ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈಡ್‌ ಆ್ಯಂಡ್‌ ಸೀಕ್‌ ಚಿತ್ರ ವಿಮರ್ಶೆ: ಆಸ್ತಿಗಾಗಿ ಕಣ್ಣಾಮುಚ್ಚಾಲೆಯಾಟ!

ಪುನೀತ್‌ ನಾಗರಾಜು ನಿರ್ದೇಶನದ ಕನ್ನಡ ಚಿತ್ರ
Published 15 ಮಾರ್ಚ್ 2024, 11:41 IST
Last Updated 15 ಮಾರ್ಚ್ 2024, 11:41 IST
ಅಕ್ಷರ ಗಾತ್ರ
ಚಿತ್ರ ವಿಮರ್ಶೆ : ಹೈಡ್‌ ಆ್ಯಂಡ್‌ ಸೀಕ್‌
ನಿರ್ದೇಶಕ:ಪುನೀತ್‌ ನಾಗರಾಜು, ನಿರ್ಮಾಣ: ವಸಂತ್‌ರಾವ್ ಎಂ.ಕುಲಕರ್ಣಿ
ಪಾತ್ರವರ್ಗ:ತಾರಾಗಣ: ಅನೂಪ್‌ ರೇವಣ್ಣ ಧನ್ಯಾ ರಾಮ್‌ಕುಮಾರ್‌ ಅರವಿಂದ್‌ ರಾವ್‌ ಮತ್ತಿತರರು

ಆಸ್ತಿಗಾಗಿ ಅಪ್ಪನೇ ಮಗಳನ್ನು ಅಪಹರಣ ಮಾಡಿಸುವ ವಿಭಿನ್ನ ಕಥೆಯನ್ನು ಹೊಂದಿರುವ ಚಿತ್ರ ‘ಹೈಡ್‌ ಆ್ಯಂಡ್‌ ಸೀಕ್‌’.

ಚಿತ್ರದ ಶೀರ್ಷಿಕೆಯಂತೆ ನಾಯಕಿ ಧನ್ಯಾ ರಾಮ್‌ಕುಮಾರ್‌ ಅಪಹರಣದಿಂದಲೇ ಚಿತ್ರದ ಕಥೆ ಪ್ರಾರಂಭವಾಗುತ್ತದೆ. ಕ್ರಿಮಿನಲ್‌ ತಂಡವೊಂದರಲ್ಲಿ ಅಪಹರಣಕಾರನ ಕೆಲಸ ಮಾಡುವವನಾಗಿ ನಾಯಕ ಅನೂಪ್‌ ರೇವಣ್ಣ ಕಾಣಿಸಿಕೊಂಡಿದ್ದಾರೆ. ಬೆಂಗಳೂರಿನ ಮಹಾನಗರಿಯಲ್ಲಿ ಕಿಡ್ನ್ಯಾಪ್‌, ಕೊಲೆಗಳಲ್ಲಿ ಭಾಗಿಯಾಗುವ ಈ ತಂಡವನ್ನು ಪತ್ತೆ ಮಾಡುವುದು ಪೊಲೀಸರಿಗೆ ದೊಡ್ಡ ಸವಾಲು. 

ನಟರಾದ ಕೃಷ್ಣ ಹೆಬ್ಬಾಳೆ ಮತ್ತು ರಾಜೇಶ್‌ ನಟರಂಗ ಉದ್ಯಮಿಗಳಾಗಿ ಕಾಣಿಸಿಕೊಂಡಿದ್ದಾರೆ. ಇವರಿಬ್ಬರು ಅಣ್ಣ, ತಮ್ಮ. ಅಪ್ಪನಿಂದ ಬರಬೇಕಿದ್ದ ಆಸ್ತಿಗಾಗಿ ಅಣ್ಣ ತನ್ನ ತಮ್ಮನ ಮಗಳನ್ನು ಅಪಹರಣ ಮಾಡಿಸುತ್ತಾನೆ. ಪೊಲೀಸರಿಗೆ ಈ ವಿಷಯ ತಿಳಿಯುವ ಹೊತ್ತಿಗೆ ಚಿತ್ರದ ಮೊದಲಾರ್ಧ ಮುಗಿದಿರುತ್ತದೆ. ಒಂದು ಸಾಮಾನ್ಯ ಕಥೆಯಂತೆ ಭಾಸವಾಗುವ ಸಿನಿಮಾ ಇಲ್ಲಿಂದ ಮಗ್ಗಲು ಬದಲಿಸುತ್ತದೆ. 

ಈ ಅಪಹರಣಕಾರ ತಂಡವನ್ನು ಬೆನ್ನತ್ತುವ ಸಿಸಿಬಿ ಪೊಲೀಸ್‌ ಅಧಿಕಾರಿಯಾಗಿ ಅರವಿಂದ್‌ ರಾವ್‌ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ನಾಯಕನಿಗೆ ಹೆಚ್ಚು ಮಾತಿಲ್ಲ. ಸಿಡುಕು ಸ್ವಭಾವದ ಖಡಕ್‌ ಕ್ರಿಮಿನಲ್‌ ಆಗಿ ಅನೂಪ್‌ ರೇವಣ್ಣ ಪಾತ್ರಕ್ಕೆ ನ್ಯಾಯ ಒದಗಿಸುತ್ತಾರೆ. ಇವತ್ತಿನ ತಲೆಮಾರಿನ ಹುಡುಗಾಟಿಕೆಯ ಹುಡುಗಿಯಾಗಿ ಧನ್ಯಾ ರಾಮ್‌ಕುಮಾರ್‌ ಇಷ್ಟವಾಗುತ್ತಾರೆ. ಕಾಮಿಡಿ ಕಿಲಾಡಿ ಸೂರಜ್‌ ಮೂಲಕ ಅಲ್ಲಲ್ಲಿ ನಗಿಸಲು ನಿರ್ದೇಶಕರು ಯತ್ನಿಸಿದ್ದಾರೆ. ಆದರೆ ಈ ಯತ್ನದಲ್ಲಿ ಸಫಲವಾಗಿಲ್ಲ.

ಕಥೆ ಮತ್ತು ಟ್ವಿಸ್ಟ್‌ಗಳು ಚೆನ್ನಾಗಿವೆ. ಆದರೆ ಅಪಹರಣದ ಭಯ, ಕುತೂಹಲ ಚಿತ್ರದುದ್ದಕ್ಕೂ ಕಾಣಿಸುವುದಿಲ್ಲ. ಮೊದಲಾರ್ಧದಲ್ಲಿ ಕಥೆಯ ವೇಗ ಪ್ರೇಕ್ಷಕರ ತಾಳ್ಮೆ ಪರೀಕ್ಷಿಸುತ್ತದೆ. ಹಿನ್ನೆಲೆ ಸಂಗೀತ ದೃಶ್ಯಗಳ ವೇಗವನ್ನು ಇನ್ನಷ್ಟು ಕುಸಿಯುವಂತೆ ಮಾಡುತ್ತದೆ. ಛಾಯಾಚಿತ್ರಗ್ರಹಣದಲ್ಲಿಯೂ ಹೊಸತನ ಕಾಣಿಸುವುದಿಲ್ಲ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT