ಅಪ್ಪಯ್ಯ ಎಂಗೆ ಬೇಕು ಹಳ್ಳಿಲಿಪ್ಪಂವ...

ಅಪ್ಪಯ್ಯ ಎಂಗೆ ಬೇಕು ಹಳ್ಳಿಲಿಪ್ಪಂವ...ನಾಲ್ಕೈದು ಐಕ್ರೆ ತ್ವಾಟ ಮಾಡ್ಕ್ಯಂಡಿಪ್ಪಂವ... ಉತ್ತರ ಕನ್ನಡದ ಹವ್ಯಕರ ಭಾಷೆ ಸೊಗಡಿನ ಮೂರು ನಿಮಿಷದ ಈ ಹಾಡು ಈಗ ವೈರಲ್ ಆಗ್ತಿದೆ.
ಸಂದೀಪ ಟಿ.ಎನ್. ಚಿತ್ರೀಕರಿಸಿರುವ, ಚೇತನಾ ಭಟ್ ಮುದ್ದಾಗಿ ಹಾಡಿ, ನಟಿಸಿರುವ ಈ ಹಾಡು ಹಳ್ಳಿಯಲ್ಲಿ ತೋಟ ಮಾಡಿಕೊಂಡಿರೋ ಹವ್ಯಕ ಹೈಕಳಲ್ಲಿ ಹೊಸ ಭರವಸೆ ಮೂಡಿಸುತ್ತಿದೆ. ಈ ಕಿರುಹಾಡಿನ ಪ್ರಸ್ತಾಪ ಇಲ್ಲಿ ಏಕೆಂದರೆ ಅದಕ್ಕೊಂದು ಬಲವಾದ ಕಾರಣವಿದೆ.
ಸರಿಸಮಾರು 22 ವರ್ಷಗಳಿಂದ ಮಲೆನಾಡಿನಲ್ಲಿ ತೋಟ–ಮನೆ ನೋಡಿಕೊಂಡಿರೋ ಹವ್ಯಕ ಗಂಡುಮಕ್ಕಳಿಗೆ ಮದುವೆಯಾಗಲು ಹೆಣ್ಣು ಸಿಕ್ತಿರಲ್ಲಿಲ್ಲ. ಕಾರಣ ಹೆಣ್ಣು ಹೆತ್ತ ತೋಟಿಗರೂ ತಮ್ಮ ಮಕ್ಕಳನ್ನು ಪರದೇಶ ಸೇರಿದ ಸಾಫ್ಟವೇರ್ ಎಂಜಿನಿಯರ್ ವರನಿಗೇ ಕೊಟ್ಟು ಮದುವೆ ಮಾಡುವ ಖಯಾಲಿ ಬೆಳೆದು ಮುಂದೆ ಹವ್ಯಕರಲ್ಲಿ ಅದೊಂಥರಾ ಟ್ರೆಂಡ್ ಆಗಿಯೇ ಉಳಿಯಿತು. ಇತ್ತ ತೋಟ ನೋಡ್ಕೊಳ್ಳೊ ಗಂಡುಮಕ್ಕಳಿಗೆ ಮದುವೆ ಅನ್ನೋದು ಕೈಗೆಟುಕದ ನಕ್ಷತ್ರವೇ ಆಯಿತು. ಅದೇಷ್ಟೋ ಗಂಡುಮಕ್ಕಳು ಮದುವೆ ವಯಸ್ಸು ಮೀರಿ, ಮದುವೆಯ ಆಸೆಯನ್ನೆ ಬಿಟ್ಟು ಬದುಕುತ್ತಿರುವುದು ವಾಸ್ತವ.
ಕೆಲವರು ದೂರದ ಉತ್ತರ ಭಾರತದಿಂದ ಹೆಣ್ಣು ಮಕ್ಕಳನ್ನು ಕರೆತಂದು ತಮ್ಮೂರಲ್ಲಿ ಸಪ್ತಪದಿ ತುಳಿಯುತ್ತಿದ್ದರೆ, ಕೆಲವರು ಅನಾಥಾಶ್ರಮದಲ್ಲಿ ಬೆಳೆದ ಹೆಳ್ಮಕ್ಕಳನ್ನು ವರಿಸಿ ಮಾದರಿಯಾಗುತ್ತಿದ್ದಾರೆ.
ಯಾವ ಕಾಲಕ್ಕೂ ಬದಲಾಗದೇ ಇಲ್ವೆನೋ ಅನ್ನುವಷ್ಟು ಗಟ್ಟಿಯಾಗಿ ಬೇರು ಬಿಟ್ಟಿದ್ದ ಫಾರಿನ್ ಹುಡುಗ, ಸಾಫ್ಟ್‌ವೇರ್ ಎಂಜಿನಿಯರ್ ಅನ್ನೋ ಟ್ರೆಂಡ್ ಈಗ ಉಲ್ಟಾ ಹೊಡೆಯಲು ಕೊರೊನಾವೇ ಬರಬೇಕಾಯ್ತೆನೋ. ಎಸ್... ಅಪ್ಪಯ್ಯ ಎಂಗೆ ಬೇಕು ಹಳ್ಳಿಲಿಪ್ಪಂವ...ನಾಲ್ಕೈದು ಐಕ್ರೆ ತ್ವಾಟ ಮಾಡ್ಕ್ಯಂಡಿಪ್ಪಂವ...ಹಾಡು ಕೇಳಿದಾಗ ಅದು ನಿಜ ಎನ್ನಿಸುತ್ತಿದೆ.
ಅತ್ತೆ, ಮಾವ ಮನೆಲಿದ್ರೆ ನಮ್ಗೆ ಒಳ್ಳೇದು. ಹೊಂದ್ಕೊಂಡ್ಯೋಪೋ ಜನಾ ಆದ್ರೆ ಮತ್ತು ಚೊಲೋದು...
ಹಳ್ಳಿ ಮನೆಯಾದ್ರೂ ಫೋನಿಗ್ ನೆಟ್‌ವರ್ಕ್ ಸಿಗಕ್ಕು. ನಾನಾ ಅಡ್ಗೆ ಮಾಡಿ ಗಂಡಂಗ್ ಬಡಿಸ್ತಾ ಇರ್ಲಕ್ಕು...
ಸ್ವಲ್ಪಾನಾದ್ರು ಕಾಲೇಜು ಮೆಟ್ಲ ಹತ್ತಿರಕ್ಕು..ಆಮೇಲೆ ತ್ವಾಟ ಮಾಡ್ಕಂಡಿದ್ರು ಮತ್ತೂ ಲಾಯಕ್ಕು..
ಹಾಡಿನಲ್ಲಿರೋ ಈ ಹೂರಣ ಕೇಳಿ ಮನೇಲಿಪ್ಪ ನಮ್ಮ ಹವ್ಯಕ ಹೈಕ್ಳಿಗೆ ಭಾರಿ ಖುಷಿಯಾಗಿರ್ಲಿಕ್ಕು ಸಾಕು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.