ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದೊಡ್ಡಹಟ್ಟಿ ಬೋರೇಗೌಡ’ ಸಿನಿಮಾ ವಿಮರ್ಶೆ: ಕನಸು ಕಟ್ಟಿದ ‘ಬೋರೇಗೌಡ’ನ ದುಸ್ತರ ಕಥನ

Last Updated 17 ಫೆಬ್ರುವರಿ 2023, 10:24 IST
ಅಕ್ಷರ ಗಾತ್ರ

ಸಿನಿಮಾ: ದೊಡ್ಡಹಟ್ಟಿ ಬೋರೇಗೌಡ (ಕನ್ನಡ)

ನಿರ್ದೇಶನ: ಕೆ.ಎಂ. ರಘು

ನಿರ್ಮಾಪಕರು: ಬಿ.ಸಿ. ಶಶಿಕುಮಾರ್‌ ಹಾಗೂ ಕೆ.ಎಂ. ಲೋಕೇಶ್‌

ತಾರಾಗಣ: ಶಿವಣ್ಣ ಬೀರಿಹುಂಡಿ, ಗೀತಾ, ಸಂಪತ್‌, ಲಾವಣ್ಯ, ಕಲಾರತಿ ಮಹದೇವ್, ಕಾತ್ಯಾಯಿನಿ, ಯೋಗೇಶ್.

ಗ್ರಾಮೀಣ ಸೊಗಡನ್ನು ಹೊದ್ದಿದ್ದ ಹಲವು ಸಿನಿಮಾಗಳು ಈಗಾಗಲೇ ಚಂದನವನದಲ್ಲಿ ಸದ್ದು ಮಾಡಿವೆ. ಇಂಥ ಸಿನಿಮಾಗಳಲ್ಲಿ ಜನಕ್ಕೆ ಹಿಡಿಸಿದ್ದು ಸರಳತೆ; ಜೊತೆಗೆ ತಮ್ಮದೇ ಸುತ್ತಮುತ್ತಲಿನ ಕಥೆಯ ಘಮ. ಈ ರೀತಿಯ ಪ್ರಯತ್ನವನ್ನು ಈಗಾಗಲೇ ಮಾಡಿರುವ ನಿರ್ದೇಶಕ ಕೆ.ಎಂ. ರಘು ಇದೀಗ ಕೊಂಚ ಗಂಭೀರವಾದ ವಿಷಯವನ್ನೇ ಆಯ್ದುಕೊಂಡು, ಹಾಸ್ಯದ ಲೇಪನವಿತ್ತು ‘ದೊಡ್ಡಹಟ್ಟಿ ಬೋರೇಗೌಡ’ರನ್ನು ತೆರೆ ಮೇಲೆ ತಂದಿದ್ದಾರೆ.

‘ಕಲೆಕ್ಷನ್‌’, ‘ಕಮರ್ಷಿಯಲ್‌’ ಎಂಬ ಹಣೆಪಟ್ಟಿಗೆ ಅಂಟಿಕೊಳ್ಳದೆ ಪ್ರೇಕ್ಷಕನೊಬ್ಬ ಈ ಸಿನಿಮಾವನ್ನು ವೀಕ್ಷಿಸುವ ಅವಶ್ಯಕತೆಯಿದೆ. ಕಳೆದ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿಗೆ ಭಾಜನವಾದ ಈ ಸಿನಿಮಾ ಸರಳವಾದ ಕಥಾಹಂದರವನ್ನು ಹೊಂದಿದೆ. ಕೆಬ್ಬೇಕೊಪ್ಪಲು ಗ್ರಾಮದಲ್ಲಿ ವಾಸಿಸುವ ‘ದೊಡ್ಡಹಟ್ಟಿ’ ವಂಶದ ಬೋರೇಗೌಡ (ಶಿವಣ್ಣ ಬೀರಿಹುಂಡಿ) ಚಿತ್ರದ ಕಥಾನಾಯಕ. ಒಂದೆರಡು ಗಾಳಿಮಳೆಗೆ ಕುಸಿಯುವ ಸ್ಥಿತಿಗೆ ತಲುಪಿದೆ ಆತನ ಮನೆ. ಸರ್ಕಾರದ ಯೋಜನೆಯೊಂದರ ಮೂಲಕ ಪಕ್ಕಾ ಮನೆ ಕಟ್ಟಿಕೊಳ್ಳಲು ಪತ್ನಿ ರತ್ನಮ್ಮಳ (ಗೀತಾ ರಂಗವಲ್ಲಿ) ಹೆಸರಿನಲ್ಲಿ ಗ್ರಾಮ ಪಂಚಾಯಿತಿಗೆ ಬೋರೇಗೌಡ ಅರ್ಜಿ ಸಲ್ಲಿಸುತ್ತಾನೆ. ಮಂಜೂರಾತಿ ಪಡೆಯಲು ಅಲೆದಾಡಿ, ಗ್ರಾಮ ಪಂಚಾಯಿತಿ ಅಧಿಕಾರಿಗಳು ಕೇಳಿದಷ್ಟು ಲಂಚವನ್ನು ಹಂತ ಹಂತವಾಗಿ ನೀಡುತ್ತಲೇ ಇರುತ್ತಾನೆ. ಮಂಜೂರಾತಿ ಸಿಕ್ಕಲ್ಲಿ ಸಹಾಯಧನ ಪಡೆಯುವ ನಿಟ್ಟಿನಲ್ಲಿ ರತ್ನಮ್ಮಳ ಹೆಸರಿನಲ್ಲಿ ಹೊಸ ಬ್ಯಾಂಕ್‌ ಖಾತೆಯನ್ನೂ ತೆರೆಯುತ್ತಾನೆ. ಕನಸಿನ ಮನೆಗಾಗಿ ಇಷ್ಟೆಲ್ಲಾ ಕಷ್ಟಪಟ್ಟ ಬೋರೇಗೌಡನ ಜೀವನದಲ್ಲಿ ಮುಂದೇನಾಗುತ್ತದೆ ಎನ್ನುವುದೇ ಚಿತ್ರದ ಕಥೆ.

ಸರಳ ಕಥೆಯನ್ನು ಗ್ರಾಮೀಣ ಪ್ರದೇಶದ ಜನರ ಜೀವನಶೈಲಿಯಿಂದಲೇ ನಿರ್ದೇಶಕರು ಆರಂಭಿಸಿ, ಪ್ರೇಕ್ಷಕರನ್ನು ಗ್ರಾಮದೊಳಗೆ ಕೂರಿಸುತ್ತಾರೆ. ಬೋರೇಗೌಡ ಪಾತ್ರ ಇಡೀ ಕಥೆಯನ್ನು ಆವರಿಸುವ ಸೂಚನೆ ಆರಂಭದಿಂದಲೇ ಸಿಗುತ್ತದೆ. ಕಥೆಯ ಓಘಕ್ಕೆ ‘ಸಿದ್ದು’ವಿನ (ಕಲಾರತಿ ಮಹದೇವ್‌) ಹಾಸ್ಯದ ಮಿಶ್ರಣವೂ ಇದೆ. ಇದು ಚಿತ್ರದ ಪ್ಲಸ್‌ ಪಾಯಿಂಟ್‌. ಹವ್ಯಾಸಿ ರಂಗಭೂಮಿ ಹಿನ್ನೆಲೆಯಿಂದ ಬಂದ ಶಿವಣ್ಣ ಬೀರಿಹುಂಡಿ ಅವರ ಅಭಿನಯ ಇಲ್ಲಿ ಉಲ್ಲೇಖಾರ್ಹ. ಸರಳ, ಮುಗ್ಧ ವ್ಯಕ್ತಿತ್ವದ ‘ಬೋರೇಗೌಡ’ನ ಪಾತ್ರಕ್ಕೆ ಜೀವತುಂಬಿದ ಶಿವಣ್ಣ ಅವರ ನಟನೆ ಪ್ರೇಕ್ಷಕನನ್ನು ಹಿಡಿದಿಡುತ್ತದೆ. ನೈಜವಾಗಿ ತೆರೆಯನ್ನು ಆವರಿಸಿ, ಕಥೆಯೊಂದಿಗೆ ಸಾಗುವ ನಟನಾ ಸಾಮರ್ಥ್ಯ ಅವರಿಗಿದೆ. ಗೀತಾ ಅವರೂ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಸುಮಾರು ಎರಡೂಕಾಲು ಗಂಟೆಯ ಸಿನಿಮಾ ಅವಧಿಯಲ್ಲಿ ಮೊದಲಾರ್ಧದ ಕಥೆಗೆ ವೇಗವಿದೆ. ದ್ವಿತೀಯಾರ್ಧದಲ್ಲಿ ಚಿತ್ರಕಥೆಗೊಂದಿಷ್ಟು ಸಾಣೆ ಹಿಡಿಯಬೇಕಿತ್ತು.

ಡಬ್ಬಿಂಗ್‌ ವಿಷಯದಲ್ಲಿ ಚಿತ್ರದ ತಾಂತ್ರಿಕ ವರ್ಗ ಅತ್ಯುತ್ತಮವಾಗಿ ಕೆಲಸ ಮಾಡಿದೆ. ಇದರ ಫಲಿತಾಂಶ ತೆರೆಯ ಮೇಲೆ ಕಾಣಬಹುದು. ನಾಗರಾಜ್‌ ಮೂರ್ತಿ ಅವರ ಛಾಯಾಗ್ರಹಣ ಹಳ್ಳಿಯನ್ನು ಕಟ್ಟಿಕೊಟ್ಟಿದೆ. ಚಿತ್ರದಲ್ಲಿ ಬಳಸಿರುವ ಗ್ರಾಮೀಣ ಭಾಷೆ, ಅಲ್ಲಿನ ಜನರ ನಡತೆ, ಅವರ ದೈನಂದಿನ ಚಟುವಟಿಕೆಯನ್ನು ಚೊಕ್ಕವಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು. ಜನಪದ ಹಾಡುಗಳು ಕಥೆಗೆ ಪೂರಕವಾಗಿ ಸಾಗುತ್ತವೆ.

ಆದರೆ, ಕ್ಲೈಮ್ಯಾಕ್ಸ್‌ನಲ್ಲಿ ನಿರ್ದೇಶಕರು ಕಥೆಯನ್ನು ಕೊನೆಗೊಳಿಸಿದ ರೀತಿ ವಿಚಿತ್ರವಾಗಿದೆ. ಹೆತ್ತವರು ತಮ್ಮ ಮಕ್ಕಳಿಂದ ಬಯಸುವುದು ಪ್ರೀತಿಯೊಂದನ್ನೇ ಎಂಬ ಸಂದೇಶ ನೀಡಹೊರಟರೂ, ಇಲ್ಲಿ ನಿರ್ದೇಶಕರು ಇಟ್ಟ ಹೆಜ್ಜೆ ತಪ್ಪು ಸಂದೇಶವೊಂದನ್ನು ರವಾನಿಸುವ ಅಪಾಯವಿದೆ. ಬೋರೇಗೌಡ, ರತ್ನಮ್ಮ ಎಂಬ ಪಾತ್ರಗಳು ಕಥೆಯುದ್ದಕ್ಕೂ ನಡೆದು ಬಂದ ರೀತಿಗೆ ತದ್ವಿರುದ್ಧವಾಗಿ ಕ್ಲೈಮ್ಯಾಕ್ಸ್‌ ಚಿತ್ರಣಗೊಂಡಿದೆ ಎಂಬ ಭಾವನೆ ಮೂಡುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT