ಸಿನಿಮಾಗಳ ಹಾಡುಗಳಲ್ಲಿ ಯಕ್ಷಗಾನ ಬಳಕೆಯಾಗಿದೆ. ಕೆಲ ಸಿನಿಮಾಗಳಲ್ಲಿ ಯಕ್ಷಗಾನದ ತುಣುಕುಗಳನ್ನು ಪ್ರದರ್ಶಿಸಿದ್ದೂ ಇದೆ. ಕಿರುತೆರೆಯಲ್ಲಿ ಪ್ರಸಂಗಗಳ ಪ್ರದರ್ಶನವೂ ನಡೆದಿದೆ. ಇದೇ ಮೊದಲ ಬಾರಿಗೆ ಯಕ್ಷಗಾನದ ಕಥೆಯೊಂದನ್ನು ಬೆಳ್ಳಿತೆರೆಗೆ ತರಲಾಗಿದೆ. ಸಂಗೀತ ನಿರ್ದೇಶಕ ರವಿ ಬಸ್ರೂರು ‘ವೀರ ಚಂದ್ರಹಾಸ’ ಮೂಲಕ ಇಂಥ ಪ್ರಯತ್ನ ಮಾಡಿದ್ದಾರೆ. ಯಕ್ಷಗಾನಕ್ಕೆ ಸಿನಿಮಾ ಸ್ಪರ್ಶ ನೀಡಿ ಹೊಸ ಲೋಕ ಸೃಷ್ಟಿಸಿದ್ದಾರೆ.

ಜೈಮಿನಿ ಭಾರತದ ಒಂದು ಭಾಗವಾದ ವೀರ ಚಂದ್ರಹಾಸ ಕಥೆಯನ್ನು ಸಿನಿಮಾ ಒಳಗೊಂಡಿದೆ. ಪೌರಾಣಿಕ ಕಥೆಯುಳ್ಳ ಇದರಲ್ಲಿ ಅನಾಥ ಬಾಲಕನೊಬ್ಬ ಹೇಗೆ ವೀರ ಚಂದ್ರಹಾಸನಾಗಿ ಬೆಳೆದ ಎನ್ನುವವರೆಗೆ ತೋರಿಸಲಾಗಿದೆ. ಒಂದು ಚೌಕಟ್ಟಿನೊಳಗೆ ನಡೆಯುತ್ತಿದ್ದ ಕಥೆಯನ್ನು ತಮ್ಮ ಕಲ್ಪನೆ ಬಳಸಿ ಸಿನಿಮಾ ರೂಪಕ್ಕೆ ಬದಲಿಸಿದ್ದಾರೆ ರವಿ ಬಸ್ರೂರು. ಕಥೆಯಲ್ಲಿ ಬರುವ ಸಂಸ್ಥಾನಗಳನ್ನು ವಿಎಫ್ಎಕ್ಸ್ ಬಳಸಿ ಸೃಷ್ಟಿಸಿ ಹೊಸ ಪ್ರಪಂಚಕ್ಕೆ ಕಥೆ ಹೇಳಲು ಕರೆದೊಯ್ಯುತ್ತಾರೆ. ಸೆಟ್ನಲ್ಲೇ ಅರಮನೆಗಳನ್ನು ಸೃಷ್ಟಿಸಿ ಕಥೆಗೆ ಜೀವ ತುಂಬುವ ಪ್ರಯತ್ನ ಮಾಡಿದ್ದಾರೆ. ರವಿ ಬಸ್ರೂರು ಅವರು ಹಿನ್ನೆಲೆ ಸಂಗೀತಕ್ಕೆ ಖ್ಯಾತಿ ಪಡೆದವರು. ಅವರ ಈ ಶಕ್ತಿ ಸಿನಿಮಾದೊಳಗಿನ ಯಕ್ಷಗಾನ ಕಥೆಯನ್ನು ಕುತೂಹಲಕಾರಿಯಾಗಿಸಿದೆ. ಮಕ್ಕಳಿಗೆ ಋಷಿಯೊಬ್ಬರು ವೀರ ಚಂದ್ರಹಾಸನ ಕಥೆಯನ್ನು ಹೇಳುತ್ತಿರುವಂತೆ ಚಿತ್ರದ ನಿರೂಪಣೆಯಿದೆ.

ತೆಂಕು ಹಾಗೂ ಬಡಗು ತಿಟ್ಟು ಯಕ್ಷಗಾನದ ಪದ್ಯಗಳು ಹಾಗೂ ವೇಷಗಳ ಬಳಕೆ ಇಲ್ಲಿ ಆಗಿದೆ. ಚಂದ್ರಹಾಸನ ಪ್ರವೇಶಕ್ಕೆ ತೆಂಕು ಮಾದರಿ ಬಳಸಲಾಗಿದೆ. ತೆಂಕಿನಿಂದ ಪಟ್ಲ ಸತೀಶ್ ಶೆಟ್ಟಿ ಮತ್ತು ಚಿನ್ಮಯ್ ಭಟ್ ಕಲ್ಲಡ್ಕ, ಬಡಗು ತಿಟ್ಟಿನಲ್ಲಿ ರಾಘವೇಂದ್ರ ಆಚಾರ್ಯ ಜನ್ಸಾಲೆ, ಪ್ರಸಾದ್ ಕುಮಾರ್ ಮೊಗೆಬೆಟ್ಟು, ಗಣೇಶ್ ಆಚಾರ್ಯ ಬಿಲ್ಲಾಡಿ ದನಿಯಲ್ಲಿ ಪದ್ಯಗಳು ಚಿತ್ರಕಥೆಗೆ ಹೊಸ ರೂಪ ನೀಡಿವೆ. ಕಾಳಿಂಗ ನಾವಡರ ಕಂಚಿನ ಕಂಠದ ಧ್ವನಿಯನ್ನೂ ಪದ್ಯವೊಂದರಲ್ಲಿ ಆಸ್ವಾದಿಸಬಹುದು. ಚಿತ್ರದಲ್ಲಿ ಕುಣಿತಕ್ಕೆ ಅವಕಾಶ ನೀಡಬಹುದಿತ್ತು. ಯಕ್ಷಗಾನ ಎನ್ನುವಾಗ ಕುಣಿತಗಳಲ್ಲಿಯೇ ಪಾತ್ರಗಳ ಗತ್ತು ಅಡಗಿರುವುದರಿಂದ, ಅದು ಕೊರತೆಯಾಗಿ ಕಾಣಿಸುತ್ತದೆ.

ರವೀಂದ್ರ ದೇವಾಡಿಗ ಹಾಗೂ ಶ್ರೀಧರ ಕಾಸರಕೋಡ ಅವರ ಹಾಸ್ಯ ಸಂಭಾಷಣೆ ಬೆಳ್ಳಿತೆರೆಯಲ್ಲೂ ನಗು ತರಿಸುತ್ತವೆ. ಆದರೆ ಮದುವೆ ದೃಶ್ಯ ಸಿನಿಮಾಕ್ಕಿಂತ ವೇದಿಕೆಯಲ್ಲಿ ನಡೆಯುವ ಪ್ರಸಂಗಗಳಲ್ಲೇ ಚೆನ್ನಾಗಿದೆ. ಸಿನಿಮಾದಲ್ಲಿ ಸಮಯದ ಮಿತಿಯೂ ಇದಕ್ಕೆ ಕಾರಣವಾಗಿರಬಹುದು. ವಿಎಫ್ಎಕ್ಸ್ನಲ್ಲಿ ಇನ್ನಷ್ಟು ಕೆಲಸ ಮಾಡಬಹುದಿತ್ತು. ಕಿರಣ್ ಕುಮಾರ್ ಆರ್. ಛಾಯಾಚಿತ್ರಗ್ರಹಣ, ಪ್ರಭು ಬಡಿಗೇರ್ ಕಲಾ ನಿರ್ದೇಶನ ಇಲ್ಲಿ ಉಲ್ಲೇಖಾರ್ಹ.

ಎಐ ಮೂಲಕ ಸೃಷ್ಟಿಸಲಾದ ಯಕ್ಷಗಾನ ವೇಷದಲ್ಲಿನ ಪುನೀತ್ ರಾಜ್ಕುಮಾರ್ ದೃಶ್ಯ ಹಾಗೂ ಸಿಂಗನಲ್ಲೂರು ಸಂಸ್ಥಾನದ ರಾಜನಾಗಿ ರಾಜ್ಕುಮಾರ್ ಅವರನ್ನು ಸೃಷ್ಟಿಸಿರುವುದು ಚಿತ್ರದ ಹೈಲೈಟ್. ಸಿಂಗನಲ್ಲೂರು ಸಂಸ್ಥಾನದ ನಾಡ ಚಕ್ರವರ್ತಿ ಶಿವಪುಟ್ಟಸ್ವಾಮಿಯಾಗಿ ಶಿವರಾಜ್ಕುಮಾರ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ದುಷ್ಟಬುದ್ಧಿ’ಯಾಗಿ ಪ್ರಸನ್ನ ಶೆಟ್ಟಿಗಾರ್ ಹಾಗೂ ‘ಚಂದ್ರಹಾಸ’ನ ಪಾತ್ರಧಾರಿ ಶಿಥಿಲ್ ಶೆಟ್ಟಿ ನಟನೆ ಚೆನ್ನಾಗಿದೆ. ‘ಸಮುದ್ರ ಸೇನ’ನಾಗಿ ಚಂದನ್ ಶೆಟ್ಟಿ, ‘ಗರುಡಾಕ್ಷ’ನಾಗಿ ಗರುಡರಾಮ್ ಅವರ ಪಾತ್ರಗಳು ಕ್ಲೈಮ್ಯಾಕ್ಸ್ನಲ್ಲಿ ಪ್ರವೇಶಿಸುತ್ತವೆ. ಮುಂದಿನ ಭಾಗದ ಕಥೆಯ ಮುಖ್ಯ ಪಾತ್ರಗಳು ಇವು.

ಇದು ನೋಡಬಹುದಾದ ಸಿನಿಮಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.