ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ಕ್ಕೆ ದಿನಗಣನೆ ಶುರು
‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ಕ್ಕೆ ದಿನಗಣನೆ ಶುರು
Published 9 ಮೇ 2023, 19:36 IST
Last Updated 9 ಮೇ 2023, 19:36 IST
ಅಕ್ಷರ ಗಾತ್ರ

‘ಪ್ರಜಾವಾಣಿ’ ಪತ್ರಿಕೆಯು ಚಿತ್ರರಂಗದ ಮಹತ್ವದ ಬೆಳವಣಿಗೆಗಳನ್ನು ಸೂಕ್ಷ್ಮ ವಿವರಗಳೊಂದಿಗೆ ವಿಶ್ಲೇಷಿಸುತ್ತಾ ಬಂದಿರುವುದಷ್ಟೆ ಅಲ್ಲ, ಸುದ್ದಿರೂಪದಲ್ಲಿಯೂ ಅವುಗಳನ್ನು ದಾಖಲಿಸಿರುವುದಕ್ಕೆ ಅಗಣಿತ ಉದಾಹರಣೆಗಳಿವೆ. ಅದರಲ್ಲಿ ಒಂದೆರಡು ಆಸಕ್ತಿಕರ ಉದಾಹರಣೆಗಳು ಇಲ್ಲಿವೆ...

ಭಾರತೀಯ ಚಲನಚಿತ್ರಗಳಲ್ಲಿ ಚುಂಬನ ಇರಲೇಬೇಕೆಂಬ ಖೋಸ್ಲಾ ಸಮಿತಿ ಅಭಿಪ್ರಾಯವನ್ನು ಮೈಸೂರು ನಗರದ ಹನ್ನೆರಡು ಕಾಲೇಜುಗಳ 2624 ವಿದ್ಯಾರ್ಥಿಗಳು ವಿರೋಧಿಸಿದ್ದಾರೆ. ಈ ಪೈಕಿ 349 ವಿದ್ಯಾರ್ಥಿನಿಯರೂ ಸೇರಿದ್ದಾರೆ–ಇಂಥದೊಂದು ಸುದ್ದಿ 1970ರ ಫೆಬ್ರುವರಿ 5ರ ‘ಪ್ರಜಾವಾಣಿ’ ಸಂಚಿಕೆಯಲ್ಲಿ ಪ್ರಕಟವಾಗಿತ್ತು.

ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತು ಐದು ಪ್ರಶ್ನೆಗಳನ್ನು ಒಳಗೊಂಡ ಒಂದು ಫಾರ್ಮ್‌ ಅನ್ನು ವಿವಿಧ ಕಾಲೇಜುಗಳಲ್ಲಿ ನೀಡಿ, ವಿದ್ಯಾರ್ಥಿಗಳಿಂದ ಅಭಿಪ್ರಾಯ ಸಂಗ್ರಹಿಸಿತ್ತು. ಒಟ್ಟು 4006 ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿದ್ದು, ಆ ಪೈಕಿ 1383 ವಿದ್ಯಾರ್ಥಿಗಳು ಚಲನಚಿತ್ರಗಳಲ್ಲಿ ಚುಂಬನ ಇರಲೇಬೇಕು ಎಂಬ ಅಭಿ‍ಪ್ರಾಯ ವ್ಯಕ್ತಪಡಿಸಿದ್ದರು. ಇವರಲ್ಲಿ 58 ವಿದ್ಯಾರ್ಥಿನಿಯರೂ ಸೇರಿದ್ದದ್ದು ಆಗ ವಿಶೇಷ ಸುದ್ದಿ ಎನಿಸಿಕೊಂಡಿತ್ತು.

‘ನಾಗರಹಾವು’ ಸಿನಿಮಾ ತಯಾರಾಗುತ್ತಿದ್ದಾಗ ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿದ್ದ ವಿಷ್ಣುವರ್ಧನ್, ಆರತಿ ಸ್ಥಿರಚಿತ್ರ
‘ನಾಗರಹಾವು’ ಸಿನಿಮಾ ತಯಾರಾಗುತ್ತಿದ್ದಾಗ ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿದ್ದ ವಿಷ್ಣುವರ್ಧನ್, ಆರತಿ ಸ್ಥಿರಚಿತ್ರ

ಸಿನಿಮಾ ಸಂಸ್ಕೃತಿಯ ವಿಷಯದಲ್ಲಿ ಆಗುತ್ತಿದ್ದ ಪಲ್ಲಟವನ್ನು, ಚುಂಬನ ದೃಶ್ಯ ಚಲನಚಿತ್ರಗಳಲ್ಲಿ ಇರಬೇಕು ಎಂದು ನಿರ್ಧರಿಸಲು ಒಂದು ಸಮಿತಿಯನ್ನು ಆಗ ರಚಿಸಿದ್ದು ಇವೆಲ್ಲ ಮಹತ್ವದ ಮಾಹಿತಿ ಇಂತಹ ಸುದ್ದಿಯಲ್ಲಿ ದಕ್ಕುತ್ತದೆ.

1955ರ ಫೆಬ್ರುವರಿಯ ಸಂಚಿಕೆಯೊಂದರಲ್ಲಿ ‘ಕನ್ನಡಕಂಠದ ಮಲಯಾಳಿ ಚಿತ್ರ’ ಎನ್ನುವ ಪುಟ್ಟದಾದರೂ ಆಸಕ್ತಿಕರವಾದ ಸುದ್ದಿಯೊಂದು  ಪ್ರಕಟವಾಗಿತ್ತು. ಅದರ ಪ್ರಾರಂಭ ಹೀಗಿತ್ತು: ‘ನೀಲಾ ಪ್ರೊಡಕ್ಷನ್ಸ್‌ರವರ ಮಲಯಾಳಂ ಚಿತ್ರ ಅವನ್‌ಯಾರ್‌ ಕನ್ನಡದಲ್ಲಿ ಡಬ್‌ ಆಗಲಿದೆ. ಡಬ್ಬಿಂಗ್ ಮಾಡಲು ಶ್ರೀ ಎ.ಪಟ್ಟಾಭಿರಾಮನ್ ಅವರು ತಿರುವನಂತಪುರಕ್ಕೆ ತೆರಳಿದ್ದಾರೆ. ಅಲ್ಲಿಯ ಮೆರ್ರಿಲ್ಯಾಂಡ್‌ ಸ್ಟುಡಿಯೊವಿನಲ್ಲಿಯೇ ಡಬ್ಬಿಂಗ್ ಕಾರ್ಯ ನಡೆಯಲಿದೆ...’

ಒಂದು ಕಾಲದಲ್ಲಿ ಡಬ್‌ ಆಗಿ ಸಿನಿಮಾವೊಂದು ಕನ್ನಡ ಭಾಷೆಗೆ ಬಂದದ್ದರ ಸಣ್ಣಪುಟ್ಟ ವಿವರಗಳಿರುವ ಬರಹವಿದು. ಆಮೇಲೆ ಡಬ್ಬಿಂಗ್ ವಿರುದ್ಧ ಕನ್ನಡ ಚಿತ್ರರಂಗ ನಡೆಸಿದ ಅಭಿಯಾನ, ಮತ್ತೆ ಡಬ್ಬಿಂಗ್ ಲಗ್ಗೆ ಇಟ್ಟಾಗ ಅರ್ಥಪೂರ್ಣ ಸಂವಾದಗಳನ್ನೂ ‘ಪ್ರಜಾವಾಣಿ’ ಪ್ರಕಟಿಸಿದೆ.

ಇದು ಹಿರಿತೆರೆಯ ಮಾತಾಯಿತು. ಕಿರುತೆರೆಯಲ್ಲಿ ಜನಪ್ರಿಯ ಧಾರಾವಾಹಿಗಳು ಮೂಡಿಬಂದಾಗಲೂ ಪತ್ರಿಕೆಯು ಅದಕ್ಕೂ ಸ್ಪಂದಿಸಿದೆ. ‘ಮಹಾಭಾರತ’ ಧಾರಾವಾಹಿಯು ವಾರಕ್ಕೊಮ್ಮೆ ಪ್ರಸಾರವಾಗುತ್ತಿದ್ದಾಗ, 1989ರಲ್ಲಿ ಅದರ ಪ್ರತಿ ಕಂತಿನ ದೃಶ್ಯಗಳನ್ನು ಹಿಂದಿಯಿಂದ ಕನ್ನಡಕ್ಕೆ ಅನುವಾದ ಮಾಡಿಸಿ, ಅಷ್ಟೂ ಸಂಭಾಷಣೆಯನ್ನು ವಾರಕ್ಕೊಮ್ಮೆ ಪ್ರಕಟಿಸಿತ್ತು. ಹಿಂದಿ ಭಾಷೆ ಗೊತ್ತಿಲ್ಲದವರೂ ಭಾವುಕರಾಗಿ ನೋಡುತ್ತಿದ್ದ ಈ ಧಾರಾವಾಹಿಯ ಸಾರಾಂಶವನ್ನು, ಪಾತ್ರಗಳ ನಡುವಿನ ಸಂವಾದವನ್ನು ಇನ್ನೂ ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಇದು ನೆರವಾಗಿತ್ತು.

1989ರ ಅಕ್ಟೋಬರ್‌ 6ರ ಸಂಚಿಕೆಯಲ್ಲಿ ಪ್ರಕಟವಾದ ಮಹಾಭಾರತ ಧಾರಾವಾಹಿಯ ಕನ್ನಡ ಅನುವಾದ
1989ರ ಅಕ್ಟೋಬರ್‌ 6ರ ಸಂಚಿಕೆಯಲ್ಲಿ ಪ್ರಕಟವಾದ ಮಹಾಭಾರತ ಧಾರಾವಾಹಿಯ ಕನ್ನಡ ಅನುವಾದ

ಹೀಗೆ ಕಾಲಾಂತರದಲ್ಲಿ ಸಿನಿಮಾ ಹಾಗೂ ಸಂಸ್ಕೃತಿಯಲ್ಲಿ ಆದ ಮನರಂಜನೆಯ ಸ್ಥಿತ್ಯಂತರಗಳಿಗೆ ‘ಪ್ರಜಾವಾಣಿ’ ಉತ್ಸಾಹದಿಂದ ಸ್ಪಂದಿಸುತ್ತಾ ಬಂದಿದೆ. ಅದರ ವಿಸ್ತರಣೆಯ ರೂಪದಲ್ಲಿ ಈಗ ‘ಪ್ರಜಾವಾಣಿ ಸಿನಿ ಸಮ್ಮಾನ’ ಪ್ರಾರಂಭಿಸುತ್ತಿದೆ. ಕನ್ನಡ ಚಿತ್ರರಂಗದ ಪ್ರತಿಭೆಗಳನ್ನು ಗುರುತಿಸಿ, ಸನ್ಮಾನಿಸುವ ಈ ಪರಿಪಾಟದ ಪ್ರಕ್ರಿಯೆ ಅದಾಗಲೇ ಚಾಲ್ತಿಯಲ್ಲಿದೆ. ಪ್ರಜಾವಾಣಿ@75ರ ಸಂಭ್ರಮಕ್ಕೆ ಇದು ಬಂಗಾರದ ಗರಿಯೇ ಹೌದು.

ಪತ್ರಿಕೆ ನಮ್ಮ ಕನ್ನಡ ಸಿನಿಮಾದ ಸಹಯಾತ್ರಿ

ನಾನು ಆರಂಭದಿಂದ ಗಮನಿಸಿರುವ ಉತ್ತಮಾಂಶವೆಂದರೆ ಪ್ರಜಾವಾಣಿಯು ಒಂದು ಕ್ಷೇತ್ರ ಅಥವಾ ಒಬ್ಬ ವ್ಯಕ್ತಿಗೆ ಅತಿಯಾಗಿ ಅಂಟಿಕೊಳ್ಳದೆ ಮತ್ತು ಆತುಕೊಳ್ಳದೆ ಸಮದೃಷ್ಟಿಯಿಂದ, ಒಂದು ನಿರ್ದಿಷ್ಟ ಅಂತರದಿಂದ ನೋಡುವ ಕ್ರಮ. ಅದು ಸದೂರ ಉಳ್ಳ ಸಮಚಿತ್ತದ ಆರೋಗ್ಯಕರ ನೋಟ ಕೂಡಾ. ಇದು ಪ್ರಜಾವಾಣಿಗೂ ಕನ್ನಡ ಸಿನಿಮಾಗೂ ಅನ್ವಯ. ಕನ್ನಡ ಸಿನಿಮಾದ ಅಂದಿನ ‘ಕಲಾತ್ಮಕ ಹೊಸ ಅಲೆ’ ಮತ್ತು ಇಂದಿನ ‘ಕಮರ್ಶಿಯಲ್ ಹೊಸ ಅಲೆ’ಗಳೆರಡೂ ವಿಶ್ವದ ಗಮನ ಸೆಳೆದಿವೆ. ಇದಕ್ಕೆ ನಾವು ಹೆಮ್ಮೆಪಡುತ್ತಲೇ ಎಚ್ಚರದಿಂದ ಇರಬೇಕಾಗಿದೆ. ಕೆಜಿಎಫ್ ಮತ್ತು ಕಾಂತಾರಗಳಂಥ ಚಿನ್ನದ ನವಿಲುಗಳನ್ನು ನೋಡಿ ಬಡಕೆಂಬೂತಗಳು ಪುಕ್ಕ ಕಿತ್ತುಕೊಳ್ಳಬಾರದು. ಗುಣಮಟ್ಟವೊಂದೇ ನಮಗಿರುವ ಏಕೈಕ ಉಳಿವಿನ ಮಾರ್ಗ. ಉಳಿದದ್ದು ಪ್ರೇಕ್ಷಕ,ಕಾಲ ಮತ್ತು ಮಾಧ್ಯಮಗಳಿಗೆ ಬಿಟ್ಟದ್ದು. ಪ್ರಜಾವಾಣಿ ನಮ್ಮ ಕನ್ನಡ ಸಿನಿಮಾದ ಸಹಯಾತ್ರಿಯೂ ಹೌದು; ಹಿತೈಷಿಯೂ ಹೌದು. ಈ ಪತ್ರಿಕೆ ಸಿನಿ ಸಮ್ಮಾನ ಪ್ರಾರಂಭಿಸಿರುವುದು ಖುಷಿಯ ಸಂಗತಿ.

 –ನಾಗತಿಹಳ್ಳಿ ಚಂದ್ರಶೇಖರ್‌, ನಿರ್ದೇಶಕ

ಚಿತ್ರರಂಗದ ಪುಣ್ಯ

‘ಪ್ರಜಾವಾಣಿ’ ಸಿನಿ ಸಮ್ಮಾನ ಪ್ರಾರಂಭಿಸಿರುವುದಕ್ಕಿಂತ ಸಂತೋಷ ಏನಿದೆ? ನಮ್ಮ ಪ್ರಜಾವಾಣಿ ಗೌರವದ ಸಂಕೇತ. ಪತ್ರಿಕೆ ಪ್ರತಿ ದಿನ ಬೆಳಿಗ್ಗೆ ನಮ್ಮ ಮನೆ ಟೇಬಲ್‌ನಲ್ಲಿದ್ದರೆ ನಮಗೆ ಒಂದು ರೀತಿಯ ಗೌರವ. ಪ್ರತಿ ವರ್ಗವನ್ನು ತಲುಪಿರುವ ಪತ್ರಿಕೆಯಿದು. ರಾಜ್ಯ ಪ್ರಶಸ್ತಿಯೇ 4–5 ವರ್ಷಗಳಿಗೊಮ್ಮೆ ಸಿಗುವ ಕಾಲಘಟ್ಟದಲ್ಲಿ ಪತ್ರಿಕೆ ಪ್ರತಿ ವರ್ಷ ಚಿತ್ರರಂಗವನ್ನು ಗೌರವಿಸಲು ಮುಂದಾಗಿರುವುದು ನಮ್ಮೆಲ್ಲರ ಪುಣ್ಯ. ಚಿತ್ರರಂಗದ ಹೆಮ್ಮೆ. ಬಹಳ ಒಳ್ಳೆಯ ಕೆಲಸ ಇದು. ಆಯ್ಕೆ ಮಾನದಂಡಗಳನ್ನು ನೋಡಿದರೆ ಪ್ರಶಸ್ತಿ ಮೌಲ್ಯ ತಿಳಿಯುತ್ತದೆ. ತೀರ್ಪುಗಾರರ ಮಂಡಳಿಯಲ್ಲಿ ಬಹಳ ಹಿರಿಯರು ಹಾಗೂ ಅರ್ಹರಿದ್ದಾರೆ. ಹೀಗಾಗಿ ಉತ್ತಮ ಸಾಧಕರಿಗೆ ಪ್ರಶಸ್ತಿ ಲಭಿಸುತ್ತದೆ. ಈ ಪ್ರಶಸ್ತಿ ಸಿನಿಮಾ ರಂಗದವರನ್ನು ಎಲ್ಲ ವರ್ಗದವರಿಗೂ ತಲುಪುವಂತೆ ಮಾಡುತ್ತದೆ. 75 ವರ್ಷ ಪೂರೈಸಿರುವ ಪತ್ರಿಕೆ, ಈ ಸಮಯದಲ್ಲಿ ಇಂತಹ ಒಂದು ಸುಂದರ ಪ್ರಶಸ್ತಿಯನ್ನು ನೀಡುತ್ತಿರುವುದಕ್ಕೆ ನನ್ನ ಹೃದಯಪೂರ್ವಕ ಅಭಿನಂದನೆಗಳು.

 –ಜಯಮಾಲಾ, ನಟಿ

ಕಲಾವಿದರ ಬೆನ್ನುತಟ್ಟುವ ಕೆಲಸ

75 ವರ್ಷ ಪೂರೈಸಿರುವ ‘ಪ್ರಜಾವಾಣಿ’ ಪತ್ರಿಕೆಗೆ ಹೃತ್ಪೂರ್ವಕ ಅಭಿನಂದನೆಗಳು. ನಾನು ವೈಯಕ್ತಿಕವಾಗಿ ಚಿತ್ರೋದ್ಯಮದ ಹಿನ್ನೆಲೆಯಿಂದ ಬಂದವಳಲ್ಲ. ಆದರೆ ನನ್ನನ್ನು ಚಿತ್ರರಂಗದಲ್ಲಿ ಪರಿಚಯಿಸಿದ್ದು ‘ಪ್ರಜಾವಾಣಿ’. ನನ್ನ ನಟನೆಯ ವಿಷಯದಿಂದ ಹಿಡಿದು ಚಿತ್ರದ ಮಾಹಿತಿ, ಸಿನಿಮಾಗಳ ವಿಮರ್ಶೆಯನ್ನು ಜನರಿಗೆ ತಲುಪಿಸಿದ್ದು ಈ ಪತ್ರಿಕೆ. ಪತ್ರಿಕೆಗೆ ಅಗಾಧವಾದ ಅನುಭವವಿದೆ. ಇಂತಹ ಪತ್ರಿಕೆ ಈಗ ಪ್ರಶಸ್ತಿ ನೀಡಲು ಮುಂದಾಗಿರುವುದು ಅತ್ಯಂತ ಸಂತಸದ ಸಂಗತಿ. ಈ ಪ್ರಶಸ್ತಿಯಿಂದ ನಮ್ಮಂತಹ ಕಲಾವಿದರ ಬೆನ್ನುತಟ್ಟುವ ಕೆಲಸವಾಗಲಿದೆ. ಚಿತ್ರೋದ್ಯಮದಲ್ಲಿ ನಮ್ಮ ಜವಾಬ್ದಾರಿಯನ್ನು ಹೆಚ್ಚಿಸುವ ಪ್ರಶಸ್ತಿಯಿದು. ಪ್ರಶಸ್ತಿ ಪ್ರಾರಂಭಿಸಿರುವುದು ತುಂಬ ಉತ್ತಮವಾದ ಹೆಜ್ಜೆ. ಇದು ಹೀಗೆಯೇ ಮುಂದುವರಿಯಲಿದೆ ಎನ್ನುವ ವಿಶ್ವಾಸವೂ ನನಗಿದೆ.

 –ಹರಿಪ್ರಿಯಾ, ನಟಿ

ಕನ್ನಡ ಸಿನಿಮಾಗಳು ವಿಶ್ವ ಮಟ್ಟದಲ್ಲಿ ಸೆಟೆದು ನಿಲ್ಲಬೇಕು

‘ಪ್ರಜಾವಾಣಿ’ ಪತ್ರಿಕೆ ದೊಡ್ಡ ಇತಿಹಾಸ ಇರುವಂಥದ್ದು. ಚಿತ್ರರಂಗದ ಕೊಡುಗೆ ನಾಡಿಗೆ ಹೇಗೆ ಇದೆಯೋ, ಪತ್ರಿಕೆಯ ಕೊಡುಗೆ ಕೂಡ ಅಷ್ಟೇ ಮುಖ್ಯವಾದದ್ದು. ನಾನು ಚಿಕ್ಕಂದಿನಿಂದಲೂ ಪತ್ರಿಕೆಯ ಸಿನಿಮಾ ರಂಜನೆ ಹಾಗೂ ಚಿತ್ರ ವಿಮರ್ಶೆಗಳನ್ನು ಓದಲು ಕಾತರನಾಗಿ ಇರುತ್ತಿದ್ದೆ. ‘ಪ್ರಜಾವಾಣಿ’ ಯಾವತ್ತೂ ಇದಮಿತ್ಥಂ ಎನ್ನುವಂಥ ವರದಿಗಳನ್ನೇ ನೀಡುತ್ತದೆ. ಸಾಂಪ್ರದಾಯಿಕವಾದ, ಉತ್ಪ್ರೇಕ್ಷೆ ಇಲ್ಲದ ದನಿ ಇದು. ಈ ಪತ್ರಿಕೆ ಸಿನಿ ಸಮ್ಮಾನದ ಮೂಲಕ ಚಿತ್ರರಂಗವನ್ನು ಗೌರವಿಸುತ್ತಿರುವುದು ಹೆಮ್ಮೆಯ ವಿಷಯ. ಕಳೆದ ಎರಡು ಮೂರು ವರ್ಷಗಳಿಂದ ಕನ್ನಡದವರನ್ನು ಪ್ರಮುಖ ಚಿತ್ರೋತ್ಸವಗಳಿಗೆ ತೀರ್ಪುಗಾರರನ್ನಾಗಿ ನಿಯಮಿತವಾಗಿ ಕರೆಯುತ್ತಿದ್ದಾರೆ. ಹಿಂದೆ ಈ ಪರಿಪಾಠ ಈಗಿನಷ್ಟು ವ್ಯಾಪಕವಾಗಿ ಇರಲಿಲ್ಲ. ಕನ್ನಡ ಸಿನಿಮಾದವರ ಕುರಿತು ಉತ್ತರ ಭಾರತದವರ ಧೋರಣೆ ಬದಲಾಗುತ್ತಿರುವುದಕ್ಕೆ ಇದು ಒಂದು ಉದಾಹರಣೆ. ವಿಶ್ವ ಮಟ್ಟದಲ್ಲಿ ಕನ್ನಡದ ಸಿನಿಮಾಗಳು ಸೆಟೆದು ನಿಲ್ಲುವ ಸ್ಥಿತಿ ಬರಬೇಕು. ಮಲಯಾಳಂನಲ್ಲಿ ಈ ವರ್ಷ 60 ಸಿನಿಮಾಗಳು ವಿವಿಧ ವಿಭಾಗಗಳ ಪ್ರಶಸ್ತಿಗೆ ಪರಿಗಣಿತವಾಗುತ್ತಿವೆ. ಇಷ್ಟೇ ಸಂಖ್ಯೆಯಲ್ಲಿ ಹಿಂದಿ ಸಿನಿಮಾಗಳೂ ಇವೆ. ಕನ್ನಡದಲ್ಲಿ 46 ಸಿನಿಮಾಗಳು ಇದ್ದರೂ ಗುಣಮಟ್ಟದಿಂದಾಗಿ ಮೇಲೇರುವುದು ಎರಡೋ ಮೂರೋ. ಈ ಸ್ಥಿತಿ ರಾಷ್ಟ್ರಮಟ್ಟದಲ್ಲಿ ಬದಲಾಗಬೇಕು. ಆಗ ವಿಶ್ವಮಟ್ಟದಲ್ಲಿಯೂ ತಂತಾನೇ ಮನ್ನಣೆ ಸಿಗಲಿದೆ. ಬೆಂಗಳೂರಿನಲ್ಲಿ ಕಲಿತ ಗಿರೀಶ್‌ ಗಂಗಾಧರನ್ ಎಂಬ ಸಿನಿಮಾಟೊಗ್ರಾಫರ್‌ ಮಲಯಾಳಂನ ‘ಜಲ್ಲಿಕಟ್ಟು’ ಸಿನಿಮಾದ ಕಸುಬುದಾರಿಕೆಗಾಗಿ ರಾಷ್ಟ್ರಪ್ರಶಸ್ತಿ ಪಡೆದರು. ಈ ನೆಲ ಅಂತಹ ಪ್ರತಿಭೆಗಳನ್ನು ದೇಶಕ್ಕೆ ನೀಡಿದೆ. ‘ಕಾಂತಾರ’ ಈ ನೆಲದ ಸಿನಿಮಾ ಆಗಿ ಜನಪ್ರಿಯವಾಗಿದ್ದರೂ ಅದನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಮೌಢ್ಯದ ಸಿನಿಮಾ ಎಂದು ನಿರಾಕರಿಸುವವರೂ ಇದ್ದಾರೆ.

–ಅಶೋಕ್ ಕಶ್ಯಪ್, ಅಧ್ಯಕ್ಷರು, ಕರ್ನಾಟಕ ಚಲನಚಿತ್ರ ಅಕಾಡೆಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT