ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

James: ‘ಜೇಮ್ಸ್‌’ ಚಿತ್ರ ವಿಮರ್ಶೆ; ಪುನೀತ್ ಕೊನೆಯ ‘ಚಿತ್ರದರ್ಶನ’

Last Updated 17 ಮಾರ್ಚ್ 2022, 14:35 IST
ಅಕ್ಷರ ಗಾತ್ರ

ಚಿತ್ರ: ಜೇಮ್ಸ್ (ಕನ್ನಡ)
ನಿರ್ಮಾಣ: ಕಿಶೋರ್ ಪಾತಿಕೊಂಡ
ನಿರ್ದೇಶನ: ಚೇತನ್‌ ಕುಮಾರ್
ತಾರಾಗಣ: ಪುನೀತ್ ರಾಜ್‌ಕುಮಾರ್, ಪ್ರಿಯಾ ಆನಂದ್, ಸಾಧು ಕೋಕಿಲ, ಶರತ್ ಕುಮಾರ್, ಶ್ರೀಕಾಂತ್, ಮುಖೇಶ್ ರಿಷಿ, ರಂಗಾಯಣ ರಘು, ಚಿಕ್ಕಣ್ಣ, ಶೈನ್‌ ಶೆಟ್ಟಿ, ತಿಲಕ್‌ ಶೇಖರ್, ಅನು ಪ್ರಭಾಕರ್, ಜಾನ್ ಕೊಕೇನ್.

––––––

ಐಷಾರಾಮಿ ಕಾರಿಗೆ ಒರಗಿ ನಿಂತ ಪುನೀತ್ ರಾಜ್‌ಕುಮಾರ್ ಅವರ ವಿಶಾಲ ವಕ್ಷಸ್ಥಲ ನೋಡಿದಾಗ, ಮೊದಲಿಗೆ ಅನ್ನಿಸುವುದು ಅದರಲ್ಲಿದ್ದ ಹೃದಯದ ಬಡಿತ ದಿಢೀರನೆ ನಿಂತಿದ್ದಾದರೂ ಹೇಗೆ ಎಂದು. ಅವರಿಲ್ಲದ ಈ ಹೊತ್ತಿನಲ್ಲಿ ಅವರ ಕೊನೆಯ ಸಿನಿಮಾದ ಹೂರಣವನ್ನು ವಿಪರೀತ ಬಗೆದುನೋಡುವುದು ಕೂಡ ಅಮಾನವೀಯವಾದೀತೇನೊ?

ತಮ್ಮ ತಂದೆ ರಾಜ್‌ಕುಮಾರ್ ಅವರಿಗೆ ಇದ್ದಂತೆಯೇ ಬಾಂಡ್‌ ಚಿತ್ರಗಳ ಕುರಿತು ಪುನೀತ್‌ಗೂ ಬೆರಗು ಇತ್ತು. ಆ ಬಯಕೆ ತೀರಿಸಿಕೊಳ್ಳಲೆಂಬಂತೆ ರಾಜ್‌ಕುಮಾರ್ ದೇಸಿ ಬಾಂಡ್ ಚಿತ್ರಗಳಲ್ಲಿ ನಟಿಸಿದ್ದರು. ಅಂತಹ ರೂಹು ‘ಜೇಮ್ಸ್‌’ನಲ್ಲಿಯೂ ಇದೆ. ಬಂದೂಕಿನ ನಳಿಕೆ ಬಹಳಷ್ಟು ಸದ್ದು ಮಾಡುವುದು, ಕಾರುಗಳು ಸರಬರನೆ ಸಾಗುವುದು... ಇವಿಷ್ಟೆ ಆದರೆ ಬಾಂಡ್‌ ಚಿತ್ರ ಆಗಲಾರದೆನ್ನುವ ಅರಿವು ನಿರ್ದೇಶಕರಿಗೆ ಇಲ್ಲವೆಂದೇನೂ ಅಲ್ಲ. ಲಭ್ಯ ದೃಶ್ಯಗಳಿಗೇ ಅವರು ಅಂತಹ ವೇಗ ದಕ್ಕಿಸಿಕೊಡಲು ಪ್ರಯತ್ನಿಸಿದ್ದಾರಷ್ಟೆ.

ಸಾದಾ ಭದ್ರತಾ ಸಿಬ್ಬಂದಿಯಾಗಿ ಪ್ರವೇಶ ಪಡೆಯುವ ನಾಯಕ ಕತ್ತಲ ಜಗತ್ತಿನ ಖೂಳರ ನಡುವೆ ಏನೆಲ್ಲ ಆಟವಾಡುತ್ತಾನೆ ಎನ್ನುವುದು ಕಥಾಹಂದರ. ನಾಯಕನ ಹಿಂಸಾಧೋರಣೆಯ ಹಿಂದೆ ಒಂದು ದಾರುಣ ಕಥೆ ಇದೆ. ಅದಕ್ಕೆ ಅಗತ್ಯವಿರುವ ಭಾವುಕ ಸನ್ನಿವೇಶಗಳನ್ನು ಇನ್ನಷ್ಟು ಚಿತ್ರೀಕರಿಸುವ ಅವಶ್ಯಕತೆ ಇತ್ತೋ ಏನೊ? ಪುನೀತ್ ಅವರ ಅಗಲಿಕೆಯಿಂದ ಅಂತಹ ಕೆಲವು ದೃಶ್ಯಗಳಿಗೆ ಪೂರ್ಣಾವರಣ ಹಾಕಲು ಆಗದೇ ಇರುವುದಕ್ಕೆ ಉದಾಹರಣೆಗಳು ಸಿಗುತ್ತವೆ.

ಥ್ರಿಲ್ಲರ್‌ಗೆ ಬೇಕಾದ ವೇಗವನ್ನು ಚಿತ್ರದ ಮೊದಲರ್ಧಕ್ಕೆ ದಕ್ಕಿಸಿಕೊಟ್ಟಿರುವಲ್ಲಿ ಸಂಕಲನಕಾರ ದೀಪು ಎಸ್‌. ಕುಮಾರ್‌ ಕಾಣ್ಕೆ ದೊಡ್ಡದಿದೆ. ಒಂದೇ ಒಂದು ಹಾಡಿನಲ್ಲಿ ಪುನೀತ್ ನೃತ್ಯ ಲಾಲಿತ್ಯ ನೋಡಸಿಗುತ್ತದೆ. ಅಭಿನಯಿಸಲು ಇನ್ನೂ ಏನೇನೋ ಬಾಕಿ ಇತ್ತೆನ್ನುವುದಕ್ಕೆ ಇದೇ ಸಾಕ್ಷಿ. ಸಿನಿಮಾದ ಎರಡನೇ ಅರ್ಧವು ತಿರುವುಗಳನ್ನು ಮೂಡಿಸಿ, ‘ಕಪ್ಪು–ಬಿಳುಪು’ ಪರಿಕಲ್ಪನೆಯ ನಾಯಕ–ಪ್ರತಿ ನಾಯಕರ ಹಳೆಯ ಆಟವನ್ನು ತೋರಿಸಲು ಮೀಸಲಾಗಿದೆ. ಇದರಲ್ಲಿ ಕೌದಿಯೊಂದನ್ನು ಹೆಣೆಯಬೇಕಾದಂತಹ ಸವಾಲು ನಿರ್ದೇಶಕರು, ಸಂಕಲನಕಾರರು ಹಾಗೂ ಕೆಲವು ತಂತ್ರಜ್ಞರಿಗೆ ಎದುರಾಗಿರುವುದು ಖರೆ. ಕೌದಿಯ ಮೇಲೆ ಮುಗ್ಧತೆಯಿಂದ ಮಗು ಮಲಗಬೇಕಷ್ಟೆ. ಅದರ ಕೌಶಲ ವ್ಯಾಖ್ಯಾನಿಸಲು ಇದು ಸರಿಯಾದ ಸಂದರ್ಭವಲ್ಲ.

ಶಿವರಾಜ್‌ಕುಮಾರ್‌, ರಾಘವೇಂದ್ರ ರಾಜ್‌ಕುಮಾರ್‌ ಹಾಗೂ ಪುನೀತ್‌ ರಾಜ್‌ಕುಮಾರ್ ಮೂವರೂ ಒಟ್ಟಾಗಿ ಅಭಿನಯಿಸುವ ಸಿನಿಮಾ ಬರಲಿ ಎಂಬ ಮಹತ್ವಾಕಾಂಕ್ಷೆ ಅಭಿಮಾನಿಗಳಿಗೆ ಇತ್ತು. ಈ ಚಿತ್ರದಲ್ಲಿ ಅದು ಸಾಕಾರವಾಗಿದೆಯಾದರೂ ಕಡು ವಿಷಾದದಲ್ಲಿ ಅದು ಕೂಡ ಮುಳುಗಿಹೋಗಿದೆ. ಶಿವಣ್ಣನ ಪ್ರವೇಶವಾದಾಗ ಒಂದಿಷ್ಟು ಶಿಳ್ಳೆಗಳು ಸಲ್ಲುತ್ತವೆ. ಅಪ್ಪು ಪಾತ್ರಕ್ಕೆ ಡಬ್ಬಿಂಗ್ ಅನ್ನೂ ಅವರೇ ಮಾಡಿರುವುದು ಉಲ್ಲೇಖನೀಯ.

ಪುನೀತ್ ಅವರನ್ನು ತೆರೆಮೇಲೆ ನೋಡಿದಾಗ ಅವರ ಪುನರ್ಜನ್ಮವಾಗಿದೆಯೇನೋ ಎಂಬ ಭಾವವೇ ಕಾಡುತ್ತದೆ. ಅವರ ತೀಕ್ಷ್ಣ ನೋಟ, ಸಾಹಸ ದೃಶ್ಯಗಳಲ್ಲಿ ದೇಹದ ಬಾಗುವಿಕೆ, ಭಾವುಕ ಸನ್ನಿವೇಶಗಳಲ್ಲಿನ ಕಣ್ಣೀರು...ಎಲ್ಲವೂ ಮತ್ತೆ ‘ಅಪ್ಪು’ ಹುಟ್ಟಿಬಂದರಲ್ಲ ಎಂದು ಒಂದಿಷ್ಟು ಹೊತ್ತು ನಿರಾಳತೆ ಮೂಡಿಸುತ್ತವೆ. ದೊಡ್ಡ ತಾರಾಬಳಗದಲ್ಲಿ ಗಡ್ಡಧಾರಿಗಳದ್ದೇ ಸಿಂಹಪಾಲು. ಶರತ್‌ ಕುಮಾರ್‌ ಹಾಗೂ ಜಾನ್ ಕೊಕೇನ್ ತಮ್ಮ ಪಳಗಿದ ಅಭಿನಯವನ್ನು ತುಳುಕಿಸಿದ್ದಾರೆ. ನಾಯಕಿ ಪ್ರಿಯಾ ಆನಂದ್ ಅವರಿಗೂ ತೆರೆಯನ್ನು ಆವರಿಸಿಕೊಳ್ಳುವಷ್ಟು ಪಾತ್ರಾವಕಾಶ ಸಿಕ್ಕಿದೆ.

ಇನ್ನು ಪುನೀತ್ ತೆರೆಮೇಲೆ ಇಷ್ಟು ಅವಧಿ ಕಾಣಿಸಿಕೊಳ್ಳಲು ಸಾಧ್ಯವೇ ಇಲ್ಲವಲ್ಲ ಎಂಬ ವಿಷಾದದಿಂದ ಬರುವ ಕಣ್ಣೀರು, ಚಿತ್ರದ ಭಾವುಕ ಸನ್ನಿವೇಶಗಳು ತರಿಸಲಾಗದ ಅಳಲನ್ನೂ ಮೀರಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT