ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮಾ ವಿಮರ್ಶೆ: ರೈತಪರ ಕೂಗಿನ ‘ರಣಂ’

Last Updated 26 ಮಾರ್ಚ್ 2021, 10:49 IST
ಅಕ್ಷರ ಗಾತ್ರ

ಸಿನಿಮಾ: ರಣಂ

ನಿರ್ದೇಶನ: ವಿ. ಸಮುದ್ರ

ನಿರ್ಮಾಪಕ: ಆರ್‌. ಶ್ರೀನಿವಾಸಗೌಡ

ತಾರಾಗಣ: ಚಿರಂಜೀವಿ ಸರ್ಜಾ, ಚೇತನ್, ವರಲಕ್ಷ್ಮಿ ಶರತ್‌ಕುಮಾರ್, ಪ್ರೀತಿ ಶರ್ಮಾ, ನೀತುಗೌಡ

ಅನ್ನದಾತನ ಕೂಗು ಅರಣ್ಯರೋದನವಾಗುವುದೇ ಹೆಚ್ಚು ಎಂಬುದು ಈ ಕಾಲದ ವಾಸ್ತವ. ಜಗತ್ತಿನ ಸುಭಿಕ್ಷೆ ಇರುವುದೇ ಚಿಂತೆಮುಕ್ತ ರೈತ ಹಾಗೂ ಸಮಸ್ಯೆಮುಕ್ತ ಕೃಷಿಯಲ್ಲಿ. ಈಗಿನ ಸ್ಥಿತಿ ಇದಕ್ಕೆ ತದ್ವಿರುದ್ಧ. ಪ್ರಭುತ್ವದ ಜತೆಜತೆಗೆ ವ್ಯವಸ್ಥೆಯಲ್ಲಿ ಹೆಚ್ಚುತ್ತಿರುವ ನೈತಿಕ ಅಧಃಪತನವೂ ಇದಕ್ಕೆ ಕಾರಣ.

ಕೆಲ ವಿಷಯಗಳು ಹತಾಶೆ ಎನಿಸಿದರೂ, ಕಾಲಚಕ್ರ ಉರುಳಿದಾಗ ಒಳ್ಳೆಯದಕ್ಕೂ ಕಾಲ ಬರುತ್ತದೆ ಎಂಬ ಭರವಸೆ ಇದ್ದೇ ಇರುತ್ತದೆ. ಅಂತಹದ್ದೊಂದು ವಿಶ್ವಾಸದ ಎಳೆಯನ್ನಿಟ್ಟುಕೊಂಡು ನಿರ್ದೇಶಕ ವಿ. ಸಮುದ್ರ ಅವರು, ರೈತ ಹಾಗೂ ಕೃಷಿ ಕ್ಷೇತ್ರದ ಸಮಸ್ಯೆ ಮೇಲೆ ಬೆಳಕು ಚೆಲ್ಲುವ ‘ರಣಂ’ ಕಥೆಯನ್ನು ಹೆಣೆದಿದ್ದಾರೆ. ತೆಲುಗಿನವರಾದ ಸಮುದ್ರ ಅವರ ಮೊದಲ ಕನ್ನಡ ಸಿನಿಮಾ ಇದು. ಹತ್ತಾರು ಎಕರೆ ಭೂಮಿ ಇದ್ದರೂ ಕುಣಿಕೆಗೆ ಕೊರಳೊಡ್ಡುವ ರೈತನ ನೋವಿನ ತೀವ್ರತೆ ತೋರುತ್ತಾ, ಯೋಜನೆಗಳ ಹೆಸರಿನಲ್ಲಿ ತಮ್ಮ ಬೊಕ್ಕಸ ತುಂಬಿಸಿಕೊಳ್ಳುವ ಭ್ರಷ್ಟ ರಾಜಕಾರಣಿಗಳ ವಿರುದ್ಧ ಧ್ವನಿಯನ್ನೂ ಮೊಳಗಿಸಿದ್ದಾರೆ.

ರೈತಪರ ಕಾಳಜಿಯ ನೀರಾವರಿ ಯೋಜನೆ ಬಳಸಿಕೊಂಡೇ, ಅವರ ಬದುಕನ್ನು ದುಸ್ತರಗೊಳಿಸಲು ಹೊಂಚು ಹಾಕುವ ಪ್ರಭುತ್ವ ಹಾಗೂ ಅವರದೇ ಕುತಂತ್ರ ಮಾರ್ಗದಲ್ಲಿ ತಿರುಗೇಟು ನೀಡಿ ಯೋಜನೆಯನ್ನು ಸಾಕಾರಗೊಳಿಸುವ ಯುವಪಡೆಯ ಚಾಣಾಕ್ಷತನ ಚಿತ್ರದ ತಿರುಳು. ಸಾಮಾಜಿಕ ಕಾಳಜಿಯನ್ನು ಮರೆಯದೆ, ಮನರಂಜನೆಯ ಮಿತಿಯನ್ನೂ ದಾಟದೆ ಗಂಭೀರ ವಿಷಯವನ್ನು ಪ್ರೇಕ್ಷಕರಿಗೆ ದಾಟಿಸುವ ಪ್ರಾಮಾಣಿಕ ಪ್ರಯತ್ನವನ್ನು ನಿರ್ದೇಶಕ ಮಾಡಿರುವುದು ಚಿತ್ರದಲ್ಲಿ ಎದ್ದು ಕಾಣುತ್ತದೆ.

‘ಸ್ವಚ್ಛ ಭಾರತದ ಹೆಸರಿನಲ್ಲಿ ಕಸ ಗುಡಿಸುವವನ ಜತೆ ಪೊರಕೆ ಹಿಡಿಯುವ ಬದಲು, ಆತನ ಬದುಕನ್ನು ಬದಲಾಯಿಸುವ ಕೆಲಸ ಮಾಡಬೇಕು’, ‘ತ್ರಿವರ್ಣ ಧ್ವಜದಲ್ಲಿರುವ ಹಸಿರು ಧ್ವನಿಸುವುದು ಕೃಷಿಯ ಮಹತ್ವವನ್ನು’, ‘ದೇಶಕ್ಕೆ ಅನ್ನ ಕೊಡುವ ರೈತನಿಗೂ ಗಾರ್ಡ್‌ ಆಫ್ ಹಾನರ್ ಸಿಗಬೇಕು’, ‘ರೈತ ದೇವೋಭವ’.... ಹೀಗೆ ರೈತನ ಮಹತ್ವ ಕೊಂಡಾಡುವ ನಾಯಕನ ಪಂಚಿಂಗ್ ಡೈಲಾಗ್‌ಗಳು ಪ್ರೇಕ್ಷಕನ ಚಪ್ಪಾಳೆ ಗಿಟ್ಟಿಸುತ್ತವೆ.

ಎದೆ ಮೇಲೆ ಕೆಂಪು ನಕ್ಷತ್ರದ ಚಿತ್ರವಿರುವ ಅಂಗಿಯಲ್ಲೇ ಚಿತ್ರದುದ್ದಕ್ಕೂ ಕಾಣಿಸಿಕೊಳ್ಳುವ ನಾಯಕ ನಟ ಚೇತನ್ ರಗಡ್‌ ನೋಟ ಇಷ್ಟವಾಗುತ್ತದೆ. ಕ್ರಾಂತಿಕಾರಿಯೊಬ್ಬನ ಭಾಷಣದಂತಿರುವ ಅವರ ಸಂಭಾಷಣೆಗಳು ಪ್ರೇಕ್ಷಕರ ಶಿಳ್ಳೆ ಗಿಟ್ಟಿಸುತ್ತವೆ. ಕಥೆಯ ಎಳೆ ಅವರ ವಿಚಾರಧಾರೆಗೂ ಕೊಂಚ ಹತ್ತಿರವಾಗಿದ್ದರೆ, ಅದು ಕಾಕತಾಳೀಯವಲ್ಲ. ಸೊಂಟಕ್ಕೆ ಸಿಕ್ಕಿಸಿಕೊಂಡ ರಿವಾಲ್ವಾರ್‌ನಿಂದಲೇ ಹೆಚ್ಚಾಗಿ ಮಾತನಾಡುವ ಖಡಕ್ ಪೊಲೀಸ್ ಅಧಿಕಾರಿಯ ಪಾತ್ರವನ್ನು ಚಿರಂಜೀವಿ ಸರ್ಜಾ ಅರೆದು ಕುಡಿದಿದ್ದಾರೆ. ತೆರೆ ಮೇಲೆ ಅವರನ್ನು ಕಣ್ತುಂಬಿಕೊಳ್ಳುವಾಗ, ತಮ್ಮ ನೆಚ್ಚಿನ ನಟನನ್ನು ಮಿಸ್ ಮಾಡಿಕೊಂಡ ಕೊರಗುಅಭಿಮಾನಿಗಳಿಗೆ ಕಾಡುತ್ತದೆ.

ಗೌರವ ಪಾತ್ರದಲ್ಲಿ ವರಲಕ್ಷ್ಮಿ ಶರತ್‌ಕುಮಾರ್ ಮತ್ತು ದೇವರಾಜ್ ನೆನಪಿನಲ್ಲಿ ಉಳಿಯುತ್ತಾರೆ. ಕಾಲೇಜು ಹುಡುಗರ ಪಾತ್ರಕ್ಕೆ ಕಾರ್ತಿಕ್‌, ಅಭಿಲಾಷ್, ಹರೀಶ್ ಹಾಗೂ ಪ್ರವೀಣ್ ಜೀವ ತುಂಬಿದ್ದಾರೆ. ನಾಯಕಿಯರಾದ ಪ್ರೀತಿ ಶರ್ಮಾ ಮತ್ತು ನೀತುಗೌಡ ಗ್ಲ್ಯಾಮರ್ ಲುಕ್‌ನಲ್ಲಿ ಗಮನ ಸೆಳೆಯುತ್ತಾರೆ. ಖಳರ ಪಾತ್ರದಲ್ಲಿಮಧುಸೂದನ ರಾವ್ ಮತ್ತು ದೇವ್‌ ಗಿಲ್ ಅಬ್ಬರ ಎದ್ದುಕಾಣುತ್ತದೆ. ಹಾಸ್ಯ ದೃಶ್ಯದಲ್ಲಿ ಸಾಧು ಕೋಕಿಲಾ ಪಾರಮ್ಯ ಮೆರೆದಿದ್ದಾರೆ.

ಕಥೆಯ ಆಶಯಕ್ಕೆ ಭಂಗವಾಗದಂತೆ ನಿರಂಜನ್ ಬಾಬು ತಮ್ಮ ಕ್ಯಾಮೆರಾದಲ್ಲಿ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ. ರೈತ ಹಾಗೂ ಕೃಷಿ ಸಮಸ್ಯೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಪ್ರೇಕ್ಷಕನಿಗೆ ಮುಟ್ಟಿಸುವ ಅವಕಾಶ ಅವರಿಗಿತ್ತು. ರವಿಶಂಕರ್ ಸಂಗೀತದಲ್ಲಿ ಬಂದಿರುವ ಹಾಡುಗಳು ಹಿತವೆನಿಸಿದರೂ, ಮನಸ್ಸಿನಲ್ಲಿ ಹೆಚ್ಚು ಹೊತ್ತು ಉಳಿಯುವುದಿಲ್ಲ. ಸಿ. ಚಿನ್ನ ಅವರ ಹಿನ್ನೆಲೆ ಸಂಗೀತ ಮತ್ತಷ್ಟು ಹರಿತವಾಗಿರಬೇಕಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT