2024ರ ಅಕ್ಟೋಬರ್ ನಲ್ಲಿ ಮಗು ಹುಟ್ಟಿದರೂ ಕೂಡ, ನಾಮಕರಣ ಮಾಡಿದ್ದು 2025ರ ಆರಂಭದಲ್ಲಿ. ಹಾಗಾಗಿ ಒಂದೇ ವರ್ಷದಲ್ಲಿ ಮಗುವಿನ ನಾಮಕರಣ, ಹುಟ್ಟುಹಬ್ಬ ಎಲ್ಲ ಸಂಭ್ರಮವೂ ಇತ್ತು. ಮಗುವೇ ಈ ವರ್ಷ ನನ್ನ ಪಾಲಿನ ಖುಷಿ, ವಿಶೇಷ, ಸಂಭ್ರಮ ಎಲ್ಲವೂ.

ಪ್ರ

2025ರಲ್ಲಿ ನಿಮ್ಮ ಅವಿಸ್ಮರಣೀಯ ಕ್ಷಣ ಯಾವುದು?

ಮಗಳ ಜನ್ಮದಿನ ಆಚರಿಸಿದ್ದು. ನಾಮಕರಣಕ್ಕೆ ಮುಂಚೆ ಮಗುವಿನ ಮುಖ ಪರಿಚಯ ಮಾಡಿದ್ದೆವು. ಅದಕ್ಕಾಗಿ ಫೋಟೋಶೂಟ್ ಕೂಡ ನಡೆಸಿದ್ದೆವು. ಅದೂ ಕೂಡ ಸುಂದರ ನೆನಪು. ಒಟ್ಟಾರೆ 2025 ಇಡೀ ವರ್ಷದ ನೆನಪುಗಳೇ ಚೆನ್ನಾಗಿದ್ದವು.

ಪ್ರ

ಏನಾದರೂ ಕಹಿ ನೆನಪು..?

ಇಲ್ಲ. ನಾನು ಎಲ್ಲವನ್ನೂ ಸಕಾರಾತ್ಮಕ ದೃಷ್ಟಿಕೋನದಿಂದ ನೋಡುವವಳು. ಯಾವುದನ್ನೂ ಕಹಿ ಎಂದು ಭಾವಿಸುವುದಿಲ್ಲ. ಅಥವಾ ಅಂತಹ ಘಟನೆಗಳು ನಡೆದರೂ ಅವಕ್ಕೆ ಹೆಚ್ಚು ಮಹತ್ವ ಕೊಡುವುದಿಲ್ಲ. ಅನುಕ್ಷಣ, ಅನುದಿನದ ಬದುಕನ್ನು ಆಸ್ವಾದಿಸುತ್ತ ಸಾಗುವುದು ನನ್ನ ರೀತಿ. ನಾಳೆ ಏನು ಎಂಬುದು ನಮಗೆ ಗೊತ್ತಿಲ್ಲ ಅಲ್ವಾ...

ಪ್ರ

2026ರ ಗುರಿ, ನಿರೀಕ್ಷೆ ಏನು?

ಹೊಸ ವರ್ಷದಲ್ಲಿ ಸಾಕಷ್ಟು ಒಳ್ಳೆಯ ಸಂಗತಿಗಳಿವೆ. ನಾನು ಸಿನಿಮಾ ಕ್ಷೇತ್ರಕ್ಕೆ ಮತ್ತೆ ಬರುತ್ತೇನೆ ಎನ್ನುವ ಖುಷಿ ಇದೆ. ಸದ್ಯ ತಾಯಿಯಾಗಿರುವುದರಿಂದ ನಾನು ಹಳೇ ಹರ್ಷಿಕಾ ಪೂಣಚ್ಚ ಆಗಲು ಇನ್ನೊಂದು ತಿಂಗಳು ಸಮಯ ಬೇಕು. ನಾಯಕಿ ಪ್ರಧಾನವಾದ ಒಂದು ಸಿನಿಮಾ ಒಪ್ಪಿಕೊಂಡಿದ್ದೇನೆ. ಕಥೆ ಕೇಳಿಸಿಕೊಂಡಿದ್ದೇನೆ. ತುಂಬ ಇಷ್ಟ ಆಗಿದೆ. ನನಗೆ ಹೊಂದುವಂತಹ ಪಾತ್ರವನ್ನು ನಿರ್ದೇಶಕರು ರೂಪಿಸಿದ್ದಾರೆ. ಹಾಗಾಗಿ ಹೊಸ ವರ್ಷ ಸಾಕಷ್ಟು ಸಿನಿಮಾಗಳು ಬರಲಿವೆ. ಭುವನ್ ಅವರ ಮೂರು ಸಿನಿಮಾಗಳು ಸೆಟ್ಟೇರಲಿವೆ.

ಪ್ರ

ಹೊಸ ವರ್ಷದಲ್ಲಿ ನಿಮ್ಮ ಬದುಕಿನಲ್ಲಿ ಏನು ಬದಲಾವಣೆ ಮಾಡಬೇಕು ಅಂದುಕೊಂಡಿದ್ದೀರಿ?

ನನ್ನಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಅಂತ ನನಗೇನೂ ಅನ್ನಿಸುತ್ತಿಲ್ಲ. ಯಾಕೆಂದರೆ, ಮೊದಲೇ ಹೇಳಿದಂತೆ ನಾನು ಸಕಾರಾತ್ಮಕವಾಗಿಯೇ ಚಿಂತಿಸುವವಳು. ಹಾಗಾಗಿ ನೆಗೆಟಿವ್ ಆಗಿರುವ ಆಲೋಚನೆಗಳಿಗೆ ಬದುಕಿನಲ್ಲಿ ಅವಕಾಶ ಕೊಡುವುದಿಲ್ಲ. ಬದುಕು ಬಂದಂತೆ ಸ್ವೀಕರಿಸುತ್ತೇನೆ. ಸಣ್ಣ ವಯಸ್ಸಿನಲ್ಲಿಯೇ ಸಿನಿಮಾ ರಂಗಕ್ಕೆ ಬಂದಿದ್ದೇನೆ. ಹಾಗಾಗಿ ಬಹಳಷ್ಟು ಅನುಭವದ ಪಾಠ ಸಿಕ್ಕಿದೆ. ಅವು ನನ್ನನ್ನು ಹೆಚ್ಚು ಹೆಚ್ಚು ಪ್ರಬುದ್ಧಳನ್ನಾಗಿಸಿವೆ. ಅದರಿಂದಲೇ ಪಕ್ವಗೊಂಡಿದ್ದೇನೆ. ಹಾಗಾಗಿ ನನಗೆ ಅಂತಹ ಬದಲಾಯಿಸಬೇಕಾದ ವಿಷಯ ಏನಾದರೂ ಇದೆ ಎಂದು ಸದ್ಯ ಅನ್ನಿಸುತ್ತಿಲ್ಲ. ಆಗುವುದೆಲ್ಲ ಒಳ್ಳೆಯದಕ್ಕೆ ಎಂದು ನಂಬಿದ್ದೇನೆ. ಒಂದು ವಿಷಯ ಎಂದರೆ, ನಾನು ಸದ್ಯ ನನ್ನ ಮಗುವಿಗೆ ಹೆಚ್ಚಿನ ಸಮಯ ಕೊಡುತ್ತೇನೆ. ಹಾಗಾಗಿ ನಾನು ಒಪ್ಪಿಕೊಳ್ಳುವ ಕಾರ್ಯಕ್ರಮಗಳೂ ಮನೆಗೆ ಸಮೀಪದವುಗಳೇ ಆಗಿರುತ್ತದೆ. ಮಗುವಿನ ಆರೈಕೆ ಮುಖ್ಯ.‌ ಸಿನಿಮಾದಲ್ಲಿ ತೊಡಗಿಸಿಕೊಳ್ಳುವಾಗಲೂ ಆ ಎಚ್ಚರ ಇಟ್ಟುಕೊಳ್ಳುತ್ತೇನೆ. ಮಗುವಿಗೆ ಸಮಯ ಕೊಡಲಿಲ್ಲ ಎನ್ನುವ ತಪ್ಪಿತಸ್ಥ ಭಾವನೆ ಮೂಡುವಂತೆ ಆಗದಿರಲಿ. ಎಲ್ಲವನ್ನೂ ಸಮತೋಲಿತ ರೀತಿಯಲ್ಲಿ ಕೊಂಡುಹೋಗುವ ಶಕ್ತಿ ಸಿಗಲಿ ಎಂದು ದೇವರಲ್ಲಿ ಬೇಡಿಕೊಳ್ಳುವೆ.

ಪ್ರ

ನಿಮ್ಮ ಕಡೆಯಿಂದ ಯುವಜನತೆಗೆ ಹೊಸ ವರ್ಷದ ಸಂದೇಶ...?

ನೀವು ಏನಾದರೊಂದು ಸಾಧಿಸಬೇಕು ಎಂದರೆ ಅದಕ್ಕೆ ಸಂಪೂರ್ಣ ಶ್ರಮ ಹಾಕಿ. ನೂರಕ್ಕೆ ನೂರರಷ್ಟು ಶ್ರಮವಹಿಸಿ ಕೆಲಸ ಮಾಡಿ. ಹಾಗಿದ್ದೂ ನಿಮಗೆ ಅದು ದಕ್ಕಲಿಲ್ಲ ಎಂದರೆ ಅದು ನಿಮ್ಮದಲ್ಲ ಎಂದರ್ಥ. ಪರಿಶ್ರಮವೇ ಇಲ್ಲದೆ ಫಲ ಬಯಸಬೇಡಿ. ಪ್ರಯತ್ನ ಪಟ್ಟ ಮೇಲೂ ಸಿಕ್ಕಿಲ್ಲ ಎಂದರೆ ಅದು ದೇವರೇ ನಿಮ್ಮಿಂದ, ನಿಮ್ಮ ಒಳಿತಿಗಾಗಿಯೇ ಕೆಲವನ್ನು ದೂರವಿಡುತ್ತಿದ್ದಾನೆ ಎಂದು ತಿಳಿದುಕೊಳ್ಳಿ. ಎಲ್ಲವೂ ಎಲ್ಲರಿಗಲ್ಲ. ಕೆಲವೊಮ್ಮೆ ನಿಮ್ಮ ಆಯ್ಕೆ ತಪ್ಪಿರಬಹುದು. ನಿಮ್ಮ ಯಶಸ್ಸು ಬೇರೆ ಯಾವುದೋ ಕ್ಷೇತ್ರದಲ್ಲಿ ಇರಬಹುದು. ನಿಮಗೆಂದೇ ಬರೆದಿಟ್ಟಿರುವುದು ಖಂಡಿತ ನಿಮ್ಮನ್ನು ತಲುಪುತ್ತದೆ. ಅದನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ. ನಿಮ್ಮದಲ್ಲದೇ ಇರುವುದನ್ನು ಪಡೆಯಲು ಎಷ್ಟು ಹೆಣಗಾಡಿದರೂ ಅದು ನಿಮ್ಮದಾಗುವುದಿಲ್ಲ. ಈ ಸರಳ ಸತ್ಯ ನೆನಪಿಟ್ಟುಕೊಳ್ಳಿ. ಜೊತೆಗೆ ಈಗೀಗ ಬಹಳಷ್ಟು ಜನ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಡಿಪ್ರೆಶನ್ ಎಂದು ಹೇಳುತ್ತಾರೆ. ವಾಸ್ತವದಲ್ಲಿ ಬಹಳಷ್ಟು ಜನರಿಗೆ ಸ್ವ- ಸಾಮರ್ಥ್ಯದ ಬಗ್ಗೆ ಅನುಮಾನವಿದೆ. ನನ್ನಿಂದ ಇದು ಸಾಧ್ಯವೇ? ನಾನು ಅಸಮರ್ಥನೇ/ಳೇ ಎಂಬ ಚಿಂತೆ. ಯಾವುದೇ ಕೆಲಸಕ್ಕೂ ನಿಮ್ಮ ಪೂರ್ಣ ಪ್ರಯತ್ನ ಹಾಕಿ. ನಿಮಗೆ ಸಾಧ್ಯವಾಗಿಲ್ಲ ಎಂದರೆ ಅದು ನಿಮ್ಮ ಕ್ಷೇತ್ರ ಅಲ್ಲ ಎಂದು ಅರ್ಥವೇ ಹೊರತು ನೀವು ಸಮರ್ಥರಲ್ಲ ಎಂದಲ್ಲ. ಎಲ್ಲಿ ಸಲ್ಲಬೇಕೋ, ಅಲ್ಲಿ ತಾನು ಸಲ್ಲುತ್ತೇನೆ ಎಂದು ಗಟ್ಟಿಯಾಗಿರಿ. ಸಕಾರಾತ್ಮಕ ಚಿಂತನೆಯಿಂದಲೇ ಸುಂದರವಾಗಿ ಬದುಕುವ ಗುರಿ ಇಟ್ಟುಕೊಳ್ಳಿ. ಅತಿಯಾದ ವ್ಯವಸ್ಥಿತ ಬದುಕೂ ಒಳ್ಳೆಯದಲ್ಲ, ಅತಿಯಾದ ಅಸ್ತವ್ಯಸ್ತ ಬದುಕೂ ಒಳ್ಳೆಯದಲ್ಲ. ಅದರಲ್ಲಿಯೂ ಸಮತೋಲನ ಇರಬೇಕು. ಬದುಕು ಬಂದಂತೆ ಸ್ವೀಕರಿಸಿ. ಅಷ್ಟೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT