ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕ್ಯಾಪ್ಟನ್‌ ಮಿಲ್ಲರ್‌’ ಸಿನಿಮಾ ವಿಮರ್ಶೆ: ಜಾತಿ ತಾರತಮ್ಯದ ಮತ್ತೊಂದು ಕಥೆ

Published 12 ಜನವರಿ 2024, 10:59 IST
Last Updated 12 ಜನವರಿ 2024, 10:59 IST
ಅಕ್ಷರ ಗಾತ್ರ

ಚಿತ್ರ: ಕ್ಯಾಪ್ಟನ್‌ ಮಿಲ್ಲರ್‌(ತಮಿಳು–ಕನ್ನಡಕ್ಕೆ ಡಬ್‌ ಆದ ಆವೃತ್ತಿ)

ನಿರ್ದೇಶನ: ಅರುಣ್‌ ಮಾದೇಶ್ವರನ್‌  

ನಿರ್ಮಾಣ: ಸತ್ಯಜ್ಯೋತಿ ಫಿಲ್ಮ್ಸ್‌

ತಾರಾಗಣ: ಧನುಷ್‌, ಶಿವರಾಜ್‌ಕುಮಾರ್‌, ಪ್ರಿಯಾಂಕ ಮೋಹನ್‌, ಸಂದೀಪ್‌ ಕಿಶನ್‌ ಮತ್ತಿತರರು 

ತಮಿಳು ಚಿತ್ರರಂಗದಲ್ಲಿ ಇತ್ತೀಚೆಗೆ ಅಸ್ಪೃಶ್ಯತೆ, ಜಾತಿ ತಾರತಮ್ಯವನ್ನು ಆಧರಿಸಿದ ಸಿನಿಮಾಗಳ ಸಂಖ್ಯೆ ಹೆಚ್ಚುತ್ತಿದೆ. ‘ಜೈಭೀಮ್‌’, ‘ಮಾಮಣ್ಣನ್‌’, ‘ಕರ್ಣನ್‌’, ‘ಅಸುರನ್‌’ ಹೀಗೆ ಸಾಲು ಸಾಲು ಸಿನಿಮಾಗಳು ಭಿನ್ನ ಜಾನರ್‌ಗಳಲ್ಲಿ ತೆರೆಗೆ ಬಂದರೂ ಅವುಗಳ ಕಥೆಯ ಎಳೆ ಜಾತಿ ವ್ಯವಸ್ಥೆಯ ಕುರಿತೇ ಆಗಿತ್ತು. ‘ಕ್ಯಾಪ್ಟನ್‌ ಮಿಲ್ಲರ್‌’ ಸಿನಿಮಾ ಕೂಡ ಇದೇ ಎಳೆಯನ್ನು ಹಿಡಿದು ಸ್ವಾತಂತ್ರ್ಯಪೂರ್ವದ ಅವಧಿಗೆ ಹೊರಳಿದೆ. ಆರಂಭದಲ್ಲಿ ಕಥೆ ಧುಮ್ಮಿಕ್ಕಿ ಹರಿದರೂ ನಂತರದಲ್ಲಿ ವೇಗ ಕಳೆದುಕೊಂಡ ಸಿನಿಮಾ ಸಾಕೆನಿಸಿಬಿಡುತ್ತದೆ.

ತಮಿಳುನಾಡಿನ ಹಳ್ಳಿಯೊಂದರ ಹಾಗೂ ಅಲ್ಲಿರುವ ಬುಡಕಟ್ಟು ಜನಾಂಗದ ಕಾವಲು ದೇವರು ಕೊರನಾರ್‌. 600 ವರ್ಷಗಳ ಹಿಂದೆ ಇದೇ ಜನಾಂಗದ ಜನರು ದೇವಸ್ಥಾನ ನಿರ್ಮಾಣ ಮಾಡಿದರೂ, ಅದರೊಳಗೆ ಅವರಿಗೆ ಪ್ರವೇಶವಿಲ್ಲ. ಈಗ ರಾಜನ ಆಳ್ವಿಕೆಯ ಕಾಲ. ಬ್ರಿಟಿಷರ ಮೇಲುಸ್ತುವಾರಿ. ದೇವಸ್ಥಾನದ ಮುಂಭಾಗದಲ್ಲೇ ಈ ಜನರು ಗುಡಿಸಲು ನಿರ್ಮಿಸಿ ವಾಸಿಸುತ್ತಿದ್ದರೂ, ಇಲ್ಲಿಯವರೆಗೂ ದೇವರು ಕೈಗೆಟುಕಿಲ್ಲ. ಇದರಿಂದ ಬೇಸತ್ತ ಯುವಕ ಅನಲೀಸನ್‌ ಅಲಿಯಾಸ್‌ ಈಸ(ಧನುಷ್‌), ಬ್ರಿಟಿಷ್‌ ಸೈನೈಕ್ಕೆ ಸೇರಿ ಸೈನಿಕನಾದರೆ ತನಗೆ ಕನಿಷ್ಠ ಗೌರವವಾದರೂ ಸಿಗಲಿದೆ ಎಂದು ನಂಬಿದಾತ. ಇತ್ತ ಬ್ರಿಟಿಷರ ವಿರುದ್ಧ ಹೋರಾಟದಲ್ಲಿ ತೊಡಗಿಸಿಕೊಂಡಿರುವ ‘ಈಸ’ನ ಅಣ್ಣ ‘ಶಿವಣ್ಣ’(ಶಿವರಾಜ್‌ಕುಮಾರ್‌). ಹೀಗೆ ‘ಈಸ’ನಿಂದ ‘ಮಿಲ್ಲರ್‌’ ಆದ ಆತ ತನ್ನನ್ನು ತಾನೇ ‘ಕ್ಯಾಪ್ಟನ್‌ ಮಿಲ್ಲರ್‌’ ಎಂದು ಕರೆದುಕೊಂಡ. ತನ್ನ ಬಂದೂಕಿನ ನಳಿಕೆ ತನ್ನವರನ್ನೇ ಸುಟ್ಟಾಗ ‘ಮಿಲ್ಲರ್‌’ ಏನಾಗುತ್ತಾನೆ ಎನ್ನುವುದೇ ಚಿತ್ರದ ಮುಂದಿನ ಕಥೆ. 

ಚಿತ್ರದ ಮೊದಲ ಅರ್ಧಗಂಟೆ ಗಮನಸೆಳೆಯುವಂತಿದೆ. ಕೇವಲ ಬ್ರಿಟಿಷರಿಂದಲ್ಲ, ತನ್ನ ನೆಲದಲ್ಲೇ ಹುಟ್ಟಿ ತುಳಿಯುತ್ತಿರುವವರಿಂದ ಸ್ವಾತಂತ್ರ್ಯಕ್ಕಾಗಿ ತುಡಿಯುವವರ ಕಥೆ ಇಲ್ಲಿದೆ. ಜಾತಿ ತಾರತಮ್ಯದ ಎಳೆಯಿಂದಲೇ ಸಿನಿಮಾದ ಕಥೆ ಆರಂಭವಾಗುತ್ತದೆ. ರಿವರ್ಸ್‌ ಸ್ಕ್ರೀನ್‌ಪ್ಲೇ ಹಾಗೂ ಅನನುಕ್ರಮಣಿಕೆಯ ನಿರೂಪಣೆ ಇರುವ ಚಿತ್ರಕಥೆ ಸರಾಗವಾಗಿ ಸಾಗಿದರೂ, ಮಧ್ಯಂತರದ ಹೊತ್ತಿಗೆ ವೇಗ ಕಳೆದುಕೊಳ್ಳುತ್ತದೆ. ನಂತರದ ಚಿತ್ರಕಥೆ ಆಕರ್ಷಿಸುವುದೇ ಇಲ್ಲ. ದ್ವಿತೀಯಾರ್ಧದಲ್ಲಿ ಬರುವ ಚೇಸಿಂಗ್‌ ದೃಶ್ಯವೊಂದು 10 ನಿಮಿಷಗಳ ಬಳಿಕ ಮುಗಿದಾಗ ಕಿವಿಯಲ್ಲಿ ಬಂದೂಕಿನ ಆರ್ಭಟ ಪ್ರತಿಧ್ವನಿಸುತ್ತಲೇ ಇರುತ್ತದೆ. ಟ್ರಕ್‌ಗಳಲ್ಲಿ ತುಂಬುವಷ್ಟು ಬುಲೆಟ್‌ಗಳ ಶೆಲ್‌ಗಳು ಉದುರಿ ಬಿದ್ದಿರುತ್ತವೆ. ಹಿನ್ನೆಲೆ ಸಂಗೀತ (ಬಿಜಿಎಂ) ಇಂಪು ಎನಿಸಿದರೂ, ಕೊನೆಯಲ್ಲಿ ಸಾಕೆನಿಸುವಂತಾಗುತ್ತದೆ. ಆರು ಅಧ್ಯಾಯಗಳಲ್ಲಿ ನಿರ್ದೇಶಕರು ಈ ಕಥೆಯನ್ನು ಹೆಣೆದಿದ್ದು, ಕೊನೆಯ ಅಧ್ಯಾಯ ಸಿನಿಮಾದ ಎರಡನೇ ಭಾಗದ ಸುಳಿವು ನೀಡಿದೆ. 

ಧನುಷ್‌ ತಮ್ಮ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಮೂರ್ನಾಲ್ಕು ಶೇಡ್‌ಗಳಲ್ಲಿ ಅವರಿಲ್ಲಿ ಕಾಣಿಸಿಕೊಂಡಿದ್ದಾರೆ. ಇಡೀ ಸಿನಿಮಾವನ್ನು ಅವರೇ ಮುನ್ನಡೆಸಿದ್ದಾರೆ. ಕನ್ನಡದಲ್ಲಿ ಡಬ್‌ ಆದ ಸಿನಿಮಾದಲ್ಲಿ ಶಿವರಾಜ್‌ಕುಮಾರ್‌ ‘ಶಿವಣ್ಣ’ನಾಗಿ ಕಾಣಿಸಿಕೊಂಡಿದ್ದು, ಈ ಪಾತ್ರದ ಹೆಣಿಗೆಯಲ್ಲಿ ನಿರ್ದೇಶಕರು ಸೋತಿದ್ದಾರೆ. ಟೀಸರ್‌ನಲ್ಲೇ ಶಿವರಾಜ್‌ಕುಮಾರ್‌ ಅವರ ಆ್ಯಕ್ಷನ್‌ ದೃಶ್ಯವನ್ನು ತೋರಿಸಿರುವ ನಿರ್ದೇಶಕರು, ಸಸ್ಪೆನ್ಸ್‌ ಕಾಪಾಡಿಕೊಳ್ಳುವಲ್ಲಿ ಎಡವಿದ್ದಾರೆ. ಪಾತ್ರ ನಿರ್ವಹಣೆಯಲ್ಲಿ ಶಿವರಾಜ್‌ಕುಮಾರ್‌ ಎಂದಿನಂತೆ ಮಿಂಚಿದ್ದಾರೆ. ಆ್ಯಕ್ಷನ್‌ ದೃಶ್ಯಗಳು, ಡ್ಯಾನ್ಸ್‌ನಲ್ಲಿ ರಂಜಿಸುತ್ತಾರೆ. ಚಿತ್ರದ ಛಾಯಾಚಿತ್ರಗ್ರಹಣ ಸೆಳೆಯುವಂತಿದೆ. ಕನ್ನಡದಲ್ಲಿ ಡಬ್ಬಿಂಗ್‌ ಗುಣಮಟ್ಟ ಹೆಚ್ಚುತ್ತಿದೆ ಎನ್ನುವುದಕ್ಕೆ ಈ ಸಿನಿಮಾವೂ ಸಾಕ್ಷ್ಯವಾಗಿದೆ. ಒಟ್ಟಿನಲ್ಲಿ ಈ ಸಿನಿಮಾದ ಎಳೆ ಇಂದಿಗೂ ಪ್ರಸ್ತುತ.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT