ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮಾ ವಿಮರ್ಶೆ | ತನುಜಾ: ರೀಲ್‌ನಲ್ಲಿ ರಿಯಲ್‌ ಕತೆ

Last Updated 2 ಫೆಬ್ರುವರಿ 2023, 19:30 IST
ಅಕ್ಷರ ಗಾತ್ರ

ಹಲವು ನೈಜ ಘಟನೆಗಳು ಸಾಕ್ಷ್ಯಚಿತ್ರದ ರೂಪದಲ್ಲಿ ಇಲ್ಲವೇ ಕಿರುಚಿತ್ರಗಳಾಗಿ ಪ್ರೇಕ್ಷಕರ ಎದುರಿಗೆ ಬಂದಿವೆ. ನೈಜ ಘಟನೆಯ ಕಥೆ ಹೆಚ್ಚು ಆಳವಾಗಿರದೇ ಇದ್ದರೆ ಇವೇ ಮಾದರಿ ಇಂಥ ಘಟನೆಗಳನ್ನು ಪ್ರೇಕ್ಷಕರ ಎದುರಿಗೆ ಇರಿಸಲು ಸೂಕ್ತ. ಈ ಚೌಕಟ್ಟನ್ನು ಮೀರಿದ ಕಥೆಯೊಂದು ಸಿನಿಮಾ ರೂಪ ಪಡೆದರೆ ಪ್ರೇಕ್ಷಕನ ತಾಳ್ಮೆಯ ಪರೀಕ್ಷೆ ಚಿತ್ರಮಂದಿರಗಳಲ್ಲಿ ನಡೆಯುತ್ತದೆ. ಈ ವಿಚಾರ ಹರೀಶ್‌ ಎಂ.ಡಿ. ಹಳ್ಳಿ ನಿರ್ದೇಶನದ ‘ತನುಜಾ’ ಸಿನಿಮಾಗೆ ಅನ್ವಯಿಸುತ್ತದೆ.

2020ರಲ್ಲಿ ನಡೆದ ನೈಜ ಘಟನೆಯೊಂದನ್ನು ಆಧರಿಸಿ ‘ತನುಜಾ’ ಚಿತ್ರವನ್ನು ನಿರ್ಮಾಣ ಮಾಡಲಾಗಿದೆ. ಶಿವಮೊಗ್ಗ ಜಿಲ್ಲೆ ಶಿಕಾರಿಪುರದ ಮಲ್ಲೇನಹಳ್ಳಿ ಗ್ರಾಮದ ವಿದ್ಯಾರ್ಥಿನಿ ತನುಜಾ ಕರೇಗೌಡ್ರ ಸುತ್ತ ಈ ಚಿತ್ರದ ಕಥೆಯಿದೆ. ವೈದ್ಯೆಯಾಗುವ ಕನಸು ಹೊತ್ತ ತನುಜಾಗೆ ಕೆಲ ತಾಂತ್ರಿಕ ಕಾರಣಗಳಿಂದಾಗಿ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್‌) ಪ್ರವೇಶಪತ್ರ ದೊರಕಿರಲಿಲ್ಲ. ಈ ಬಗ್ಗೆ ಪತ್ರಕರ್ತ ವಿಶ್ವೇಶ್ವರ ಭಟ್‌ ಟ್ವೀಟ್‌ ಮೂಲಕ ಅಂದಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಗಮನಸೆಳೆದಿದ್ದರು. ಯಡಿಯೂರಪ್ಪ ಹಾಗೂ ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಸಹಾಯದಿಂದ ಪ್ರವೇಶಪತ್ರ ಪಡೆದು ಆಕೆ ಪರೀಕ್ಷೆ ಬರೆದಿದ್ದಳು.

ಚಿತ್ರಕ್ಕೆ ಜೀವ ತುಂಬಲು ಹಾಡುಗಳನ್ನು ಹಾಗೂ ಕಾಲ್ಪನಿಕ ದೃಶ್ಯಗಳನ್ನು ನಿರ್ದೇಶಕರು ಕೆಲವೆಡೆ ಸೇರಿಸಿದ್ದಾರೆ. ಚಿತ್ರದ ಮೊದಲಾರ್ಧದಲ್ಲಿ ವಿಶ್ವೇಶ್ವರ ಭಟ್‌ ಅವರ ‘ಪಾಠ’ ದೀರ್ಘವಾಗಿದೆ. ‘ತನುಜಾ’ಳ ಕನಸು, ಆಕೆಯ ಶಿಕ್ಷಣದ ಹಾದಿ, ತಾಯಿ ಹಿರಿಯಮ್ಮಳ ಬೆಂಬಲವನ್ನು ಮೊದಲಾರ್ಧ ಕಟ್ಟಿಕೊಟ್ಟಿದೆ. ತನುಜಾ ಹೇಗಾದರೂ ಪರೀಕ್ಷೆ ಬರೆಯಲೇಬೇಕು ಎಂದು ಆಕೆಯ ಉಪನ್ಯಾಸಕ ‘ಪ್ರದೀಪ್‌ ಈಶ್ವರ್‌’ ಪಡುವ ಶ್ರಮವೂ ಇಲ್ಲಿ ಚಿತ್ರಣಗೊಂಡಿದೆ. ಹೀಗಾಗಿ ಮೊದಲಾರ್ಧಕ್ಕೆ ವೇಗವಿದೆ. ಆದರೆ ಪ್ರೇಕ್ಷಕನ ತಾಳ್ಮೆ ಪರೀಕ್ಷೆಯಾಗುವುದು ದ್ವಿತೀಯಾರ್ಧದಲ್ಲಿ. ‘ತನುಜಾ’ಳ ಶಿವಮೊಗ್ಗ–ಬೆಂಗಳೂರು ಪ್ರಯಾಣವನ್ನೇ ನಿರ್ದೇಶಕರು ದೀರ್ಘವಾಗಿ ಇಲ್ಲಿ ತೆರೆಗಿಳಿಸಿದ್ದಾರೆ. ಇಲ್ಲಿ ಹಲವು ದೃಶ್ಯಗಳಿಗೆ ಕತ್ತರಿ ಹಾಕಿ, ಕ್ಲೈಮ್ಯಾಕ್ಸ್‌ನ್ನು ಇನ್ನೂ ರೋಚಕವಾಗಿಸಬಹುದಿತ್ತು.

ನಟನೆಯ ವಿಚಾರಕ್ಕೆ ಬಂದರೆ, ‘ತನುಜಾ’ಳಾಗಿ ಸಪ್ತಾ ಪಾವೂರು ಹಾಗೂ ತನುಜಾಳ ತಾಯಿ ‘ಹಿರಿಯಮ್ಮ’ನ ಪಾತ್ರದಲ್ಲಿ ಸಂಧ್ಯಾ ಅರಕೆರೆ ಜೀವಿಸಿದ್ದಾರೆ. ರಾಜೇಶ್‌ ನಟರಂಗ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಸಚಿವ ಸುಧಾಕರ್‌ ಅವರ ಪಾತ್ರದ ಬರವಣಿಗೆ ಹಾಗೂ ಸಂಭಾಷಣೆಗೆ ಹೆಚ್ಚಿನ ಗಮನಹರಿಸಬೇಕಿತ್ತು. ಒಟ್ಟಿನಲ್ಲಿ ಪರೀಕ್ಷೆಗಳ ಹೊಸ್ತಿಲಲ್ಲಿ ಬಂದಿರುವ ಈ ಚಿತ್ರ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಬಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT