ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀರೂ ವೇಷ

Last Updated 21 ಜುಲೈ 2011, 19:30 IST
ಅಕ್ಷರ ಗಾತ್ರ

ಸಿನಿಮಾ ಬದುಕು ನೆರಳು-ಬೆಳಕಿನಂತೆ. ಬೆಳಕು ಬಿದ್ದ ಜಾಗದಲ್ಲಿರುವುದಷ್ಟೇ ಜಗತ್ತಿನ ಕಣ್ಣಿಗೆ ಕಾಣುತ್ತದೆ. ನೆರಳಿನ ಭಾಗ ಎಂದಿಗೂ ಕತ್ತಲು. ತೆರೆಯ ಮೇಲೆ ಬೆಳಕಾಗಿ ಕಾಣಿಸುವ ಕಥಾಪಾತ್ರಗಳನ್ನು `ಹೀರೋ~ ಮಾಡುವವರೇ ಇವರು. ಅಂಥ ತೆರೆಮರೆಯ ಪ್ರತಿಭಾನ್ವಿತರಲ್ಲಿ ವಸ್ತ್ರವಿನ್ಯಾಸಕ ಡಿ.ಸಿ.ವೀರೇಂದ್ರ ಕೂಡ ಒಬ್ಬರು.

 ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ದೊಡ್ಡ ಹಳ್ಳಿಯವರಾದ ವೀರೇಂದ್ರ ಓದಿದ್ದು ಬಿ.ಎ. ಆದರೆ ಬಾಲ್ಯದಿಂದಲೂ ಒಲವಿದ್ದದ್ದು ವಸ್ತ್ರವಿನ್ಯಾಸದಲ್ಲಿ.

`1993ರಲ್ಲಿ `ಬೆಳ್ಳಿತೆರೆ~ ಎಂಬ ಹೆಸರಿನ ವಸ್ತ್ರ ವಿನ್ಯಾಸ ಹಾಗೂ ರಂಗ ಪರಿಕರಗಳ ಭಂಡಾರ ಆರಂಭಿಸಿದೆ. ಇದುವರೆಗೆ ನೂರಾರು ಕಾರ್ಪೆಟ್ ಶೋಗಳು, ನೃತ್ಯ ಕಾರ್ಯಕ್ರಮಗಳು, ನಾಟಕಗಳು, ಬ್ಯಾಲೆಗಳು, ಟೀವಿಗಾಗಿ ಸಾವಿರಾರು ಕಾರ್ಯಕ್ರಮಗಳನ್ನು ನೀಡಿದೆ.
 
400ಕ್ಕೂ ಹೆಚ್ಚಿನ ಧಾರಾವಾಹಿಗಳು, 18000ಕ್ಕೂ ಹೆಚ್ಚಿನ ಕಂತುಗಳು, ಜೊತೆಗೆ ಸಾವಿರ ಕಂತುಗಳನ್ನು ಮುಗಿಸಿದ 15 ಮೆಗಾ ಧಾರಾವಾಹಿಗಳಿಗೆ ವಸ್ತ್ರವಿನ್ಯಾಸಕನಾಗಿ ಕಾರ್ಯನಿರ್ವಹಿಸ್ದ್ದಿದೇನೆ~- ಇದು ವೀರೇಂದ್ರ ಮಾಡಿಕೊಳ್ಳುವ ಸ್ವಪರಿಚಯ.

ಬಹುತೇಕ ಸಿನಿಮಾಗಳಿಗೆ ಬೆಂಗಳೂರಿನ ಚಿಕ್ಕಪೇಟೆಯಲ್ಲಿಯೇ ಶಾಪಿಂಗ್ ಮಾಡುವ ಅವರು ಕಡಿಮೆ ದರದ ಪರಿಕರಗಳು ಇಲ್ಲಿಯೇ ದೊರೆಯುತ್ತವೆ ಎಂಬ ಸತ್ಯವನ್ನು ಸ್ಫೋಟಿಸುವ ವೀರೇಂದ್ರ ಅವರಿಗೆ ಸ್ಥಳೀಯ ವಸ್ತ್ರವಿನ್ಯಾಸಕರಿಗೆ ಬೆಲೆ ಸಿಗುತ್ತಿಲ್ಲ ಎಂಬ ಬೇಸರವಿದೆ. ವಸ್ತ್ರವಿನ್ಯಾಸಕಾರರನ್ನು ಆಮದು ಮಾಡಿಕೊಳ್ಳುವ ಚಿತ್ರೋದ್ಯಮದ ಧೋರಣೆಯನ್ನೂ ಅವರು ಖಂಡಿಸುತ್ತಾರೆ.

ಸುಮಾರು 35ಕ್ಕಿಂತಲೂ ಹೆಚ್ಚು ಸಿನಿಮಾಗಳಿಗೆ ವಸ್ತ್ರವಿನ್ಯಾಸಕನಾಗಿ ಕೆಲಸ ಮಾಡಿರುವ ವೀರೇಂದ್ರ ಅವರಿಗೆ ನಿರ್ದೇಶಕರೊಬ್ಬರು ಧಾರಾವಾಹಿಯಲ್ಲಿ ನಟಿಸುವ ಅವಕಾಶವನ್ನೂ ಕೊಟ್ಟರು. ಸುಮಾರು 20ಕ್ಕೂ ಹೆಚ್ಚು ಧಾರಾವಾಹಿ ಮತ್ತು 10ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ನಾಟಕ, ಕಿರುಕಥೆ, ಕವನ, ಕಾದಂಬರಿ ಬರೆಯುವುದು ಅವರ ಹವ್ಯಾಸ.

`ರಂಗೋಲಿ~, `ವಠಾರ~, `ಮಾಂಗಲ್ಯ~, `ಮುತ್ತೈದೆ~, `ಮಣ್ಣಿನ ಋಣ~, `ರಾಧ~, `ಎಲ್ಲಿ ಜಾರಿತೋ ಮನವು~, `ಬಂಗಾರ~, `ಸಿಲ್ಲಿ ಲಲ್ಲಿ~, `ಪಾಪ ಪಾಂಡು~, `ಅರಸಿ~, `ಸೂರ್ಯಕಾಂತಿ~, `ಪಾರ್ವತಿ ಪರಮೇಶ್ವರ~, `ನಾನು ಅದಿತಿ ರಾವ್~, `ಚಿ.ಸೌ ಸಾವಿತ್ರಿ~ ಮೊದಲಾದ ಧಾರಾವಾಹಿಗಳ ವಸ್ತ್ರವಿನ್ಯಾಸಕರು ಅವರೇ.

`ಕಾಕನ ಕೋಟೆ~, `ಮಾಧವಿ~, `ಜೊತೆಗಿರುವವನು ಚಂದಿರ~, `ರಾವಿ ನದಿ ದಂಡೆಯ ಮೇಲೆ~, `ಮೈಸೂರು ಮಲ್ಲಿಗೆ~, `ನಾಗಮಂಡಲ~, `ತುಘಲಕ್~, `ಸಂಗ್ಯಾಬಾಳ್ಯಾ~ ಮೊದಲಾದ ನಾಟಕಗಳಿಗೂ ವೀರೇಂದ್ರ ವಸ್ತ್ರವಿನ್ಯಾಸ ಮಾಡಿದ್ದಾರೆ.

`ಜಗಳಗಂಟಿಯರು~, `ಮಣ್ಣಿನ ಋಣ~, `ಅಮೃತವಾಹಿನಿ~ ಅಭಿನಯಿಸಿರುವ ಧಾರಾವಾಹಿಗಳು. `ಬಿಸಿಬಿಸಿ~, `ಗೀಯ ಗೀಯ~, `ತಿಪ್ಪಾರಳ್ಳಿ ತರ‌್ಲೆಗಳು~ ಅವರ ಅಭಿನಯದ ಪ್ರಮುಖ ಚಿತ್ರಗಳು. ರಂಗಭೂಮಿ, ಚಲನಚಿತ್ರ ಮತ್ತು ಕಿರುತೆರೆಯಲ್ಲಿನ ಅವರ ಸಾಧನೆಗೆ ಅನೇಕ ಪ್ರಶಸ್ತಿ, ಪುರಸ್ಕಾರಗಳೂ ಸಂದಿವೆ.
-

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT