ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೆಬಲ ಸಿನಿಮಾ ವಿಮರ್ಶೆ: ಬಲವಿಲ್ಲದ ‘ಆನೆಬಲ’

Last Updated 28 ಫೆಬ್ರುವರಿ 2020, 11:56 IST
ಅಕ್ಷರ ಗಾತ್ರ

lಚಿತ್ರ: ಆನೆಬಲ

lನಿರ್ದೇಶನ: ಸೂನಗಹಳ್ಳಿ ರಾಜು

lನಿರ್ಮಾಣ: ಎ.ವಿ. ವೇಣುಗೋಪಾಲ್

lತಾರಾಗಣ: ಸಾಗರ್, ರಕ್ಷಿತಾ, ಮಲ್ಲರಾಜು, ಕೀಲಾರ ಉದಯ್

ರಾಗಿಮುದ್ದೆ ಎಂಬ ಆಹಾರ ಮತ್ತು ಒಳ್ಳೆತನ ಎನ್ನುವ ಗುಣವನ್ನು ಸಮೀಕರಿಸಿ, ಇವೆರಡೂ ಇದ್ದರೆ ಆನೆಬಲ ಇದ್ದಂತೆ ಎಂದು ಹೇಳುವ ಸಿನಿಮಾ ‘ಆನೆಬಲ’. ತಾನು ನೀಡುವ ಸಂದೇಶಕ್ಕೆ ಬಹಳ ಸೂಕ್ತವಾದ ಶೀರ್ಷಿಕೆಯನ್ನು ಹೊತ್ತುಕೊಂಡಿರುವ, ಸೂನಗಹಳ್ಳಿ ರಾಜು ನಿರ್ದೇಶನದ ಚಿತ್ರ ಇದು.

ಚಿತ್ರದ ಮೊದಲಾರ್ಧವು ಕಥೆಗೆ ಸಂಬಂಧಿಸಿದ ಒಂದಿಷ್ಟು ಪಾತ್ರಗಳನ್ನು ಪರಿಚಯಿಸಿಕೊಡುವುದು, ರಾಗಿ ಮುದ್ದೆಯನ್ನು ನುಂಗುವ, ಹೋಬಳಿ ಮಟ್ಟದ ಒಂದು ಸ್ಪರ್ಧೆ ಆಯೋಜಿಸುವುದನ್ನು ತೋರಿಸುವುದಕ್ಕೆ ಸೀಮಿತವಾಗಿದೆ. ಪಾತ್ರಗಳು ಮಂಡ್ಯ ಭಾಗದ ಖಡಕ್ ಭಾಷೆಯಲ್ಲಿ ಸಂಭಾಷಣೆ ನಡೆಸುವುದು ಇಲ್ಲಿ ಗಮನಾರ್ಹ ಅಂಶ. ಪಾತ್ರಗಳು ಮನಸ್ಸಿನಲ್ಲಿ ಅಚ್ಚಳಿಯದಂತೆ ಕೂರುವಲ್ಲಿ ವಿಫಲವಾಗುವುದು ಕೂಡ ಇನ್ನೊಂದು ಗಮನಾರ್ಹ ಅಂಶ.

ಚಿತ್ರದ ದ್ವಿತೀಯಾರ್ಧದಲ್ಲಿ ಇರುವುದು ರಾಗಿ ಮುದ್ದೆ ನುಂಗುವ, ಜಿಲ್ಲಾ ಮಟ್ಟದ ಸ್ಪರ್ಧೆ ನಡೆದು, ಅದು ಯಶಸ್ಸು ಕಾಣುವ ಪ್ರಸಂಗ. ಈ ಎರಡು ಸ್ಪರ್ಧೆಗಳ ನಡುವಿನ ಕ್ಯಾನ್ವಾಸ್‌ನಲ್ಲಿ ಇರುವುದು ನಾಯಕ (ಸಾಗರ್) ಮತ್ತು ನಾಯಕಿ (ರಕ್ಷಿತಾ) ನಡುವೆ ಆಕರ್ಷಣೆ ಮೂಡುವ, ಹುಸಿ ಸಿಟ್ಟು ವ್ಯಕ್ತವಾಗುವ, ಪ್ರೀತಿ ಅಂಕುರಿಸುವ ಕ್ಷಣಗಳು.

ಗ್ರಾಮೀಣ ಪರಿಸರದಲ್ಲಿನ ಬದುಕು, ಆ ಬದುಕಿನಲ್ಲಿ ಇರುವ ಸೌಂದರ್ಯ, ಮಂಡ್ಯದ ಭಾಷೆಗೆ ಇರುವ ಸೊಗಸು, ಚಿಕ್ಕ ಊರಿನ ಜನರ ನಡುವಿನ ಪ್ರೀತಿ–ಸಿಟ್ಟಿನ ವಿವರಣೆಗೆ ಈ ಚಿತ್ರವು ಬಹಳಷ್ಟು ಗಮನ ನೀಡಿದಂತಿದೆ. ಆದರೆ, ಪಾತ್ರಗಳಿಗೆ ಒಂದು ಗಟ್ಟಿ ವ್ಯಕ್ತಿತ್ವ ನೀಡಿ, ಆ ವ್ಯಕ್ತಿತ್ವದ ನೆಲೆಯಲ್ಲಿ ಕಥೆಯನ್ನು ಬೆಳೆಸುವ ಹಾಗೂ ಕಥೆಗೊಂದು ಚೆಂದದ ಅಂತ್ಯ ನೀಡುವ ಕಡೆ ನಿರ್ದೇಶಕರು ಹೆಚ್ಚಿನ ಗಮನ ನೀಡಿದಂತೆ ಕಾಣುವುದಿಲ್ಲ.

ಚಿತ್ರದ ಕೆಲವೆಡೆ ತರ್ಕವನ್ನು ಹುಡುಕುವುದು ವ್ಯರ್ಥ ಪ್ರಯತ್ನ. ಊರಿನ ಗೌಡರೊಬ್ಬರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತದೆ. ಆದರೆ, ಕೆಲವು ದಿನಗಳ ನಂತರ, ಪ್ರಕರಣವನ್ನು ಹಿಂಪಡೆಯಲಾಗಿದೆ ಎಂಬ ವಿವರಣೆ ಚಿತ್ರದಲ್ಲಿ ಬರುತ್ತದೆ. ಇದಕ್ಕೆ ಕಾರಣ ಏನು ಎಂಬುದು ವೀಕ್ಷಕನ ಅನುಭವಕ್ಕೆ ದಕ್ಕುವುದಿಲ್ಲ.

ನಾಯಕನ ವ್ಯಕ್ತಿತ್ವವು ‘ಊರಿಗೆ ಅವಮಾನ ಆಗುವುದನ್ನು ಸಹಿಸುವುದಿಲ್ಲ’ ಎಂಬುದನ್ನು ಗಟ್ಟಿಯಾಗಿ ಹೇಳುತ್ತದೆ. ಆದರೆ, ನಾಯಕಿಯ ಪಾತ್ರಕ್ಕೆ ಹೆಚ್ಚಿನ ಅವಕಾಶವೇನೂ ಇಲ್ಲ. ಆರಂಭದಲ್ಲಿ ಒಂದಿಷ್ಟು ಇಂಗ್ಲಿಷ್ ಮಾತನಾಡುತ್ತ, ಜಂಭ ತೋರಿಸುವ ನಾಯಕಿಯು ಕೊನೆಯಲ್ಲಿ ನಾಯಕನ ಬಗ್ಗೆ ಅಭಿಮಾನ ಬೆಳೆಸಿಕೊಳ್ಳುವುದಕ್ಕಿ ಸೀಮಿತ ಆಗುತ್ತಾಳೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT