ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಭರತ ಬಾಹುಬಲಿ ಸಿನಿಮಾ ವಿಮರ್ಶೆ: ತರ್ಕ ಹುಡುಕುವ ಪ್ರಯತ್ನ ಬೇಡ!

Last Updated 18 ಜನವರಿ 2020, 6:45 IST
ಅಕ್ಷರ ಗಾತ್ರ

ಭರತ ಮತ್ತು ಬಾಹುಬಲಿ ಶ್ರವಣಬೆಳಗೊಳದ ಬೆಟ್ಟದ ತಪ್ಪಲಿನ ಹಳ್ಳಿಯ ಪಡ್ಡೆಗಳು. ಇವರ ಮನಸ್ಸಿನಲ್ಲಿ ಇರುವುದೆಲ್ಲ ಚೇಷ್ಟೆಯ ಆಲೋಚನೆಗಳು.

ಇಂತಹ ಇಬ್ಬರನ್ನು ನೆಚ್ಚಿಕೊಂಡು, ತುಸು ಗಂಭೀರ ಸ್ವಭಾವದ ಯುವತಿ ಶ್ರೀ ತನ್ನ ಅಪ್ಪ ಮತ್ತು ಅಮ್ಮನನ್ನು ಹುಡುಕಲು ಹೊರಡುವುದು ಮಂಜು ಮಾಂಡವ್ಯ ನಿರ್ದೇಶನದ ‘ಶ್ರೀಭರತ ಬಾಹುಬಲಿ’ ಚಿತ್ರದ ಕಥೆ. ಚಿತ್ರದ ಕಥೆಯನ್ನು ಹಾಸ್ಯದ ಹಳಿಯಲ್ಲಿ ಒಯ್ಯುವುದು ನಿರ್ದೇಶಕರ ಬಯಕೆ. ಬಾಹುಬಲಿ ರೂಪದಲ್ಲಿ ಕಾಣಿಸಿಕೊಂಡಿರುವ ಚಿಕ್ಕಣ್ಣ, ಹಾಸ್ಯದ ಹಳಿಯ ಮೇಲೆ ಸಿನಿಮಾ ಬಂಡಿಯನ್ನು ಒಯ್ಯುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

ಹತ್ತು ಹಲವು ಸಿನಿಮಾಗಳಂತೆ ಈ ಚಿತ್ರದಲ್ಲೂ ಬರುವ ದ್ವಂದ್ವಾರ್ಥದ ಸಂಭಾಷಣೆಗಳಲ್ಲಿ ಹೊಸತನ ಇಲ್ಲ. ಪೆಚ್ಚಾಗಿ ಕುಳಿತವನ ಮುಖದಲ್ಲಿ ನಗೆಯುಕ್ಕಿಸುವ ಸಾಮರ್ಥ್ಯವೂ ಆ ಸಂಭಾಷಣೆಗಳಿಗೆ ಇಲ್ಲ. ಆದರೆ ಭರತ (ಮಂಜು ಮಾಂಡವ್ಯ) ಮತ್ತು ಬಾಹುಬಲಿಯ ಸಹಜ ಚೇಷ್ಟೆಗಳು ನಗೆ ಗುಳಿಗೆಗಳಂತೆ ಕೆಲಸ ಮಾಡುತ್ತವೆ. ಚಿಕ್ಕಣ್ಣ ಅವರ ಹಾಸ್ಯ ನೋಡಿ ಖುಷಿಪಡುವವರಿಗೆ, ಪೈಸಾ ವಸೂಲ್‌ ಸಿನಿಮಾ ಇದು.

ಇಷ್ಟು ಹೇಳಿದ ನಂತರ, ಈ ಚಿತ್ರದ ಹಾಸ್ಯದಲ್ಲಿ ಇರುವ ಒಂದು ವೈಶಿಷ್ಟ್ಯವನ್ನೂ ಇಲ್ಲಿ ಉಲ್ಲೇಖಿಸಬೇಕು. ಹಾಸ್ಯಕ್ಕೆ ನಿದ್ರೆ ಬರಿಸುವ ಗುಣ ಎಲ್ಲ ಸಂದರ್ಭಗಳಲ್ಲೂ ದಕ್ಕುವುದಿಲ್ಲ. ಆದರೆ, ಈ ಚಿತ್ರದ ಆದಿಯಿಂದ ಅಂತ್ಯದವರೆಗೂ ಹಾಸ್ಯದ ಲೇಪ ಗಾಢವಾಗಿಯೇ ಇದ್ದರೂ, ವೀಕ್ಷಕ ಆಕಳಿಸಲೇಬೇಕಾದ ಸಂದರ್ಭಗಳು ಹಲವು ಬಾರಿ ಬಂದುಹೋಗುತ್ತವೆ! ಇದಕ್ಕೆ ಒಂದು ಕಾರಣ ಸಿನಿಮಾ ಅವಧಿಯನ್ನು ಎರಡೂಮುಕ್ಕಾಲು ಗಂಟೆಗೆ ವಿಸ್ತರಿಸಿದ್ದು. ಚಿತ್ರವು ಸಾಗುತ್ತ ಇದ್ದರೂ, ಕಥೆ ಮಾತ್ರ ಅಲ್ಲೇ ನಿಂತಿರುವಂತೆ ಆಗಾಗ ಭಾಸವಾಗುತ್ತದೆ.

ಚಿತ್ರವನ್ನು ಬೆಳೆಸುವ ಭರದಲ್ಲಿ ನಿರ್ದೇಶಕರು, ಕೆಲವು ಪಾತ್ರಗಳನ್ನು ಗಟ್ಟಿಯಾಗಿ ಕಟ್ಟುವ ಬಗ್ಗೆ ಹೆಚ್ಚು ಆಲೋಚಿಸಿದಂತೆ ಕಾಣುವುದಿಲ್ಲ. ಇದಕ್ಕೆ ಸಾಕ್ಷಿಯಾಗಿ ಯುವತಿ ‘ಶ್ರೀ’ಯ ಪ್ರಿಯಕರನ ಪಾತ್ರವನ್ನು ಉಲ್ಲೇಖಿಸಬಹುದು. ಆತ ಕೊನೆಯಲ್ಲಿ ತನ್ನ ಕೈಯ ಮೇಲೆ ದೇವತೆಗಳ ಹಚ್ಚೆ ಹಾಕಿಸಿಕೊಂಡಿದ್ದನ್ನು ಶ್ರೀಗೆ ತೋರಿಸಿ, ‘ನಾನೂ ಭಾರತೀಯ ಆಗಬೇಕು’ ಎಂದು ಹೇಳುವ ಕ್ಷಣ ಮಿಲೆನಿಯಲ್ ವೀಕ್ಷಕರಿಗೆ ತೀರಾ ಪೇಲವ ಅನಿಸುತ್ತದೆ.

ಚಿತ್ರದ ಕಥೆ ನಡೆಯುವುದು ಶ್ರವಣಬೆಳಗೊಳದ ಸುತ್ತ. ಅಲ್ಲಿನ ಸುಂದರ ದೃಶ್ಯಗಳನ್ನು ಸಹಜವಾಗಿ ಸೆರೆಹಿಡಿಯಲಾಗಿದೆ. ಈ ಚಿತ್ರವನ್ನು ವೀಕ್ಷಿಸುವಾಗ ಪಾತ್ರಗಳ ವರ್ತನೆ, ಅವುಗಳ ಸ್ವಭಾವ ಹಾಗೂ ಬೇರೆ ಬೇರೆ ದೃಶ್ಯಗಳ ನಡುವೆ ತರ್ಕವನ್ನು ಕಾಣುವ ಪ್ರಯತ್ನ ಮಾಡಬಾರದು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT