ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Movie Review: ‘ಅರ್ದಂಬರ್ಧ ಪ್ರೇಮಕಥೆ!’. ಗುರಿಯಿಲ್ಲದ ಟೈಂಪಾಸ್‌ ಪ್ರೇಮಕಥೆ!

Published 1 ಡಿಸೆಂಬರ್ 2023, 10:10 IST
Last Updated 1 ಡಿಸೆಂಬರ್ 2023, 10:10 IST
ಅಕ್ಷರ ಗಾತ್ರ

ಚಿತ್ರ: ‘ಅರ್ದಂಬರ್ಧ ಪ್ರೇಮಕಥೆ!’

ನಿರ್ದೇಶನ: ಅರವಿಂದ್‌ ಕೌಶಿಕ್‌

ನಿರ್ಮಾಣ: ಕಾರ್ತಿಕ್‌ ಗೌಡ

ತಾರಾಗಣ: ಅರವಿಂದ್‌ ಕೆಪಿ, ದಿವ್ಯಾ ಉರುಡುಗ, ಅಭಿಲಾಶ್‌ ದ್ವಾರಕೀಶ್‌ ಮತ್ತಿತರರು

ತೆರೆಯ ಹಿಂದೆ ಪರಿಚಿತವಾಗಿರುವ ಹುಡುಗ–ಹುಡುಗಿಯನ್ನು ಮನಬಂದಂತೆ ಸುತ್ತಾಡಲು ಬಿಟ್ಟು, ಅವರ ಹುಡುಗಾಟಿಕೆಗಳನ್ನೇ ಸೆರೆ ಹಿಡಿದು ತೆರೆಯ ಮೇಲೆ ತಂದರೆ ಏನಾಗಬಹುದೆಂಬುದಕ್ಕೆ ಹಿಡಿದ ಕನ್ನಡಿಯಂತಿದೆ ‘ಅರ್ದಂಬರ್ಧ ಪ್ರೇಮಕಥೆ!’. ಹಾಗಂತ ಇದೇ ಚಿತ್ರದ ಉದ್ದೇಶಿತ ಕಥೆಯಾಗಿದ್ದರೆ ನಿರ್ದೇಶಕರ ಈ ಯತ್ನಕ್ಕೊಂದು ಅರ್ಥ ಬರುತ್ತಿತ್ತು. ಆದರೆ ಒಂದೊಳ್ಳೆ ಕಥಾವಸ್ತುವಿನೊಂದಿಗೆ ಗುರಿಯೇ ಇಲ್ಲದ ಈ ಪ್ರೇಮಪಯಣ ಅಂತಿಮವಾಗಿ ಈ ಕಥೆಯ ಉದ್ದೇಶವನ್ನೂ ಅರ್ಧಂಬರ್ಧವಾಗಿಸಿಬಿಡುತ್ತದೆ.

ಪ್ರಾಯೋಗಿಕ ಕಥೆಯ ಸಿನಿಮಾಗಳಿಗೆ, ಕಂಟೆಂಟ್‌ ಸಿನಿಮಾಗಳಿಗೆ ಬರವಣಿಗೆಯೇ ಬಂಡವಾಳ. ಕಥೆಯ ಉದ್ದಕ್ಕೂ ಲಾಜಿಕ್‌ ಬಹಳ ಮುಖ್ಯ. ಇವೆರಡೂ ಸಫಲವಾಗದಿದ್ದರೆ ಇಡೀ ಯತ್ನವೇ ವಿಫಲವಾಗುತ್ತದೆ. ನಿರ್ದೇಶಕ ಅರವಿಂದ್‌ ಕೌಶಿಕ್‌ ಒಂದೊಳ್ಳೆ ಪ್ರೇಮಕಥೆಯ ಎಳೆ ಎತ್ತಿಕೊಂಡಿದ್ದಾರೆ. ಅದಕ್ಕಾಗಿ ಕಟ್ಟಿರುವ ಪಾತ್ರಗಳು ವಿಭಿನ್ನವಾಗಿವೆ. ಆದರೆ ಲಾಜಿಕ್‌ ಇಲ್ಲದ, ಒಂದು ಸ್ಪಷ್ಟ ಚೌಕಟ್ಟಿಲ್ಲದ ನಿರೂಪಣೆಯಿಂದಾಗಿ ಇಡೀ ಸಿನಿಮಾ ನೀರಸವೆನಿಸಿಬಿಡುತ್ತದೆ.

ಮೊದಲ ಸಲ ನಟನೆಗಿಳಿದಿರುವ ಅರವಿಂದ್‌ ಕೆ.ಪಿ. ಕೆಲವೆಡೆ ನಟಿಸಲು ಯತ್ನಿಸಿ ಸಫಲವಾಗಿದ್ದಾರೆ. ಹಲವೆಡೆ ವಿಫಲವಾಗಿದ್ದಾರೆ. ಈ ವೈಫಲ್ಯ ಮುಚ್ಚಲು ನಿರ್ದೇಶಕರು ಮಾಡಿರುವ ಯತ್ನಗಳು ಚಿತ್ರಕಥೆಯನ್ನು ಇನ್ನಷ್ಟು ಹದಗೆಡಿಸುತ್ತದೆ. ಅಲ್ಲಲ್ಲಿ ಅರವಿಂದ ಅನವಶ್ಯವಾಗಿ ನಗುವ ದೃಶ್ಯಗಳು ಇದಕ್ಕೆ ಉದಾಹರಣೆಯಂತಿವೆ. ದಿವ್ಯಾ ನಟನೆ ಕೂಡ ಅಲ್ಲಲ್ಲಿ ಅತಿ ಎನ್ನಿಸುತ್ತದೆ. ‘ಬ್ರೊ’ ಪಾತ್ರಧಾರಿಯಾಗಿ ಅಭಿಲಾಶ್‌ ದ್ವಾರಕೀಶ್‌ ಸಹಜವಾಗಿ ನಗಿಸುತ್ತಾರೆ. ಇಡೀ ಸಿನಿಮಾದಲ್ಲಿ ಸಂಭಾಷಣೆ ಸಾಕಷ್ಟು ಕಚಗುಳಿ ನೀಡುತ್ತದೆ. 

ಸೂರ್ಯ ಅವರ ಛಾಯಾಗ್ರಹಣ ಸೊಗಸಾಗಿದೆ. ಅರ್ಜುನ್‌ ಜನ್ಯ ದೃಶ್ಯಗಳಿಗೆ ತಕ್ಕ ಹಿನ್ನೆಲೆ ಸಂಗೀತ ನೀಡಿದ್ದಾರೆ. ಆದರೆ ಹಾಡುಗಳು ನೆನಪಿನಲ್ಲಿ ಉಳಿಯುವುದಿಲ್ಲ. ಸಿನಿಮಾ ಮುಗಿದ ನಂತರವೂ ನೆನಪಿನಲ್ಲಿ ಉಳಿಯುವ ಏಕೈಕ ವಿಷಯವೆಂದರೆ ‘ಜಿಂಗಲಕ, ಜಿಂಗಲಕ...’ ಎಂದು ಸಿನಿಮಾದಲ್ಲಿ ಅರವಿಂದ್‌ ಹೇಳಿಕೊಡುವ ‘ಛೂ’ ಮಂತ್ರವಷ್ಟೇ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT