ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದಿಲ್ ಅಂತರಂಗ

ಪಂಚರಂಗಿ
Last Updated 28 ಜುಲೈ 2013, 19:59 IST
ಅಕ್ಷರ ಗಾತ್ರ

ನಟನಾಗಬೇಕೆಂದರೆ ಏನೇನು ಗುಣಗಳಿರಬೇಕು ಎಂಬುದರ ಬಗ್ಗೆ ಸ್ಪಷ್ಟ ಪರಿಕಲ್ಪನೆ ಹೊಂದಿರುವ ಕಲಾವಿದ ಆದಿಲ್ ಹುಸೇನ್. ರಂಗಭೂಮಿ, ಸಿನಿಮಾ ಮತ್ತು ಕಾಮಿಡಿಯನ್ ಆಗಿ ಅವರು ದೇಶ ವಿದೇಶದಲ್ಲಿ ತಮ್ಮ ಪ್ರತಿಭೆ ತೋರ್ಪಡಿಸಿದ್ದಾರೆ. ಈಚೆಗೆ ಬೆಂಗಳೂರಿಗೆ ಆಗಮಿಸಿದ್ದ ನಟ ಆದಿಲ್ ಅವರು ಸಿನಿಮಾ, ರಂಗಭೂಮಿ ಮತ್ತು ಮತ್ತಿತರ ವಿಚಾರಗಳ ಬಗ್ಗೆ ತಮ್ಮ ಒಳನೋಟಗಳನ್ನು ಹಂಚಿಕೊಂಡರು.

`ಲೈಫ್ ಆಫ್ ಪೈ', `ದಿ ರಿಲಕ್ಟಂಟ್ ಫಂಡಮೆಂಟಲಿಸ್ಟ್' ಚಿತ್ರಗಳು ಆದಿಲ್ ಅವರಿಗೆ ಅಂತರರಾಷ್ಟ್ರೀಯ ಕಲಾವಿದನ ಪಟ್ಟ ತಂದುಕೊಟ್ಟವು. ಅದೇ ರೀತಿ, ಬಾಲಿವುಡ್‌ನ ಜನಪ್ರಿಯ ಚಿತ್ರ `ಇಂಗ್ಲಿಷ್ ವಿಂಗ್ಲಿಷ್', ಈಚೆಗೆ ತೆರೆಕಂಡ `ಲೂಟೆರಾ' ಚಿತ್ರಗಳು ಅವರನ್ನು ಜನಪ್ರಿಯ ನಟನಾಗಿಸಿದವು.

ಹೀಗೆ ದೇಶ ವಿದೇಶದಲ್ಲಿನ ಚಿತ್ರಗಳಲ್ಲಿ ಜನಪ್ರಿಯತೆಯ ಜಾಡಿನಲ್ಲಿ ಸಾಗುತ್ತಿರುವ ಆದಿಲ್ ಹಾಲಿವುಡ್ ಹಾಗೂ ಬಾಲಿವುಡ್ ಚಿತ್ರಗಳ ನಡುವೆ ಇವರು ವ್ಯತ್ಯಾಸವನ್ನು ಸ್ಪಷ್ಟವಾಗಿ ಗುರ್ತಿಸುತ್ತಾರೆ. `ಏನೇ ಮಾಡಿದರೂ ನಡೆಯುತ್ತದೆ (ಸಬ್ ಕುಚ್ ಚಲ್ತಾ ಹೈ) ಎನ್ನುವ ಮನೋಭಾವ ಅಂತರರಾಷ್ಟ್ರೀಯ ಚಿತ್ರಜಗತ್ತಿನಲ್ಲಿ ಇಲ್ಲ. ಒಂದು ಚಿತ್ರವನ್ನು ಕೈಗೆತ್ತಿಕೊಂಡರೆ ಅದರಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರೂ ಗುಣಮಟ್ಟದ ಬಗ್ಗೆ ಆಸ್ಥೆ ವಹಿಸುತ್ತಾರೆ.  ಶ್ರೇಷ್ಠತೆಗಾಗಿ ಶ್ರಮಿಸುತ್ತಾರೆ. ಚಿತ್ರನಿರ್ಮಾಣದ ಪ್ರತಿ ವಿಭಾಗದಲ್ಲೂ ಕರಾರುವಾಕ್ಕಾಗಿರುತ್ತಾರೆ' ಎಂದು ಹಾಲಿವುಡ್ ಸಿನಿಮಾಗಳ ತಯಾರಿಕೆಯನ್ನು ಮೆಚ್ಚಿಕೊಳ್ಳುತ್ತಾರೆ ಆದಿಲ್.

ರಂಗಭೂಮಿ, ಸಿನಿಮಾ ಮತ್ತು ಸ್ಟ್ಯಾಂಡ್ ಅಪ್ ಕಾಮಿಡಿ ಎಲ್ಲದರಲ್ಲೂ ಕೈಯಾಡಿಸಿರುವ ಆದಿಲ್‌ಗೆ ಪ್ರತಿ ರಂಗದಲ್ಲೂ ಭಿನ್ನ ಅನುಭವ ದಕ್ಕಿದೆಯಂತೆ. `ಈ ಮೂರು ಕ್ಷೇತ್ರಗಳಿಗೂ ಬೇರೆ ಬೇರೆ ಗುಣವಿದೆ. ಸಿನಿಮಾಗಿಂತಲೂ ರಂಗಭೂಮಿ ಹೆಚ್ಚು ಪ್ರಬಲವಾದುದು. ಸಾವಿರ ವರ್ಷಗಳ ಇತಿಹಾಸವಿರುವ ರಂಗಭೂಮಿಯಲ್ಲಿ ಒಬ್ಬ ನಟನಾಗಿ ಹೊರಹೊಮ್ಮಲು ಅದ್ಭುತ ಅವಕಾಶವಿದೆ. ಚಿತ್ರರಂಗ ಈಗಷ್ಟೇ ನೂರರ ಹೊಸ್ತಿಲಲ್ಲಿದೆ. ರಂಗಭೂಮಿಗೆ ಹೋಲಿಸಿದರೆ ಚಿತ್ರಜಗತ್ತು ಇನ್ನೂ ಶೈಶವಾಸ್ಥೆಯಲ್ಲಿದೆ' ಎಂದು ಅವರು ವ್ಯಾಖ್ಯಾನಿಸುತ್ತಾರೆ.

ಪ್ರಸ್ತುತ ರಂಗಭೂಮಿಯ ಪ್ರಭಾವದ ಕುರಿತು ಅವರು ಹೇಳಿದ್ದಿಷ್ಟು: `ಜನರು ಮನರಂಜನೆ ಪಡೆದುಕೊಳ್ಳಲು ಇವತ್ತು ಆಯ್ಕೆಗಳು ನೂರಾರು. ಆದರೂ ರಂಗಭೂಮಿ ಇಂದಿಗೂ ತನ್ನ ಪ್ರಭಾವವನ್ನು ಹಿಂದಿನಂತೆಯೇ ಉಳಿಸಿಕೊಂಡಿದೆ. ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಜನರ ಭಾವನೆಗಳನ್ನು ಕೆರಳಿಸುವಂಥ ಸಿನಿಮಾಗಳಿಗಿಂತ ರಂಗಭೂಮಿ ಪರಿಣಾಮಕಾರಿಯಾಗಿ ಪ್ರೇಕ್ಷಕರನ್ನು ರಂಜಿಸುತ್ತಿದೆ'.

`ಒಥೆಲೋ' ನಾಟಕಕ್ಕೆ ಸತತವಾಗಿ ಹತ್ತು ವರ್ಷ ಬಣ್ಣ ಹಚ್ಚಿದ ಅನುಭವದ ಬಗ್ಗೆ ಆದಿಲ್ ಹೇಳಿಕೊಳ್ಳುವುದು ಹೀಗೆ: `ಈ ನಾಟಕಕ್ಕಾಗಿ ಬಣ್ಣ ಹಚ್ಚಿಕೊಂಡು ಪ್ರತಿ ಸಲ ರಂಗದ ಮೇಲೆ ನಿಂತಾಗಲೂ ವಿಭಿನ್ನ ಅನುಭವವಾಗುತ್ತಿತ್ತು. ಹೊಸ ಬಗೆಯಲ್ಲಿ ಕಾಣಿಸಿಕೊಳ್ಳಬೇಕು ಎಂದು ಪ್ರತಿದಿನವೂ ಕನಸು ಕಾಣುತ್ತಿದ್ದೆ. ಹಾಗಾಗಿ ಸದಾ ಅಭಿನಯದಲ್ಲಿ ಹೊಸತನ ಕಾಣಿಸುತ್ತಿತ್ತು. ಒಬ್ಬ ಕಲಾವಿದನಿಗೆ ರಂಗಭೂಮಿಯಲ್ಲಿ ಸಿಗುವ ಆನಂದ ಸಿನಿಮಾದಲ್ಲಿ ಸಿಗುವುದಿಲ್ಲ'.

“ನಾನು ಮೊದಲಿನಿಂದಲೂ ಶ್ರೀದೇವಿ ಅಭಿಮಾನಿ. ಸಿನಿಮಾದೆಡೆಗೆ ಆಕೆಗಿರುವ ಬದ್ಧತೆ ಮೆಚ್ಚುವಂಥದ್ದು. ಆಕೆಯೊಂದಿಗೆ `ಇಂಗ್ಲಿಷ್ ವಿಂಗ್ಲಿಷ್' ಚಿತ್ರದಲ್ಲಿ ನಟಿಸಿದ್ದು ಮರೆಯಲಾರದ ಅನುಭವ. ಆಕೆಯಂಥ ನಟಿ ಮತ್ತೊಬ್ಬರಿಲ್ಲ. ಹಾಗೆಯೇ ಸೋನಾಕ್ಷಿ ಸಿನ್ಹಾ ಕೂಡ ಅದ್ಭುತ ನಟಿ ಅಂತ ನನಗನಿಸಿದೆ. `ಲೂಟೆರಾ' ಚಿತ್ರದಲ್ಲಿ ಸೋನಾಕ್ಷಿಯ ನಟನಾ ಕೌಶಲ ಬೆರಗು ಮೂಡಿಸಿದೆ” ಎನ್ನುತ್ತಾರೆ.

1996ರಿಂದ 2007ರವರೆಗೆ ಆದಿಲ್ ಬೆಂಗಳೂರಿನಲ್ಲಿಯೇ ವಾಸವಿದ್ದರು. ಇಲ್ಲಿನ ಜನರ ಪ್ರೀತಿಪೂರ್ವಕ ನಡೆ ನನಗೆ ತುಂಬ ಇಷ್ಟ. ಬೆಂಗಳೂರು ಮತ್ತು ದಕ್ಷಿಣ ಭಾರತೀಯರಲ್ಲಿ ಸ್ನೇಹಭಾವ ಕಾಣಬಹುದು. ಆದರೆ, ಉತ್ತರ ಭಾರತದವರಲ್ಲಿ ಈ ಗುಣವನ್ನು ಹುಡುಕುವುದು ಕಷ್ಟ ಎನ್ನುತ್ತಾರೆ ಅವರು.

ಸದ್ಯಕ್ಕೆ ಆದಿಲ್, ದಿಲೀಪ್ ಶಂಕರ್ ಅವರ ಒಂದು ಪ್ರಾಜೆಕ್ಟ್ ಮತ್ತು `ಬ್ಯಾಡ್' ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಬಿಡುವಿದ್ದಾಗ ಅಡುಗೆಯಲ್ಲಿ ತೊಡಗಿಸಿಕೊಳ್ಳುವುದು ಅವರ ಹವ್ಯಾಸ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT