ಬೆಂಗಳೂರು: ಒಟಿಟಿ ವೇದಿಕೆಗಳಲ್ಲಿ ತಂಬಾಕು ವಿರೋಧಿ ಎಚ್ಚರಿಕೆ ಮತ್ತು ಹಕ್ಕು ನಿರಾಕರಣೆಗಳ ಪ್ರದರ್ಶನವನ್ನು ಕಡ್ಡಾಯಗೊಳಿಸಿ ಕೇಂದ್ರ ಸರ್ಕಾರವು ಹೊಸದಾಗಿ ಮಾರ್ಗಸೂಚಿ ಪ್ರಕಟಿಸಿದೆ.
ಅಮೆಜಾನ್ ಪ್ರೈಮ್, ನೆಟ್‌ಫ್ಲಿಕ್ಸ್, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್, ಝೀ5 ಸೇರಿದಂತೆ ಇತರೆ ಒಟಿಟಿ ವೇದಿಕೆಗಳು ಇನ್ನು ಮುಂದೆ ಈ ಮಾರ್ಗಸೂಚಿಗಳನ್ನು ಪಾಲಿಸಬೇಕಿದೆ. ವೇದಿಕೆಯಲ್ಲಿನ ಎಲ್ಲಾ ಕಂಟೆಂಟ್‌ಗಳಲ್ಲೂ ತಂಬಾಕು ವಿರೋಧಿ ಎಚ್ಚರಿಕೆಗಳು ಹಾಗೂ ಹಕ್ಕು ನಿರಾಕರಣೆಗಳನ್ನು ಪ್ರದರ್ಶಿಸಬೇಕಿದೆ. ಈ ನಿಯಮಾವಳಿ ಉಲ್ಲಂಘಿಸಿದರೆ ಕಠಿಣ ಕ್ರಮಕೈಗೊಳ್ಳಲಾಗುತ್ತದೆ ಎಂದು ಕೇಂದ್ರವು ಎಚ್ಚರಿಕೆ ನೀಡಿದೆ.
ಪ್ರತಿ ಪ್ರಕಾಶಕರು ಆನ್‌ಲೈನ್ ಕಂಟೆಂಟ್‌ನ ಆರಂಭದಲ್ಲಿ ಹಾಗೂ ಕೊನೆಯಲ್ಲಿ ತಲಾ 30 ಸೆಕೆಂಡ್‌ವರೆಗೆ, ತಂಬಾಕಿನಿಂದ ಆಗುವ ಅಪಾಯಗಳ ಬಗ್ಗೆ ಪ್ರದರ್ಶಿಸಬೇಕಿದೆ ಎಂದು ಸೂಚಿಸಿದೆ.
ಕಂಟೆಂಟ್‌ನಲ್ಲಿ ತಂಬಾಕು ಬಳಕೆಯ ದೃಶ್ಯಗಳಿದ್ದರೆ ಅದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ದೃಶ್ಯದ ಕೆಳಗಡೆ ಸ್ಥಿರವಾಗಿ ಕಾಣುವಂತೆ ಪ್ರಕಟಿಸಬೇಕು. ಜೊತೆಗೆ, ಹೆಚ್ಚುವರಿಯಾಗಿ ತಂಬಾಕಿನ ದುಷ್ಪರಿಣಾಮಗಳ ಬಗ್ಗೆ ಕಾರ್ಯಕ್ರಮದ ಆರಂಭ ಮತ್ತು ಮಧ್ಯ ಭಾಗದಲ್ಲಿ 20 ಸೆಕೆಂಡ್ ವರೆಗೆ ಆಡಿಯೊ ಸಹಿತ ದೃಶ್ಯಾವಳಿಗಳನ್ನು ಪ್ರದರ್ಶಿಸಬೇಕಿದೆ ಎಂದು ನಿರ್ದೇಶನ ನೀಡಿದೆ.
ತಂಬಾಕು ವಿರೋಧಿ ಎಚ್ಚರಿಕೆಯ ಸ್ಥಿರ ಸಂದೇಶವು ಬಿಳಿ ಬಣ್ಣದ ಹಿನ್ನೆಲೆ ಹೊಂದಿದ್ದು, ಅಕ್ಷರಗಳು ಕಪ್ಪು ಬಣ್ಣದಲ್ಲಿರಬೇಕು. ಅಲ್ಲದೇ, ಸ್ಪಷ್ಟವಾಗಿ ಹಾಗೂ ಓದುವಂತಿಸಬೇಕು. ‘ತಂಬಾಕು ಕ್ಯಾನ್ಸರ್‌ಗೆ ಕಾರಣವಾಗುತ್ತದೆ ಅಥವಾ ತಂಬಾಕು ಕೊಲ್ಲುತ್ತದೆ’ ಎಂಬ ಸಂದೇಶ ಇರಬೇಕು. ಒಟಿಟಿಯಲ್ಲಿ ಪ್ರದರ್ಶನವಾಗುವ ಸಿನಿಮಾಗಳು ಸೇರಿದಂತೆ ಇತರೆ ಕಾರ್ಯಕ್ರಮಗಳ ವಿಡಿಯೊಗಳು ಯಾವ ಭಾಷೆಯಲ್ಲಿ ಪ್ರದರ್ಶನವಾಗುತ್ತವೆಯೋ ಅದೇ ಭಾಷೆಯಲ್ಲಿಯೇ ಎಚ್ಚರಿಕೆಯ ಸಂದೇಶ ಇರಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಿದೆ.
ಕಂಟೆಂಟ್‌ಗಳ ಪ್ರದರ್ಶನದ ನಡುವೆ ಸಿಗರೇಟ್ ಬ್ರ್ಯಾಂಡ್‌ಗಳು, ತುಂಬಾಕು ಉತ್ಪನಗಳು ಮತ್ತು ಅವುಗಳ ಬಳಕೆ ಬಗ್ಗೆ ಪ್ರದರ್ಶನ ಮಾಡುವಂತಿಲ್ಲ ಎಂದು ಹೇಳಿದೆ.
ನಿಯಮಾವಳಿ ಉಲ್ಲಂಘಿಸಿದರೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದಿಂದ ರಚಿಸಿರುವ ಆಂತರಿಕ ಸಮಿತಿಯು ಸ್ವಯಂಪ್ರೇರಿತವಾಗಿ ದೂರು ದಾಖಲಿಸಲಿದೆ. ಈ ಬಗ್ಗೆ ನಾಗರಿಕರಿಂದಲೂ ದೂರು ಸ್ವೀಕರಿಸಲಿದೆ. ನಿಯಮ ಉಲ್ಲಂಘನೆಗೆ ಸೂಕ್ತ ಕಾರಣ ನೀಡುವಂತೆ ಹಾಗೂ ಬದಲಾವಣೆಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಒಟಿಟಿ ವೇದಿಕೆಗೆ ನೋಟಿಸ್ ನೀಡಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.