ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾವು ನೋಡಿದ ಸಿನಿಮಾ | ಸುಸ್ತಾಗುವ ‘ಆಚಾರ್‌’ ಸಂಸಾರದ ಕಥೆ!

Published 31 ಜುಲೈ 2023, 0:11 IST
Last Updated 31 ಜುಲೈ 2023, 0:11 IST
ಅಕ್ಷರ ಗಾತ್ರ

ವಿನಾಯಕ ಕೆ.ಎಸ್.

1960ರ ‘ಸುಧಾ’ ವಾರಪತ್ರಿಕೆಯಲ್ಲಿ ಬಂದ ಮಾವಿನಕಾಯಿಯ ವಿವಿಧ ಸವಿರುಚಿಗಳ ಲೇಖನದೊಂದಿಗೆ ಸಿನಿಮಾ ಪ್ರಾರಂಭವಾಗುತ್ತದೆ. ಒಂದು ಮಾವಿನಕಾಯಿ ಎಷ್ಟೆಲ್ಲ ಪದಾರ್ಥಗಳಿಗೆ ಆಕರವಾಗಬಹುದೋ, ಅದೇ ರೀತಿ ಬದುಕು ಕೂಡ ಎಂಬ ವಿಭಿನ್ನ ಆಲೋಚನೆ ಪ್ರಾರಂಭದಲ್ಲಿಯೇ ಸಿನಿಮಾ ಕುರಿತು ನಿರೀಕ್ಷೆ ಹೆಚ್ಚಾಗುವಂತೆ ಮಾಡುತ್ತದೆ. ಮಾವಿನಕಾಯಿಯೊಂದು ‘ಆಚಾರ್‌ ಆ್ಯಂಡ್‌ ಕೋ.’ ಉಪ್ಪಿನಕಾಯಿಯೂ ಆಗಬಹುದು ಎಂದು ಕಥೆಯ ಸುಳಿವು ನೀಡಿರುವುದು ಮಜಾ ನೀಡುತ್ತದೆ. ‘ಪ್ರಜಾವಾಣಿ’ ಮುಖಪುಟದಲ್ಲಿ ಅಂದು ಬಂದಿರುವ ಸುದ್ದಿಗಳನ್ನೇ ಸರಕಾಗಿಸಿಕೊಂಡಿರುವ ಸುಪ್ರಭಾತ ಗೀತೆಯೊಂದಿಗೆ ಬೆಂಗಳೂರಿನ ಮಧುಸೂದನ್‌ ಆಚಾರ್‌ ಕುಟುಂಬದ ಕಥೆ ಶುರುವಾಗುತ್ತದೆ. ಈ ಹೊಸ ಬಗೆಯ ಸವಿಗಳನ್ನು ಬಹಳ ಕಾಲ ಉಳಿಸಿಕೊಂಡಿದ್ದರೆ ನಿರ್ದೇಶಕರು ಸಿನಿಮಾವನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗುವ ಅವಕಾಶವಿತ್ತು.

ಅಶೋಕ್‌ ಹಾಗೂ ಸುಧಾ ಬೆಳವಾಡಿ, ಆಚಾರ್‌ ದಂಪತಿಯಾಗಿ ಕಾಣಿಸಿಕೊಂಡಿದ್ದಾರೆ. ಪಾತ್ರಕ್ಕೆ ನ್ಯಾಯ ಒದಗಿಸುವಂತೆ ನಟಿಸಿದ್ದಾರೆ. ನಿರ್ದೇಶಕಿ ಮತ್ತು ಪ್ರಮುಖ ನಟಿಯಾಗಿ ಸಿಂಧು ಶ್ರೀನಿವಾಸ್‌ ಮೂರ್ತಿ ಕೂಡ ಗಮನ ಸೆಳೆಯುವ ಪಾತ್ರ ಮಾಡಿದ್ದಾರೆ. ಆಚಾರ್‌ ದಂಪತಿಗೆ ಆರು ಹೆಣ್ಣು ಮತ್ತು ಮೂರು ಗಂಡುಮಕ್ಕಳು. ಈ ದೊಡ್ಡ ಸಂಸಾರದ ದಿನನಿತ್ಯದ ಕಥೆಯೇ ಇಡೀ ಸಿನಿಮಾದ ಕಥೆಯೂ ಹೌದು. ಮಕ್ಕಳು ಬೆಳೆದು ದೊಡ್ಡರಾಗುವುದು, ಅವರಿಗೆ ಮದುವೆ, ಅವರ ಕೆಲಸ. ಅಪ್ಪನ ಸಾವಿನ ನಂತರ ಮಗ ರಘು ಕೂಡ ಸಂಸಾರದ ಜಂಜಾಟದಲ್ಲಿ ಸುಸ್ತಾಗುತ್ತಾನೆ. ದಿನ ಮನೆಯಲ್ಲಿ ನೋಡುವ ದೃಶ್ಯಗಳನ್ನೇ 1960ರ ದಶಕದ ಫ್ರೇಮ್‌ನಲ್ಲಿ ನೋಡಿದ ಅನುಭವ. ಹೀಗಾಗಿ ಪ್ರಾರಂಭವಾದ 15 ನಿಮಿಷಕ್ಕೆ ಸಿನಿಮಾ ಒಂದು ರೀತಿ ಪೇಲವವೆನಿಸಲು ಶುರುವಾಗುತ್ತದೆ.

ಬಹಳ ಒಳ್ಳೆಯ ಕಥಾವಸ್ತು. ಛಾಯಾಗ್ರಾಹಕ ಅಭಿಮನ್ಯು ಸದಾನಂದನ್​ 1960ರ ದಶಕವನ್ನು ಬಹಳ ಚೆಂದವಾಗಿ ಸೆರೆ ಹಿಡಿದಿದ್ದಾರೆ. ಕಲಾ ನಿರ್ದೇಶಕ ವಿಶ್ವಾಸ್​ ಕಶ್ಯಪ್ ಕೆಲಸ ಕೂಡ ಅತ್ಯುತ್ತಮವಾಗಿದೆ. ಬಿಂದುಮಾಲಿನಿ ಅವರ ಹಿನ್ನೆಲೆ ಸಂಗೀತ ಕೂಡ ಆಪ್ತವಾಗಿದೆ. ಇಷ್ಟಾಗಿಯೂ ಈ ಸಿನಿಮಾ  ಧಾರಾವಾಹಿಯಂತೆ ಭಾಸವಾಗಲು ಕಾರಣ ಎಲ್ಲಿಯೂ ಸಾಗದೆ ಅಲ್ಲಿಯೇ ಸುತ್ತುವ ಚಿತ್ರಕಥೆ ಹಾಗೂ ಒಳಾಂಗಣ ದೃಶ್ಯಗಳಿಂದ ಹೆಚ್ಚು ಹೊರಗೆ ಬಾರದೇ ಇರುವುದು. ಸಿನಿಮಾದಲ್ಲಿ ಇರಬೇಕಾದ ಎಲ್ಲ ರಸಗಳನ್ನು ತೆರೆಮೇಲೆ ಮೂಡಿಸುವ ಉಮೇದಿನಿಂದ ಹೆಣೆದ ಚಿತ್ರಕಥೆಯನ್ನು   ನಿರ್ದೇಶಿಸುವ ಯತ್ನವೇನೋ ಇದೆ. ಆದರೆ ಅದು ದೃಶ್ಯವತ್ತಾಗಿ ಗಟ್ಟಿಯಾಗಿ ಮೂಡಿಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT