ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿನಿಮಾ ವಿಮರ್ಶೆ: ಗಟ್ಟಿ ಕಥೆಯಿಲ್ಲದೆ ಗೌಣವಾದ ‘ಗೌರಿ’

Published : 16 ಆಗಸ್ಟ್ 2024, 10:43 IST
Last Updated : 16 ಆಗಸ್ಟ್ 2024, 10:43 IST
ಫಾಲೋ ಮಾಡಿ
Comments
ಚಿತ್ರ ವಿಮರ್ಶೆ : ಚಿತ್ರ: ಗೌರಿ
ನಿರ್ದೇಶಕ:ನಿರ್ದೇಶನ: ಇಂದ್ರಜಿತ್​ ಲಂಕೇಶ್​
ಪಾತ್ರವರ್ಗ:ಪಾತ್ರವರ್ಗ: ಸಮರ್ಜಿತ್​ ಲಂಕೇಶ್​, ಸಾನ್ಯಾ ಅಯ್ಯರ್​, ಸಂಪತ್​ ಮೈತ್ರೇಯಾ, ಮಾನಸಿ ಸುಧೀರ್​ ಮುಂತಾದವರು

ಮಕ್ಕಳು ಯಾವುದೇ ಕ್ಷೇತ್ರದಲ್ಲಿ ಸಾಧನೆಗೆ ಹೆಜ್ಜೆ ಇಡುತ್ತಾರೆ ಎಂದರೆ ಹೆತ್ತವರಿಗೆ ಹೆಮ್ಮೆ, ಖುಷಿ, ಉತ್ಸಾಹ ಸಹಜ. ಆದರೆ ಕೆಲವೊಮ್ಮೆ ಪಾಲಕರ ಅತ್ಯುತ್ಸಾಹ ಮಕ್ಕಳ ಪ್ರತಿಭೆ ಮೇಲೆ ಪರಿಣಾಮ ಬೀರುವ ಅಪಾಯವೂ ಇದೆ ಎಂಬುದಕ್ಕೆ ನಿದರ್ಶನದಂತಿದೆ ‘ಗೌರಿ’ ಸಿನಿಮಾ. ಚಿತ್ರದ ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ತಮ್ಮ ಪುತ್ರ ಹಾಗೂ ಚಿತ್ರದ ನಾಯಕ ಸಮರ್ಜಿತ್‌ರ ಎಲ್ಲ ಬಗೆಯ ಪ್ರತಿಭೆಯನ್ನೂ ಒಂದೇ ಚಿತ್ರದಲ್ಲಿ ತೋರಿಸಬೇಕೆಂಬ ಧಾವಂತಕ್ಕೆ ಬಿದ್ದಂತೆ ಕಾಣುತ್ತದೆ. ಹೀಗಾಗಿ ಚಿತ್ರದಲ್ಲಿ ಪಾತ್ರಕ್ಕೆ ತಕ್ಕ ಕಥೆ ಕಾಣುತ್ತದೆ ಹೊರತು, ಕಥೆಗೆ ತಕ್ಕದಾದ ಪಾತ್ರವಲ್ಲ!

ಖಾಸಗಿ ವಾಹಿನಿಯಲ್ಲಿ ನಡೆಯುವ ರಿಯಾಲಿಟಿ ಶೋ, ಅದರಲ್ಲಿ ಬರುವ ಪಾತ್ರವೇ ಚಿತ್ರದ ಕಥೆ. ಹಾಗಂತ ಅದೇ ಪೂರ್ತಿ ಕಥೆಯಲ್ಲ. ದೊಡ್ಡ ವೇದಿಕೆಯಲ್ಲಿ ಹಾಡುಗಾರನಾಗಿ ಮಿಂಚಬೇಕೆಂಬ ಹಳ್ಳಿ ಹುಡುಗನ ಕನಸೇ ‘ಗೌರಿ’ಯ ಕಥೆ. ಈ ಗೌರಿ ಯಾರು ಎಂದರೆ ಕನ್ನಡದ ರಿಯಾಲಿಟಿ ಶೋಗಳಲ್ಲಿ ಪ್ರತಿ ಸೀಸನ್‌ನಲ್ಲಿಯೂ ಕಾಣಿಸಿಕೊಳ್ಳುವ ದೃಷ್ಟಿದೋಷ, ಶ್ರವಣ ದೋಷ ಇತ್ಯಾದಿಗಳನ್ನು ಹೊಂದಿರುವ ಪ್ರತಿಭಾವಂತ ಹಾಡುಗಾರರ ಪ್ರತಿನಿಧಿ! ತನ್ನ ತಾಯಿಯಿಂದ ನಾಯಕ ಗೌರಿಯೂ ಹುಟ್ಟಿನಿಂದಲೇ ಶ್ರವಣ ದೋಷ ಹೊಂದಿರುತ್ತಾನೆ. ಆತನಿಗೆ ತಾನೊಬ್ಬ ಹಾಡುಗಾರನಾಗಬೇಕೆಂಬ ಕನಸು. ಅದು ಸಾಧ್ಯವಾಗುತ್ತದೆಯೋ ಇಲ್ಲವೋ ಎಂಬುದೇ ಚಿತ್ರಕಥೆ. ನಾಯಕ ಮಠಕ್ಕೆ ಹೋಗಿ ಸಂಗೀತಾಭ್ಯಾಸ ಮಾಡುವ ದೃಶ್ಯಗಳು ಗವಾಯಿಯವರ ಆಶ್ರಮದ ಚಿತ್ರಣವನ್ನು ಕಣ್ಣುಮುಂದೆ ತರುತ್ತದೆ. 

ಗೌರಿ ತಂದೆಯಾಗಿ ಸಂಪತ್‌ ಮೈತ್ರೇಯ, ತಾಯಿಯಾಗಿ ಮಾನಸಿ ಸುಧೀರ್‌ ನಟಿಸಿದ್ದಾರೆ. ಮಂಡ್ಯ ಭಾಗದ ಜೋಗಪ್ಪನಾಗಿ ಸಂಪತ್‌ ಮೈತ್ರೇಯ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಅವರನ್ನು ಪೂರ್ತಿಯಾಗಿ ಬಳಸಿಕೊಳ್ಳುವಲ್ಲಿ ನಿರ್ದೇಶಕರು ಎಡವಿದ್ದಾರೆ. ಶ್ರವಣ ದೋಷ ಹೊಂದಿರುವ ತಾಯಿಯಾಗಿ ಮಾನಸಿ ಸುಧೀರ್‌ ಕೆಲವೆಡೆ ಭಾವುಕವಾಗಿಸುತ್ತಾರೆ. ಮುಖ್ಯಪಾತ್ರಗಳ ಶ್ರವಣ ದೋಷ ಹಲವು ದೃಶ್ಯಗಳಲ್ಲಿ ಸಹಜ ಎನ್ನಿಸುವುದಿಲ್ಲ. ನಾಯಕಿ ಸಾನ್ಯಾ ಅಯ್ಯರ್‌ ರೊಮ್ಯಾಂಟಿಕ್​ ದೃಶ್ಯಗಳಲ್ಲಿ ನಾಯಕನಿಗೆ ಸರಿಯಾದ ಜೋಡಿ ಎನ್ನಿಸುತ್ತಾರೆ. ಆಕೆಯ ತಂದೆಯಾಗಿ ಸಿಹಿಕಹಿ ಚಂದ್ರುಗೆ ಹೆಚ್ಚು ಕೆಲಸವಿಲ್ಲ. 

ನಾಯಕ ಸಮರ್ಜಿತ್‌ ನಟನೆಯಿಂದ ಬಹಳ ಭರವಸೆ ಮೂಡಿಸುತ್ತಾರೆ. ನೋಟದಿಂದಲೂ, ನಟನೆಯಿಂದಲೂ ಪ್ರೇಮಕಥಾ ಹಂದರದ ಚಿತ್ರಗಳಿಗೆ ಬಹಳ ಸೂಕ್ತ ಎನಿಸುತ್ತಾರೆ. ಆದರೆ ಇಲ್ಲಿ ಈಗಷ್ಟೇ ಮೀಸೆ ಮೂಡುತ್ತಿರುವ ನಾಯಕನ ಮಾಸ್‌ ಫೈಟ್‌ಗಳನ್ನು ಜೀರ್ಣಿಸಿಕೊಳ್ಳುವುದು ಸ್ವಲ್ಪ ಕಷ್ಟವಾಗುತ್ತದೆ. ಹಾಸ್ಯದ ದೃಶ್ಯಗಳು ಕಥೆಯ ಭಾಗವಾಗದೆ ನಗಿಸಲಿಕ್ಕಾಗಿಯೇ ಇರುವಂತೆ ಭಾಸವಾಗುತ್ತದೆ. ಹಾಸ್ಯ, ಭಾವುಕ ಸನ್ನಿವೇಶಗಳಲ್ಲಿ ನಾಯಕನ ನಟನೆ ಇನ್ನಷ್ಟು ಹದಗೊಳ್ಳಬೇಕಿತ್ತು ಎನಿಸುತ್ತದೆ. ದ್ವಿಪಾತ್ರವಂತೂ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯಂತಿದೆ. ಚಿತ್ರದ ಹಾಡುಗಳು ನೆನಪಿನಲ್ಲಿ ಉಳಿಯುವುದಿಲ್ಲ. ಫ್ರೇಮ್‌ಗೆ ಬೇಕೆಂದು ಒಂದಷ್ಟನ್ನು ತುಂಬಿಸಿರುವ ಛಾಯಾಚಿತ್ರಗ್ರಹಣವೂ ಗಮನ ಸೆಳೆಯುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT