ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Salaar Movie Review: ಖಾನ್ಸಾರ್ ಕೋಟೆಯ ರಕ್ತಚರಿತ್ರೆ

Published 22 ಡಿಸೆಂಬರ್ 2023, 11:38 IST
Last Updated 22 ಡಿಸೆಂಬರ್ 2023, 11:38 IST
ಅಕ್ಷರ ಗಾತ್ರ

ಚಿತ್ರ: ಸಲಾರ್‌ (ಕನ್ನಡಕ್ಕೆ ಡಬ್ ಆದ ಆವೃತ್ತಿ)

ನಿರ್ದೇಶಕ: ಪ್ರಶಾಂತ್‌ ನೀಲ್‌

ನಿರ್ಮಾಣ: ಹೊಂಬಾಳೆ ಫಿಲ್ಮ್ಸ್‌

ತಾರಾಗಣ: ಪ್ರಭಾಸ್, ಪೃಥ್ವಿರಾಜ್‌ ಸುಕುಮಾರನ್, ಶ್ರುತಿ ಹಾಸನ್, ಜಗಪತಿ ಬಾಬು ಮತ್ತಿತರರು

‘ಕೆಜಿಎಫ್‌’ ಖ್ಯಾತಿಯ ನಿರ್ದೇಶಕ ಪ್ರಶಾಂತ್‌ ನೀಲ್‌ ಹಾಗೂ ತೆಲುಗು ನಟ ಪ್ರಭಾಸ್‌ ಒಟ್ಟಾಗಿರುವ ‘ಸಲಾರ್‌’ ನಿರೀಕ್ಷೆಯಂತೆ ದೃಶ್ಯ ವೈಭವದ, ಕತ್ತಲಿನ ನಡುವೆ ಆಗಾಗ ಬೆಳಕು ಕಾಣಿಸುವ ಸಿನಿಮಾ. ದೇವ ಮತ್ತು ವರದನೆಂಬ ಇಬ್ಬರು ಪುಟ್ಟಮಕ್ಕಳ ಸ್ನೇಹವನ್ನು ವಿವರಿಸುವ ದೃಶ್ಯದೊಂದಿಗೆ ಸಿನಿಮಾ ಪ್ರಾರಂಭವಾಗುತ್ತದೆ. ಇಡೀ ಕಥೆಯನ್ನು ಅವರಿಬ್ಬರ ನಂಟಿನೊಂದಿಗೆ ಕಟ್ಟಲಾಗಿದೆ. ಹೈ ವೋಲ್ಟೇಜ್‌ ಕರೆಂಟ್‌ ಹೊಡೆದು ನೆಲಕ್ಕೆ ಬಿದ್ದ ದೇವ, ಪ್ರಾಣಕ್ಕೆ ಒಂಚೂರೂ ಹಾನಿಯಾಗದಂತೆ ಎದ್ದು ಬರುವುದು ಈ ಕಥೆಯಲ್ಲಿ ಲಾಜಿಕ್‌ಗೆ ನಿರ್ದೇಶಕರು ಜಾಗ ಕೊಟ್ಟಿಲ್ಲ ಎಂಬುದನ್ನು ಸ್ಪಷ್ಟಪಡಿಸಿಬಿಡುತ್ತದೆ. ಪ್ರಾರಂಭದಲ್ಲಿನ ದೃಶ್ಯಗಳು, ತಾಯಿ–ಮಗನ ಕಥೆ ಇದು ಮತ್ತೊಂದು ‘ಕೆಜಿಎಫ್‌’ ಇರಬಹುದಾ ಎಂಬ ಅನುಮಾನ ಮೂಡಿಸುತ್ತದೆ.

ಕೆಲ ಘಟನೆಗಳಿಂದ ತಾಯಿಯೊಂದಿಗೆ ಊರು ಬಿಟ್ಟ ದೇವ ಒಡಿಶಾದ ಕಲ್ಲಿದ್ದಲು ಗಣಿಯೊಂದಕ್ಕೆ ಬಂದು ಠಿಕಾಣಿ ಹೂಡುತ್ತಾನೆ. ಈ ದೇವನೇ ನಾಯಕ ಪ್ರಭಾಸ್‌. ಚಿಕ್ಕ ಚಿಕ್ಕ ಘಟನೆಗಳಿಗೂ ಬಿಲ್ಡ‍ಪ್‌ ನೀಡಿ ಇಡೀ ಸಿನಿಮಾದುದ್ದಕ್ಕೂ ನಾಯಕನನ್ನು ‘ಮಾಸ್‌’ ಆಗಿ ತೋರಿಸುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಆದರೆ ಇಲ್ಲೆಲ್ಲ ರವಿ ಬಸ್ರೂರು ಅವರ ಹಿನ್ನೆಲೆ ಸಂಗೀತ ಹೊಸತೆನಿಸುವುದಿಲ್ಲ. ಒಂದು ಮಿತಿಯವರೆಗೆ ಸೈಲೆಂಟಾಗಿದ್ದು, ಇದ್ದಕ್ಕಿದ್ದಂತೆ ವೈಲೆಂಟ್‌ ಆಗುವ ತಮ್ಮ ಪಾತ್ರಕ್ಕೆ ಪ್ರಭಾಸ್‌ ಸಂಪೂರ್ಣ ನ್ಯಾಯ ಒದಗಿಸಿದ್ದಾರೆ.

ವರದನಾಗಿ ಪೃಥ್ವಿರಾಜ್‌ ಸುಕುಮಾರನ್ ನಟಿಸಿದ್ದಾರೆ. ಸಕಾರಾತ್ಮಕ ಶೇಡ್‌ ಹೊಂದಿರುವ ಖಳನಾಯಕನ ಈ ಪಾತ್ರದಲ್ಲಿ ಪೃಥ್ವಿರಾಜ್‌ ತಮ್ಮ ಹಾವಭಾವಗಳಿಂದಲೇ ಇಷ್ಟವಾಗುತ್ತಾರೆ. ಇಲ್ಲಿ ನಡೆಯುವ ಕಥೆಗೆ ‘ಉಗ್ರಂ’ನ ಛಾಯೆ ಇದೆಯಾದರೂ ಕೆಲ ನಿಮಿಷಗಳ ಬಳಿಕ ಕಥೆ ಬೇರೆಡೆಗೆ ಹೊರಳಿಕೊಳ್ಳುತ್ತದೆ. ‘ಕೆಜಿಎಫ್‌ನಲ್ಲಿ’ ಚಿನ್ನದ ಗಣಿಯ ಕತ್ತಲಿನ ಸಾಮ್ರಾಜ್ಯ ಸೃಷ್ಟಿಸಿದ್ದ ನಿರ್ದೇಶಕ ಪ್ರಶಾಂತ್‌ ನೀಲ್‌, ಇಲ್ಲಿ ಅದಕ್ಕಿಂತ ತುಸು ಹೆಚ್ಚು ಬೆಳಕಿರುವ ಕಲ್ಲಿದ್ದಲು ಗಣಿಯನ್ನು ತೆರೆದಿಡುತ್ತಾರೆ. ಇಲ್ಲಿನ ದೃಶ್ಯಗಳಲ್ಲಿ ಛಾಯಾಚಿತ್ರಗ್ರಾಹಕ ಭುವನ್‌ಗೌಡ ತಮ್ಮ ಕೈಚಳಕ ತೋರಿಸಿದ್ದಾರೆ. ನಾಯಕಿ ಶ್ರುತಿ ಹಾಸನ್‌ ಅವರನ್ನು ನಾಯಕನ ಬಳಿ ತರಲಿಕ್ಕಾಗಿಯೇ ನಿರ್ದೇಶಕರು ಮತ್ತೊಂದು ಉಪಕಥೆಯನ್ನು ತೆರೆದಿಡುತ್ತಾರೆ. ರಕ್ತಚರಿತ್ರೆಯಲ್ಲೊಂದು ದೃಷ್ಟಿಬೊಟ್ಟಿನಂತಹ ಪಾತ್ರವಿದು! ಜೊತೆಗೆ ಹಲವು ಪಾತ್ರಗಳನ್ನು ಬಿಚ್ಚಿಟ್ಟು, ಅವುಗಳಿಗೆ ಪರಸ್ಪರ ಕೊಂಡಿ ಬೆಸೆದು, ಒಂದಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿ ನಿರ್ದೇಶಕರು ಮೊದಲಾರ್ಧವನ್ನು ಮುಗಿಸುತ್ತಾರೆ.

ಇಪ್ಪತ್ತೈದು ವರ್ಷಗಳ ಹಿಂದೆ ಬಿಟ್ಟ ಊರಿಗೆ ದೇವ ಮರಳುವುದರೊಂದಿಗೆ ದ್ವಿತೀಯಾರ್ಧ ಪ್ರಾರಂಭವಾಗುತ್ತದೆ. ಅದುವೇ ಖಾನ್ಸಾರ್ ಸಾಮ್ರಾಜ್ಯದ ಸೀಸ್‌ಫೈಯರ್‌ ಕಥೆ. ಇದು ಸಂಪೂರ್ಣ ಖಳನಟರದ್ದೇ ಸಾಮ್ರಾಜ್ಯ. ಇದರ ರಾಜನಾಗಿ ಜಗಪತಿಬಾಬು ಖಡಕ್‌ ಆಗಿ ನಟಿಸಿದ್ದಾರೆ. ಈ ಭಾಗದಲ್ಲಿ ಸಾಕಷ್ಟು ಕನ್ನಡದ ನಟರನ್ನು ಪ್ರಶಾಂತ್‌ ನೀಲ್‌ ಬಳಸಿಕೊಂಡಿದ್ದಾರೆ. ನಾಯಕಿ ತಂದೆಯಾಗಿ ರವಿ ಭಟ್ ಚಿತ್ರದ ಪ್ರಾರಂಭದಿಂದಲೇ ಇದ್ದಾರೆ. ಪಂಡಿತ್‌ ಆಗಿ ನಟ ನವೀನ್‌ ಶಂಕರ್‌, ಪೃಥ್ವಿ ತಮ್ಮನಾಗಿ ನಟ ಪ್ರಮೋದ್‌ ಗಮನ ಸೆಳೆಯುತ್ತಾರೆ. ದೇವರಾಜ್‌, ಮಧು ಗುರುಸ್ವಾಮಿ, ‘ಗರುಡ’ ರಾಮ್‌ ತಮಗೆ ಸಿಕ್ಕ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಖಾನ್ಸಾರ್ ಕೋಟೆಯ ಒಳಜಗಳದೊಂದಿಗೆ ಅಳೆಯಲು ಸಾಧ್ಯವಿಲ್ಲದಷ್ಟು ರಕ್ತವೇ ಹರಿಯುತ್ತದೆ. ಕ್ರೂರವಾದ ಹೊಡೆದಾಟಗಳೊಂದಿಗೆ ಕತ್ತಲ ಕೋಟೆ ಸಂಪೂರ್ಣ ಕೆಂಪಾಗುತ್ತದೆ! ಒಂದು ರೀತಿ ಹಾಲಿವುಡ್‌ನ ‘ಗ್ಲೇಡಿಯೇಟರ್‌’ ಕೋಟೆಯನ್ನು ಪ್ರವೇಶಿಸಿದ ಅನುಭವವಾಗುತ್ತದೆ. ಮುಂದಿನ ಅಧ್ಯಾಯದಲ್ಲಿ ದೇವ ಮತ್ತು ವರದನ ನಡುವೆ ಕಾಳಗ ನಡೆಯಬಹುದೇ ಎಂಬ ಪ್ರಶ್ನೆಯನ್ನಿಟ್ಟು, ಕೆಲ ಉಪಕಥೆಗಳನ್ನು ಅಪೂರ್ಣಗೊಳಿಸಿ ನಿರ್ದೇಶಕರು ಸೀಸ್‌ಫೈಯರ್‌ ಅಧ್ಯಾಯಕ್ಕೆ ವಿರಾಮ ಹಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT