ಗುರುವಾರ , ಏಪ್ರಿಲ್ 9, 2020
19 °C

ಬಿಚ್ಚುಗತ್ತಿ ಸಿನಿಮಾ ವಿಮರ್ಶೆ: ಪ್ರೇಕ್ಷಕರ ಎದೆಗೆ ಚುಚ್ಚುವ ಕತ್ತಿ

ಜಿ.ಶಿವಕುಮಾರ Updated:

ಅಕ್ಷರ ಗಾತ್ರ : | |

ಚಿತ್ರ: ಬಿಚ್ಚುಗತ್ತಿ

ನಿರ್ಮಾಣ: ಓಂ ಸಾಯಿ ಕೃಷ್ಣ ಪ್ರೊಡಕ್ಷನ್ಸ್‌

ನಿರ್ದೇಶನ: ಹರಿ ಸಂತೋಷ್‌

ತಾರಾಗಣ: ರಾಜವರ್ಧನ್‌, ಹರಿಪ್ರಿಯಾ, ಶ್ರೀನಿವಾಸ ಮೂರ್ತಿ, ಪ್ರಭಾಕರ್‌, ರೇಖಾ, ಶರತ್‌ ಲೋಹಿತಾಶ್ವ, ರಮೇಶ್‌ ಪಂಡಿತ್‌.

ರಾತ್ರಿಯ ತಂಗಳು ಅನ್ನ ಮತ್ತು ಸಾರನ್ನು ಮರುದಿನ ಮುಂಜಾನೆ ಕಲಸಿ ಬಾಯಿಗಿಟ್ಟರೆ ಅದು ಅಷ್ಟಾಗಿ ರುಚಿಸುವುದಿಲ್ಲ. ಬಿ.ಎಲ್‌. ವೇಣು ಅವರ ‘ದಳವಾಯಿ ಮುದ್ದಣ್ಣ’ ಕಾದಂಬರಿಯನ್ನು ಆಧರಿಸಿ ತೆರೆಗೆ ಬಂದಿರುವ ಬಿಚ್ಚುಗತ್ತಿ ಸಿನಿಮಾ ಕೂಡ ಹಾಗೆಯೇ.

ಅಧಿಕಾರದ ವ್ಯಾಮೋಹದಲ್ಲಿ ದೊರೆಯ ವಿರುದ್ಧವೇ ಪಿತೂರಿ ನಡೆಸುವುದು, ಸಂಚಿನಿಂದ ರಾಜನನ್ನೇ ಹತ್ಯೆ ಮಾಡುವ  ಎಳೆಗಳನ್ನಿಟ್ಟುಕೊಂಡು ಈಗಾಗಲೇ ಕನ್ನಡದಲ್ಲಿ ಅನೇಕ ಐತಿಹಾಸಿಕ ಚಿತ್ರಗಳು ಬಂದಿವೆ. 

ಚಿತ್ರದುರ್ಗ ಸಂಸ್ಥಾನದ ಮೇಲೆ ಹಿಡಿತ ಸಾಧಿಸುವ ಲಾಲಸೆಯಿಂದ ದೊರೆ ಓಬಣ್ಣ ನಾಯಕನ (ಶರತ್‌ ಲೋಹಿತಾಶ್ವ) ತಲೆ ಕತ್ತರಿಸುವ ದುರುಳ, ದಳವಾಯಿ ಮುದ್ದಣ್ಣ . ಮೃಗೀಯ ಗುಣಗಳಿಂದ ಮೈದಳೆದಂತಿರುವ ಆತನಿಗೆ ಪ್ರಜಾಹಿತ ಬೇಕಿಲ್ಲ. ಭೀಕರ ಬರದಿಂದ ಕಂಗೆಟ್ಟ ಪ್ರಜೆಗಳಿಂದ ದುಪ್ಪಟ್ಟು ಸುಂಕ ವಸೂಲಿ ಮಾಡುವಂತೆ ಸೈನಿಕರಿಗೆ ಆಜ್ಞೆ ಮಾಡುವ, ತನ್ನ ಕಟ್ಟಪ್ಪಣೆ ಪಾಲಿಸದವರನ್ನು ಮುಲಾಜಿಲ್ಲದೆ ಸೆರೆಮನೆಗೆ ತಳ್ಳುವ ದುರಂಹಕಾರಿ. ಇಂತಹ ಕ್ರೂರಿಯನ್ನು ನಾಯಕ ಭರಮಣ್ಣ  ಸಂಹರಿಸುವುದು, ಬಳಿಕ ಎಲ್ಲರ ಒತ್ತಾಸೆಯಂತೆ ಆತನೇ ಸಂಸ್ಥಾನದ ದೊರೆಯಾಗುವುದು ಚಿತ್ರದ ಕಥಾ ಹಂದರ.

ಸಣ್ಣ ವಯಸ್ಸಿನಲ್ಲೇ ತಾಯಿ ಕನಕವ್ವಳ ಜೊತೆ ಹಳ್ಳಿಯೊಂದರ ಸಣ್ಣ ಗುಡಿಸಲಲ್ಲಿ ವಾಸಿಸುವ ನಾಯಕ, ಗರಡಿ ಮನೆಯೊಂದರಲ್ಲಿ ಕಸ ಗುಡಿಸುವ ಜೊತೆಗೆ ದನ ಕಾಯುವ ಕಾಯಕ ಮಾಡಿ ತಾಯಿಯನ್ನು ಸಲಹುತ್ತಾನೆ.

ಏಕಲವ್ಯನಂತೆ ಗುರು ಇಲ್ಲದೆಯೇ ಕತ್ತಿ ವರಸೆ ಸೇರಿದಂತೆ ಅನೇಕ ವಿದ್ಯೆಗಳನ್ನು ಕಲಿಯುವ ಆತ, ಹಳ್ಳಿಯ ಯುವಕರನ್ನು ಒಗ್ಗೂಡಿಸಿಕೊಂಡು ಸಣ್ಣ ಸೈನ್ಯವೊಂದನ್ನು ಕಟ್ಟಿಕೊಳ್ಳುತ್ತಾನೆ. ಮುದ್ದಣ್ಣನ ಸೈನಿಕರ ಸದೆಬಡಿದು ಅವರು ಕೊಂಡೊಯ್ಯುವ ದವಸ ಧಾನ್ಯಗಳನ್ನು ಮರಳಿ ಹಳ್ಳಿಯ ಜನರಿಗೆ ಮರಳಿಸುವುದು ಭರಮಣ್ಣ ಮತ್ತು ಆತನ ತಂಡದ ಕಾಯಕ. ಹೀಗೆ ಕಥೆ ಸಾಗುತ್ತಿರುವ ಹೊತ್ತಿನಲ್ಲೇ ನಾಯಕಿಯ ಪ್ರವೇಶವಾಗುತ್ತದೆ. 

ದ್ವಿತೀಯಾರ್ಧದಲ್ಲಿ ನಾಯಕ ಮತ್ತು ನಾಯಕಿಯ ಹಿನ್ನೆಲೆ ತೆರೆದುಕೊಳ್ಳುತ್ತದೆ. ಅವರು ಯಾರು, ಏನು ಎಂಬುದನ್ನು ಚಿತ್ರಮಂದಿರಕ್ಕೆ ಹೋಗಿಯೇ ನೋಡಬೇಕು.

ಬಾಹುಬಲಿ ಸಿನಿಮಾದಲ್ಲಿ ಕಾಲಕೇಯನ ಪಾತ್ರದ ಮೂಲಕ ಜನರನ್ನು ರಂಜಿಸಿದ್ದ ಪ್ರಭಾಕರ್‌, ಮುದ್ದಣ್ಣನ ಪಾತ್ರವನ್ನು ಜೀವಿಸಿದ್ದಾರೆ. ಆದರೆ ಅವರು ಒಬಣ್ಣ ನಾಯಕನನ್ನು ಕೊಲ್ಲುವುದಕ್ಕಿಂತ ಭೀಕರವಾಗಿ ಕನ್ನಡವನ್ನೂ ಹತ್ಯೆಗೈಯ್ಯಲು ಸರ್ವಪ್ರಯತ್ನ ಮಾಡಿದ್ದಾರೆ. ನಾಯಕ ರಾಜವರ್ಧನ್‌, ಭರಮಣ್ಣ ಪಾತ್ರಕ್ಕೆ ನ್ಯಾಯ ಒದಗಿಸಲು ಪ್ರಯತ್ನಿಸಿದ್ದಾರೆ. ನಾಯಕಿ ಹರಿಪ್ರಿಯಾ, ರೇಖಾ ಸೇರಿದಂತೆ ಇತರರ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.

ಒಂದು ಚಿತ್ರಕ್ಕೆ ಸಂಗೀತ ಮತ್ತು ಹಿನ್ನೆಲೆ ಸಂಗೀತ ಜೀವಾಳ. ಇವೆರಡೂ ಈ ಚಿತ್ರದಲ್ಲಿ ಸೊರಗಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)