ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾಲಚಕ್ರ’ದ ನೈಜ ಘಟನೆ

Last Updated 13 ಮೇ 2020, 19:30 IST
ಅಕ್ಷರ ಗಾತ್ರ

ವಸಿಷ್ಠ ಸಿಂಹ ನಾಯಕನಾಗಿ ನಟಿಸಿರುವ, ಸುಮಂತ್‌ ಕ್ರಾಂತಿ ನಿರ್ದೇಶಿಸಿರುವ ‘ಕಾಲಚಕ್ರ’ ಸಿನಿಮಾ ಪೂರ್ಣಗೊಂಡಿದೆ. ಲಾಕ್‌ಡೌನ್‌ ಮುಗಿದ ನಂತರ ಪರಿಸ್ಥಿತಿ ನೋಡಿಕೊಂಡುಚಿತ್ರ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

ವಸಿಷ್ಠ ಸಿಂಹ ಅವರದ್ದುಇದರಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಪಾತ್ರ. ಅವರ ಪಾತ್ರಕ್ಕೆ ನಾಲ್ಕು ಶೇಡ್‌ಗಳಿವೆ.25ರ ವಯೋಮಾನದಿಂದ ಅರವತ್ತು ವರ್ಷದವರೆಗೆ ನಾಲ್ಕು ಭಿನ್ನ ಛಾಯೆಗಳಲ್ಲಿ ಅವರು ಅಭಿನಯಿಸಿದ್ದಾರೆ.60 ದಿನಗಳ ಕಾಲ ಶೂಟಿಂಗ್‌ ಆಗಿದೆ.ಬೆಂಗಳೂರು ಮತ್ತು ಮಂಗಳೂರು ಕಡೆಗಳಲ್ಲಿ ಚಿತ್ರೀಕರಣ ನಡೆದಿದೆ.ಚಿತ್ರಕ್ಕೆ ಇನ್ನಷ್ಟೇ ಪ್ರಾದೇಶಿಕ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ ಪ್ರಮಾಣ ಪತ್ರ ಸಿಗಬೇಕಿದೆ.

‘ಇದೊಂದು ನೈಜ ಘಟನೆ ಆಧರಿಸಿದ ಚಿತ್ರ. ಒಮ್ಮೆ ಪೊಲೀಸ್‌ ಕಮಿಷನರ್‌ ಕಚೇರಿಗೆ ಯಾವುದೋ ಕೆಲಸ ನಿಮಿತ್ತ ಹೋಗಿದ್ದೆ. ಅಲ್ಲಿಯಾರೋ ಒಬ್ಬರು ಒಂದು ಘಟನೆಯ ಬಗ್ಗೆ ಮಾತನಾಡುತ್ತಿರುವುದನ್ನು ಕೇಳಿಸಿಕೊಂಡೆ. ಆ ಘಟನೆಯ ಜಾಡು ಹಿಡಿದು ಹೊರಟಾಗ ಸಿಕ್ಕಿದ್ದೇ ಈ ಚಿತ್ರದ ಕಥೆ. ಕಥೆಯೊಳಗೆ ನಾವೂ ಪಾತ್ರವಾಗುತ್ತಾ ಹೋದೆವು. ಅದೇ ಪ್ರೇರಣೆಯಿಂದ ನಾನೇ ಒಂದು ಪ್ರೊಡಕ್ಷನ್‌ ಕಂಪನಿ ಸ್ಥಾಪಿಸಿ, ಈ ಸಿನಿಮಾ ಕೈಗೆತ್ತಿಕೊಂಡೆ. ರಚನೆ, ನಿರ್ದೇಶನದ ಜತೆಗೆ ಚಿತ್ರಕ್ಕೆ ಬಂಡವಾಳ ಹೂಡಿದ್ದೇನೆ’ ಎನ್ನುವ ಮಾತು ಸೇರಿಸಿದರು ಸುಮಂತ್‌ ಕ್ರಾಂತಿ.

‘ಪ್ರತಿ ಮನುಷ್ಯನ ಜೀವನದಲ್ಲಿ ಒಂದಲ್ಲ ಒಂದು ಘಟನೆಗಳು ನಡೆಯುತ್ತವೆ. ಅದೆಲ್ಲವನ್ನು ಎದುರಿಸಿ ನಿಲ್ಲುವಷ್ಟರಲ್ಲಿ ಜೀವನವೇ ಮುಗಿದು ಹೋಗಿರುತ್ತದೆ, ಇನ್ನು ಕೆಲವರ ಜೀವವೇ ಹಾರಿ ಹೋಗಿರುತ್ತದೆ. ಸವಾಲಿನ ಘಟನೆಗಳಿಗೆ ಮನುಷ್ಯ ಹೇಗೆ ಸ್ಪಂದಿಸುತ್ತಾನೆ, ಯಾವ ರೀತಿ ಎದುರಿಸುತ್ತಾನೆ ಎನ್ನುವುದನ್ನು ಈ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಿದ್ದೇವೆ’ ಎನ್ನುತ್ತಾರೆ ಅವರು.

ಮಡಿಕೇರಿ ಮೂಲದ ನಟಿ ರಕ್ಷಾ ಈ ಚಿತ್ರದ ನಾಯಕಿ.ಚೆನ್ನೈನಲ್ಲಿ ನೆಲೆಸಿರುವ ಇವರು ರೂಪದರ್ಶಿಯಾಗಿದ್ದರು. ಇದು ಇವರಿಗೆ ಮೊದಲ ಸಿನಿಮಾ. ಇದರಲ್ಲಿ ವಸಿಷ್ಠ ಪತ್ನಿ ಸ್ನೇಹಾ ಪಾತ್ರವನ್ನು ರಕ್ಷಾ ನಿಭಾಯಿಸಿದ್ದಾರೆ.ಈ ಪಾತ್ರವನ್ನು ಶ್ರದ್ಧಾ ಶ್ರಿನಾಥ್‌ ನಿರ್ವಹಿಸಬೇಕಿತ್ತು. ಆದರೆ, ಡೇಟ್‌ ಹೊಂದಾಣಿಕೆಯಾಗದ ಕಾರಣಕ್ಕೆ ಈ ಅವಕಾಶ ರಕ್ಷಾ ಪಾಲಾಗಿದೆ. ಪ್ರಮುಖ ಪಾತ್ರದಲ್ಲಿಬೇಬಿ ಆವಿಕಾ ಮತ್ತು ಖಳನ ಪಾತ್ರದಲ್ಲಿ ದೀಪಕ್‌ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಸುಚೀಂದ್ರ ಪ್ರಸಾದ್‌, ಹನುಮಂತೇಗೌಡ ತಾರಾಗಣದಲ್ಲಿದ್ದಾರೆ.

ಕವಿರಾಜ್, ಸಂತೋಷ್‍ ನಾಯಕ್, ಚೇತನ್‌ ಕುಮಾರ್‌ ಸಾಹಿತ್ಯದ ಮೂರು ಹಾಡುಗಳಿಗೆ ಗುರುಕಿರಣ್ ಸಂಗೀತ ಸಂಯೋಜಿಸಿದ್ದಾರೆ. ಎಲ್.ಎಂ. ಸೂರಿ ಛಾಯಾಗ್ರಹಣ, ಸೌಂದರ ರಾಜನ್ ಸಂಕಲನವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT