ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮಾ ವಿಮರ್ಶೆ-ಟೆನೆಟ್| ನೋಲನ್ ಪ್ರಯೋಗದ ಹೊಸ ‘ಬಲೆ’

Last Updated 6 ಡಿಸೆಂಬರ್ 2020, 8:56 IST
ಅಕ್ಷರ ಗಾತ್ರ

ಚಿತ್ರ: ಟೆನೆಟ್ (ಇಂಗ್ಲಿಷ್)

ನಿರ್ಮಾಣ: ಕ್ರಿಸ್ಟೊಫರ್ ನೋಲನ್, ಎಮ್ಮಾ ಥಾಮಸ್‌

ನಿರ್ದೇಶನ: ಕ್ರಿಸ್ಟೊಫರ್ ನೋಲನ್

ತಾರಾಗಣ: ಜಾನ್ ಡೇವಿಡ್ ವಾಷಿಂಗ್ಟನ್, ರಾಬರ್ಟ್ ಪ್ಯಾಟಿನ್‌ಸನ್, ಎಲಿಜಬೆತ್ ಡೆಬಿಕಿ, ಡಿಂಪಲ್ ಕಪಾಡಿಯಾ, ಮೇಕಲ್ ಕೇನ್.

***

ಒಂದೇ ದೃಶ್ಯದಲ್ಲಿ ಭೂತ, ವರ್ತಮಾನ, ಭವಿಷ್ಯ ಘಟಿಸಲು ಸಾಧ್ಯವೇ? ಹೌದಾದರೆ, ತೆರೆಯ ಮೇಲೆ ಅದರ ದರ್ಶನ ಹೇಗಿರಬಹುದು? ಸ್ಫೋಟಕ ಸಿಡಿದರೆ ಮೇಲ್ಮುಖವಾಗಿ ಬೆಂಕಿ ಹೊಮ್ಮುವುದನ್ನು ಕಂಡಿದ್ದೇವೆ. ಅದು ಉಲ್ಟಾ ಆದರೆ, ತೆರೆಯ ಮೇಲೆ ತೋರಿಸುವುದು ಸಾಧ್ಯವೇ? ಮಗುಚಿದ ಕಾರು ಚಂಗನೆ ಯಥಾಸ್ಥಿತಿಗೆ ಮರಳಿಬಿಟ್ಟರೆ?

‘ಟೆನೆಟ್’ ಸಿನಿಮಾದಲ್ಲಿ ಈ ಎಲ್ಲ ಪ್ರಶ್ನೆಗಳಿಗೂ ಹೌದು ಎನ್ನುವಂತಹ ಉತ್ತರಗಳು ಸಿಕ್ಕಿವೆ. ಕಾಲಾತೀತವಾದ, ತಲೆಯೊಳಗೆ ಹುಳಗಳನ್ನು ಬಿಡುವಂತಹ ವಸ್ತುವಿಷಯಗಳ ಆಯ್ಕೆಯಿಂದಲೇ ಗುರುತಾದ ವಿಶ್ವಖ್ಯಾತ ನಿರ್ದೇಶಕ ಕ್ರಿಸ್ಟೊಫರ್ ನೋಲನ್ ಮತ್ತೊಮ್ಮೆ ತಮ್ಮತನದ ಸಿನಿಮಾ ಕೊಟ್ಟಿದ್ದಾರೆ.

ಸೆಂಟ್ರಲ್ ಇಂಟಲಿಜೆನ್ಸ್ ಏಜೆನ್ಸಿಯವ ಸಿನಿಮಾದ ನಾಯಕ. ಅವನ ಹೆಸರೇನು ಎನ್ನುವುದು ಗೊತ್ತಿಲ್ಲ. ಇಡೀ ವಿಶ್ವಕ್ಕೇ ಸವಾಲೊಡ್ಡಬಲ್ಲ, ಘಟಿಸಬಹುದಾದ ಮೂರನೇ ಯುದ್ಧವನ್ನು ಗೆಲ್ಲಬೇಕಿರುವುದು ಅವನ ಎದುರಲ್ಲಿರುವ ಕಾರ್ಯಾಚರಣೆ. ಬಂದೂಕಿನ ನಳಿಕೆಯಿಂದ ಗುಂಡು ಹೊಮ್ಮುವುದನ್ನು ಕಂಡಿದ್ದೇವೆ. ಗುಂಡು ಮರಳುವಂತಹ ವಿಜ್ಞಾನ ಮುಂದೆ ತಲೆಎತ್ತಿದರೆ, ಅದನ್ನು ಎದುರಿಸುವುದು ಹೇಗೆನ್ನುವುದು ಜಿಜ್ಞಾಸೆ. ಹೀಗೆ ವಿಜ್ಞಾನ, ಫ್ಯಾಂಟಸಿಯನ್ನು ಭಾವಪರದೆಗಳ ಜತೆಗೆ ಬೆಸೆದು ನೋಲನ್ ಒಂದೊಂದೇ ಹುಳಗಳನ್ನು ಕುಶಲ ದೃಶ್ಯ ಕಟ್ಟುವಿಕೆಯ ಮೂಲಕ ತಲೆಗಿಳಿಸುತ್ತಾ ಹೋಗುತ್ತಾರೆ. ಕ್ಷಣ ಕಾಲ ತೆರೆಯಿಂದ ಬೇರೆಡೆಗೆ ಕಣ್ಣುಕೀಲಿಸಿದರೂ ಕಥೆಯ ಓಘದಿಂದ ಪ್ರೇಕ್ಷಕ ವಿಮುಖನಾದಂತೆಯೇ.

ನಾಯಕ ತಣ್ಣಗೆ ಕಂಡರೂ ಅವನೊಳಗಿನ ಭಾವಸಮುದ್ರ ನಮಗೆ ಪ್ರಹಸನಗಳ ಮೂಲಕವೇ ದಾಟುತ್ತದೆ. ಕೋಪಾವೇಶ ಎನ್ನುವುದು ಇಲ್ಲಿಲ್ಲ; ಕೃತ್ರಿಮದ ಒಳದಾರಿಗಳಿವೆ. ಶೋಷಣೆಗೆ ಒಳಗಾಗಿಯೂ ಗಟ್ಟಿಗಿತ್ತಿಯಾಗುವ ಹೆಣ್ಣಿನ ತೂಕದ ಪಾತ್ರವಿದೆ. ಶಸ್ತ್ರಾಸ್ತ್ರಗಳ ವ್ಯವಹಾರದಲ್ಲಿ ಭಾಗಿಯಾದ, ಇನ್ನೇನು ಮುಪ್ಪಿನ ಸಿಕ್ಕುಗಳು ಮೂಡಲಾರಂಭವಾಗುತ್ತಿವೆ ಎನಿಸುವಂಥ ಭಾರತೀಯ ಮಹಿಳೆಯ ಪಾತ್ರದಲ್ಲಿ ಡಿಂಪಲ್ ಕಪಾಡಿಯಾ ಅಭಿನಯಿಸಿದ್ದಾರೆ.

ನೋಲನ್ ಸಿನಿಮಾದ ಚಿತ್ರಕಥೆಯನ್ನು ಪದಗಳಲ್ಲಿ ಹಿಡಿದಿಡುವುದು ಕಷ್ಟ. ಅದು ‘ಮೆಟಾಫಿಸಿಕ್ಸ್’ ಕುರಿತು ಮಾತನಾಡಿದಷ್ಟೇ ಜಟಿಲ. ‘ಮೆಮೆಂಟೊ’ ಚಿತ್ರದ ಕಾಲಘಟ್ಟದಿಂದಲೂ ಅವರು ಅಂತಹುದೇ ಸಿನಿಮಾ ಮಾರ್ಗವನ್ನು ಆಯ್ಕೆ ಮಾಡಿಕೊಂಡು, ಗೆದ್ದು ತೋರಿಸಿದವರು. ದೃಶ್ಯತೀವ್ರತೆಯ ವಿಷಯದಲ್ಲಿ ಅವರು ರಾಜಿಯಾಗಿಲ್ಲ. ಹೋರಾಟದ ಸನ್ನಿವೇಶಗಳು ಎವೆಯಿಕ್ಕದೆ ನೋಡಿಸಿಕೊಳ್ಳುವುದರ ಜತೆಗೆ, ಕಾಲದ ಪ್ರಯಾಣದ ಗೊಂದಲಗಳು ತಲೆಯಲ್ಲಿ ಏಳುವಂತೆ ಮಾಡುತ್ತವೆ. ನಾವು ನೋಡುತ್ತಿರುವುದರ ಸತ್ಯಾಸತ್ಯತೆ, ಕಥಾಬಂಧ ಏನು ಎನ್ನುವುದರ ಕುರಿತು ಅವೇ ಚರ್ಚೆ ಹುಟ್ಟುಹಾಕುವುದು. ಇದು ನೋಲನ್‌ನ ಕಥಾತಂತ್ರ.

ಹೊಯ್ಟ್ ವ್ಯಾನ್ ಹೊಯ್ಟೆಮಾ ಅವರ ಸಿನಿಮಾಟೊಗ್ರಫಿ ಗಮನಾರ್ಹ ಅಂಶಗಳಲ್ಲೊಂದು. ಲುಡ್ವಿನ್ ಗೊರ‍್ಯಾನ್‌ಸನ್ ಸಂಗೀತದಲ್ಲಿ ಮೆಟಲ್ ವಾದ್ಯಗಳ ಸ್ಥಾಯಿ ಹೆಚ್ಚೇ ಬಳಕೆಯಾಗಿದೆ.

ಮುಖ್ಯ ಪಾತ್ರದಲ್ಲಿ ಜಾನ್ ಡೇವಿಡ್ ವಾಷಿಂಗ್ಟನ್ ಅಭಿನಯ ಹದವರಿತದ್ದು. ಎಲಿಜಬೆತ್, ಪ್ಯಾಟಿನ್‌ಸನ್ ನಟನೆ ಎಂದಿನಂತೆ ಲೀಲಾಜಾಲ. ಡಿಂಪಲ್ ಕಪಾಡಿಯಾ ಪ್ರಮುಖ ಪಾತ್ರವನ್ನು ಅನುಭವಿಸಿದ್ದಾರೆ.

ನೂರೈವತ್ತು ನಿಮಿಷಗಳಲ್ಲಿ ಅಸಂಖ್ಯ ಪ್ರಶ್ನೆಗಳನ್ನು ಮೆದುಳಲ್ಲಿ ಮೂಡಿಸಿ ಹೊರಗೆ ಬಿಡುವ ನೋಲನ್‌ನ ಈ ಸಿನಿಮಾ, ‘ಉತ್ತರಗಳು ಬೇಕಿದ್ದರೆ ಮತ್ತೊಮ್ಮೆ ಬನ್ನಿ’ ಎಂಬ ಆಹ್ವಾನವನ್ನೂ ಕೊಟ್ಟು ಕಳುಹಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT