ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Movie Review: ‘ಅನಿಮಲ್‌’ ಸಿನಿಮಾ ವಿಮರ್ಶೆ; ಹಿಂಸಾವಿನೋದದ ಪರಾಕಾಷ್ಠೆ

Published 1 ಡಿಸೆಂಬರ್ 2023, 11:07 IST
Last Updated 1 ಡಿಸೆಂಬರ್ 2023, 11:07 IST
ಅಕ್ಷರ ಗಾತ್ರ

ಚಿತ್ರ: ಅನಿಮಲ್(ಹಿಂದಿ)

ನಿರ್ಮಾಣ: ಭೂಷಣ್‌ಕುಮಾರ್ ಕೃಷನ್‌ ಕುಮಾರ್ ಮುರಾದ್ ಖೇತಾನಿ ಪ್ರಣಯ್‌ ರೆಡ್ಡಿ ವಂಗ

ನಿರ್ದೇಶನ: ಸಂದೀಪ್‌ ರೆಡ್ಡಿ ವಂಗ

ತಾರಾಗಣ: ರಣಬೀರ್‌ ಕಪೂರ್ ರಶ್ಮಿಕಾ ಮಂದಣ್ಣ ಅನಿಲ್‌ ಕಪೂರ್ ಬಾಬ್ಬಿ ಡಿಯೋಲ್ ಮತ್ತಿತರರು 

ವಿಲಕ್ಷಣ ನಾಯಕನನ್ನು ಲಾಕ್ಷಣಿಕ ತಾಂತ್ರಿಕ ಚೌಕಟ್ಟಿನಲ್ಲಿಟ್ಟ ಸಿನಿಮಾ ‘ಅನಿಮಲ್’. ಶೀರ್ಷಿಕೆಯೇ ಹೇಳುವಂತೆ ಅವನ ಮನಸ್ಸು ಪ್ರಾಣಿಯಂತೆ. ಬಾಲ್ಯದಿಂದಲೇ ತಂದೆಯ ಮೇಲೆ ಅವನಿಗೆ ವಿಪರೀತ ಪ್ರೀತಿ. ಅದೇ ತಂದೆಯಿಂದ ತನಗೆ ಆ ಪ್ರೀತಿಯಲ್ಲಿ ಎಳ್ಳಷ್ಟೂ ಸಿಗದೇಹೋದ್ದರಿಂದ ಕನಲಿದ್ದಾನೆ. ಅವನ ನರತಂತುಗಳಲ್ಲಿ ಎಂತೆಂಥದೋ ಮಿಡಿತ. ಅವನ್ನೆಲ್ಲ ನಿರ್ದೇಶಕ ಸಂದೀಪ್‌ ರೆಡ್ಡಿ ವಂಗ ತೆರೆಮೇಲೆ ಭಿಡೆಯೇ ಇಲ್ಲದೆ ಮೂಡಿಸಿದ್ದಾರೆ.

ಇದೇ ನಿರ್ದೇಶಕರು ‘ಅರ್ಜುನ್‌ ರೆಡ್ಡಿ’ ತೆಲುಗು ಚಿತ್ರದಲ್ಲಿ ಕೋಪಾವೇಶದ ನಾಯಕನ ಪಾತ್ರವನ್ನು ಮುಚ್ಚಟೆ ಮಾಡಿದ್ದರು. ಈ ಸಿನಿಮಾದಲ್ಲಿ ಕೋಪಾವೇಶ–ಹಿಂಸೆಯ ಒಂದು ಪದರದಿಂದ ಪಾತ್ರವನ್ನು ಮೇಲೆತ್ತಿ, ಅದರ ಮೇಲೆ ಪುರುಷಾಹಂಕಾರದ ಮತ್ತೊಂದು ಪದರವನ್ನೂ ಮೂಡಿಸಿ, ರಕ್ತದ ಬಣ್ಣವನ್ನು ಅದಕ್ಕೆ ಮೆತ್ತಿದ್ದಾರೆ. ಇದನ್ನು ‘ಪೇಂಟಿಂಗ್’ ಎಂದು ಕರೆದುಬಿಟ್ಟರೆ, ಆ ಬಣ್ಣದಲ್ಲಿ ಕಾಡುವ ನೆತ್ತರು, ಮೂಗಿಗೆ ಅಡರುವ ಕಮಟಿಗೆ ಏನೆನ್ನಬೇಕೋ?

ನಾಯಕನ ಪಾತ್ರವನ್ನು ಅತಿಯಾಗಿ ಕಾಡುವಂತೆ ಮಾಡಬೇಕೆನ್ನುವುದು ಸಂದೀಪ್ ರೆಡ್ಡಿ ಉದ್ದೇಶ. ಅದಕ್ಕೆ ಪೂರಕವಾಗಿಯೇ ಅವರು ಚಿತ್ರಕಥಾ ಬರವಣಿಗೆಯಲ್ಲಿ ಉಳಿದೆಲ್ಲ ಪಾತ್ರಗಳನ್ನು ತಂದಿದ್ದಾರೆ. ನಾಯಕನನ್ನು ಅಪರಾಧಿ ಎಂದೇ ದೂಷಿಸುವ ಅಪ್ಪ, ಅವನ ತಂದೆಪ್ರೀತಿಯ ಹುಚ್ಚುತನವನ್ನು ಅಡಿಗಡಿಗೂ ನಿಕಷಕ್ಕೆ ಒಡ್ಡುವ ರೀತಿಯಲ್ಲಿ ತರ್ಕ ಮುಂದಿಡುವ ಪತ್ನಿ, ಅಣ್ಣನ ಕ್ರೋಧಕ್ಕೆ ಪದೇಪದೇ ಕಿಡಿಯಾಗುವ ಸಹೋದರಿಯರು, ಹುಚ್ಚುತನದಲ್ಲೇ ಮಿಂದೆದ್ದವರಂತೆ ಇರುವ ಸೋದರ ಸಂಬಂಧಿಗಳು, ಇವರೆಲ್ಲರನ್ನೂ ಮೀರಿಸುವಷ್ಟು ರಕ್ತವರ್ಷದಲ್ಲಿ ತೋಯ್ದ ಖಳನಾಯಕ–ಹೀಗೆ ನಾಯಕನ ಹೀರೊಗಿರಿಗೆ ಪೂರಕವಾಗಿಯೇ ಪಾತ್ರಗಳ ವರ್ತನೆಯನ್ನು ನಿರ್ದೇಶಕರು ನಿಯಂತ್ರಿಸುತ್ತಾ ಹೋಗಿದ್ದಾರೆ. ಚಿತ್ರದುದ್ದಕ್ಕೂ ಪ್ರಾಮಾಣಿಕತೆಯ ಚುಚ್ಚುಮದ್ದನ್ನು ನಾಯಕನಿಗೆ ಕೊಡುವ ಅವರಿಗೆ, ಹಿಂಸಾಪ್ರವೃತ್ತಿಗೆ ಬ್ರೇಕ್‌ ಹಾಕುವಂತಹ ಔಷಧ ಕೊಡಬೇಕು ಎಂದು ಎಲ್ಲಿಯೂ ಅನಿಸಿಯೇ ಇಲ್ಲ. ಉಳಿದ ಪಾತ್ರಗಳ ಬುದ್ಧಿಮಾತೂ ಗಾಳಿಯಲ್ಲಿ ತೇಲಿಹೋಗುತ್ತದೆ. ಬಾಲ್ಯದಿಂದಲೇ ಮಾನಸಿಕವಾಗಿ ಅಷ್ಟು ಹಿಂಸಾಪ್ರಿಯನಾಗುವ ನಾಯಕನ ಮನಸ್ಸನ್ನು ಸರಿಮಾಡಬೇಕೆಂದು ಅವನನ್ನು ಮುದ್ದಿಸುವ ಅಮ್ಮನಿಗೂ ಯಾಕೆ ಅನ್ನಿಸಲಿಲ್ಲ ಎನ್ನುವ ಪ್ರಶ್ನೆಗೆ ಕೊನೆಗೂ ಉತ್ತರ ಸಿಗುವುದಿಲ್ಲ.

ಐನೂರು ಆರುನೂರು ಜನರನ್ನು ಆಧುನಿಕ ಶಸ್ತ್ರಾಸ್ತ್ರಗಳಿಂದ ಮುಗಿಸಿಹಾಕುವ ದೃಶ್ಯವೊಂದು ಸಿನಿಮಾದ ಹೈಲೈಟ್‌ಗಳಲ್ಲಿ ಒಂದು. ಅಂತಹ ಮಾರಣಹೋಮವಾದ ಮೇಲೆ, ನಾಯಕ ಬಹು ಅಂಗಾಂಗಗಳ ಸಮಸ್ಯೆಗೆ ತುತ್ತಾಗುತ್ತಾನೆ. ಆಗ ಅವನಿಗೆ ಹೃದಯವನ್ನೇ ಕಸಿ ಮಾಡಬೇಕಾಗುತ್ತದೆ. ಅಷ್ಟೆಲ್ಲ ಆದ ನಂತರವೂ ಅವನ ಪುರುಷಾಹಂಕಾರ ಕರಗದೆ, ತುಪ್ಪ ಸುರಿದ ಅಗ್ನಿಕುಂಡದಂತೆ ಆಗುವುದು ಭೂತ–ಪ್ರೇತದ ಸಿನಿಮಾಗಳಿಗಿಂತ ಹೆಚ್ಚು ಭೀತಿ ಹುಟ್ಟಿಸುತ್ತದೆ. ಎಲ್ಲಕ್ಕೂ ಸಮರ್ಥನೆಯಾಗಿ ಸಿನಿಮಾದ ಶೀರ್ಷಿಕೆಯನ್ನು ನೋಡಿ ಬಾಯಿಮುಚ್ಚಬೇಕಷ್ಟೆ.

ಹರ್ಷವರ್ಧನ್‌, ರಾಮೇಶ್ವರ್‌ ಹಿನ್ನೆಲೆ ಸಂಗೀತ, ಅಮಿತ್‌ ರಾಯ್‌ ಸಿನಿಮಾಟೊಗ್ರಫಿ ಎರಡೂ ನಾಯಕ ರಣಬೀರ್‌ ಕಪೂರ್‌ ಅಭಿನಯದ ಗ್ರಾಫ್‌ ಅನ್ನು ಎತ್ತರೆತ್ತರ ಮಾಡಿವೆ. ಬಿಟ್ಟ ಕಣ್ಣು ಬಿಟ್ಟ ಹಾಗೆಯೇ ಮಾಡುವಂತೆ ರಣಬೀರ್‌ ನಟಿಸಿದ್ದಾರೆ. ದೇಹಾಕಾರದಲ್ಲಿ ಅವರು ಮಾಡಿಕೊಂಡಿರುವ ಹಲವು ಮಾರ್ಪಾಟುಗಳೂ ಆಸಕ್ತಿಕರ. ನಾಯಕಿ ರಶ್ಮಿಕಾ ಮಂದಣ್ಣ ಅವರಿಗೆ ದೊಡ್ಡ ಮಟ್ಟದ ಅಭಿನಯಾವಕಾಶ ಇರುವ ಚಿತ್ರವಿದು. ಅದನ್ನು ಅವರು ಸದುಪಯೋಗ ಪಡಿಸಿಕೊಂಡಿದ್ದಾರೆ. ಅನಿಲ್‌ ಕಪೂರ್‌ ಹಾಗೂ ಬಾಬ್ಬಿ ಡಿಯೋಲ್ ಅಭಿನಯವೂ ಹದವರಿತದ್ದು.

ಇನ್ನೂರೊಂದು ನಿಮಿಷಗಳ ಸುದೀರ್ಘಾವಧಿಯ ಈ ಸಿನಿಮಾ ತನ್ನ ಚುರುಕಾದ ತಾಂತ್ರಿಕತೆಯಿಂದಾಗಿ ನೋಡಿಸಿಕೊಳ್ಳುತ್ತದೆಯಾದರೂ, ಕ್ರೌರ್ಯ ಕಥಾನಕದ ರಕ್ತಸಿಕ್ತ ಅಧ್ಯಾಯಗಳು ಕಾಡುವ ಅವಧಿ ಅದಕ್ಕಿಂತ ತುಂಬಾ ಹೆಚ್ಚು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT