ಗುರುವಾರ , ಏಪ್ರಿಲ್ 9, 2020
19 °C
ಭಟ್ಟರು ಕೊಟ್ಟ ಭರವಸೆ

ಗಾಳಿಪಟ-2 ಸಿಕ್ಕಾಪಟ್ಟೆ ಮನರಂಜನೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಿರ್ದೇಶಕ ಯೋಗರಾಜ ಭಟ್ ಅವರು 2008ರಲ್ಲಿ ಕೊಟ್ಟ ಹಿಟ್ ಚಿತ್ರ ‘ಗಾಳಿಪಟ’. ಗಣೇಶ್, ದಿಗಂತ್, ರಾಜೇಶ್ ಕೃಷ್ಣನ್, ಅನಂತ ನಾಗ್ ಅವರ ತಾರಾಗಣ ಇದ್ದ ಈ ಚಿತ್ರ ಸಿನಿಮಾ ಪ್ರೇಮಿಗಳ ‘ಮನದ ಮುಗಿಲಲ್ಲಿ ಮೊಹಬ್ಬತ್’ ಸೃಷ್ಟಿಸಿತ್ತು. ಈಗ ಭಟ್ಟರು ಎರಡನೆಯ ಬಾರಿಗೆ ಗಾಳಿಪಟ ಹಾರಿಸಲು ದಾರ ಹಿಡಿದು ನಿಂತಿದ್ದಾರೆ.

‘ಗಾಳಿಪಟ 2’ ಚಿತ್ರದ ಮೊದಲಾರ್ಧದ ಚಿತ್ರೀಕರಣ ಪೂರ್ಣಗೊಂಡಿದೆ. ದ್ವಿತೀಯಾರ್ಧದ ಚಿತ್ರೀಕರಣ ಶುರುವಾಗಬೇಕಿದೆ. ಅದು ನಡೆಯುವುದು ಪೋಲೆಂಡಿನಲ್ಲಿ. ಅಲ್ಲಿಗೆ ಹೋಗಿ ಚಿತ್ರೀಕರಣ ನಡೆಸಲು ಸೂಕ್ತ ಸಮಯಕ್ಕೆ ತಂಡ ಕಾದು ಕುಳಿತಿದೆ. ಈ ಚಿತ್ರಕ್ಕೆ ರಮೇಶ್ ರೆಡ್ಡಿ ಅವರು ಬಂಡವಾಳ ಹೂಡಿಕೆ ಮಾಡಿದ್ದಾರೆ.

‘ಸಿನಿಮಾ ಪುರವಣಿ’ ಜೊತೆ ಮಾತಿಗೆ ಸಿಕ್ಕಿದ್ದ ಭಟ್ಟರು, ‘ಮನರಂಜನೆ ಮತ್ತು ಭಾವುಕತೆಯ ಉತ್ತುಂಗ ಇದರಲ್ಲಿದೆ’ ಎಂದರು.

‘ಗಾಳಿಪಟ ಚಿತ್ರ ಮಾಡಿ ಹನ್ನೆರಡು ವರ್ಷಗಳ ನಂತರ ಎರಡನೆಯ ಭಾಗವನ್ನು ಮಾಡುವ ಆಲೋಚನೆ ಬಂದಿದ್ದು ಹೇಗೆ’ ಎನ್ನುವ ಪ್ರಶ್ನೆಗೆ ಭಟ್ಟರು ನೀಡಿದ ಉತ್ತರ ಇದು: ‘ಇದರ ಆಲೋಚನೆ ಮೊದಲೇ ಇತ್ತು. ಹಾಗೆ ನೋಡಿದರೆ, ಎರಡನೆಯ ಭಾಗವನ್ನು ಮಾಡುವುದು ಆರೆಂಟು ವರ್ಷಗಳ ಹಿಂದಿನ ಆಲೋಚನೆ. ಸ್ನೇಹಿತರ ಕಥೆಯನ್ನು ಇಟ್ಟುಕೊಂಡು ಎಷ್ಟು ಸಿನಿಮಾ ಬೇಕಿದ್ದರೂ ಮಾಡಬಹುದು. ಸ್ನೇಹ, ಜೀವನ, ಅದರಲ್ಲಿ ಏನೇನು ಆಗುತ್ತದೆ, ಸ್ನೇಹದ ಅತಿರೇಕಗಳು... ಇವೆಲ್ಲ ಮೊದಲ ಭಾಗದಲ್ಲಿ ಇದ್ದವು. ಹಾಗಾಗಿ, ಈ ಚಿತ್ರದ ಎರಡನೆಯ ಭಾಗವನ್ನು ಮಾಡುವುದು ಹೆಚ್ಚು ಸೂಕ್ತ ಎಂದು ನಾನು, ಗಣೇಶ್ ಮತ್ತು ಇತರ ಕೆಲವರು ಮಾತಾಡಿಕೊಳ್ಳುತ್ತಿದ್ದೆವು’.

‘ಮುಂಗಾರು ಮಳೆ’ ಚಿತ್ರದ ಮುಂದುವರಿದ ಕಥೆಯನ್ನು ಸಿನಿಮಾ ರೂಪದಲ್ಲಿ ತರುವ ಪ್ರಸ್ತಾವನೆ ಕೂಡ ಭಟ್ಟರ ಬಳಗದಲ್ಲಿ ಇತ್ತಂತೆ. ‘ಆದರೆ, ಆ ಸಿನಿಮಾದ ಎರಡನೆಯ ಭಾಗ ಮಾಡುವುದು ಸೂಕ್ತವಲ್ಲ. ಗಾಳಿಪಟ ಚಿತ್ರವನ್ನು ಎಷ್ಟು ಭಾಗ ಬೇಕಿದ್ದರೂ ಸಿನಿಮಾ ಮಾಡಬಹುದು ಎಂಬ ತೀರ್ಮಾನ ನಮ್ಮ ನಡುವೆ ಆಯಿತು’ ಎಂದರು.

ಸಿನಿಮಾ ಎರಡನೆಯ ಭಾಗ ಎಂದ ತಕ್ಷಣ ಮೂಡುವ ಪ್ರಶ್ನೆ, ‘ಮೊದಲ ಸಿನಿಮಾ ನೋಡಿಯೇ ಎರಡನೆಯ ಸಿನಿಮಾ ನೋಡಬೇಕೇ’ ಎನ್ನುವುದು. ಇದನ್ನು ಗಾಳಿಪಟದ ಕಪ್ತಾನನ ಎದುರಿಟ್ಟಾಗ: ‘ಮೊದಲ ಸಿನಿಮಾ ನೋಡಿಯೇ ಗಾಳಿಪಟದ ಹೊಸ ಆವೃತ್ತಿಯನ್ನು ನೋಡಬೇಕು ಎಂಬುದೇನೂ ಇಲ್ಲ. ಈ ಚಿತ್ರವನ್ನೇ ನೇರವಾಗಿ ನೋಡುವವರಿಗೆ ಕಥೆ ಅರ್ಥವಾಗುತ್ತದೆ. ಮೊದಲಿನ ಸಿನಿಮಾಕ್ಕೆ ಸಂಬಂಧಿಸಿದ ಕೊಂಡಿಗಳು ಎರಡನೆಯ ಭಾಗದಲ್ಲಿ ಸಿಗುತ್ತವೆ. ಹಾಗಾಗಿ, ಮೊದಲ ಸಿನಿಮಾ ನೋಡದವರಿಗೂ ಇದು ಅರ್ಥವಾಗುತ್ತೆ’ ಎಂದು ಉತ್ತರಿಸಿದರು.

ಎರಡನೆಯ ಭಾಗದಲ್ಲಿ ಗಣೇಶ್, ದಿಗಂತ್ ಹಾಗೂ ಅನಂತ ನಾಗ್ ಅವರು ಅಭಿನಯಿಸುತ್ತಿದ್ದಾರೆ. ಜೊತೆಯಲ್ಲಿ ಪವನ್ ಕುಮಾರ್ ಅವರೂ ಇದ್ದಾರೆ. ರಾಜೇಶ್ ಕೃಷ್ಣನ್ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ಗಾಳಿಪಟದ ಪಾರ್ಟ್‌ 3 ಸಿನಿಮಾ ಮಾಡಿದಾಗ ರಾಜೇಶ್ ಅವರು ಅದರಲ್ಲಿ ಬರಬಹುದು’ ಎಂದು ಚೂಟಿ ಉತ್ತರ ನೀಡಿದ ಭಟ್ಟರು, ‘ಹೊಸ ಸಿನಿಮಾ ಮಾಡಬೇಕು ಎಂಬ ಬಯಕೆಯ ಕಿಡಿಸಿ ಹೊತ್ತಿಸಿದ್ದು ಗೆಳೆತನ’ ಎಂದರು.

‘ಗೆಳೆತನ ಬಹಳ ದೊಡ್ಡದು. ಅದು ರಕ್ತಸಂಬಂಧಕ್ಕಿಂತಲೂ ಹೆಚ್ಚು ಗಾಢವಾಗುವುದು ಇದೆ. ಗೆಳೆತನ ಎನ್ನುವ ಸಂಬಂಧ ಹೆಚ್ಚು ಮುಕ್ತವಾಗಿರುತ್ತದೆ. ತಮಾಷೆ, ಭಾವನೆಗಳು ಅದರಲ್ಲಿ ಇರುತ್ತವೆ. ಗೆಳೆತನ ಎಂಬುದು ಅಕ್ಷಯಪಾತ್ರೆ’ ಎಂದರು. ‘ಈ ಚಿತ್ರದಲ್ಲಿ ಅನಂತ ನಾಗ್ ಅವರ ಪಾತ್ರ ಬಹಳ ದೊಡ್ಡದು. ಅವರ ಪಾತ್ರವನ್ನು ಸಿನಿಮಾ ಪರದೆಯ ಮೇಲೆ ನೋಡಲು ಒಬ್ಬ ಕನ್ನಡ ಸಿನಿಮಾ ಪ್ರೇಕ್ಷಕನಾಗಿ ನಾನೂ ಕಾಯುತ್ತ ಇದ್ದೇನೆ’ ಎಂದು ಹೇಳಿದರು.

ಭಟ್ಟರ ಸಿನಿಮಾಗಳ ಸಂಭಾಷಣೆ, ಹಾವಭಾವಗಳಲ್ಲಿ ಒಂದು ಪಂಚ್ ಇರುತ್ತದೆ. ಅದನ್ನು ‘ಗಾಳಿಪಟ 2’ರಲ್ಲೂ ನಿರೀಕ್ಷಿಸಬಹುದೇ ಎನ್ನುವ ಪ್ರಶ್ನೆ ಎದುರಾಗಬಹುದು ಎಂಬುದನ್ನು ಮೊದಲೇ ಊಹಿಸಿದಂತಿದ್ದ ಅವರು, ‘ಅದೇ ರೀತಿಯ ಸಂಭಾಷಣೆ, ಹಾವಭಾವ ಇದೆ ಎಂಬುದಕ್ಕಿಂತ ಬೇರೆ ತರಹದ್ದು ಸಿಕ್ಕಾಪಟ್ಟೆ ಇದೆ ಎನ್ನಬಹುದು. ಇಂದಿನ ಕಾಲದ ಮನರಂಜನೆ ಈ ಚಿತ್ರದಲ್ಲಿ ಇದೆ. ಆರರಿಂದ ಏಳು ವರ್ಷಗಳಿಗೆ ಒಮ್ಮೆ ಮನರಂಜನೆಯನ್ನು ಕೊಡುವ ವಿಧಾನದಲ್ಲಿ ಬದಲಾವಣೆ ಆಗುತ್ತದೆ’ ಎಂಬ ವಿವರಣೆ ನೀಡಿದರು.

ಮಾತು ಮುಗಿಸುವ ಮುನ್ನ ಕೇಳಿದ ಪ್ರಶ್ನೆ, ‘ಹತ್ತು ವರ್ಷಗಳ ಹಿಂದಿನ ಭಟ್ಟರು, ಈಗಿನ ಭಟ್ಟರು ಬೇರೆ ಬೇರೆ ಆಗಿರಬಹುದು. ಅದರ ಪ್ರಭಾವ ಸಿನಿಮಾದಲ್ಲಿ ಕಾಣಿಸುವುದೇ’ ಎಂದಾಗಿತ್ತು.

‘ಹತ್ತು ವರ್ಷಗಳಲ್ಲಿ ಕಸವೂ ಗೊಬ್ಬರ ಆಗುತ್ತದೆ. ಮನುಷ್ಯ ಬದಲಾಗನೇ? ಹಿಂದೆ ಹುಡುಗು ಬುದ್ಧಿ ಜಾಸ್ತಿ ಇತ್ತು ನನ್ನಲ್ಲಿ. ಅದು ಉಳಿದುಕೊಂಡಿದೆ. ನಾನು ತುಸು ಗಂಭೀರ ಆಗಬೇಕು ಎಂದು ಎಲ್ಲರೂ ಹೇಳುತ್ತಿದ್ದಾರೆ. ಆದರೆ ಅದು ಸಾಧ್ಯವಾಗುವಂತೆ ಕಾಣುತ್ತಿಲ್ಲ’ ಎಂದು ನಕ್ಕರು.

ಇದನ್ನೂ ಓದಿ: ಯೋಗರಾಜ್‌ ಭಟ್ ಜೊತೆಗೆ ಸುದೀರ್ಘ ಪಟ್ಟಾಂಗ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು