ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೇಸುದಾಸ್ ಮನವೊಲಿಸಿದ್ದ ಮೋಹನ್‌ಲಾಲ್‌

Last Updated 3 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ಖ್ಯಾತ ಗಾಯಕ ಕೆ.ಜೆ.ಜೇಸುದಾಸ್‌ ಅವರು ತಮ್ಮ ಸಂಗೀತ ಯಾನದಲ್ಲಿ 80 ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ಧ್ವನಿಯಾಗಿದ್ದಾರೆ. ಅವರ ವೃತ್ತಿಜೀವನದ ಒಂದು ಹಂತದಲ್ಲಿ ಮಲಯಾಳ ಸಂಗೀತ ನಿರ್ದೇಶಕರಿಗೆ ಜೇಸುದಾಸ್‌ ಅವರನ್ನು ಬಿಟ್ಟರೆ ಬೇರೆ ಆಯ್ಕೆಗಳೇ ಇಲ್ಲ ಎನ್ನುವಂತಾಗಿತ್ತು. ಇದಕ್ಕೆಲ್ಲ ಕಾರಣ ಅವರ ಧ್ವನಿ ಮತ್ತು ಸ್ಥಾಯಿಪಲ್ಲಟಗಳನ್ನು ಮಾಡುವ ಅದ್ಭುತ ಚಾಕಚಕ್ಯತೆ.

ಹಿನ್ನಲೆ ಗಾಯನದಲ್ಲಿ ಉತ್ತುಂಗದಲ್ಲಿದ್ದ ಜೇಸುದಾಸ್‌ ವಿರುದ್ಧ ಸಾಕಷ್ಟು ವಿಮರ್ಶಕರು ಕೆಂಡಕಾರಿದ್ದರು. ಅನೇಕ ಹೊಸ ಹಾಡುಗಾರರಿಗೆ ಜೇಸುದಾಸ್‌ ಅಡ್ಡಿಯಾಗಿದ್ದಾರೆ ಎಂದೆಲ್ಲ ಮಾತುಗಳು ಕೇಳಿಬಂದವು. ಇದನ್ನು ಕೇಳಿದಾಕ್ಷಣ ಜೇಸುದಾಸ್‌ ಇನ್ನು ಮುಂದೆ ಸಿನಿಮಾಗಳಿಗೆ ಹಾಡಲೇ ಬಾರದು ಎಂದು ನಿರ್ಧರಿಸಿಬಿಟ್ಟರು.

ಮನಸ್ಸು ಬದಲಿಸಿದ ಮೋಹನ್‌ಲಾಲ್‌:

ಸಂಗೀತ ಕಚೇರಿ ಮತ್ತು ತರಂಗಿಣಿ ಸ್ಟುಡಿಯೊಗೆ ಮಾತ್ರ ಹಾಡುತ್ತೇನೆ ಎಂದು ದೃಢ ನಿರ್ಧಾರ ಮಾಡಿಕೊಂಡಿದ್ದ ಜೇಸ್‌ದಾಸ್‌ ಅವರ ಮನಸ್ಸನ್ನು ಬದಲಿಸಿದ್ದು ಮಲಯಾಳದ ಪ್ರಖ್ಯಾತ ನಟ ಮೋಹನ್‌ ಲಾಲ್‌!

ಆ ಸಮಯದಲ್ಲಿ ಮೋಹನ್‌ ಲಾಲ್‌ ಅವರು ತಮ್ಮದೇ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣದಲ್ಲಿ ತೊಡಗಿಕೊಂಡಿದ್ದರು. ಮ್ಯೂಸಿಕಲ್‌ ಹಿಟ್‌ ಎಂದೇ ಕರೆಸಿಕೊಂಡ ‘ಭರತಂ’ ಸಿನಿಮಾವನ್ನು ಮೋಹನ್‌ ಲಾಲ್‌ ನಿರ್ಮಿಸುತ್ತಿದ್ದರು. ಅದಕ್ಕೆ ರವೀಂದ್ರ ಅವರು ಸಂಗೀತ ಸಂಯೋಜನೆ ಮಾಡುತ್ತಿದ್ದರು. ಅರೆ ಶಾಸ್ತ್ರೀಯ ಸಂಗೀತವೊಂದನ್ನು ಸಂಯೋಜಿಸಿದ್ದ ಜೇಸುದಾಸ್‌ ಅವರಿಂದ ಹಾಡಿಸಲು ನಿರ್ಧರಿಸಿದ್ದರು.ತಮ್ಮ ಸಿನಿಮಾಗಾಗಿ ಒಂದು ಹಾಡು ಹಾಡಬೇಕೆಂದು ಕೇಳಲು ಜೇಸುದಾಸ್‌ ಅವರ ಬಳಿ ಹೋದಾಗ ಅವರಿಗೆ ಶಾಕ್‌ವೊಂದು ಕಾದಿತ್ತು.

ತಾನು ಸಿನಿಮಾಗಳಿಗೆ ಹಾಡಬಾರದು ಎಂದು ನಿರ್ಧರಿಸಿದ್ದೇನೆ, ಕ್ಷಮಿಸಿ ಎಂದು ಒಂದೇ ಮಾತಿನಲ್ಲಿ ಅವರ ಮನವಿಯನ್ನು ಜೇಸುದಾಸ್‌ ತಿರಸ್ಕರಿಸಿದ್ದರು. ಜೇಸುದಾಸ್‌ ಅವರು ಹಾಡುವುದಿಲ್ಲ ಎಂದರೇ ತಾನು ಸಿನಿಮಾ ಸಂಗೀತ ಸಂಯೋಜನೆ ಮಾಡುವುದನ್ನೇ ಬಿಟ್ಟುಬಿಡುವುದಾಗಿ ರವೀಂದ್ರ ಅವರು ಹೇಳಿದರು.ಮೋಹನ್‌ ಲಾಲ್‌ ಮತ್ತು ರವೀಂದ್ರ ಅವರು ಬಹಳ ಒತ್ತಾಯದ ಮೇರೆಗೆ ಜೇಸುದಾಸ್‌ ಕೊನೆಗೆ ಹಾಡಲು ಒಪ್ಪಿದರು.

ಅವರ ಮಾಂತ್ರಿಕ ಧ್ವನಿ ಸಿನಿಮಾವನ್ನು ಮತ್ತೊಂದು ಎತ್ತರಕ್ಕೆ ಕರೆದೊಯ್ಯಿತು. ನಂತರ ಅದೇ ಹಾಡಿಗೆ ಜೇಸುದಾಸ್‌ ಅವರಿಗೆ ಉತ್ತಮ ಗಾಯಕ ರಾಷ್ಟ್ರೀಯ ಪ್ರಶಸ್ತಿಯೂ ಲಭಿಸಿತು.ಕಥೆ–ಚಿತ್ರಕಥೆ ಎ.ಕೆ.ಲೋಹಿತಾದಾಸ್ ಮತ್ತು ಸಿಬಿ ಮಲಯಿಲ್‌ ನಿರ್ದೇಶನದಲ್ಲಿ 1991ರಲ್ಲಿ ಮೂಡಿಬಂದ ಸಂಗೀತದ ಕಥಾಹಂದರದ ಸಿನಿಮಾ ಭರತಂ. ಮೋಹನ್‌ಲಾಲ್‌ , ಊರ್ವಶಿ, ನೆಡುಮುಡಿ ವೇನು, ಲಕ್ಷ್ಮಿ ಮತ್ತು ಮುರಳಿ ತಾರಾಗಣವಿದೆ. ಈ ಸಿನಿಮಾ ಮೂರು ರಾಷ್ಟ್ರಪ್ರಶಸ್ತಿಗಳನ್ನು ದೋಚಿಕೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT